ಬಾಂಗ್ಲಾದೇಶದಲ್ಲಿ ಕಾರ್ಮಿಕರನ್ನು ಕರೆದೊಯ್ಯುತ್ತಿದ್ದ ಟ್ರಕ್ ಪಲ್ಟಿ, 15 ಮಂದಿ ಸಾವು, 10 ಜನರಿಗೆ ಗಾಯ
ಬಾಂಗ್ಲಾದೇಶದ ತಂಗೈಲ್ ಜಿಲ್ಲೆಯಲ್ಲಿ ಕಾರ್ಮಿಕರನ್ನು ಕರೆದೊಯ್ಯುತ್ತಿದ್ದ ಟ್ರಕ್ ಪಲ್ಟಿಯಾಗಿ 15 ಮಂದಿ ಸಾವನ್ನಪ್ಪಿ, 10 ಮಂದಿ ಗಾಯಗೊಂಡಿದ್ದಾರೆ. ಈದ್ ಆಚರಣೆಗಾಗಿ ತಮ್ಮ ಮನೆಗಳಿಗೆ ತೆರಳುತ್ತಿದ್ದ ಬಡ ದಿನಗೂಲಿ ಕಾರ್ಮಿಕರು ಈ ದುರಂತಕ್ಕೆ ಬಲಿಯಾಗಿದ್ದಾರೆ. ಸಡಿಲವಾದ ಸಂಚಾರ ನಿಯಮಗಳು ಮತ್ತು ಕಳಪೆ ರಸ್ತೆ ಸುರಕ್ಷತೆಯು ಬಾಂಗ್ಲಾದೇಶದಲ್ಲಿ ಇಂತಹ ಅಪಘಾತಗಳಿಗೆ ಕಾರಣವಾಗುತ್ತಿವೆ.

ಢಾಕಾ, ಮೇ 25: ಬಾಂಗ್ಲಾದೇಶ(Bangladesh)ದಲ್ಲಿ ಕಾರ್ಮಿಕರನ್ನು ಕರೆದೊಯ್ಯುತ್ತಿದ್ದ ಟ್ರಕ್ ಪಲ್ಟಿಯಾದ ಪರಿಣಾಮ 15 ಮಂದಿ ಸಾವನ್ನಪ್ಪಿದ್ದು, 10 ಮಂದಿ ಗಾಯಗೊಂಡಿದ್ದಾರೆ. ಈದ್ ಅಲ್-ಅಧಾ’ ಆಚರಣೆಗಾಗಿ ತಮ್ಮ ಕುಟುಂಬಗಳನ್ನು ಸೇರಲು ತಾಯ್ನಾಡಿಗೆ ಹೊರಟಿದ್ದ ಬಡ ದಿನಗೂಲಿ ಕಾರ್ಮಿಕರಿದ್ದ ಟ್ರಕ್ ಪಲ್ಟಿಯಾಗಿ ಕನಿಷ್ಠ 15 ಜನರು ಸಾವನ್ನಪ್ಪಿದ್ದಾರೆ. ಬಾಂಗ್ಲಾದೇಶದ ರಾಜಧಾನಿ ಢಾಕಾದಿಂದ ವಾಯುವ್ಯಕ್ಕೆ ಸುಮಾರು 83 ಕಿಲೋಮೀಟರ್ ದೂರದಲ್ಲಿರುವ ತಂಗೈಲ್ ಜಿಲ್ಲೆಯ ಸೊರಾಟೊಯಿಲ್ ಹೆದ್ದಾರಿಯಲ್ಲಿ ಸೋಮವಾರ ಮುಂಜಾನೆ 5 ಗಂಟೆ ಸುಮಾರಿಗೆ ಈ ಭೀಕರ ಅಪಘಾತ ಸಂಭವಿಸಿದೆ.
ನಡೆದಿದ್ದೇನು? ಪೊಲೀಸ್ ಅಧಿಕಾರಿ ಫುವಾದ್ ಹೊಸೈನ್ ಅವರು ನೀಡಿರುವ ಮಾಹಿತಿ ಪ್ರಕಾರ, ಕಬ್ಬಿಣದ ಸರಳುಗಳನ್ನು ಹೊತ್ತೊಯ್ಯುತ್ತಿದ್ದ ಟ್ರಕ್ ಒಂದರಲ್ಲಿ ಹಬ್ಬದ ರಜೆಗೆ ಮನೆಗೆ ಮರಳುತ್ತಿದ್ದ ಪ್ರಯಾಣಿಕರು ‘ಹಿಚ್‌ಹೈಕಿಂಗ್’ (ಲಿಫ್ಟ್ ಪಡೆದು) ಮೂಲಕ ಪ್ರಯಾಣಿಸುತ್ತಿದ್ದರು. ಈ ಟ್ರಕ್ ಢಾಕಾದಿಂದ ಉತ್ತರ ಪ್ರಾಂತ್ಯಗಳ ಕಡೆಗೆ ಚಲಿಸುತ್ತಿದ್ದಾಗ, ಸೊರಾಟೊಯಿಲ್ ಹೆದ್ದಾರಿಯಲ್ಲಿ ಚಾಲಕನ ನಿಯಂತ್ರಣ ತಪ್ಪಿ ರಸ್ತೆಯಲ್ಲೇ ಪಲ್ಟಿಯಾಗಿದೆ. ಕಬ್ಬಿಣದ ಸರಳುಗಳ ಭಾರ ಮತ್ತು ವಾಹನದ ಭೀಕರ ಅಪಘಾತದಿಂದಾಗಿ 15 ಜನರು ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ.
ಮುಂಜಾನೆ ಭೀಕರ ಶಬ್ದ ಕೇಳುತ್ತಿದ್ದಂತೆ ಸ್ಥಳೀಯ ನಿವಾಸಿಗಳು ತಕ್ಷಣವೇ ಅಪಘಾತದ ಸ್ಥಳಕ್ಕೆ ಧಾವಿಸಿದ್ದಾರೆ. ಟ್ರಕ್ ಹಾಗೂ ಕಬ್ಬಿಣದ ಸರಳುಗಳ ನಡುವೆ ಸಿಲುಕಿಕೊಂಡಿದ್ದ ಪ್ರಯಾಣಿಕರನ್ನು ರಕ್ಷಿಸಲು ಅವರು ತಕ್ಷಣವೇ ಕಾರ್ಯಾಚರಣೆ ಆರಂಭಿಸಿದರು ಎಂದು ಪ್ರತ್ಯಕ್ಷದರ್ಶಿಗಳು ಟಿವಿ ವಾಹಿನಿಗಳಿಗೆ ತಿಳಿಸಿದ್ದಾರೆ. ಗಾಯಗೊಂಡಿರುವ 10 ಕ್ಕೂ ಹೆಚ್ಚು ಜನರನ್ನು ತಕ್ಷಣವೇ ಹತ್ತಿರದ ಆಸ್ಪತ್ರೆಗೆ ಸಾಗಿಸಲಾಗಿದ್ದು, ಸದ್ಯ ಅವರಿಗೆ ಚಿಕಿತ್ಸೆ ನೀಡಲಾಗುತ್ತಿದೆ.
ಮತ್ತಷ್ಟು ಓದಿ: ಬಾಂಗ್ಲಾದೇಶ: ವೈರಲ್ ಆಗಿರುವ ‘ಡೊನಾಲ್ಡ್ ಟ್ರಂಪ್’ ಎಮ್ಮೆಯನ್ನು ಬಲಿಕೊಡಲು ಮುಂದಾದ ಮಾಲೀಕ
ಹಬ್ಬದ ಸಬ್ರಮದ ನಡುವೆ ಆವರಿಸಿದ ಶೋಕ ಮುಂಬರುವ ಗುರುವಾರ ಬಕ್ರೀದ್ ಹಬ್ಬವಿದ್ದ ಹಿನ್ನೆಲೆಯಲ್ಲಿ ಅತ್ಯಂತ ಖುಷಿಯಿಂದ ಮನೆಗೆ ಮರಳುತ್ತಿದ್ದ ಬಡ ಕಾರ್ಮಿಕರು ಹೀಗೆ ಅರ್ಧ ಹಾದಿಯಲ್ಲೇ ಹೆಣವಾಗಿ ಬಿದ್ದಿರುವುದು ಇಡೀ ಪ್ರದೇಶವನ್ನು ತೀವ್ರ ದುಃಖ ಮತ್ತು ಆಕ್ರಂದನದಲ್ಲಿ ಮುಳುಗಿಸಿದೆ.
ಸುಮಾರು 17 ಕೋಟಿಗೂ (170 ದಶಲಕ್ಷ) ಹೆಚ್ಚು ಜನಸಂಖ್ಯೆ ಹೊಂದಿರುವ ಬಾಂಗ್ಲಾದೇಶದಲ್ಲಿ, ಸಂಚಾರ ನಿಯಮಗಳ ಸಡಿಲವಾದ ಜಾರಿ, ರಸ್ತೆಗಳ ಕಳಪೆ ಸ್ಥಿತಿ ಹಾಗೂ ಕೌಶಲ್ಯರಹಿತ ಚಾಲಕರಿಂದಾಗಿ ಪ್ರತಿ ವರ್ಷ ಇಂತಹ ರಸ್ತೆ ಅಪಘಾತಗಳು ಸಾವಿರಾರು ಅಮಾಯಕರ ಪ್ರಾಣವನ್ನು ಬಲಿ ತೆಗೆದುಕೊಳ್ಳುತ್ತಿವೆ.
ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

