ಪಾದಯಾತ್ರೆ ಹೆಸರಲ್ಲಿ ಡಿಕೆ ಸಹೋದರು ನಡೆಸಿದ ದೊಂಬರಾಟ ಹಳೆ ಮೈಸೂರು ಭಾಗದಲ್ಲಿ ತಮ್ಮ ಬೇಳೆ ಬೇಯಿಸಿಕೊಳ್ಳವುದಾಗಿತ್ತು: ಸಿಪಿ ಯೋಗೇಶ್ವರ
ಪತ್ರಿಕೆಗಳಲ್ಲಿ ಪುಟಗಟ್ಟಲೆ ಜಾಹಿರಾತುಗಳನ್ನು ಸುಮ್ಮನೆ ಕಾಟಾಚಾರಕ್ಕೆ ನೀಡುವುದಿಲ್ಲ. ಯೋಜನೆಗಳನ್ನು ಅನುಷ್ಠಾನಕ್ಕೆ ತರುವುದು ಸರ್ಕಾರದ ಗುರಿಯಾಗಿದೆ. ಮೇಕೆದಾಟು ಯೋಜನೆ ಜಾರಿಗೊಳ್ಳಬೇಕಾದರೆ, ಅದಕ್ಕೊಂದು ಪ್ರಕ್ರಿಯೆ ಇದೆ, ಅದನ್ನು ಅನುಸರಿಸಿಕೊಂಡೇ ಮಾಡಬೇಕಾಗುತ್ತದೆ ಎಂದು ಯೋಗೀಶ್ವರ ಹೇಳಿದರು.
ಬಿಜೆಪಿ ನಾಯಕ ಮತ್ತು ಮಾಜಿ ಸಚಿವ ಸಿಪಿ ಯೋಗೇಶ್ವರ ಅವರು ರಾಮನಗರದಲ್ಲಿ ಗುರುವಾರ ಸುದ್ದಿಗೋಷ್ಟಿಯೊಂದನ್ನು ಅಯೋಜಿಸಿ ಕಾಂಗ್ರೆಸ್ ನಾಯಕರು ನಡೆಸುತ್ತಿದ್ದ ಪಾದಯಾತ್ರೆಯನ್ನು ತೆಗಳಿದರು. ಪಾದಯಾತ್ರೆಯು ಹಳೆ ಮೈಸೂರು ಭಾಗದಲ್ಲಿ ಡಿಕೆ ಶಿವಕುಮಾರ ಮತ್ತು ಅವರ ಸಹೋದರ ಡಿಕೆ ಸುರೇಶ್ ತಮ್ಮ ಬೇಳೆ ಬೇಯಿಸಿಕೊಳ್ಳಲು ನಡೆಸುತ್ತಿರುವ ದೊಂಬರಾಟವಲ್ಲದೆ ಬೇರೇನೂ ಅಲ್ಲ ಎಂದು ಹೇಳಿದರು. ಹಿಂದೆಯೂ ಪಾದಯಾತ್ರೆಗಳನ್ನು ನಡೆಸಲಾಗಿದೆ, ಅವುಗಳಲ್ಲಿ ಕೆಲವು ಯಶ ಕಂಡಿದ್ದರೆ ಉಳಿದವು ವಿಫಲವಾಗಿವೆ. ಅದರೆ, ಕಾಂಗ್ರೆಸ್ ನಡೆಸುತ್ತಿರುವ ಈಗಿನ ಪಾದಯಾತ್ರೆಯನ್ನು ಅಧಿಕಾರದಲ್ಲಿರುವ ಬಿಜೆಪಿ ಸರ್ಕಾರವನ್ನು ಅಭದ್ರಗೊಳಿಸಲು ಹಮ್ಮಿಕೊಳ್ಳಲಾಗಿದೆ ಎಂದು ಅವರು ಹೇಳಿದರು.
ಕಾಂಗ್ರೆಸ್ ನಾಯಕರ ಪಾದಯಾತ್ರೆ ಹೇಗಿತ್ತು ಅಂತ ಎಲ್ಲರಿಗೂ ಗೊತ್ತಾಗಿದೆ. ಬೇರೆ ಬೇರೆ ಜಿಲ್ಲೆಗಳಿಂದ ಹಣ ನೀಡಿ ಜನರನ್ನು ಕರೆಸಿಕೊಂಡು ಇವರು ಪಾದಯಾತ್ರೆ ನಡೆಸಿದ್ದಾರೆ. ದೂರದೂರುಗಳಿಂದ ಬಂದಿದ್ದ ಜನ ಕೋವಿಡ್ ಸೋಂಕನ್ನು ಅಂಟಿಸಿಕೊಂಡು ವಾಪಸ್ಸು ಹೋಗಿರುತ್ತಾರೆ. ತಮ್ಮ ಊರುಗಳಲ್ಲಿ ಅದನ್ನು ಬೇರೆಯವರಿಗೆ ತಾಕಿಸುತ್ತಾರೆ. ರಾಜ್ಯದೆಲ್ಲೆಡೆ ಕೊವಿಡ್ ತಲ್ಲಣ ಸೃಷ್ಟಿಸಲು ಪಾದಯಾತ್ರೆ ಮಾಡಲಾಗಿದೆ ಎಂದು ಯೋಗೀಶ್ವರ್ ಹೇಳಿದರು.
ಸಿದ್ದರಾಮಯ್ಯನವರು ನ್ಯಾಯಾಲಯದ ಆದೇಶಕ್ಕೆ ತಲೆಬಾಗಿ ಪಾದಯಾತ್ರೆಯನ್ನು ನಿಲ್ಲಿಸುತ್ತಿದ್ದೇವೆ ಎಂದು ಹೇಳುತ್ತಾರೆ. ಆದರೆ, ಮೇಕೆದಾಟು ಯೋಜನೆಗೆ ಸಂಬಂಧಿಸಿದ ಪ್ರಕರಣವೂ ನ್ಯಾಯಾಲಯದಲ್ಲಿದೆ ಎನ್ನುವ ಅಂಶವನ್ನು ಮರೆತುಬಿಡುತ್ತಾರೆ. ಪ್ರಕರಣ ಸರ್ವೋಚ್ಛ ನ್ಯಾಯಾಲಯದಲ್ಲಿರುವುದರಿಂದ ಅದರ ತೀರ್ಪಿಗಾಗಿ ಕಾಯಬೇಕಾಗುತ್ತದೆ. ಬಿಜೆಪಿ ಸರ್ಕಾರಕ್ಕೆ ಮೇಕೆದಾಟು ಯೋಜನೆ ಬಗ್ಗೆ ಬದ್ಧತೆಯಿದೆ ಎಂದು ಯೋಗೇಶ್ವರ್ ಹೇಳಿದರು.
ಪತ್ರಿಕೆಗಳಲ್ಲಿ ಪುಟಗಟ್ಟಲೆ ಜಾಹಿರಾತುಗಳನ್ನು ಸುಮ್ಮನೆ ಕಾಟಾಚಾರಕ್ಕೆ ನೀಡುವುದಿಲ್ಲ. ಯೋಜನೆಗಳನ್ನು ಅನುಷ್ಠಾನಕ್ಕೆ ತರುವುದು ಸರ್ಕಾರದ ಗುರಿಯಾಗಿದೆ. ಮೇಕೆದಾಟು ಯೋಜನೆ ಜಾರಿಗೊಳ್ಳಬೇಕಾದರೆ, ಅದಕ್ಕೊಂದು ಪ್ರಕ್ರಿಯೆ ಇದೆ, ಅದನ್ನು ಅನುಸರಿಸಿಕೊಂಡೇ ಮಾಡಬೇಕಾಗುತ್ತದೆ ಎಂದು ಯೋಗೀಶ್ವರ ಹೇಳಿದರು.
ಇದನ್ನೂ ಓದಿ: ಗಾಯಗೊಂಡ ಹಕ್ಕಿ ಬೇಗ ಗುಣಮುಖವಾಗುವಂತೆ ಗಾಯತ್ರಿ ಮಂತ್ರ ಹೇಳಿ ಪ್ರಾರ್ಥಿಸಿದ ಶಿಲ್ಪಾ ಪುತ್ರಿ; ವಿಡಿಯೋ ಇಲ್ಲಿದೆ