AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬಾಂಗ್ಲಾದೇಶದಲ್ಲಿ ವಿದ್ಯಾರ್ಥಿಗಳ ಪ್ರತಿಭಟನೆ ತೀವ್ರ; ಜೈಲಿಗೆ ಬೆಂಕಿ ಹಚ್ಚಿದ ಪ್ರತಿಭಟನಾಕಾರರು, ನೂರಾರು ಕೈದಿಗಳ ಬಿಡುಗಡೆ

ಬಾಂಗ್ಲಾದೇಶದಾದ್ಯಂತ ವ್ಯಾಪಿಸಿದ ವಿದ್ಯಾರ್ಥಿಗಳ ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿದ ನಂತರ ಈ ಜೈಲಿಗೆ ಬೆಂಕಿ ಹಚ್ಚಿದ ಘಟನೆ ನಡೆದಿದೆ. ಪ್ರತಿಭಟನೆಯಿಂದಾಗಿ ಈ ವಾರ ಕನಿಷ್ಠ 50 ಸಾವುಗಳು ಸಂಭವಿಸಿವೆ. ಆರಂಭದಲ್ಲಿ ಸರ್ಕಾರಿ ಉದ್ಯೋಗದ ಕೋಟಾಗಳ ಮೇಲಿನ ಕೋಪದಿಂದ ಪ್ರಾರಂಭವಾದ ಪ್ರತಿಭಟನೆಗಳು ಪ್ರಧಾನ ಮಂತ್ರಿ ಶೇಖ್ ಹಸೀನಾ ಸರ್ಕಾರದ ವಿರುದ್ಧ ವ್ಯಾಪಕವಾದ ಚಳುವಳಿಯಾಗಿ ಮಾರ್ಪಟ್ಟಿತ್ತು.

ಬಾಂಗ್ಲಾದೇಶದಲ್ಲಿ ವಿದ್ಯಾರ್ಥಿಗಳ ಪ್ರತಿಭಟನೆ ತೀವ್ರ; ಜೈಲಿಗೆ ಬೆಂಕಿ ಹಚ್ಚಿದ ಪ್ರತಿಭಟನಾಕಾರರು, ನೂರಾರು ಕೈದಿಗಳ ಬಿಡುಗಡೆ
ವಿದ್ಯಾರ್ಥಿಗಳ ಪ್ರತಿಭಟನೆ
ರಶ್ಮಿ ಕಲ್ಲಕಟ್ಟ
|

Updated on:Jul 19, 2024 | 8:34 PM

Share

ಢಾಕಾ ಜುಲೈ 19: ಬಾಂಗ್ಲಾದೇಶದಲ್ಲಿ (Bangladesh) ವಿದ್ಯಾರ್ಥಿಗಳ ಪ್ರತಿಭಟನೆ ತೀವ್ರ ಸ್ವರೂಪ ಪಡೆದಿದ್ದು , ಪ್ರತಿಭಟನಾಕಾರರು ಶುಕ್ರವಾರ ನರಸಿಂಗಡಿಯ ಜೈಲಿಗೆ ನುಗ್ಗಿ ಬೆಂಕಿಹಚ್ಚಿದ್ದಾರೆ. ಜೈಲಿಗೆ ಬೆಂಕಿ ಹಚ್ಚುವ ಮೊದಲು ನೂರಾರು ಕೈದಿಗಳನ್ನು ಬಿಡುಗಡೆ ಮಾಡಲಾಗಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ. ಹೆಸರು ಹೇಳಲು ಬಯಸದ ಪೊಲೀಸ್ ಅಧಿಕಾರಿಯೊಬ್ಬರು ಎಎಫ್​​ಪಿಯೊಂದಿಗೆ ಮಾತನಾಡಿದ್ದು, ಕೈದಿಗಳು ಜೈಲಿನಿಂದ ಓಡಿಹೋದರು. ಪ್ರತಿಭಟನಾಕಾರರು ಜೈಲಿಗೆ ಬೆಂಕಿ ಹಚ್ಚಿದರು. ತಪ್ಪಿಸಿಕೊಂಡ ಕೈದಿಗಳ ಸಂಖ್ಯೆ ನೂರಕ್ಕಿಂತ ಜಾಸ್ತಿ ಇದೆ ಎಂದಿದ್ದಾರೆ. ಕನಿಷ್ಠ 20 ಪುರುಷರು ತಮ್ಮ ವಸ್ತುಗಳನ್ನು ಕೈಚೀಲದಲ್ಲಿ ಇರಿಸಿಕೊಂಡು ಜೈಲಿನಿಂದ ಹೊರಗೆ ಓಡುತ್ತಿರುವುದನ್ನು ನೋಡಿರುವುದಾಗಿ ಸ್ಥಳೀಯ ನಿವಾಸಿ ರಿಪನ್ ಹೇಳಿದ್ದಾರೆ.

ಬಾಂಗ್ಲಾದೇಶದಾದ್ಯಂತ ವ್ಯಾಪಿಸಿದ ವಿದ್ಯಾರ್ಥಿಗಳ ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿದ ನಂತರ ಈ ಜೈಲಿಗೆ ಬೆಂಕಿ ಹಚ್ಚಿದ ಘಟನೆ ನಡೆದಿದೆ. ಪ್ರತಿಭಟನೆಯಿಂದಾಗಿ ಈ ವಾರ ಕನಿಷ್ಠ 50 ಸಾವುಗಳು ಸಂಭವಿಸಿವೆ. ಆರಂಭದಲ್ಲಿ ಸರ್ಕಾರಿ ಉದ್ಯೋಗದ ಕೋಟಾಗಳ ಮೇಲಿನ ಕೋಪದಿಂದ ಪ್ರಾರಂಭವಾದ ಪ್ರತಿಭಟನೆಗಳು ಪ್ರಧಾನ ಮಂತ್ರಿ ಶೇಖ್ ಹಸೀನಾ ಸರ್ಕಾರದ ವಿರುದ್ಧ ವ್ಯಾಪಕವಾದ ಚಳುವಳಿಯಾಗಿ ಮಾರ್ಪಟ್ಟಿತ್ತು.

ಭಾರತೀಯ ವಿದ್ಯಾರ್ಥಿಗಳ ರಕ್ಷಣೆ

ಉದ್ಯೋಗ ಕೋಟಾಗಳ ವಿರುದ್ಧ ಬಾಂಗ್ಲಾದೇಶದಲ್ಲಿ ನಡೆಯುತ್ತಿರುವ ದೇಶವ್ಯಾಪಿ ಪ್ರತಿಭಟನೆಗಳ ಮಧ್ಯೆ, ಮೇಘಾಲಯ-ಬಾಂಗ್ಲಾದೇಶ ಗಡಿಯುದ್ದಕ್ಕೂ ಮೇಘಾಲಯದ ದಾವ್ಕಿ ಇಂಟಿಗ್ರೇಟೆಡ್ ಚೆಕ್ ಪೋಸ್ಟ್ ಮೂಲಕ ಭಾರತೀಯ ವಿದ್ಯಾರ್ಥಿಗಳನ್ನು ರಕ್ಷಿಸಿ ಭಾರತಕ್ಕೆ ಕರೆತರಲಾಗಿದೆ ಎಂದು ಎಎನ್ಐ ಟ್ವೀಟ್ ಮಾಡಿದೆ.

ಪ್ರತಿಭಟನೆಯು ಹಣದುಬ್ಬರ, ಬೆಳೆಯುತ್ತಿರುವಂತಹ ವ್ಯಾಪಕ ಆರ್ಥಿಕ ಸಮಸ್ಯೆ, ನಿರುದ್ಯೋಗ ಮತ್ತು ವಿದೇಶಿ ವಿನಿಮಯದ ಬಗ್ಗೆಯೂ ಆಗಿದೆ ಎಂದು ವಿಶ್ಲೇಷಕರು ಅಭಿಪ್ರಾಯ ಪಟ್ಟಿದ್ದಾರೆ.

ಶುಕ್ರವಾರ ನಡೆದ ಘರ್ಷಣೆಗಳಲ್ಲಿ ಹೆಚ್ಚಿನ ಸಾವುನೋವು ವರದಿ ಆಗಿದೆ. ಈ ಪ್ರತಿಭಟನೆ ವೇಳೆ ಮೂರು ಜನರು ಸಾವಿಗೀಡಾಗಿದ್ದಾರೆ ಎಂದು ವರದಿಯಾಗಿದೆ.ಇಲ್ಲಿ ಇಂಟರ್ನೆಟ್ ಕಡಿತ ಮಾಡಲಾಗಿದೆ.

ಪ್ರಮುಖ ವಿರೋಧ ಪಕ್ಷವಾದ ಬಾಂಗ್ಲಾದೇಶ ನ್ಯಾಶನಲಿಸ್ಟ್ ಪಾರ್ಟಿಯ (BNP) ಬಹಿಷ್ಕೃತ ಕಾರ್ಯಾಧ್ಯಕ್ಷ ತಾರಿಕ್ ರೆಹಮಾನ್, ಸಾಮಾಜಿಕ ಮಾಧ್ಯಮ ವೇದಿಕೆ X ನಲ್ಲಿ ಪ್ರತಿಭಟನಾಕಾರರಿಗೆ ತಮ್ಮ ಬೆಂಬಲವನ್ನು ವ್ಯಕ್ತಪಡಿಸಿದ್ದಾರೆ, ವಿದ್ಯಾರ್ಥಿಗಳನ್ನು ಬೆಂಬಲಿಸಲು ಮತ್ತು ಅವರು ಕರೆದ ಚಳುವಳಿಯನ್ನು ಮುಂದುವರಿಸಲು ಜನರನ್ನು ಒತ್ತಾಯಿಸಿದರು.

ಇದನ್ನೂ ಓದಿ: ಬಾಂಗ್ಲಾದೇಶದಲ್ಲಿ ಮೀಸಲಾತಿ ವಿರುದ್ಧದ ಹಿಂಸಾಚಾರ ಇದುವರೆಗೆ 32 ಮಂದಿ ಸಾವು, ಸರ್ಕಾರಿ ಸುದ್ದಿವಾಹಿನಿಗೆ ಬೆಂಕಿ

” ಈ ಕೋಮಲ ಹೃದಯದ ವಿದ್ಯಾರ್ಥಿಗಳೊಂದಿಗೆ ನಿಲ್ಲಲು, ಅವರಿಗೆ ಎಲ್ಲಾ ಬೆಂಬಲವನ್ನು ನೀಡಿ ಮತ್ತು ಈ ಚಳುವಳಿಯನ್ನು ಮುಂದಕ್ಕೆ ಕೊಂಡೊಯ್ಯಲು ನಾನು ಎಲ್ಲಾ ನಾಯಕರು, ಕಾರ್ಯಕರ್ತರು ಮತ್ತು ಸಾಮಾನ್ಯ ಜನರಿಗೆ ಕರೆ ನೀಡುತ್ತೇನೆ ಎಂದು ತಾರಿಕ್ ರೆಹಮಾನ್ X ನಲ್ಲಿ ಪೋಸ್ಟ್ ಮಾಡಿದ್ದಾರೆ.  ಯುವಕರ ನಿರುದ್ಯೋಗ ಮತ್ತು ಹಣದುಬ್ಬರ ಹೆಚ್ಚಾಗುವುದರೊಂದಿಗೆ ಪ್ರತಿಭಟನೆಗಳು ಮತ್ತಷ್ಟು ತೀವ್ರತೆ ಪಡೆದುಕೊಂಡಿದೆ.

ಮತ್ತಷ್ಟು ವಿದೇಶ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 8:31 pm, Fri, 19 July 24