ಪತ್ರಕರ್ತನ ಬಂಧನಕ್ಕಾಗಿ ಪ್ರಯಾಣಿಕರ ವಿಮಾನದ ಮೇಲೆ ಫೈಟರ್ ಜೆಟ್ ಛೂ ಬಿಟ್ಟ ಬೆಲರೂಸ್ ಅಧ್ಯಕ್ಷ
ಆಡಳಿತ ವ್ಯವಸ್ಥೆಯೇ ಈ ರೀತಿ ವರ್ತಿಸಿರುವುದನ್ನು ಖಂಡಿಸಿರುವ ಜಾಗತಿಕ ಸಮುದಾಯ, ‘ಇದು ಸರ್ಕಾರದ ಭಯೋತ್ಪಾದನೆ’ ಎಂದು ವಿಶ್ಲೇಷಿಸಿದೆ. ಬಂಧನವನ್ನು ಬೆಲರೂಸ್ ಸರ್ಕಾರ ಒಪ್ಪಿಕೊಂಡಿಲ್ಲ. ಆದರೆ ಸಹಪ್ರಯಾಣಿಕರು ಈ ವಿಷಯವನ್ನು ದೃಢಪಡಿಸಿದ್ದಾರೆ.
ಮಿನ್ಸ್ಕ್: ಆಡಳಿತಾರೂಢ ಸರ್ಕಾರವನ್ನು ಖಂಡತುಂಡ ವಿರೋಧಿಸುವ ಪತ್ರಕರ್ತನ ಬಂಧನಕ್ಕಾಗಿ ಆತನಿದ್ದ ಪ್ರಯಾಣಿಕರ ವಿಮಾನದ ಅತಿ ಸಮೀಪವೇ ಫೈಟರ್ ಜೆಟ್ ಹಾರಿಸಿ, ವಿಮಾನವನ್ನು ಬಲವಂತವಾಗಿ ಕೆಳಗಿಳಿಸಿದ ಘಟನೆ ಬೆಲರೂಸ್ ರಾಜಧಾನಿ ಮಿನ್ಸ್ಕ್ ನಗರದಲ್ಲಿ ಭಾನುವಾರ ನಡೆದಿದೆ. ಆಡಳಿತ ವ್ಯವಸ್ಥೆಯೇ ಈ ರೀತಿ ವರ್ತಿಸಿರುವುದನ್ನು ಖಂಡಿಸಿರುವ ಜಾಗತಿಕ ಸಮುದಾಯ, ‘ಇದು ಸರ್ಕಾರದ ಭಯೋತ್ಪಾದನೆ’ ಎಂದು ವಿಶ್ಲೇಷಿಸಿದೆ.
ರೊಮನ್ ಪ್ರೊಟಸೆವಿಕ್ ಎಂಬ 26 ವರ್ಷದ ಭಿನ್ನಮತೀಯ ಪತ್ರಕರ್ತ ದೇಶಭ್ರಷ್ಟನಾಗಿ ಪೊಲೆಂಡ್ನಲ್ಲಿ ವಾಸವಿದ್ದ. ಗ್ರೀಸ್ನ ಅಥೆನ್ಸ್ನಿಂದ ವಿಲ್ನಿನ್ಯೂಸ್ ನಗರಕ್ಕೆ ಹೋಗುತ್ತಿರುವ ವಿಮಾನದಲ್ಲಿ ಆತ ಇರುವುದನ್ನು ತಿಳಿದ ಬೆಲರೂಸ್ ಅಧಿಕಾರಿಗಳು ವಿಮಾವನ್ನು ಬಲವಂತವಾಗಿ ರಾಜಧಾನಿ ಮಿನ್ಸ್ಕ್ ನಗರದಲ್ಲಿ ಇಳಿಸಿ, ಆತನನ್ನು ಬಂಧಿಸಿದರು. ವಿಮಾನವನ್ನು ಭದ್ರತಾ ಕಾರಣಗಳಿಂದಾಗಿ ತುರ್ತಾಗಿ ಇಳಿಸಬೇಕಾಯಿತು ಎಂದು ಅಧಿಕಾರಿಗಳು ನಂತರ ಸಮರ್ಥನೆ ಕೊಟ್ಟುಕೊಂಡರು.
ಈ ಬಂಧನವನ್ನು ಬೆಲರೂಸ್ ಸರ್ಕಾರ ಅಧಿಕೃತವಾಗಿ ಒಪ್ಪಿಕೊಂಡಿಲ್ಲ. ಆದರೆ ವಿಲ್ನ್ಯೂಸ್ ನಗರದಲ್ಲಿ ವಿಮಾನದಿಂದ ಇಳಿದ ಪ್ರಯಾಣಿಕರಲ್ಲಿ ಪ್ರೊಟಸೆವಿಕ್ ಇರಲಿಲ್ಲ. ವಿಮಾನವು ಮಿನ್ಸ್ಕ್ಗೆ ಮಾರ್ಗ ಬದಲಿಸಿದಾಗ ಪ್ರೊಟಸೆವಿಕ್ ಭಯದಿಂದ ಕುಳಿತಿದ್ದರು. ಆದರೆ ಕಿರುಚಾಡಲಿಲ್ಲ ಎಂದು ಹಲವು ಪ್ರಯಾಣಿಕರು ಹೇಳಿದ್ದಾರೆ. ‘ವಿಮಾನದ ಮಾರ್ಗ ಬದಲಾವಣೆ ಘೋಷಣೆಯಾದ ನಂತರ ಪ್ರಯಾಣಿಕರ ಕಡೆಗೆ ತಿರುಗಿದ ಪ್ರೊಟಸೆವಿಕ್ ತಾನು ಮರಣದಂಡನೆ ಎದುರಿಸುತ್ತಿರುವುದಾಗಿ ತಿಳಿಸಿದರು’ ಎಂದು ವಿಮಾನದಲ್ಲಿದ್ದ ಲಿಥೋನಿಯಾದ ಮೊನಿಕಾ ಸಿಮ್ಕೇನ್ ಹೇಳಿಕೆಯನ್ನು ಎಎಫ್ಪಿ ಸುದ್ದಿಸಂಸ್ಥೆ ಉಲ್ಲೇಖಿಸಿದೆ.
ಒಬ್ಬ ಪತ್ರಕರ್ತನನ್ನು ಬಂಧಿಸಲು ಇಂಥ ಕೆಟ್ಟ ಕ್ರಮ ಬಳಸಿ, ಪ್ರಯಾಣಿಕರ ವಿಮಾನದ ಮಾರ್ಗ ಬದಲಾವಣೆ ಮಾಡಿದ ಬೆಲರೂಸ್ ಸರ್ಕಾರದ ವಿರುದ್ಧ ಹೇರಿರುವ ನಿರ್ಬಂಧಗಳನ್ನು ಇನ್ನಷ್ಟು ಬಿಗಿಗೊಳಿಸಲು ಐರೂಪ್ಯ ಒಕ್ಕೂಟ ಚಿಂತನೆ ನಡೆಸಿದೆ. ತಮ್ಮನ್ನು ವಿರೋಧಿಸುವವರನ್ನು ಬೆಲರೂಸ್ ಅಧ್ಯಕ್ಷ ಅಲೆಕ್ಸಾಂಡರ್ ಲುಕಶೆಂಕೊ ಈ ಹಿಂದೆಯೂ ಹಲವು ಬಾರಿ ಇದೇ ರೀತಿ ಬೇಟೆಯಾಡಿದ್ದರು. ಪ್ರತಿಭಟನೆಗಳನ್ನು ಉಗ್ರವಾಗಿ ಹತ್ತಿಕ್ಕಿದ್ದರು. ಸೋಮವಾರ ನಡೆಯಲಿರುವ ಐರೋಪ್ಯ ಒಕ್ಕೂಟದ ಸಭೆಯಲ್ಲಿ ಈ ವಿಚಾರವೂ ಚರ್ಚೆಗೆ ಬರುವ ನಿರೀಕ್ಷೆಯಿದೆ.
ಬಂಧಿತ ಪತ್ರಕರ್ತ ಪ್ರೊಟೊಸೆವಿಕ್ ಬಿಡುಗಡೆಗೆ ಆಗ್ರಹಿಸಿರುವ ಅಮೆರಿಕದ ವಿದೇಶಾಂಗ ವ್ಯವಹಾರಗಳ ಕಾರ್ಯದರ್ಶಿ ಆಂಟೊನಿ ಬ್ಲಿಂಕೆನ್ ಬೆಲರೂಸ್ ಸರ್ಕಾರದ ಕ್ರಮವನ್ನು ಖಂಡಿಸಿದ್ದಾರೆ. ‘ಬೆಲರೂಸ್ನ ಸರ್ವಾಧಿಕಾರಿ ಲುಕಶೆಂಕ ಮಾಡಿದ ಈ ದುಸ್ಸಾಹಸವು ವಿಮಾನದಲ್ಲಿದ್ದ 120 ಪ್ರಯಾಣಿಕರ ಜೀವಗಳನ್ನೂ ಆಪತ್ತಿಗೆ ಸಿಲುಕಿಸಿತ್ತು. ಇದರಲ್ಲಿ ಅಮೆರಿಕದ ಪ್ರಜೆಗಳೂ ಇದ್ದರು’ ಎಂದು ಆಂಟೊನಿ ಹೇಳಿದ್ದಾರೆ.
ರಷ್ಯ ಗುಪ್ತಚರ ಇಲಾಖೆ ಕೈವಾಡದ ಶಂಕೆ ಪ್ರಯಾಣಿಕರ ವಿಮಾನವನ್ನು ಬಲವಂತವಾಗಿ ಕೆಳಗಿಳಿಸಿದ ಬೆಲರೂಸ್ ಸರ್ಕಾರದ ಈ ದುಸ್ಸಾಹಸದ ಹಿಂದೆ ರಷ್ಯದ ಗುಪ್ತಚರ ಇಲಾಖೆ ಕೆಜಿಬಿಯ ಕೈವಾಡ ಇರಬಹುದು ಎಂಬ ಶಂಕೆ ವ್ಯಕ್ತವಾಗಿದೆ. ವಿಮಾನದಲ್ಲಿದ್ದ ಬೆಲರೂಸ್ ಸರ್ಕಾರದ ಭದ್ರತಾ ಸಂಸ್ಥೆಯ ಅಧಿಕಾರಿಯೊಬ್ಬರು ವಿಮಾನವು ಬೆಲರೂಸ್ ವಾಯುಗಡಿ ಪ್ರವೇಶಿಸಿದ ತಕ್ಷಣ ವಿಮಾನದಲ್ಲಿ ಬಾಂಬ್ ಇದೆ ಎಂದು ಗುಲ್ಲೆಬ್ಬಿಸಿದ್ದರು. ವಿಮಾನದ ಸಿಬ್ಬಂದಿಯೊಬ್ಬಂದಿಗೆ ರಷ್ಯ ಗುಪ್ತಚರ ಸಂಸ್ಥೆ ಕೆಜಿಬಿಯ ಅಧಿಕಾರಿಗಳು ಸಂಘರ್ಷಕ್ಕೂ ಇಳಿದಿದ್ದರು. ಈ ಬೆಳವಣಿಗೆಯ ನಂತರ ಬೆಲರೂಸ್ನ ವಿಮಾನ ಸಂಚಾರ ನಿಯಂತ್ರಣ ಅಧಿಕಾರಿಗಳು ಭದ್ರತೆಯ ಕಾರಣ ಮುಂದೊಡ್ಡಿ ವಿಮಾನವನ್ನು ತಕ್ಷಣವೇ ಮಿನ್ಸ್ಕ್ ನಿಲ್ದಾಣದಲ್ಲಿ ಇಳಿಸಬೇಕೆಂದು ಆದೇಶಿಸಿತ್ತು.
ಈಗಾಗಲೇ ಹಲವು ನಿರ್ಬಂದಗಳನ್ನು ಎದುರಿಸುತ್ತಿರುವ ಬೆಲರೂಸ್ನ ಲುಕಶೆಂಕೊ ನೇತೃತ್ವದ ಸರ್ಕಾರದ ಬಗ್ಗೆ ಅಮೆರಿಕ ಮತ್ತು ಐರೋಪ್ಯ ಒಕ್ಕೂಟ ಈ ಬೆಳವಣಿಗೆಯ ನಂತರ ಮತ್ತೆ ಕಠಿಣವಾಗಿ ಮಾತನಾಡಿದೆ. ಬೆಲರೂಸ್ನಲ್ಲಿ ಪತ್ರಕರ್ತರು ಮತ್ತು ಚಳವಳಿಕಾರರನ್ನು ಬಂಧಿಸುವ ಕಾರ್ಯ ನಿರಂತರವಾಗಿ ನಡೆಯುತ್ತಿದೆ.
ಇದನ್ನೂ ಓದಿ: ಬಿಗ್ ಬಾಸ್ ಸ್ಪರ್ಧಿಗೆ ಕೊರೊನಾ ವೈರಸ್; ಕಣ್ಣೀರು ಹಾಕುತ್ತ ವಿಡಿಯೋ ಮಾಡಿದ ನಟಿ
ಇದನ್ನೂ ಓದಿ: ಭಾರತದಲ್ಲಿ ರೂಪಾಂತರ ವೈರಸ್ ವಿರುದ್ಧ ಎರಡು ಡೋಸ್ ಲಸಿಕೆ ಮಾತ್ರ ಬಲವಾದ ರಕ್ಷಣೆ ಒದಗಿಸಬಲ್ಲದು: ವರದಿ
Published On - 1:37 pm, Mon, 24 May 21