AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ರಿಚಾ ಘೋಷ್ ಸಿಡಿಲಬ್ಬರ: ಸ್ಟಂಪ್ ಔಟ್​ನಿಂದ ಕೈತಪ್ಪಿದ ಗೆಲುವು!

ರಿಚಾ ಘೋಷ್ ಸಿಡಿಲಬ್ಬರ: ಸ್ಟಂಪ್ ಔಟ್​ನಿಂದ ಕೈತಪ್ಪಿದ ಗೆಲುವು!

ಝಾಹಿರ್ ಯೂಸುಫ್
|

Updated on: Jun 11, 2026 | 7:55 AM

Share

Richa Ghosh: ಸ್ಟ್ರೈಕ್​ಗೆ ಬಂದ ರಿಚಾ ಘೋಷ್ 2ನೇ ಎಸೆತದಲ್ಲಿ ಫೋರ್ ಬಾರಿಸಿದರು. ಮೂರನೇ ಎಸೆತದಲ್ಲಿ ಭರ್ಜರಿ ಸಿಕ್ಸ್ ಸಿಡಿಸಿದರು. ಪರಿಣಾಮ ಕೊನೆಯ 3 ಎಸೆತಗಳಲ್ಲಿ ಕೇವಲ 6 ರನ್​ ಮಾತ್ರ ಬೇಕಿತ್ತು. ಈ ಹಂತದಲ್ಲಿ ಮತ್ತೊಂದು ಭರ್ಜರಿ ಸಿಕ್ಸರ್​ ಬಾರಿಸಲು ಮುನ್ನುಗ್ಗಿ ಬಂದ ರಿಚಾ ಘೋಷ್ ಸ್ಟಂಪ್ ಔಟ್ ಆದರು.

172 ರನ್​​ಗಳ ಕಠಿಣ ಗುರಿ… ಟೀಮ್ ಇಂಡಿಯಾ ಮೊದಲ 10 ಓವರ್​ಗಳಲ್ಲಿ ಕಲೆಹಾಕಿದ್ದು ಕೇವಲ 64 ರನ್​ಗಳು. ಪರಿಣಾಮ ಭಾರತ ತಂಡಕ್ಕೆ ಗೆಲ್ಲಲು 60 ಎಸೆತಗಳಲ್ಲಿ 108 ರನ್​ಗಳ ಅವಶ್ಯಕತೆಯಿತ್ತು. ಅಷ್ಟರಲ್ಲಾಗಲೇ ಟೀಮ್ ಇಂಡಿಯಾದ ಟಾಪ್ ಆರ್ಡರ್ ಬ್ಯಾಟರ್​ಗಳಾದ ಸ್ಮೃತಿ ಮಂಧಾನ, ಶಫಾಲಿ ವರ್ಮಾ, ಯಾಸ್ತಿಕಾ ಭಾಟಿಯಾ ಹಾಗೂ ಹರ್ಮನ್​ಪ್ರೀತ್ ಕೌರ್ ಪೆವಿಲಿಯನ್ ಸೇರಿದ್ದರು. ಹೀಗಾಗಿಯೇ ಇಂಗ್ಲೆಂಡ್​ ಈ ಅಭ್ಯಾಸ ಪಂದ್ಯದಲ್ಲಿ ಸುಲಭವಾಗಿ ಗೆಲ್ಲಲಿದೆ ಎಂದು ಎಲ್ಲರೂ ಷರಾ ಬರೆದಿದ್ದರು.

ಆದರೆ 6ನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಟೀಮ್ ಇಂಡಿಯಾದ ವಿಕೆಟ್ ಕೀಪರ್ ಬ್ಯಾಟರ್ ರಿಚಾ ಘೋಷ್ ಅಕ್ಷರಶಃ ಅಬ್ಬರಿಸಿದರು. ಇಂಗ್ಲೆಂಡ್ ಬೌಲರ್​ಗಳನ್ನು ಮನಸೋ ಇಚ್ಛೆ ದಂಡಿಸಿದರು. ಪರಿಣಾಮ ಮೈದಾನದ ಮೂಲೆ ಮೂಲೆಗೆ ಸಿಕ್ಸ್-ಫೋರ್​ಗಳ ಸುರಿಮಳೆಯಾಯಿತು.

ಈ ಸಿಡಿಲಬ್ಬರದೊಂದಿಗೆ ಟೀಮ್ ಇಂಡಿಯಾ 19 ಓವರ್ ಮುಕ್ತಾಯದ ವೇಳೆಗೆ 8 ವಿಕೆಟ್ ಕಳೆದುಕೊಂಡು 155 ರನ್​ ಕಲೆಹಾಕಿತು. ಅದರಂತೆ ಅಂತಿಮ ಓವರ್​ನಲ್ಲಿ 17 ರನ್​ ಬೇಕಿದ್ದವು. ಲಿನ್ಸೆ ಸ್ಮಿತ್ ಎಸೆದ 20ನೇ ಓವರ್​ನ ಮೊದಲ ಎಸೆತ ಎದುರಿಸಿದ ಶ್ರೀ ಚರಣಿ ಸಿಂಗಲ್ ತೆಗೆದರು.

ಸ್ಟ್ರೈಕ್​ಗೆ ಬಂದ ರಿಚಾ ಘೋಷ್ 2ನೇ ಎಸೆತದಲ್ಲಿ ಫೋರ್ ಬಾರಿಸಿದರು. ಮೂರನೇ ಎಸೆತದಲ್ಲಿ ಭರ್ಜರಿ ಸಿಕ್ಸ್ ಸಿಡಿಸಿದರು. ಪರಿಣಾಮ ಕೊನೆಯ 3 ಎಸೆತಗಳಲ್ಲಿ ಕೇವಲ 6 ರನ್​ ಮಾತ್ರ ಬೇಕಿತ್ತು. ಈ ಹಂತದಲ್ಲಿ ಮತ್ತೊಂದು ಭರ್ಜರಿ ಸಿಕ್ಸರ್​ ಬಾರಿಸಲು ಮುನ್ನುಗ್ಗಿ ಬಂದ ರಿಚಾ ಘೋಷ್ ಸ್ಟಂಪ್ ಔಟ್ ಆದರು.

ಅಲ್ಲಿಗೆ 36 ಎಸೆತಗಳಲ್ಲಿ 2 ಭರ್ಜರಿ ಸಿಕ್ಸ್ ಹಾಗೂ 9 ಫೋರ್​ಗಳೊಂದಿಗೆ 68 ರನ್ ಬಾರಿಸಿದ ರಿಚಾ ಘೋಷ್ ಇನಿಂಗ್ಸ್ ಅಂತ್ಯವಾಯಿತು. ಇದಾಗ್ಯೂ ಕೊನೆಯ 2 ಎಸೆತಗಳಲ್ಲಿ ಟೀಮ್ ಇಂಡಿಯಾ 6 ರನ್​ಗಳಿಸಿದ್ದರೆ ಈ ಪಂದ್ಯದಲ್ಲಿ ಜಯ ಸಾಧಿಸಬಹುದಿತ್ತು. ಆದರೆ ಲಿನ್ಸೆ ಸ್ಮಿತ್ ಎಸೆದ ಕೊನೆಯ ಓವರ್​ನ 5ನೇ ಎಸೆತದಲ್ಲಿ ರೇಣುಕಾ ಸಿಂಗ್ ಕ್ಯಾಚ್ ನೀಡಿದರು.

ಈ ಮೂಲಕ ಟೀಮ್ ಇಂಡಿಯಾ 19.5 ಓವರ್​ಗಳಲ್ಲಿ 166 ರನ್​ಗಳಿಸಿ ಆಲೌಟ್ ಆಗಿ 5 ರನ್​ಗಳಿಂದ ವಿರೋಚಿತವಾಗಿ ಸೋಲೊಪ್ಪಿಕೊಂಡಿದೆ. ಇಲ್ಲಿ ಇದು ವಿರೋಚಿತ ಸೋಲು ಎನ್ನಲು ಮುಖ್ಯ ಕಾರಣ ರಿಚಾ ಘೋಷ್ ಅವರ ಏಕಾಂಗಿ ಹೋರಾಟ. ಅದರಲ್ಲೂ ಮೊದಲ 10 ಓವರ್​ಗಳಲ್ಲಿ ಕೇವಲ 64 ರನ್​ಗಳಿಸಿ, ಆ ಬಳಿಕ 59 ಎಸೆತಗಳಲ್ಲಿ 102 ರನ್​ ಚಚ್ಚಿರುವುದು ಕೆಳ ಕ್ರಮಾಂಕದ ಬ್ಯಾಟರ್​ಗಳ ದಿಟ್ಟ ಹೋರಾಟ.

ಅಭ್ಯಾಸ ಪಂದ್ಯದಲ್ಲೇ ಇಂತಹದೊಂದು ಹೋರಾಟ ಮೂಡಿಬಂದಿರುವುದು ಟೀಮ್ ಇಂಡಿಯಾಗೆ ಶುಭ ಸೂಚನೆ. ಹೀಗಾಗಿ ಈ ಬಾರಿ ಮಹಿಳಾ ಟಿ20 ವಿಶ್ವಕಪ್​ನಲ್ಲಿ ಭಾರತ ಮಹಿಳಾ ತಂಡದಿಂದ ಭರ್ಜರಿ ಪ್ರದರ್ಶನವನ್ನು ನಿರೀಕ್ಷಿಸಬಹುದು.

 

 

 

Follow Us
ಝಾಹಿರ್ ಯೂಸುಫ್
ಝಾಹಿರ್ ಯೂಸುಫ್

ಟಿವಿ9 ಡಿಜಿಟಲ್ ಮುಖ್ಯ ಉಪ ಸಂಪಾದಕ. 10 ವರ್ಷಗಳಿಂದ ಕನ್ನಡ ಡಿಜಿಟಲ್​ ಮಾಧ್ಯಮದಲ್ಲಿ ಪತ್ರಿಕಾ ವೃತ್ತಿ. ಕ್ರೀಡಾ ಸುದ್ದಿ, ದೀರ್ಘ ಲೇಖನ, ವಿಶ್ಲೇಷಣೆ, ಹೀಗೆ ಎಲ್ಲ ತರಹದ ಬರಹದಲ್ಲೂ ಅನುಭವ. ಪ್ರಸ್ತುತ ವಿದ್ಯಮಾನಗಳ ವ್ಯಾಖ್ಯಾನ, ಚರ್ಚೆಯಲ್ಲಿ ನೈಪುಣ್ಯ. ಈ ಹಿಂದೆ ಉದಯವಾಣಿ, ನ್ಯೂಸ್ 18 ಕನ್ನಡ ಡಿಜಿಟಲ್​​ನಲ್ಲಿ ಕೆಲಸ ಮಾಡಿದ ಅನುಭವ. ಆಸಕ್ತಿದಾಯಕ ವಿಷಯ ಕ್ರೀಡೆ, ಸಿನಿಮಾ ಮತ್ತು ರಾಜಕೀಯ.

Read More