
ನ್ಯೂಯಾರ್ಕ್, ಸೆಪ್ಟೆಂಬರ್ 26: ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ (ಯುಎನ್ಜಿಎ) ಶುಕ್ರವಾರ ಮಾತನಾಡಿದ ಪಾಕಿಸ್ತಾನ ಪ್ರಧಾನಿ ಶೆಹಬಾಜ್ ಷರೀಫ್ ಭಾರತದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಯಥಾಪ್ರಕಾರ ಪಾಕಿಸ್ತಾನದ ತಪ್ಪನ್ನು ಮುಚ್ಚಿಕೊಳ್ಳಲು ಭಾರತದ ಮೇಲೆ ಗೂಬೆ ಕೂರಿಸಿರುವ ಪಾಕ್ ಪ್ರಧಾನಿ ಶೆಹಬಾಜ್ ಷರೀಫ್ “ಕಾಶ್ಮೀರವು ಪಾಕಿಸ್ತಾನದ ಜೀವನಾಡಿ” ಎಂದಿದ್ದಾರೆ. ಸಿಂಧೂ ನದಿ ನೀರು ಹಂಚಿಕೆ ವಿಚಾರದಲ್ಲಿ ಪಾಕಿಸ್ತಾನದ ಪಾಲಿನ ನೀರನ್ನು ತಡೆಯಲು ಅಥವಾ ಮಾರ್ಗ ಬದಲಿಸಲು ಯತ್ನಿಸಿದರೆ ಅದನ್ನು ‘ಯುದ್ಧದ ಕರೆ’ ಎಂದು ಪರಿಗಣಿಸಲಾಗುವುದು ಎಂದು ಭಾರತಕ್ಕೆ ಎಚ್ಚರಿಕೆ ನೀಡಿದ್ದಾರೆ.
26 ಅಮಾಯಕರನ್ನು ಬಲಿ ಪಡೆದ ಪಹಲ್ಗಾಮ್ ಉಗ್ರರ ದಾಳಿಯ ನಂತರ ಭಾರತವು ಸಿಂಧೂ ನದಿ ನೀರು ಹಂಚಿಕೆ ಒಪ್ಪಂದವನ್ನು ಅಮಾನತಿನಲ್ಲಿಟ್ಟಿರುವ ನಿರ್ಧಾರವನ್ನು ಟೀಕಿಸಿದ ಪಾಕ್ ಪ್ರಧಾನಿ, “ಭಾರತದ ಈ ನಿರ್ಧಾರಕ್ಕೆ ಯಾವುದೇ ಕಾನೂನು ಆಧಾರವಿಲ್ಲ” ಎಂದು ಟೀಕಿಸಿದ್ದಾರೆ. “ಸಿಂಧೂ ನದಿ ವ್ಯವಸ್ಥೆಯು ಪಾಕಿಸ್ತಾನ ಮತ್ತು ಈ ಭಾಗದ ಜೀವನದಿಯಾಗಿದೆ” ಎಂದ ಶೆಹಬಾಜ್ ಷರೀಫ್, “ನೀರನ್ನು ಎಂದಿಗೂ ಅಸ್ತ್ರವಾಗಿ ಬಳಸಬಾರದು. ಪಾಕಿಸ್ತಾನದ ಪಾಲಿನ ನೀರನ್ನು ತಡೆಯಲು ಅಥವಾ ಹಾದಿ ಬದಲಿಸಲು ಯತ್ನಿಸಿದರೆ ಅದನ್ನು ಯುದ್ಧದ ಕರೆ ಎಂದು ಪರಿಗಣಿಸಲಾಗುವುದು. ಈ ವಿಚಾರದಲ್ಲಿ ಭಾರತ ಯಾವುದೇ ಗೊಂದಲ ಇಟ್ಟುಕೊಳ್ಳಬಾರದು. ಸಿಂಧೂ ನದಿ ಒಪ್ಪಂದವನ್ನು ರದ್ದುಗೊಳಿಸಿದರೆ ಯುದ್ಧ ಖಚಿತ” ಎಂದು ಬೆದರಿಕೆ ಹಾಕಿದರು.
ಯುದ್ಧ ನಿಲ್ಲಿಸಿದ ಟ್ರಂಪ್ ಕುರಿತು ಪಾಕಿಸ್ತಾನ ಶ್ಲಾಘನೆ!
ಹೋದಲ್ಲೆಲ್ಲ ಭಾರತ ಹಾಗೂ ಪಾಕಿಸ್ತಾನದ ನಡುವಿನ ಯುದ್ಧ ನಿಲ್ಲಿಸಿದ್ದು ನಾನೇ ಎಂದು ಹೇಳಿಕೊಳ್ಳುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ತಾಳಕ್ಕೆ ಪಾಕಿಸ್ತಾನವೂ ಹೆಜ್ಜೆ ಹಾಕಿದೆ. 2025ರ ಮೇ ತಿಂಗಳಲ್ಲಿ ಭಾರತದ ‘ಆಪರೇಷನ್ ಸಿಂಧೂರ್’ ಗೆ ಪ್ರತಿಯಾಗಿ ಪಾಕಿಸ್ತಾನ ಆತ್ಮರಕ್ಷಣೆ ಮಾಡಿಕೊಂಡಿದೆ ಎಂದು ವಾದಿಸಿದ ಶೆಹಬಾಜ್ ಷರೀಫ್, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಸಕಾಲಿಕ ಮಧ್ಯಸ್ಥಿಕೆಯಿಂದಾಗಿ ದೊಡ್ಡ ಯುದ್ಧ ತಪ್ಪಿತು ಎಂದು ವಿಶ್ವಸಂಸ್ಥೆಯಲ್ಲಿ ಮತ್ತೊಮ್ಮೆ ಸುಳ್ಳು ಹೇಳಿಕೆ ನೀಡಿದ್ದಾರೆ. ಆದರೆ, ಭಾರತವು ಯಾವುದೇ ಮೂರನೇ ವ್ಯಕ್ತಿಯ ಮಧ್ಯಸ್ಥಿಕೆಯನ್ನು ನಿರಂತರವಾಗಿ ನಿರಾಕರಿಸುತ್ತಲೇ ಬಂದಿದೆ.
ಪಾಕಿಸ್ತಾನವು ಗಡಿಯಾಚೆಗಿನ ಭಯೋತ್ಪಾದನೆಗೆ ನೀಡಿರುವ ಬೆಂಬಲವನ್ನು ಸಂಪೂರ್ಣವಾಗಿ ನಿಲ್ಲಿಸುವವರೆಗೆ ಸಿಂಧೂ ನದಿ ನೀರು ಹಂಚಿಕೆ ಒಪ್ಪಂದವನ್ನು ಅಮಾನತಿನಲ್ಲಿಡಲು ಭಾರತ ನಿರ್ಧರಿಸಿದೆ. ವಿಶ್ವಸಂಸ್ಥೆಯ ವೇದಿಕೆಯಲ್ಲಿ ಪಾಕಿಸ್ತಾನವು ಕಾಶ್ಮೀರದ ಬಗ್ಗೆ ಮಾಡುವ ಪ್ರತಿಯೊಂದು ಸುಳ್ಳು ಪ್ರತಿಪಾದನೆಯನ್ನೂ ಭಾರತ ನಿರಂತರವಾಗಿ ತಳ್ಳಿಹಾಕಿದೆ. ಜಮ್ಮು ಮತ್ತು ಕಾಶ್ಮೀರವು ಭಾರತದ ಅವಿಭಾಜ್ಯ ಹಾಗೂ ಬೇರ್ಪಡಿಸಲಾಗದ ಅಂಗವಾಗಿತ್ತು, ಇದೆ ಮತ್ತು ಎಂದೆಂದಿಗೂ ಇರಲಿದೆ ಎಂದು ಭಾರತ ಪುನರುಚ್ಚರಿಸಿದೆ.
ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ