South Africa: 2021ರಲ್ಲಿ ಇದುವರೆಗೆ 249 ಖಡ್ಗಮೃಗಗಳು ಹತ್ಯೆಗೀಡಾದ ಆಘಾತಕಾರಿ ಅಂಶ ಬಯಲು!
Rhinos: ಜಗತ್ತಿನ ಸುಮಾರು 80 ಪ್ರತಿಶತ ಖಡ್ಗಮೃಗಗಳು ವಾಸವಿರುವ ದಕ್ಷಿಣ ಆಫ್ರಿಕಾದಲ್ಲಿ 2021ರಲ್ಲಿ ಇಲ್ಲಿವರೆಗೆ 249 ಖಡ್ಗಮೃಗಗಳನ್ನು ಹತ್ಯೆಮಾಡಲಾಗಿದೆ ಎಂಬ ಆಘಾತಕಾರಿ ಮಾಹಿತಿ ಹೊರಬಿದ್ದಿದೆ.
ದಕ್ಷಿಣ ಆಫ್ರಿಕಾ: ಜಗತ್ತಿನ 80 ಪ್ರತಿಶತ ಖಡ್ಗಮೃಗಗಳು ದಕ್ಷಿಣ ಆಫ್ರಿಕಾದಲ್ಲಿವೆ. ಆದರೆ ಅವುಗಳ ಕೊಂಬುಗಳಿಗೆ ಏಷ್ಯಾ ಖಂಡ ಸೇರಿದಂತೆ ಹಲವೆಡೆ ಬಹಳ ಬೇಡಿಕೆ ಇದೆ. ಈ ಕಾರಣದಿಂದ ಆಫ್ರಿಕಾದಲ್ಲಿ ಖಡ್ಗಮೃಗಗಳನ್ನು ಬೇಟೆಯಾಡಲಾಗುತ್ತಿದ್ದು, ಅವುಗಳ ಸಂತತಿ ತೀವ್ರವಾಗಿ ಇಳಿಮುಖವಾಗುತ್ತಿವೆ. 2021ರಲ್ಲಿ ಇದುವರೆಗೆ ಒಟ್ಟು 249 ಖಡ್ಗಮೃಗಗಳು ಹತ್ಯೆಗೀಡಾಗಿವೆ ಎಂಬ ಆಘಾತಕಾರಿ ಮಾಹಿತಿಯನ್ನು ದಕ್ಷಿಣ ಆಫ್ರಿಕಾದ ಪರಿಸರ ಸಚಿವ ಬಾರ್ಬರಾ ಗ್ರೀಸಿ ಹೊರಹಾಕಿದ್ದಾರೆ. ದಕ್ಷಿಣ ಆಫ್ರಿಕಾದಲ್ಲಿ ಲಾಕ್ಡೌನ್ ತೆರವುಗೊಳಿಸಿರುವುದೂ ಹತ್ಯೆಗೆ ಒಂದು ಕಾರಣ ಎಂದು ಅವರು ತಿಳಿಸಿದ್ದಾರೆ.
ಜಗತ್ತಿನ ಸುಮಾರು ಎಂಬತ್ತು ಶೇಕಡಾ ಖಡ್ಗಮೃಗಗಳಿಗೆ ದಕ್ಷಿಣ ಆಫ್ರಿಕಾವೇ ತವರು ಮನೆ. ಆದರೆ ಏಷ್ಯಾದಲ್ಲಿ ಸಾಂಪ್ರದಾಯಿಕ ಚಿಕಿತ್ಸಾ ವಿಧಾನದಲ್ಲಿ ಖಡ್ಗಮೃಗಗಳ ಕೊಂಬುಗಳನ್ನು ಬಳಸುವುದರಿಂದ ಹಣದ ದುರಾಸೆಗೆ ಖಡ್ಗಮೃಗಗಳನ್ನು ಬೇಟೆಯಾಡಲಾಗುತ್ತಿದೆ. 2020ರ ಅರ್ಧ ವಾರ್ಷಿಕದಲ್ಲಿ ಸುಮಾರು 83 ಖಡ್ಗಮೃಗಗಳನ್ನು ಹತ್ಯೆ ಮಾಡಲಾಗಿತ್ತು. ಅದಕ್ಕೆ ಹೋಲಿಸಿದರೆ ಈ ವರ್ಷ ಬೇಟೆಯ ಪ್ರಮಾಣ ವಿಪರೀತ ಏರಿಕೆಯಾಗಿದೆ.
ಹತ್ಯೆಗೀಡಾದ ಅತೀ ಹೆಚ್ಚಿನ ಪ್ರಮಾಣದ ಅಂದರೆ 132 ಖಡ್ಗಮೃಗಗಳು ಕ್ರುಗೇರ್ ರಾಷ್ಟ್ರೀಯ ಉದ್ಯಾನವನದಲ್ಲಿ ಇದ್ದವುಗಳು. ಲಾಕ್ಡೌನ್ ತೆರವಿನ ಕಾರಣ ಲಿಂಪೊಪೊ, ಎಮ್ಪುಲಂಗಾ ಮತ್ತು ಇತರ ಸ್ವಾಯತ್ತ ರಾಜ್ಯಗಳಲ್ಲಿ ಬೇಟೆಗಾರರು ಹೆಚ್ಚಾಗಿದ್ದಾರೆ ಎಂದು ಸಚಿವ ಬಾರ್ಬಾರಾ ಮಾಹಿತಿ ನೀಡಿದ್ದಾರೆ.
ಹತ್ಯೆಗೆ ಕಾರಣವೇನು?
ದಕ್ಷಿಣ ಆಫ್ರಿಕಾದಲ್ಲಿ ಕಳೆದ ದಶಕದಿಂದ ತೀವ್ರವಾಗಿ ಖಡ್ಗಮೃಗಗಳನ್ನು ಹತ್ಯೆಮಾಡಲಾಗುತ್ತಿದೆ. ಏಷ್ಯಾದ ದೇಶಗಳಲ್ಲಿ ಅವುಗಳ ಕೊಂಬುಗಳನ್ನು ಔಷಧಿಗಾಗಿ ಬಳಸುತ್ತಾರೆ. ಮನುಷ್ಯನ ಉಗುರಿನಲ್ಲಿರುವ ಅಂಶವೇ ಅವುಗಳ ಕೊಂಬುಗಳಲ್ಲಿರುವುದರಿಂದ ಅದಕ್ಕೆ ಸಂಬಂಧಪಟ್ಟ ಸಾಂಪ್ರದಾಯಿಕ ಚಿಕಿತ್ಸೆಗಳಲ್ಲಿ ಕೊಂಬುಗಳನ್ನು ಬಳಸುತ್ತಾರೆ. ಖಡ್ಗಮೃಗಗಳನ್ನು ಬೇಟೆಯಾಡಿ ಅವುಗಳ ಕೊಂಬುಗಳನ್ನು ಕತ್ತರಿಸಿ ಪೌಡರ್ ರೂಪದಲ್ಲಿ ಸಂಗ್ರಹಿಸಿ ಏಷ್ಯಾಕ್ಕೆ ರಫ್ತು ಮಾಡುತ್ತಾರೆ ಎನ್ನಲಾಗಿದೆ. ಕೊಂಬುಗಳಿಗಾಗಿ ಖಡ್ಗಮೃಗಗಳ ಬೇಟೆ ತಪ್ಪಿಸಲು ಆಫ್ರಿಕಾದ ಸಂಬಂಧಪಟ್ಟ ಇಲಾಖೆಯ ನೇತೃತ್ವದಲ್ಲಿ ಖಡ್ಗಮೃಗಗಳ ಕೊಂಬುಗಳನ್ನು ಈ ಹಿಂದೆ ಕತ್ತರಿಸಲಾಗಿತ್ತು. ಕೊಂಬುಗಳಿಲ್ಲದಿದ್ದರೆ ಬೇಟೆಗಾರರು ಖಡ್ಗಮೃಗಗಳನ್ನು ಕೊಲ್ಲುವುದಿಲ್ಲ ಎಂಬ ಕಾರಣದಿಂದ ಅನಿವಾರ್ಯವಾಗಿ ಹೀಗೆ ಮಾಡಲಾಗಿತ್ತು.
ಇದನ್ನೂ ಓದಿ:
NASA: ದಯವಿಟ್ಟು ಗಮನಿಸಿ, ‘ನಿಮಗೆ ಮಂಗಳ ಗ್ರಹದ ಅಂಗಳದಿಂದ ಇಮೈಲ್ ಬಂದಿದೆ’
ಮಳೆ ಅವಾಂತರ: ಕಾಳಜಿ ಕೇಂದ್ರದಲ್ಲಿ ತಮ್ಮ ಪರಿಸ್ಥಿತಿ ನೆನೆದು ಮಹಿಳೆಯರ ಕಣ್ಣೀರು
(249 Rhinos were killed in South Africa from January 2021 says environment Minister Barbara Greecy)
Published On - 4:29 pm, Sun, 1 August 21