ಅಮರುಲ್ಲಾ ಸಲೇಹ್: ಅಫ್ಘಾನಿಸ್ತಾನ ಪ್ರತಿರೋಧ ಹೋರಾಟದ ಕೊನೆಯ ಆಸರೆ, ತಾಲಿಬಾನ್-ಪಾಕಿಸ್ತಾನವನ್ನು ಎಂದಿಗೂ ಒಪ್ಪದ ನಾಯಕನೀತ

|

Updated on: Aug 27, 2021 | 7:01 PM

Amrullah Saleh Profile: 1996ರಲ್ಲಿ ತಾಲಿಬಾನಿಗಳು ಅಮರುಲ್ಲಾ ಸಲೇಹ್​ರ ಸೋದರಿಗೆ ಚಿತ್ರಹಿಂಸೆ ನೀಡಿ ಕೊಂದಿದ್ದರು. ಈ ಘಟನೆಯ ನಂತರ ತಾಲಿಬಾನಿಗಳ ಬಗ್ಗೆ ಅವರಿಗಿದ್ದ ಅಭಿಪ್ರಾಯ ಸಂಪೂರ್ಣ ಬದಲಾಯಿತು.

ಅಮರುಲ್ಲಾ ಸಲೇಹ್: ಅಫ್ಘಾನಿಸ್ತಾನ ಪ್ರತಿರೋಧ ಹೋರಾಟದ ಕೊನೆಯ ಆಸರೆ, ತಾಲಿಬಾನ್-ಪಾಕಿಸ್ತಾನವನ್ನು ಎಂದಿಗೂ ಒಪ್ಪದ ನಾಯಕನೀತ
ಅಫ್ಘಾನಿಸ್ತಾನದ ಹಂಗಾಮಿ ಅಧ್ಯಕ್ಷ ಅಮರುಲ್ಲಾ ಸಲೇಹ್
Follow us on

ಅಫ್ಘಾನಿಸ್ತಾನದ ಅಧ್ಯಕ್ಷ ಅಶ್ರಫ್ ಘನಿ ದೇಶ ತೊರೆದ ನಂತರ ತಮ್ಮನ್ನು ತಾವು ಹಂಗಾಮಿ ಅಧ್ಯಕ್ಷ ಎಂದು ಘೋಷಿಸಿಕೊಂಡಿದ್ದ ಅಮರುಲ್ಲಾ ಸಲೇಹ್ ಅಫ್ಘಾನಿಸ್ತಾನದಲ್ಲಿ ತಾಲಿಬಾನಿಗಳ ವಿರುದ್ಧ ನಡೆಯುತ್ತಿರುವ ಪ್ರತಿರೋಧ ಹೋರಾಟದ ಕೊನೆಯ ಆಸರೆ ಎನಿಸಿಕೊಂಡಿದ್ದಾರೆ. ನಾರ್ದರ್ನ್ ಅಲಯನ್ಸ್​ನ ದಂತಕತೆ ಎನಿಸಿರುವ ದಿವಂಗತ ನಾಯಕ ಅಹ್ಮದ್ ಶಾ ಮಸೂದ್ ಅವರ ನೆರಳಿನಲ್ಲಿಯೇ ಬೆಳೆದ ಅಮರುಲ್ಲಾ ಸಲೇಹ್ ಇದೀಗ ಪಂಜ್​ಶಿರ್​ನಲ್ಲಿ ಅವರ ಮಗ ಅಹ್ಮದ್ ಮಸೂದ್​ಗೆ ಹೆಗಲು ಕೊಟ್ಟು ಹೋರಾಟಕ್ಕಿಳಿದಿದ್ದಾರೆ. ತಾಲಿಬಾನಿಗಳ ವಿರುದ್ಧ ಇತರ ದೇಶಗಳ ಸಹಾಯ ಪಡೆದುಕೊಳ್ಳಲು ಯತ್ನಿಸುತ್ತಿದ್ದಾರೆ.

ಅಫ್ಘಾನ್ ರಾಷ್ಟ್ರೀಯ ಸೇನೆಯು ತಾಲಿಬಾನಿಗಳ ಎದುರು ಸೋತುಹೋಗಲು ಹಲವು ಕಾರಣಗಳಿವೆ. ಈ ಸೋಲಿನ ಅವಮಾನದ ಭಾಗವಾಗಲು ನನಗೆ ಇಷ್ಟವಿಲ್ಲ. ನಾನು ನನ್ನ ದೇಶದ ಪರವಾಗಿ ದೃಢವಾಗಿ ನಿಂತಿದ್ದೇನೆ. ಈ ಯುದ್ಧ ಇನ್ನೂ ಪೂರ್ಣಗೊಂಡಿಲ್ಲ ಎಂದು ಸಲೇಹ್ ಘೋಷಿಸಿದ್ದರು.

ತಜೀಕ್ ಬುಡಕಟ್ಟು ಕುಟುಂಬದಲ್ಲಿ ಅಕ್ಟೋಬರ್ 1972ರಲ್ಲಿ ಜನಿಸಿದ ಅಮರುಲ್ಲಾ ಸಲೇಹ್ ಚಿಕ್ಕಂದಿನಲ್ಲಿಯೇ ಹೆತ್ತವರನ್ನು ಕಳೆದುಕೊಂಡು ಅನಾಥರಾದರು. ‘ಸತ್ತರೂ ಶರಣಾಗುವುದಿಲ್ಲ’ ಎಂದು ಘೋಷಿಸಿ ಸೋವಿಯತ್ ಒಕ್ಕೂಟ ಮತ್ತು ಹಿಂದಿನ ತಾಲಿಬಾನ್ ಆಡಳಿತದ ವಿರುದ್ಧ ದೃಢವಾಗಿ ನಿಂತ ಅಹ್ಮದ್​ ಶಾ ಮಸೂದ್ ಗುಂಪು ಸೇರಿ ಹೋರಾಟಗಳಲ್ಲಿ ಪಾಲ್ಗೊಂಡರು. ತಾಲಿಬಾನಿಗಳಿಂದ ತಿಂದ ಪೆಟ್ಟುಗಳು ಇವರ ಮನಸ್ಸನ್ನು ಕಲ್ಲು ಮಾಡಿತ್ತು.

1996ರಲ್ಲಿ ತಾಲಿಬಾನಿಗಳು ಸಲೇಹ್​ರ ಸೋದರಿಗೆ ಚಿತ್ರಹಿಂಸೆ ನೀಡಿ ಕೊಂದಿದ್ದರು. ‘ನನ್ನ ಸೋದರಿಯ ಸಾವಿನ ನಂತರ ತಾಲಿಬಾನಿಗಳ ಬಗ್ಗೆ ನನಗಿದ್ದ ಅಭಿಪ್ರಾಯ ಸಂಪೂರ್ಣ ಬದಲಾಯಿತು’ ಎಂದು ಸಲೇಹ್ ಟೈಮ್ ಮ್ಯಾಗಜೈನ್​ಗೆ ಬರೆದಿದ್ದ ಸಂಪಾದಕೀಯದಲ್ಲಿ ತಿಳಿಸಿದ್ದರು.

ತಾಲಿಬಾನ್ ವಿರುದ್ಧ ದೃಢವಾಗಿ ನಿಂತಿದ್ದ ಸಲೇಹ್​ರನ್ನು ಮಸೂದ್ 1997ರಲ್ಲಿ ತಜಕಿಸ್ತಾನದ ರಾಜಧಾನಿ ದುಶಾಂಬೆಯಲ್ಲಿ ಸಲೇಹ್​ರನ್ನು ಅಫ್ಘಾನಿಸ್ತಾನದ ರಾಯಭಾರ ಕಚೇರಿಯಲ್ಲಿ ಕೆಲಸಕ್ಕೆ ನಿಯೋಜಿಸಿದ್ದರು. ಮಾನವೀಯ ನೆರವಿಗೆ ದುಡಿಯುವ ಸಂಘಟನೆಯೊಂದರ ಮೂಲಕ ಹಲವು ವಿದೇಶಿ ಗುಪ್ತಚರ ಸಂಸ್ಥೆಗಳ ನಿಕಟ ಸಂಪರ್ಕ ಸಂಪಾದಿಸಿಕೊಂಡರು.

ಗೂಢಚಾರಿಕೆಯಲ್ಲಿ ಪಾರಂಗತ
ಅಮೆರಿಕದ ವಿಶ್ವ ವಾಣಿಜ್ಯ ಕಟ್ಟಡದ ಮೇಲೆ ದಾಳಿ ನಡೆಯುವವರೆಗೆ (ಸೆಪ್ಟೆಂಬರ್ 2001 – 9/11) ಅಮೆರಿಕ ಮತ್ತು ನ್ಯಾಟೊ ಮಿತ್ರಪಡೆಗಳು ಅಫ್ಘಾನಿಸ್ತಾನದಲ್ಲಿ ಸಕ್ರಿಯ ಪಾತ್ರ ನಿರ್ವಹಿಸಿಲಿಲ್ಲ. ಅಲ್ಲಿಯವರೆಗೆ ತಾಲಿಬಾನ್ ವಿರೋಧಿ ಪ್ರತಿರೋಧವನ್ನು ಮುನ್ನಡೆಸಿದ್ದು ಅಹ್ಮದ್ ಮಸೂದ್ ನೇತೃತ್ವದ ನಾರ್ದರ್ನ್ ಅಲಯನ್ಸ್. ನ್ಯಾಟೊ ಪಡೆಗಳ ಅಫ್ಘಾನಿಸ್ತಾನ ಕಾರ್ಯಾಚರಣೆ ವೇಳೆ ಅಮೆರಿಕದ ಗುಪ್ತಚರ ಸಂಸ್ಥೆ ಸಿಐಎಗೆ ಸಲೇಹ್ ಮುಖ್ಯ ಆಧಾರವಾಗಿದ್ದರು. ತಾಲಿಬಾನ್ ಸರ್ಕಾರವನ್ನು ಅಧಿಕಾರದಿಂದ ಕೆಳಗಿಳಿಸಿದ ನಂತರ ಅಫ್ಘಾನ್ ಸರ್ಕಾರದಲ್ಲಿ ಸಲೇಹ್​ಗೆ ಹಲವು ಮುಖ್ಯ ಸ್ಥಾನಗಳು ಸಿಗಲು ಇದು ಮುಖ್ಯ ಕಾರಣವಾಯಿತು.

2004ರಲ್ಲಿ ಹೊಸದಾಗಿ ರೂಪುಗೊಂಡ ಅಫ್ಘಾನಿಸ್ತಾನ ಗುಪ್ತಚರ ಸಂಸ್ಥೆ ರಾಷ್ಟ್ರೀಯ ಭದ್ರತಾ ನಿರ್ದೇಶನಾಲಯದ (National Security Directorate – NDS) ಮುಖ್ಯಸ್ಥರಾಗಿ ಅಧಿಕಾರ ಸ್ವೀಕರಿಸಿದರು.

ಈ ಅವಧಿಯಲ್ಲಿ ಅಫ್ಘಾನಿಸ್ತಾನದಲ್ಲಿ ಪ್ರಬಲ ಗುಪ್ತಚರ ಜಾಲ ಹೆಣೆದರು. ಅಫ್ಘಾನಿಸ್ತಾನ ಮತ್ತು ಪಾಕಿಸ್ತಾನದಲ್ಲಿ ತಾಲಿಬಾನಿಗಳ ಬಗ್ಗೆ, ತಾಲಿಬಾನ್ ಬೆಂಬಲಿಗರ ಬಗ್ಗೆ ಸಾಕಷ್ಟು ಮಾಹಿತಿ ಕಲೆಹಾಕಿದ್ದರು. ಹೊಸಹೊಸ ಮಾಹಿತಿ ಲಭ್ಯವಾದಂತೆ ತಾಲಿಬಾನ್​ಗೆ ಪ್ರತಿ ಹಂತದಲ್ಲಿಯೂ ಪಾಕಿಸ್ತಾನದ ಸೇನೆಯಿಂದ ನೆರವು ಸಿಗುತ್ತಿರುವ ಬಗ್ಗೆ ವಿವರಗಳು ಸ್ಪಷ್ಟವಾದವು. ಪಾಕಿಸ್ತಾನದ ಬಗ್ಗೆ ಸಲೇಹ್​ಗೆ ಇದ್ದ ಅಸಮಾಧಾನವೂ ಹೆಚ್ಚಾಯಿತು.

ಸಭೆಯೊಂದರಲ್ಲಿ ಬಹಿರಂಗವಾಗಿಯೇ ಪಾಕಿಸ್ತಾನದ ಜನರಲ್ ಮುಷರಫ್ ಅವರಿಗೆ ಒಸಮಾ ಬಿನ್ ಲಾಡೆನ್ ಪಾಕಿಸ್ತಾನದಲ್ಲಿಯೇ ಅಡಗಿದ್ದಾನೆ ಎಂದು ಹೇಳಿದ್ದರು. ಮುಷರಫ್ ಸಭೆಯಿಂದ ಎದ್ದು ಹೊರನಡೆದಿದ್ದ ಪ್ರಸಂಗವೂ ಹಿಂದೊಮ್ಮೆ ವರದಿಯಾಗಿತ್ತು. ಅಫ್ಘಾನಿಸ್ತಾನದ ಗುಪ್ತಚರ ವ್ಯವಸ್ಥೆಯನ್ನು ಇಡಿಯಾಗಿ ಪುನರ್​ ರೂಪಿಸಿದ್ದರು. ಅಫ್ಘಾನ್ ಸರ್ಕಾರದ ಏಜೆಂಟರು ತಾಲಿಬಾನ್ ಪಡೆಗಳಲ್ಲಿ ಸೇರಿಕೊಂಡಿದ್ದರು. ತಾಲಿಬಾನ್ ಪಡೆಗಳ ಕಾರ್ಯಾಚರಣೆಯ ವಿವರ, ಅವರ ನಾಯಕರು, ಅವರ ಕುಟುಂಬ, ಮನೆ, ಸಂಪರ್ಕಿತರು ಮತ್ತು ಹಣದ ಮೂಲದ ಬಗ್ಗೆ ಸಾಕಷ್ಟು ವಿವರಗಳನ್ನು ಕಲೆಹಾಕಿದ್ದರು.

ಅಫ್ಘಾನ್ ಸರ್ಕಾರಿ ಪಡೆಗಳು ತಾಲಿಬಾನ್ ವಿರುದ್ಧ ಮೇಲುಗೈ ಸಾಧಿಸಲು, ದೊಡ್ಡ ಸಂಖ್ಯೆಯಲ್ಲಿ ತಾಲಿಬಾನಿಗಳನ್ನು ಬಂಧಿಸಲು ಈ ಬೆಳವಣಿಗೆ ಮುಖ್ಯ ಕಾರಣವಾಗಿತ್ತು. ಆದರೆ ತಾಲಿಬಾನಿಗಳಿಗಿದ್ದ ಪಾಕಿಸ್ತಾನದ ಕೃಪಾಕಟಾಕ್ಷದಿಂದಾಗಿ ಅಫ್ಘಾನ್ ಸರ್ಕಾರಕ್ಕೆ ಹೆಚ್ಚಿನ ಫಲ ಸಿಗಲಿಲ್ಲ.

ರಾಜಕಾರಿಣಿಯಾದ ಗೂಢಚಾರ
ಕಾಬೂಲ್​ನಲ್ಲಿ ಬಾಂಬ್​ ದಾಳಿ ನಡೆದ ಹಿನ್ನೆಲೆಯಲ್ಲಿ ಜೂನ್ 6, 2010ರಂದು ಸಲೇಹ್ ಅಫ್ಘಾನಿಸ್ತಾನದ ರಾಷ್ಟ್ರೀಯ ಭದ್ರತಾ ಮಂಡಳಿಗೆ ಅಮರುಲ್ಲಾ ಸಲೇಹ್ ರಾಜೀನಾಮೆ ನೀಡಿದರು. ಅಧ್ಯಕ್ಷ ಹಮೀದ್ ಕರ್ಜೈ ಅವರ ವಿಶ್ವಾಸ ಕಳೆದುಕೊಂಡಿರುವ ಹಿನ್ನೆಲೆಯಲ್ಲಿ ರಾಜೀನಾಮೆ ನೀಡುತ್ತಿದ್ದೇನೆ ಎಂದು ಸುದ್ದಿಗೋಷ್ಠಿಯಲ್ಲಿ ಹೇಳಿದ್ದರು.

ಆದರೆ ತೆರೆಯ ಹಿಂದೆ ನಡೆದ ಬೆಳವಣಿಗೆಗಳು ಬೇರೆಯದ್ದೇ ಕಥೆ ಹೇಳುತ್ತವೆ. ತಾಲಿಬಾನ್ ಜೊತೆಗೆ ಮಾತುಕತೆ ನಡೆಸಬೇಕು ಎನ್ನುವ ಅಂದಿನ ಅಧ್ಯಕ್ಷ ಹಮೀದ್ ಕರ್ಜೈ ಧೋರಣೆಯನ್ನು ಸಲೇಹ್ ಎಂದಿಗೂ ಒಪ್ಪಿರಲಿಲ್ಲ. ಮಾತುಕತೆಯ ನಾಟಕದ ಮೂಲಕ ಅಫ್ಘಾನ್ ಸರ್ಕಾರವನ್ನು ದುರ್ಬಲಗೊಳಿಸಲು ತಾಲಿಬಾನ್ ಯತ್ನಿಸುತ್ತಿದೆ ಎನ್ನುವುದು ಸಲೇಹ್​ಗೆ ಲಭ್ಯವಾಗಿದ್ದ ಗುಪ್ತಚರ ಮಾಹಿತಿ. ಆದರೆ ಸಲೇಹ್​ರ ಎಚ್ಚರಿಕೆಯ ನಂತರವೂ ಮಾತುಕತೆ ನಡೆಯಿತು. ಕರ್ಜೈ-ಸಲೇಹ್ ನಡುವೆ ಅಂತರ ಹೆಚ್ಚಾಯಿತು.

2011ರಲ್ಲಿ ಹಮೀದ್ ಕರ್ಜೈ ಸರ್ಕಾರದ ವಿರುದ್ಧ ಶಾಂತಿಯುತ ಹೋರಾಟ ಸಂಘಟಿಸಿದ ಸಲೇಹ್, ಅಧ್ಯಕ್ಷರ ನೀತಿಗಳನ್ನು ಕಟುವಾಗಿ ಟೀಕಿಸಿದರು. ದೇಶದ ಭದ್ರತೆಯ ವಿಚಾರದಲ್ಲಿ ಅವರು ಅನುಸರಿಸುತ್ತಿರುವ ನೀತಿಗಳಿಂದ ಆಗುತ್ತಿರುವ ಹಾನಿಗಳ ಬಗ್ಗೆ ದೇಶದ ಜನರೆದುರು ವಿವರಣೆ ನೀಡಿದ್ದರು. ಭ್ರಷ್ಟಾಚಾರದ ಆರೋಪಗಳನ್ನೂ ಮಾಡಿದ್ದರು. ಇದೇ ಹೊತ್ತಿಗೆ ಬಸೆಜ್-ಎ-ಮಿಲಿ ರಾಷ್ಟ್ರೀಯ ಚಳವಳಿಯನ್ನೂ ಆರಂಭಿಸಿದ್ದರು. ಇದು ಅವರ ಪೂರ್ಣ ಪ್ರಮಾಣದ ರಾಜಕೀಯ ಪ್ರವೇಶಕ್ಕೆ ವೇದಿಕೆ ಒದಗಿಸಿತ್ತು.

2014ರ ಸೆಪ್ಟೆಂಬರ್​ ತಿಂಗಳಲ್ಲಿ ಅಶ್ರಫ್ ಘನಿ ಅವರೊಂದಿಗೆ ಕೈಜೋಡಿಸಿದ ಅಮರುಲ್ಲಾ ಸಲೇಹ್ ಅಧ್ಯಕ್ಷರ ಚುನಾವಣೆಯಲ್ಲಿ ಗೆಲುವು ಸಾಧಿಸಲು ನೆರವಾದರು. ಅದೇ ವರ್ಷ ಡಿಸೆಂಬರ್ ತಿಂಗಳಲ್ಲಿ ಸಲೇಹ್ ಅವರನ್ನು ಗೃಹ ಸಚಿವರಾಗಿ ನೇಮಿಸಲಾಯಿತು. ಜನವರಿ 19, 2019ರಲ್ಲಿ ತಮ್ಮ ಹುದ್ದೆಗೆ ರಾಜೀನಾಮೆ ನೀಡಿ ಅಶ್ರಫ್ ಘನಿ ಪರವಾಗಿ ಚುನಾವಣಾ ಪ್ರಚಾರ ಆರಂಭಿಸಿದರು. ಪುನರಾಯ್ಕೆ ನಂತರ ಅಶ್ರಫ್ ಘನಿ ಸಲೇಹ್ ಅವರನ್ನು ಅಫ್ಘಾನಿಸ್ತಾನದ ಮೊದಲ ಉಪಾಧ್ಯಕ್ಷರಾಗಿ ನೇಮಿಸಿದರು.

ಮತ್ತೆ ಹೋರಾಟಗಾರನಾದ ರಾಜಕಾರಿಣಿ
ಅಮರುಲ್ಲಾ ಸಲೇಹ್ ಪಾಲಿಗೆ ಬದುಕು ಸಂಪೂರ್ಣವಾಗಿ ಒಂದು ಅವರ್ತ ಬಂದಿದೆ. ಎಲ್ಲಿಂದ ಅವರ ಸಾರ್ವಜನಿಕ ಬದುಕು ಆರಂಭವಾಗಿತ್ತೋ ಈಗ ಮತ್ತೆ ಅಲ್ಲಿಗೇ ಬಂದು ನಿಂತಿದೆ. ಪಂಜ್​ಶಿರ್ ಪ್ರಾಂತ್ಯದಲ್ಲಿ ಈಗ ನಡೆಯುತ್ತಿರುವ ಪ್ರತಿರೋಧ ಹೋರಾಟದಲ್ಲಿ ಸಲೇಹ್ ಅಶ್ರಫ್ ಮಸೂದ್​ಗೆ ಹೆಗಲು ಕೊಟ್ಟು ನಿಂತಿದ್ದಾರೆ. ಅಂದಿನಂತೆ ಇಂದೂ ಸಹ ಅಫ್ಘಾನಿಸ್ತಾನದ ಪಾಲಿಗೆ ಪಂಜ್​ಶಿರ್ ಪ್ರಾಂತ್ಯವು ತಾಲಿಬಾನ್ ವಿರೋಧಿ ಹೋರಾಟದ ಏಕೈಕ ಆಶಾಕಿರಣವಾಗಿದೆ. ‘ಸತ್ತರೂ ಶರಣಾಗುವುದಿಲ್ಲ’ ಎಂದು ಅಹ್ಮದ್ ಶಾ ಮಸೂದ್​ರಂತೆ ಅಮರುಲ್ಲಾ ಸಲೇಹ್ ಸಹ ದೃಢವಾಗಿ ನಿಂತಿದ್ದಾರೆ.

ಅಫ್ಘಾನಿಸ್ತಾನವನ್ನು ಪಾಕಿಸ್ತಾನವು ಎಂದಿಗೂ ಗೆಲ್ಲಲಾರದು ಎಂದು ಅಮರುಲ್ಲಾ ಸಲೇಹ್ ಮಾಡಿರುವ ಟ್ವೀಟ್​ ಇಲ್ಲಿದೆ

(Profile of Afghanistan Resistance Leader Amrullah Saleh Braveheart of Panjshir)

ಇದನ್ನೂ ಓದಿ: ದೇಹ ಇಲ್ಲೇ ಮಣ್ಣಾದರೂ ಸೈ, ಅಫ್ಘಾನಿಸ್ತಾನವನ್ನು ಬಿಟ್ಟು ಹೋಗುವುದಿಲ್ಲ: ಹಂಗಾಮಿ ಅಧ್ಯಕ್ಷ ಅಮರುಲ್ಲಾ ಸಲೇಹ್

ಇದನ್ನೂ ಓದಿ: Panjshir: ಪಂಜ್​ಶಿರ್ ನಿಯಂತ್ರಣಕ್ಕೆ ಹರಸಾಹಸ; ತಾಲಿಬಾನಿಗಳ ಬಗಲಲ್ಲಿ ದೊಣ್ಣೆ, ಬಾಯಲ್ಲಿ ಮಾತು

Published On - 6:55 pm, Fri, 27 August 21