ತಿಮಿಂಗಲು ಪೂರ್ತಿಯಾಗಿ ನುಂಗಿದ್ದರೂ ಲಾಬಸ್ಟರ್ ಹಿಡಿಯುವ ಪೆಕಾರ್ಡ್​ ತನ್ನ ಭಯಾನಕ ಅನುಭವ ಹೇಳಲು ಬದುಕುಳಿದ

ತಿಮಿಂಗಲದ ದೇಹದೊಳಗೆ ಪೆಕಾರ್ಡ್​ ಕೊಸರಾಡುತ್ತರಿವಾಗ ಅದು ತನ್ನ ತಲೆ ಭಾಗವನ್ನು ಜೋರಾಗಿ ಅಲುಗಾಡಿಲಾರಂಭಿಸಿ ಸಮುದ್ರದ ಮೇಲ್ಭಾಗಕ್ಕೆ ಬಂದು ಅವರನ್ನು ಕಕ್ಕಿಬಿಟ್ಟಿತಂತೆ. ಅವರೇ ಹೇಳುವ ಹಾಗೆ ತಿಮಿಂಗಲದ ದೇಹದೊಳಗೆ 40 ಸೆಕೆಂಡ್​ ಇದ್ದರಂತೆ.

  • Publish Date - 10:22 pm, Sat, 12 June 21
ತಿಮಿಂಗಲು ಪೂರ್ತಿಯಾಗಿ ನುಂಗಿದ್ದರೂ ಲಾಬಸ್ಟರ್ ಹಿಡಿಯುವ ಪೆಕಾರ್ಡ್​ ತನ್ನ ಭಯಾನಕ ಅನುಭವ ಹೇಳಲು ಬದುಕುಳಿದ
ಹಂಪ್​ಬ್ಯಾಕ್ ತಿಮಿಂಗಲು ಮತ್ತು ಮೈಕೆಲ್ ಪೆಕಾರ್ಡ್​

ಮಸಾಚ್ಯೂಸೆಟ್ಸ್ : ಕ್ರಿಶ್ಚಿಯನ್ನರಿಗೆ ಜೋನನ (ಯೋನ) ಬಗ್ಗೆ ಗೊತ್ತಿರುತ್ತದೆ ಅಥವಾ ಬೈಬಲ್​ ಓದಿದವರಿಗೂ ಅವನ ಬಗ್ಗೆ ತಿಳಿದಿರುತ್ತದೆ. ಹಳೆ ಒಡಂಬಡಿಕೆಯ ಪ್ರಕಾರ ದೇವರು ಜೋನನಿಗೆ ನಿನಿವೆ ಹೆಸರಿನ ಊರಿಗೆ ಹೋಗಿ ಕೆಟ್ಟ ದಾರಿ ಹಿಡಿದಿರುವ ಅಲ್ಲಿನ ಜನರನ್ನು ಎಚ್ಚರಿಸು ಎಂದು ಆಜ್ಞಾಪಿಸುತ್ತಾನೆ, ಆದರೆ, ಜೋನ ದೇವರ ಆಜ್ಞೆಯನ್ನು ಉಲ್ಲಂಘಿಸಿ ಅತನಿಂದ ತಪ್ಪಿಸಿಕೊಳ್ಳಲು ತಾರ್ಷಿಶ್ ಕಡೆ ಒಂದು ಹಡಗಿನಲ್ಲಿ ಹೋಗುವಾದ ಬಿರುಗಾಳಿಯೆದ್ದು ಅವನು ಸಮುದ್ರದೊಳಗೆ ಬೀಳುತ್ತಾನೆ. ಕಡಲಲ್ಲಿದ್ದ ಒಂದು ಬೃಹತ್ ಗಾತ್ರ ಮೀನು ಅವನನ್ನು ನುಂಗಿಬಿಡುತ್ತದೆ. ಆಗ ಅವನಿಗೆ ತಾನೆಸಗಿದ ತಪ್ಪಿನ ಅರಿವಾಗಿ ತನ್ನನ್ನು ರಕ್ಷಿಸುವಂತೆ ದೇವರನ್ನು ಪ್ರಾರ್ಥಿಸುತ್ತಾನೆ. ಆಗ ಆ ಮೀನು ಅವನನ್ನು ಹೊರಗೆ ಕಕ್ಕಿಬಿಡುತ್ತದೆ, ಬೈಬಲ್​ನಲ್ಲಿ ಉಲ್ಲೇಖವಾಗಿರುವ ಪ್ರಕಾರ ಜೋನ ಮೂರು ಹಗಲು ಮತ್ತು ಮೂರು ರಾತ್ರಿ ಮೀನಿನ ಉದರದಲ್ಲಿರುತ್ತಾನೆ. ಈ ಕತೆಯನ್ನು ಇಲ್ಲಿ ಹೇಳುವ ಹಿಂದೆ ಒಂದು ಕಾರಣವಿದೆ. ಈ ಯುಗದ ಜೋನನೊಬ್ಬ ಅಮೇರಿಕಾದಲ್ಲಿ ಪ್ರತ್ಯಕ್ಷನಾಗಿದ್ದಾನೆ!

ಸಮುದ್ರದಲ್ಲಿ ಲಾಬ್​ಸ್ಟರ್ (ಸಮುದ್ರನಳ್ಳಿ) ಹಿಡಿಯುವ 56-ವರ್ಷ ವಯಸ್ಸಿನ ಮೈಕೆಲ್ ಪೆಕಾರ್ಡ್​ನನ್ನು ಆಧುನಿಕ ಜೋನ ಎಂದು ಕರೆಯಬಹುದು. ಯಾಕೆ ಗೊತ್ತಾ? ಇವರನ್ನು ಅನಾಮತ್ತಾಗಿ ನುಂಗಲು ಪ್ರಯತ್ನಿಸಿದ ಹಂಪ್​ಬ್ಯಾಕ್​ ತಿಮಿಂಗಲಕ್ಕೆ ಅದೇನೆನ್ನಿಸಿತೋ, ತನ್ನ ಬದುಕು ಇವತ್ತಿಗೆ ಮುಗಿಯಿತು ಅಂದುಕೊಳ್ಳುತ್ತಿದ್ದ ಪೆಕಾರ್ಡ್​ನನ್ನು ಅದು ಸಮುದ್ರದ ಮೇಲ್ಭಾಗಕ್ಕೆ ಬಂದು ಜೋರಾಗಿ ಕಕ್ಕಿಬಿಟ್ಟಿದೆ. ತನ್ನ ಈ ಭಯಾನಕ ಕತೆಯನ್ನು ನಮ್ಮೊಂದಿಗೆ ಹಂಚಿಕೊಳ್ಳಲು ಪೆಕಾರ್ಡ್ ಬದುಕಿದ್ದಾರೆ ಮತ್ತು ತನಗಾಗಿರುವ ಗಾಯಗಳಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಮನೆಗೆ ಹೋಗಿದ್ದಾರೆ. ಈ ಘಟನೆ ನಡೆದಿರೋದು ಅಮೇರಿಕಕಾದ ಮಸಾಚ್ಯೂಸೆಟ್ಸ್​ನಲ್ಲರುವ ಕೇಪ್ ಕಾಡ್​ನಲ್ಲಿ.

ಸಾವಿನ ಕದ ತಟ್ಟಿ ವಾಪಸ್ಸಾಗಿರುವ ಪೆಕಾರ್ಡ್​ ತನ್ನ ಅನುಭವವನ್ನು ಫೇಸ್​ಬುಕ್​ನಲ್ಲಿ ಶೇರ್​ ಮಾಡಿದ್ದಾರೆ.

‘ಎಲ್ಲರಿಗೂ ನಮಸ್ಕಾರ. ನನ್ನ ಬದುಕಿನಲ್ಲಿ ಇವತ್ತು ಏನು ನಡೆಯಿತು ಅನ್ನುವದನ್ನು ನಿಮ್ಮೊಂದಿಗೆ ಹಂಚಿಕೊಳ್ಳಲು ಬಯಸುತ್ತೇನೆ. ಏಡಿಗಳನ್ನು ಹಿಡಿಯಲು ನಾನಿಂದು ಸಮುದ್ರದೊಳಗೆ ಇಳಿದಾಗ ಒಂದು ಹಂಪ್​ಬ್ಯಾಕ್​ ವ್ಹೇಲ್ ನನ್ನನ್ನು ತಿನ್ನಲು ಪ್ರಯತ್ನಿಸಿತು. ಅದರ ಮುಚ್ಚಿದ ಬಾಯೊಳಗೆ ನಾನು ಸುಮಾರು 30-40 ಸೆಕೆಂಡ್​ಗಳವರೆಗೆ ಇದ್ದೆ. ಅದಾದ ಮೇಲೆ ವ್ಹೇಲ್ ನೀರಿನ ಮೇಲ್ಭಾಗಕ್ಕೆ ಬಂದು ನನ್ನನ್ನು ಜೋರಾಗಿ ಹೊರಗುಗುಳಿತು. ನನಗೆ ಮೈ ತುಂಬಾ ಗಾಯಗಳಾಗಿವೆ ಆದರೆ ಅದೃಷ್ಟವಶಾತ್ ಯಾವುದೇ ಮೂಳೆ ಮುರಿದಿಲ್ಲ. ಗಾಯಗಳಿಂದ ಸಮುದ್ರದಲ್ಲಿ ನರಳುತ್ತಿದ್ದ ನನ್ನನ್ನು ರಕ್ಷಿಸಿದ ಮತ್ತು ಆರೈಕೆ ಒದಗಿಸಿದ ಪ್ರಾವಿನ್ಸ್​​ಟೌನ್ ರಕ್ಷಣಾ ಪಡೆಗೆ ಧನ್ಯವಾದಗಳನ್ನು ಹೇಳುತ್ತೇನೆ,’ ಎಂದು ಅವರು ತಮ್ಮ ಪೋಸ್ಟ್​ನಲ್ಲಿ ಹೇಳಿದ್ದಾರೆ.

‘ಇದ್ದಕ್ಕಿದ್ದಂತೆ ಯಾರೋ ನನ್ನನ್ನು ಬಲವಾಗಿ ನೂಕಿದಂತಾಯಿತು. ಏನಾಗುತ್ತಿವೆ ಅಂತ ಯೋಚಿಸುವ ಮೊದಲೇ ನನಗೆ ಕಾರ್ಗತ್ತೆಯಲ್ಲಿ ಸಿಕ್ಕಿಕೊಂಡಂಥ ಅನುಭವ,’ ಎಂದು ಹಯಾನ್ನಿಸ್​ನಲ್ಲಿರುವ ಆಸ್ಪತ್ರೆಯೊಂದರಲ್ಲಿ ಚಿಕಿತ್ಸೆ ಪಡೆದು ಡಿಸ್ಚಾರ್ಜ್ ಆದ ಮೇಲೆ ಸ್ಥಳೀಯ ಪತ್ರಿಕೆ ಕೇಪ್​ ಕೋಡ್​ ಟೈಮ್ಸ್​ಗೆ ನೀಡಿದ ಸಂದರ್ಶನದಲ್ಲಿ ಪೆಕಾರ್ಡ್ ಹೇಳಿದ್ದಾರೆ.

ಅದರ ದೇಹದೊಳಗಡೆ ಜಾರುತ್ತಿರುವ ಅನುಭವ ನನಗಾಗಲಾರಂಭಿಸಿತ್ತು. ತನ್ನ ಬಾಯೊಳಗಿನ ಸ್ನಾಯುಗಳಿಂದ ತಿಮಿಂಗಿಲ ನನ್ನನ್ನು ಹಿಂಡಲಾರಂಭಿಸಿತ್ತು. ನಾನು ಸಂಪೂರ್ಣವಾಗಿ ಅದರ ದೇಹದೊಳಗೆ ಹೋಗಿಬಿಟ್ಟಿದ್ದೆ. ಬರೀ ಕತ್ತಲು…..ಸಾವಿನಿಂದ ಪಾರಾಗಲಾರೆ ಅನ್ನುವುದು ನನಗೆ ಖಾತ್ರಿಯಾಗಿತ್ತು. ನನ್ನ ಕತೆ ಮುಗೀತು, ನಾನು ಸತ್ತು ಹೋದೆ ಎಂದುಕೊಳ್ಳುತ್ತಿದ್ದೆ. 15 ಮತ್ತು 12 ವರ್ಷದ ನನ್ನ ಮಕ್ಕಳ ಬಗ್ಗೆ ಮಾತ್ರ ನಾನಾಗ ಯೋಚಿಸುತ್ತಿದ್ದೆ,’ ಎಂದು ಪೆಕಾರ್ಡ್​ ಪತ್ರಿಕೆಗೆ ಹೇಳಿದ್ದಾರೆ.

ತಿಮಿಂಗಲದ ದೇಹದೊಳಗೆ ಪೆಕಾರ್ಡ್​ ಕೊಸರಾಡುತ್ತರಿವಾಗ ಅದು ತನ್ನ ತಲೆ ಭಾಗವನ್ನು ಜೋರಾಗಿ ಅಲುಗಾಡಿಲಾರಂಭಿಸಿ ಸಮುದ್ರದ ಮೇಲ್ಭಾಗಕ್ಕೆ ಬಂದು ಅವರನ್ನು ಕಕ್ಕಿಬಿಟ್ಟಿತಂತೆ. ಅವರೇ ಹೇಳುವ ಹಾಗೆ ತಿಮಿಂಗಲದ ದೇಹದೊಳಗೆ 40 ಸೆಕೆಂಡ್​ ಇದ್ದರಂತೆ.

ಇದನ್ನೂ ಓದಿ: UFO Over America: ಕಳೆದ ವರ್ಷ ಲಾಕ್​ಡೌನ್ ಸಮಯದಲ್ಲಿ ಅಮೇರಿಕನ್ನರು ಅತೀ ಹೆಚ್ಚು ಹಾರುವ ತಟ್ಟೆಗಳನ್ನು ನೋಡಿದ್ದಾರೆ !