Afghanistan Crisis: ಅಫ್ಘಾನಿಸ್ತಾನದ ಗೌಪ್ಯ ಸ್ಥಳದಿಂದ ಅಮೆರಿಕನ್ನರು, ಅಫ್ಘಾನ್​ ಕಮಾಂಡೋಗಳನ್ನು ರಹಸ್ಯವಾಗಿ ಶಿಫ್ಟ್​ ಮಾಡಿದ್ದು ಹೇಗೆ?

| Updated By: ಸುಷ್ಮಾ ಚಕ್ರೆ

Updated on: Sep 02, 2021 | 1:06 PM

Eagle Base: ಈ ಸ್ಥಳಾಂತರ ಪ್ರಕ್ರಿಯೆಯ ವೇಳೆ ಕಾಬೂಲ್ ವಿಮಾನ ನಿಲ್ದಾಣದ ಹೊರಭಾಗದಲ್ಲಿದ್ದ ಗೌಪ್ಯ ಸ್ಥಳದಿಂದ ಅಫ್ಘಾನ್​ ಕಮಾಂಡೋಗಳು ಸೇರಿದಂತೆ ಅನೇಕರನ್ನು ರಹಸ್ಯವಾಗಿ ಅಮೆರಿಕಕ್ಕೆ ಶಿಫ್ಟ್​ ಮಾಡಲಾಗಿತ್ತು. ಈ ಗೌಪ್ಯ ಸ್ಥಳವನ್ನು ಈಗಲ್ ಬೇಸ್ ಎಂದು ಕರೆಯಲಾಗುತ್ತಿತ್ತು.

Afghanistan Crisis: ಅಫ್ಘಾನಿಸ್ತಾನದ ಗೌಪ್ಯ ಸ್ಥಳದಿಂದ ಅಮೆರಿಕನ್ನರು, ಅಫ್ಘಾನ್​ ಕಮಾಂಡೋಗಳನ್ನು ರಹಸ್ಯವಾಗಿ ಶಿಫ್ಟ್​ ಮಾಡಿದ್ದು ಹೇಗೆ?
ಅಫ್ಘಾನಿಸ್ತಾನ
Follow us on

ಕಾಬೂಲ್: ತಾಲಿಬಾನ್ ವಶವಾಗಿರುವ ಅಫ್ಘಾನಿಸ್ತಾನದಿಂದ ಸಂಪೂರ್ಣವಾಗಿ ತನ್ನ ಸೈನ್ಯವನ್ನು ವಾಪಾಸ್ ಪಡೆದಿರುವ ಅಮೆರಿಕ ಅಲ್ಲಿಂದ ಬರುವ ಮುನ್ನ ಕಾಬೂಲ್ ವಿಮಾನ ನಿಲ್ದಾಣದ ಬಳಿ ಇರುವ ಗೌಪ್ಯವಾದ ಸಿಐಎ ಬೇಸ್​ನಿಂದ ಅಮೆರಿಕದ ಪ್ರಜೆಗಳು ಹಾಗೂ ಅಪಾಯದಲ್ಲಿದ್ದ ಅಫ್ಘಾನಿಸ್ತಾನದ ಕಮಾಂಡೋಗಳನ್ನು ರಹಸ್ಯವಾಗಿ ಸಾಗಿಸಿತ್ತು ಎಂಬ ವಿಷಯವನ್ನು ಖುದ್ದು ಅಮೆರಿಕ ಅಧ್ಯಕ್ ಜೋ ಬೈಡನ್ ಕಚೇರಿಯ ಅಧಿಕಾರಿಗಳೇ ಬಹಿರಂಗಪಡಿಸಿದ್ದಾರೆ.

ಕಾಬೂಲ್ ತಾಲಿಬಾನ್​ ಉಗ್ರರ ವಶವಾದ ನಂತರ ಅಲ್ಲಿದ್ದ ಅಮೆರಿಕನ್ನರನ್ನು ಅಮೆರಿಕ ವಿಶೇಷ ವಿಮಾನ ಮೂಲಕ ಕರೆಸಿಕೊಂಡಿತ್ತು. ಹಲವು ದಿನಗಳ ಕಾಲ ನಡೆದ ಈ ಸ್ಥಳಾಂತರ ಪ್ರಕ್ರಿಯೆಯ ವೇಳೆ ಕಾಬೂಲ್ ವಿಮಾನ ನಿಲ್ದಾಣದ ಹೊರಭಾಗದಲ್ಲಿದ್ದ ಗೌಪ್ಯ ಸ್ಥಳದಿಂದ ಅಫ್ಘಾನ್​ ಕಮಾಂಡೋಗಳು ಸೇರಿದಂತೆ ಅನೇಕರನ್ನು ರಹಸ್ಯವಾಗಿ ಅಮೆರಿಕಕ್ಕೆ ಶಿಫ್ಟ್​ ಮಾಡಲಾಗಿತ್ತು. ಈ ಗೌಪ್ಯ ಸ್ಥಳವನ್ನು ಈಗಲ್ ಬೇಸ್ ಎಂದು ಕರೆಯಲಾಗುತ್ತಿತ್ತು. ಈ ಸ್ಥಳದಿಂದ ಕಮಾಂಡೋಗಳು ಹಾಗೂ ಅಮೆರಿಕನ್ನರನ್ನು ಶಿಫ್ಟ್ ಮಾಡಲು ಹೆಲಿಕಾಪ್ಟರ್​ಗಳನ್ನು ಬಳಸಿಕೊಳ್ಳಲಾಗಿತ್ತು. ಬಳಿಕ ಅವರನ್ನು ನೇರವಾಗಿ ಕಾಬೂಲ್ ವಿಮಾನ ನಿಲ್ದಾಣಕ್ಕೆ ತಲುಪಿಸಲಾಗಿತ್ತು. ಆ. 15ರಂದು ತಾಲಿಬಾನ್ ಉಗ್ರರು ಕಾಬೂಲ್ ಅನ್ನು ವಶಕ್ಕೆ ಪಡೆದ ಹಿನ್ನೆಲೆ ಅಮೆರಿಕ ಸೇನೆ ರಹಸ್ಯವಾಗಿ ಈ ಸ್ಥಳಾಂತರ ಪ್ರಕ್ರಿಯೆ ಶುರು ಮಾಡಿತ್ತು.

ಕಾಬೂಲ್ ವಿಮಾನ ನಿಲ್ದಾಣದ ಸಮೀಪ ಇದ್ದ ಈಗಲ್ ಬೇಸ್​ನಲ್ಲಿ ಅನೇಕರಿಗೆ ರಕ್ಷಣೆ ನೀಡಲಾಗಿತ್ತು. ಅಮೆರಿಕ ಸೇನೆ ಸಂಪೂರ್ಣವಾಗಿ ಅಫ್ಘಾನಿಸ್ತಾನವನ್ನು ತೊರೆದು ಬರುವಾಗ ಅಮೆರಿಕದ ಸೈನಿಕರೇ ಆ ಗೌಪ್ಯ ನೆಲೆಯನ್ನು ಸಂಪೂರ್ಣವಾಗಿ ಧ್ವಂಸ ಮಾಡಿ ಬಂದಿದ್ದರು. ಅದನ್ನು ಮುಂದೆ ತಾಲಿಬಾನ್ ಉಗ್ರರು ಬಳಸಿಕೊಳ್ಳಬಾರದು ಎಂಬ ಕಾರಣಕ್ಕೆ ಹೀಗೆ ಮಾಡಲಾಗಿತ್ತು.

ಈ ನಡುವೆ, ನಾವು ಅಫ್ಘಾನಿಸ್ತಾನದಿಂದ ನಮ್ಮ ಸೇನೆಯನ್ನು ಹಿಂಪಡೆದಿದ್ದೇವೆ ಎಂದ ಮಾತ್ರಕ್ಕೆ ಅಫ್ಘಾನಿಸ್ತಾನದಲ್ಲಿರುವ ಐಸಿಸ್​-ಕೆ (ISIS-K) ಮತ್ತು ಇತರೆ ಸಂಘಟನೆಯ ವಿರುದ್ಧ ವಾಯು ದಾಳಿ (Drone Strike) ನಡೆಸುವುದಿಲ್ಲ ಎಂದು ಅರ್ಥವಲ್ಲ. ಅಮೆರಿಕಕ್ಕೆ ತೊಂದರೆ ಕೊಡಲು ಬರುವವರನ್ನು ನಾವು ಹುಡುಕಿ ಕೊಲ್ಲುತ್ತೇವೆ ಎಂದು ಅಮೆರಿಕ ಸರ್ಕಾರ ಘೋಷಿಸಿದೆ. ಈ ಹಿಂದೆ ಅಮೆರಿಕ ಹಲವು ಬಾರಿ ಅಫ್ಘಾನ್​ನಲ್ಲಿರುವ ಐಸಿಸ್-ಎ ಸಂಘಟನೆಯ ವಿರುದ್ಧ ಡ್ರೋನ್ ದಾಳಿಗಳನ್ನು ನಡೆಸಿತ್ತು. ಕಾಬೂಲ್ ವಿಮಾನ ನಿಲ್ದಾಣದಲ್ಲಿ ನಡೆದ ಕಾರು ಸ್ಫೋಟದ ಆತ್ಮಾಹುತಿ ದಾಳಿಯಲ್ಲಿ ಅಮೆರಿಕದ 13 ಸೇನಾ ಸಿಬ್ಬಂದಿಯನ್ನು ಕೊಂದಿದ್ದು ನಾವೇ ಎಂದು ಐಸಿಸ್ ಘೋಷಿಸಿಕೊಂಡಿತ್ತು. ಇದಾದ ಬಳಿಕ ಐಸಿಸ್ ಸಂಘಟನೆ ವಿರುದ್ಧ ಅಮೆರಿಕ ವಾಯು ದಾಳಿ ನಡೆಸಿತ್ತು.

ಅಮೆರಿಕ ತನ್ನ ಸೇನಾಪಡೆಯನ್ನು ಹಿಂಪಡೆದ ಬಗ್ಗೆ ಪ್ರತಿಕ್ರಿಯೆ ನೀಡಿದ್ದ ಅಮೆರಿಕ ಅಧ್ಯಕ್ಷ ಜೋ ಬೈಡನ್​, ಅಫ್ಘಾನಿಸ್ತಾನದಿಂದ ನಮ್ಮ ಸೇನೆಯನ್ನು ವಾಪಾಸ್‌ ಕರೆಸಿಕೊಂಡಿರುವ ಹೊಣೆಯನ್ನು ನಾನೇ ಹೊರುತ್ತೇನೆ. 2 ದಶಕಗಳಲ್ಲಿ ಅಫ್ಘಾನಿಸ್ತಾನದಲ್ಲಿ ಸಾಕಷ್ಟು ಘಟನೆಗಳು ನಡೆದಿವೆ. 1,400 ಅಮೆರಿಕದ ಯೋಧರು ಹುತಾತ್ಮರಾಗಿದ್ದಾರೆ, 44 ಸಾವಿರಕ್ಕೂ ಹೆಚ್ಚು ಸೈನಿಕರು ಗಾಯಗೊಂಡಿದ್ದಾರೆ. ನಾವು ಅಫ್ಘಾನಿಸ್ತಾನಕ್ಕಾಗಿಯೇ ಕೋಟ್ಯಂತರ ರೂ. ಖರ್ಚು ಮಾಡಿದ್ದೇವೆ. ಇನ್ನು ನಾವು ಅಮೆರಿಕದ ಸುರಕ್ಷತೆ ಬಗ್ಗೆ ಗಮನಹರಿಸಬೇಕಿದೆ. ಆ ಕಾರಣದಿಂದಾಗಿಯೇ ಸೇನೆಯನ್ನು ವಾಪಾಸ್ ಪಡೆಯುವ ನಿರ್ಧಾರ ತೆಗೆದುಕೊಂಡೆ ಎಂದು ಹೇಳಿದ್ದರು.

20 ವರ್ಷಗಳ ಕಾಲ ಅಫ್ಘಾನಿಸ್ತಾನದಲ್ಲಿ ಬೀಡು ಬಿಟ್ಟಿದ್ದ ಅಮೆರಿಕ ಸೇನೆ ಅಫ್ಘಾನಿಸ್ತಾನದಿಂದ ತಾಯ್ನಾಡಿಗೆ ವಾಪಾಸಾಗಿದೆ. ಹಲವು ತಿಂಗಳಿನಿಂದ ಅಫ್ಘಾನಿಸ್ತಾನದಿಂದ ಅಮೆರಿಕ ತನ್ನ ಸೈನಿಕರನ್ನು ಸ್ಥಳಾಂತರ ಮಾಡುತ್ತಿತ್ತು. ಕಾಬೂಲನ್ನು ತಾಲಿಬಾನ್ ವಶಪಡಿಸಿಕೊಂಡ ಬಳಿಕ ಆ. 31ರೊಳಗೆ ಅಮೆರಿಕದ ಸೈನಿಕರು ಅಫ್ಘಾನಿಸ್ತಾನವನ್ನು ತೊರೆಯಬೇಕೆಂದು ತಾಲಿಬಾನ್ ಗಡುವು ನೀಡಿತ್ತು.

2001ರಲ್ಲಿ ಅಮೆರಿಕದ ಅವಳಿ ಕಟ್ಟಡದ ಮೇಲೆ ಅಲ್​ಖೈದಾ ಉಗ್ರರು ದಾಳಿ ನಡೆಸಿದಾಗ ಒಸಾಮಾ ಬಿನ್ ಲಾಡೆನ್ ಹಾಗೂ ಉಗ್ರ ಸಂಘಟನೆಗಳ ಮೇಲೆ ತಿರುಗಿ ಬಿದ್ದಿದ್ದ ಅಮೆರಿಕ ಅಫ್ಘಾನಿಸ್ತಾನದಲ್ಲಿ ತನ್ನ ಅಧಿಪತ್ಯ ಸ್ಥಾಪಿಸಿತ್ತು. ಅಲ್ಲದೆ, ತಾಲಿಬಾನ್ ಉಗ್ರರ ವಿರುದ್ಧ ಸಮರ ಸಾರಿತ್ತು. ತಾಲಿಬಾನ್ ಉಗ್ರರನ್ನು ಅಫ್ಘಾನಿಸ್ತಾನದಿಂದ ಹೊಡೆದೋಡಿಸಿ, ಅವರು ಮತ್ತೆ ಅಫ್ಘಾನ್ ಪ್ರವೇಶ ಮಾಡದಂತೆ 2 ದಶಕಗಳ ಕಾಲ ಕಾವಲು ಕಾದಿತ್ತು. ಆದರೆ, ಇಂಚಿಂಚಾಗಿ ಅಫ್ಘಾನಿಸ್ತಾನವನ್ನು ಆವರಿಸಿಕೊಳ್ಳತೊಡಗಿದ ತಾಲಿಬಾನ್ ಉಗ್ರರು ಅಫ್ಘಾನ್ ರಾಜಧಾನಿ ಕಾಬೂಲ್ ಅನ್ನು ವಶಕ್ಕೆ ಪಡೆದ ಬಳಿಕ ಅಫ್ಘಾನ್ ಸರ್ಕಾರ ತಾಲಿಬಾನ್​ಗೆ ಶರಣಾಗಿತ್ತು. ಬಳಿಕ, ಅಮೆರಿಕ ಸೇನೆಗೆ ವಾಪಾಸ್ ಹೋಗಲು ಆ. 31ರವರೆಗೆ ತಾಲಿಬಾನ್ ಗಡುವು ನೀಡಿತ್ತು. ಈ ಹಿನ್ನೆಲೆಯಲ್ಲಿ ಅಫ್ಘಾನಿಸ್ತಾನದಿಂದ ಅಮೆರಿಕ ಸೇನಾಪಡೆ ವಾಪಾಸ್ ಹೋಗಿದೆ.

ಇದನ್ನೂ ಓದಿ: ಮೃತದೇಹದೊಂದಿಗೂ ಸೆಕ್ಸ್ ಮಾಡಿದ ತಾಲಿಬಾನಿಗಳು; ಅಫ್ಘಾನಿಸ್ತಾನದಿಂದ ತಪ್ಪಿಸಿಕೊಂಡು ಬಂದ ಮಹಿಳೆ ಹೇಳಿದ ಆಘಾತಕಾರಿ ಸಂಗತಿ

ಅಗತ್ಯವಿದ್ದಾಗ ಅಫ್ಘಾನಿಸ್ತಾನದಲ್ಲಿ ನಾವು ಡ್ರೋನ್ ದಾಳಿ ಮುಂದುವರೆಸುತ್ತೇವೆ; ಅಮೆರಿಕ ಎಚ್ಚರಿಕೆ

(Afghanistan Crisis: How US secret Eagle base near Kabul airport transported America citizens, Afghan commandos)

Published On - 1:05 pm, Thu, 2 September 21