ನ್ಯೂ ಯಾರ್ಕ್ ನಗರದ ಮೆಟ್ರೋ ಸ್ಟೇಶನ್ ಒಂದರಲ್ಲಿ ನೀರು ಜಲಪಾತದಂತೆ ದುಮ್ಮಿಕ್ಕುತ್ತಿದೆ!

ನ್ಯೂ ಯಾರ್ಕ್ ನಗರದ ಮೆಟ್ರೋ ಸ್ಟೇಶನ್ ಒಂದರಲ್ಲಿ ನೀರು ಜಲಪಾತದಂತೆ ದುಮ್ಮಿಕ್ಕುತ್ತಿದೆ!

TV9 Web
| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Sep 04, 2021 | 1:35 AM

ಮನೆಗಳ ಸೆಲ್ಲರ್, ಪಾರ್ಕಿಂಗ್ ಲಾಟ್ಗಳು, ಆಟದ ಮೈದಾನಗಳು, ಸಬ್ ವೇಗಳು, ಮೆಟ್ರೋ ಸ್ಟೇಶನ್ಗಳು ಎಲ್ಲಿ ನೋಡಿದರೂ ಬರೀ ನೀರು, ಸಬ್ ವೇಗಳಲ್ಲಿ ಸಿಲುಕಿದ್ದ ಸಹಸ್ರಾರು ಜನರನ್ನು ರಕ್ಷಣಾ ಪಡೆಯವರು ರಕ್ಷಿಸಿ ಮನೆ ತಲುಪಿಸಿದ್ದಾರೆ.

ಈ ವಿಡಿಯೋ ನೋಡಿ. ಮೆಟ್ರೊ ರೈಲುಗಳ ವಾಟರ್ ಸರ್ವಿಸಿಂಗ್ ಮಾಡುತ್ತಿರುವಂತೆ ಕಾಣುತ್ತಿದೆ. ಬೆಂಗಳೂರಿನಲ್ಲಿ ಟ್ರೇನುಗಳನ್ನು ತೊಳೆಯುವುದು ನಾವು ನೋಡೇ ಇಲ್ವಲ್ಲ, ಎಲ್ಲಿ ಹೀಗೆ ಮಾಡೋದು ಅಂತ ಕೇಳಬೇಡಿ. ಈ ವಿಡಿಯೋ ನಮ್ಮಲ್ಲಿದಲ್ಲ. ಇಡಾ ಸುಂಟರಗಾಳಿಯಿಂದ ತಲ್ಲಣಿಸಿರುವ ಅಮೆರಿಕದ ನಾಲ್ಕು ರಾಜ್ಯಗಳಲ್ಲಿ ಒಂದಾಗಿರುವ ನ್ಯೂ ಯಾರ್ಕ್ ರಾಜ್ಯದ ನ್ಯೂ ಯಾರ್ಕ್ ನಗರದ್ದು. ಈ ರಾಜ್ಯದಲ್ಲಿ ಜನಜೀವನ ಅಸ್ತವ್ಯಸ್ತಗೊಂಡಿದೆ ಎಂದರೆ ಅಂಡರ್ ಸ್ಟೇಟ್ಮೆಂಟ್ ಅನಿಸುತ್ತದೆ. ಯಾಕೆಂದರೆ, ಚಂಡಮಾರುತವು ಅವರ ಬದುಕನ್ನು ನರಕಸದೃಶ ಮಾಡಿದೆ. ಪ್ರತಿದಿನ 3.1, 3.2, 3.49 ಇಂಚ್​ಗಳಷ್ಟು ಮಳೆ ಒಂದೇ ಸಮ ಸುರಿಯುತ್ತಿದ್ದರೆ ಪರಿಸ್ಥಿತಿ ಹೇಗಾಗಬೇಡ ಅಂತ ನೀವೇ ಯೋಚಿಸಿ.

ರಸ್ತೆಗಳು ಉಕ್ಕಿ ಹರಿಯುತ್ತಿರುವ ನದಿಗಳಂತೆ ಕಾಣುತ್ತಿವೆ. ಮನೆಗಳ ಸೆಲ್ಲರ್, ಪಾರ್ಕಿಂಗ್ ಲಾಟ್ಗಳು, ಆಟದ ಮೈದಾನಗಳು, ಸಬ್ ವೇಗಳು, ಮೆಟ್ರೋ ಸ್ಟೇಶನ್ಗಳು ಎಲ್ಲಿ ನೋಡಿದರೂ ಬರೀ ನೀರು, ಸಬ್ ವೇಗಳಲ್ಲಿ ಸಿಲುಕಿದ್ದ ಸಹಸ್ರಾರು ಜನರನ್ನು ರಕ್ಷಣಾ ಪಡೆಯವರು ರಕ್ಷಿಸಿ ಮನೆ ತಲುಪಿಸಿದ್ದಾರೆ.

ನ್ಯೂ ಯಾರ್ಕ್ ನಗರದ ಒಂದು ಮೆಟ್ರೋ ಸ್ಟೇಶನ್ ದೃಶ್ಯ ನಿಮಗೆ ಈ ವಿಡಿಯೋನಲ್ಲಿ ಕಾಣುತ್ತಿದೆ. ಸ್ಟೇಶನ್ನೊಳಗೆ ನೀರು ಜಲಪಾತದಂತೆ ದುಮ್ಮಿಕ್ಕುತ್ತಿದೆ. ಮತ್ತೊಂದು ಬದಿಯಿಂದ ಮೆಟ್ರೋ ಟ್ರೇನ್ ಸ್ಟೇಶನ್ ಒಳಗೆ ಆಗಮಿಸುತ್ತಿದೆ. ನೀರು ಟ್ರೇನ್ ಮೇಲೆ ಸುರಿಯುತ್ತಿರುವುದರಿಂದ ಅದಕ್ಕೆ ಸ್ನಾನ ಮಾಡಿಸಿದಂತಿದೆ.

ಭಾರಿ ಮಳೆ ಮತ್ತು ಪ್ರವಾಹದಂಥ ಸ್ಥಿತಿಯಿಂದಾಗಿ ನ್ಯೂ ಯಾರ್ಕ್ ನಗರ ಸೇರಿದಂತೆ ರಾಜ್ಯದ ಹಲವಾರು ಭಾಗಗಳಲ್ಲಿ ವಿದ್ಯುತ್ ಸರಬರಾಜು ನಿಂತು ಹೋಗಿದೆ, ಇಂಟರ್ನೆಟ್ ಕೆಲಸ ಮಡುತ್ತಿಲ್ಲ ಮತ್ತು ಫೋನ್ಗಳೂ ನಿಷ್ಕ್ರಿಯಗೊಂಡಿವೆ. ಮೂಲಗಳ ಪ್ರಕಾರ ಈ ರಾಜ್ಯದಲ್ಲಿ ಇದುವರೆಗೆ 13 ಜನ ಬಲಿಯಾಗಿದ್ದಾರೆ ಮತ್ತು ಇನ್ನೂ ಕೆಲವರು ಕಾಣೆಯಾಗಿದ್ದಾರೆ.

ನಾಳೆಯಿಂದ (ಶನಿವಾರ) ನ್ಯೂ ಯಾರ್ಕ್ ಮತ್ತು ಇತರ ಮೂರು ರಾಜ್ಯಗಳು ಸಹಜ ಸ್ಥಿತಿಗೆ ಮರಳಲಿವೆ ಎಂದು ಹೇಳಲಾಗುತ್ತಿದೆ.

ಇದನ್ನೂ ಓದಿ:  ಸಮುದ್ರದ ನಡುವಲ್ಲಿ ಎದುರಾಯ್ತು ದೈತ್ಯ ಹಾವು; ಬೋಟ್​ನತ್ತ ಹಾವು ನುಗ್ಗಿ ಬಂದ ವಿಡಿಯೋ ವೈರಲ್​