ಜನವರಿ 20ರಂದು ಶ್ವೇತಭವನ ಪ್ರವೇಶಿಸಲಿರುವ ಅಮೆರಿಕ ನಿಯೋಜಿತ ಅಧ್ಯಕ್ಷ ಜೋ ಬೈಡನ್ ಹೊಸ ಶೈಕ್ಷಣಿಕ ಯೋಜನೆಯೊಂದರ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ. ಆ ಮೂಲಕ, ಯುಎಸ್ ವಿದ್ಯಾರ್ಥಿಗಳಿಗೆ ಕ್ರಿಸ್ಮಸ್ ಉಡುಗೊರೆ ನೀಡಿದ್ದಾರೆ.
ಜೋ ಬೈಡನ್, ಅಮೆರಿಕಾದ ಕಮ್ಯುನಿಟಿ ಕಾಲೇಜುಗಳಲ್ಲಿ ಉಚಿತ ಶಿಕ್ಷಣ ನೀಡುವ ಯೋಜನೆಯ ಬಗ್ಗೆ ಹೇಳಿಕೆ ನೀಡಿದ್ದಾರೆ.. ಇಂದಿನ 21ನೇ ಶತಮಾನದಲ್ಲಿ 12 ವರ್ಷಗಳ ಕಲಿಕೆ ಸಾಕಾಗುವುದಿಲ್ಲ. ಹಾಗಾಗಿ, ಬೈಡನ್-ಹ್ಯಾರಿಸ್ ಯೋಜನೆಯಡಿ, ಸಮುದಾಯ ಕಾಲೇಜುಗಳಲ್ಲಿ ಉಚಿತ ಶಿಕ್ಷಣ ನೀಡಲಾಗುವುದು. ಹಾಗೇ ಪಬ್ಲಿಕ್ ಕಾಲೇಜು ಮತ್ತು ವಿಶ್ವವಿದ್ಯಾಲಯಗಳಲ್ಲಿ, 1.25 ಲಕ್ಷ ಅಮೆರಿಕನ್ ಡಾಲರ್ಗಿಂತ ಕಡಿಮೆ ಆದಾಯ ಹೊಂದಿರುವ ಕುಟುಂಬಗಳ ವಿದ್ಯಾರ್ಥಿಗಳಿಗೆ ಉಚಿತ ಶಿಕ್ಷಣ ನೀಡಲಾಗುವುದು ಎಂದು ಟ್ವೀಟ್ ಮಾಡುವ ಮೂಲಕ ತಮ್ಮ ಶೈಕ್ಷಣಿಕ ಕಾಳಜಿಯನ್ನು ಮೆರೆದಿದ್ದಾರೆ.
ಅಮೆರಿಕಾದಲ್ಲಿ ಕಾರ್ಮಿಕ ವರ್ಗದ (1.25 ಲಕ್ಷ ಅಮೆರಿಕನ್ ಡಾಲರ್ಗಿಂತ ಕಡಿಮೆ ಆದಾಯ ಹೊಂದಿರುವ) ಬಹುಪಾಲು ಜನರು ವರ್ಣೀಯರಾಗಿದ್ದಾರೆ. ಬೈಡನ್ -ಹ್ಯಾರಿಸ್ ಪಕ್ಷದ ಗೆಲುವಿಗೆ ಕಾರಣರಾದ ಅಂತಹ ಕುಟುಂಬಗಳಿಗೆ ಈ ಯೋಜನೆಯಿಂದ ಸಹಾಯವಾಗಲಿದೆ ಎಂಬ ಅಭಿಪ್ರಾಯಗಳೂ ಕೇಳಿಬಂದಿವೆ.
ಬೈಡನ್ ಪಕ್ಷದ ಇತರ ನಾಯಕರೂ ಇಂತಹ ಯೋಜನೆಯನ್ನು ಕಾರ್ಯರೂಪಗೊಳಿಸಬೇಕು ಎಂದು ಈ ಹಿಂದೆ ಅಭಿಪ್ರಾಯಪಟ್ಟಿದ್ದರು. ಅಮೆರಿಕದ ವಿದ್ಯಾರ್ಥಿಗಳು ಎದುರಿಸುತ್ತಿರುವ ಆರ್ಥಿಕ ಒತ್ತಡವನ್ನು ಕಡಿಮೆ ಮಾಡುವ ಬಗ್ಗೆ ಯೋಚಿಸಿದ್ದರು. ಕಾಲೇಜು ಶಿಕ್ಷಣವು ಬದುಕಿನ ಏಣಿಯಾಗಬೇಕು, ಆದರೆ ವಿದ್ಯಾರ್ಥಿಗಳ ಶೈಕ್ಷಣಿಕ ಸಾಲವು ಅವರನ್ನು ಹಿಂದಕ್ಕೆ ಎಳೆಯುತ್ತಿದೆ ಎಂಬ ಅಭಿಪ್ರಾಯಗಳೂ ವ್ಯಕ್ತವಾಗಿದ್ದವು. ಇದೀಗ ಬೈಡನ್ ಹೊಸ ಭರವಸೆ ನೀಡಿರುವುದು ಅಮೆರಿಕನ್ನರ ಮೊಗದಲ್ಲಿ ಮಂದಹಾಸ ಮೂಡಿಸಿದೆ.
ರಾಷ್ಟ್ರದ ಪ್ರಗತಿಯಲ್ಲಿ ಶಿಕ್ಷಣದ ಪಾತ್ರ ಮಹತ್ವದ್ದು. ವಿಶ್ವದ ವಿವಿಧ ದೇಶಗಳು ಈ ನೆಲೆಯಲ್ಲಿ ಕೆಲಸ ಮಾಡುತ್ತಿವೆ. ತನ್ನ ಭವಿಷ್ಯದ ಅಭಿವೃದ್ಧಿಗಾಗಿ ಇಂದಿನ ವಿದ್ಯಾರ್ಥಿಗಳನ್ನು ಉತ್ತಮ ಹಾದಿಯಲ್ಲಿ ಕೊಂಡೊಯ್ಯಲು ಪ್ರಯತ್ನಿಸುತ್ತಿವೆ. ಈಗಾಗಲೇ ಭಾರತದಲ್ಲೂ ಈ ಬಗ್ಗೆ ಕೆಲಸಗಳಾಗುತ್ತಿರುವುದನ್ನು ನಾವು ಗಮನಿಸಬಹುದು. ನೂತನ ಶಿಕ್ಷಣ ಪದ್ಧತಿಯಂತಹ ಯೋಜನೆಗಳಿಂದ ಶೈಕ್ಷಣಿಕ ಕ್ಷೇತ್ರದ ಬದಲಾವಣೆಗೆ ದೇಶ ಶ್ರಮಿಸುತ್ತಿದೆ. ಬಿಸಿಯೂಟ ಯೋಜನೆ, ಉಚಿತ ಸೈಕಲ್ ವಿತರಣೆ, ಹೆಣ್ಣು ಮಕ್ಕಳಿಗೆ ಉಚಿತ ಶಿಕ್ಷಣ ಇತ್ಯಾದಿ ಯೋಜನೆಗಳನ್ನೂ ನಾವು ಸ್ಮರಿಸಬಹುದು.
In the 21st century, twelve years of school isn’t enough. That’s why under the Biden-Harris plan, community college will be free — and public colleges and universities will be tuition-free for families earning less than $125,000 a year.
— Joe Biden (@JoeBiden) December 24, 2020
36 ದಿನಕ್ಕೆ ಮುಂಚೆ ಕೊನೆಗೂ ಜೋ ಬೈಡನ್ ಗೆಲುವನ್ನು ದೃಢೀಕರಿಸಿದ US ಚುನಾವಣಾ ಆಯೋಗ
Published On - 1:11 pm, Sat, 26 December 20