AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ದೆಹಲಿ ಮಾಲಿನ್ಯದ ಬಗ್ಗೆ ಕಳವಳ; ಇಂಗ್ಲೆಂಡ್, ಕೆನಡಾ, ಸಿಂಗಾಪುರದ ಪ್ರಯಾಣಿಕರಿಗೆ ಅಲರ್ಟ್

ದೆಹಲಿಯಲ್ಲಿ ವಾಯುಮಾಲಿನ್ಯ ಹೆಚ್ಚಾಗಿರುವುದರಿಂದ ಇಂಗ್ಲೆಂಡ್, ಕೆನಡಾ, ಸಿಂಗಾಪುರದ ಪ್ರಯಾಣಿಕರಿಗೆ ಅಲ್ಲಿನ ಸರ್ಕಾರ ದೆಹಲಿಗೆ ತೆರಳುವಾಗ ಎಚ್ಚರ ವಹಿಸುವಂತೆ ಸಲಹೆ ನೀಡಿದೆ. ದೆಹಲಿಯಲ್ಲಿ ಗಾಳಿಯ ಗುಣಮಟ್ಟ (AQI) 500ಕ್ಕೆ ತಲುಪಿದೆ. ಇದು ಭಾರತದಲ್ಲಿ ಮಾತ್ರವಲ್ಲದೆ ಬೇರೆ ದೇಶಗಳಲ್ಲೂ ಕಳವಳ ಮೂಡಿಸಿದೆ. ದೆಹಲಿಯಲ್ಲಿ ಮಿತಿಮೀರಿದ ವಾಯುಮಾಲಿನ್ಯದಿಂದಾಗಿ ಉಸಿರಾಡಲೂ ಕಷ್ಟಪಡುವಂತಾಗಿದೆ.

ದೆಹಲಿ ಮಾಲಿನ್ಯದ ಬಗ್ಗೆ ಕಳವಳ; ಇಂಗ್ಲೆಂಡ್, ಕೆನಡಾ, ಸಿಂಗಾಪುರದ ಪ್ರಯಾಣಿಕರಿಗೆ ಅಲರ್ಟ್
Delhi Pollution
ಸುಷ್ಮಾ ಚಕ್ರೆ
|

Updated on: Dec 15, 2025 | 3:47 PM

Share

ನವದೆಹಲಿ, ಡಿಸೆಂಬರ್ 15: ದೆಹಲಿ ಜಗತ್ತಿನ ಅತ್ಯಂತ ಕಲುಷಿತ ನಗರಗಳಲ್ಲಿ ಒಂದಾಗಿದೆ. ಈ ವರ್ಷ ಗಾಳಿಯ ಗುಣಮಟ್ಟ ಬಹಳ ಕಡಿಮೆಯಾಗುತ್ತಿರುವುದು ಜಾಗತಿಕ ಗಮನ ಸೆಳೆದಿದೆ. ದೆಹಲಿಯಲ್ಲಿ (Delhi Air Pollution) ಉಸಿರಾಡಲು ಕೂಡ ಕಷ್ಟವಾಗುವಂತೆ ಗಾಳಿಯ ಗುಣಮಟ್ಟ ಕೆಟ್ಟದಾಗಿರುವುದರಿಂದ ಯುನೈಟೆಡ್ ಕಿಂಗ್‌ಡಮ್, ಸಿಂಗಾಪುರ ಮತ್ತು ಕೆನಡಾ ದೇಶಗಳು ಉತ್ತರ ಭಾರತಕ್ಕೆ ಪ್ರಯಾಣಿಸುವ ತಮ್ಮ ನಾಗರಿಕರಿಗೆ ಪ್ರಯಾಣದ ಸಲಹೆಗಳನ್ನು ನೀಡಿವೆ.

ದೆಹಲಿಯಲ್ಲಿ ಮಾಲಿನ್ಯ ಮತ್ತು ಮಂಜು ಹೆಚ್ಚಾಗಿರುವುದರಿಂದ ಗೋಚರತೆಯ ಸಮಸ್ಯೆಯಿಂದಾಗಿ ವಿಮಾನಗಳ ಹಾರಾಟದಲ್ಲಿಯೂ ಅಡಚಣೆಯಾಗುತ್ತಿದೆ. ಇದಕ್ಕೂ ಸಿದ್ಧವಾಗಿರಬೇಕು ಎಂದು ಸಿಂಗಾಪುರ ತನ್ನ ದೇಶದ ನಾಗರಿಕರಿಗೆ ಸಲಹೆ ನೀಡಿದೆ. ಈ ಬಗ್ಗೆ ದೆಹಲಿಯ ಇಂದಿರಾ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಮತ್ತು ಹಲವಾರು ವಿಮಾನಯಾನ ಸಂಸ್ಥೆಗಳು ಸಲಹೆಗಳನ್ನು ನೀಡಿರುವುದಾಗಿ ಸಿಂಗಾಪುರ ತನ್ನ ಸಲಹೆಯಲ್ಲಿ ತಿಳಿಸಿದೆ. ಪ್ರಯಾಣಿಕರು ನವೀಕರಣಗಳಿಗಾಗಿ ತಮ್ಮ ವಿಮಾನಯಾನ ಸಂಸ್ಥೆಗಳೊಂದಿಗೆ ಪರಿಶೀಲಿಸಲು ಸೂಚಿಸಲಾಗಿದೆ.

ಇದನ್ನೂ ಓದಿ: ದೆಹಲಿಯಲ್ಲಿ ದಟ್ಟ ಮಂಜು, ಸರಿಯಾದ ಸಮಯಕ್ಕೆ ತಲುಪದ ವಿಮಾನ, ಪ್ರಧಾನಿ ಮೋದಿ ವಿದೇಶ ಪ್ರವಾಸ ವಿಳಂಬ

ಈಗಾಗಲೇ ದೆಹಲಿಯಲ್ಲಿ ಅಧಿಕಾರಿಗಳು ನಿರ್ಮಾಣ ಮತ್ತು ಕೈಗಾರಿಕಾ ಕೆಲಸಗಳನ್ನು ನಿರ್ಬಂಧಿಸಿದ್ದಾರೆ. ಶಾಲೆಗಳು ಮತ್ತು ಕಚೇರಿಗಳಿಗೆ ಹೈಬ್ರಿಡ್ ರೀತಿ ಕಾರ್ಯ ನಿರ್ವಹಿಸಲು ಸಲಹೆ ನೀಡಲಾಗಿದೆ. ದೆಹಲಿ ಅಧಿಕಾರಿಗಳು ನಿವಾಸಿಗಳನ್ನು, ವಿಶೇಷವಾಗಿ ಮಕ್ಕಳು ಮತ್ತು ಉಸಿರಾಟದ ಅಥವಾ ಹೃದಯ ಸಂಬಂಧಿ ಕಾಯಿಲೆ ಇರುವ ಜನರು ಮನೆಯೊಳಗೆ ಇರಲು ಮತ್ತು ಹೊರಗೆ ಹೋಗುವಾಗ ಮಾಸ್ಕ್ ಧರಿಸಲು ಸೂಚನೆ ನೀಡಿದ್ದಾರೆ. ದೆಹಲಿಯ ಈ ಪರಿಸ್ಥಿತಿಯ ಬಗ್ಗೆಯೂ ಸಿಂಗಾಪುರ ತನ್ನ ಪ್ರಜೆಗಳು ಗಮನಿಸುವಂತೆ ಸಲಹೆ ನೀಡಿದೆ.

ಇದಕ್ಕೂ ಮೊದಲು, UK (ಇಂಗ್ಲೆಂಡ್) ಕೂಡ ಪ್ರಯಾಣ ಸಲಹೆಯನ್ನು ನೀಡಿದ್ದು, ಗರ್ಭಿಣಿಯರು ಮತ್ತು ಹೃದಯ ಕಾಯಿಲೆ ಇರುವ ಜನರು ಭಾರತಕ್ಕೆ ಭೇಟಿ ನೀಡುವ ಮೊದಲು ವೈದ್ಯರನ್ನು ಸಂಪರ್ಕಿಸಬೇಕು ಎಂದು ಹೇಳಿದೆ. ಉತ್ತರ ಭಾರತದ ರಾಜ್ಯಗಳು ಅಕ್ಟೋಬರ್ ಮತ್ತು ಫೆಬ್ರವರಿ ನಡುವೆ ತೀವ್ರ ಗಾಳಿಯ ಗುಣಮಟ್ಟವನ್ನು ಹೊಂದಿರುತ್ತವೆ ಎಂದು ಅದು ಹೇಳಿದೆ. ಮಕ್ಕಳು, ವೃದ್ಧರು ಮತ್ತು ಮೊದಲೇ ವೈದ್ಯಕೀಯ ಸಮಸ್ಯೆಗಳನ್ನು ಹೊಂದಿರುವ ಜನರ ಮೇಲೆ ಇದರಿಂದ ಹೆಚ್ಚು ಪರಿಣಾಮ ಉಂಟಾಗುವ ಸಾಧ್ಯತೆಯಿದೆ ಎಂದು ಯುಕೆ ಹೇಳಿದೆ.

ಇದನ್ನೂ ಓದಿ: ಬೆಂಗಳೂರಿನಲ್ಲಿ ವಾಯುಮಾಲಿನ್ಯ ಉಲ್ಬಣ: ಇಂದು ಮತ್ತೆ ಗಾಳಿಮಟ್ಟ ಕುಸಿತ

ಕೆನಡಾ ಕೂಡ ಇದೇ ರೀತಿಯ ಸಲಹೆಯನ್ನು ನೀಡಿದ್ದು, ಭಾರತಕ್ಕೆ ಭೇಟಿ ನೀಡುವ ಮೊದಲು ಪ್ರಯಾಣಿಕರು ನಿಯಮಿತವಾಗಿ ಗಾಳಿಯ ಗುಣಮಟ್ಟದ ಮಟ್ಟವನ್ನು ಪರಿಶೀಲಿಸುವಂತೆ ಸಲಹೆ ನೀಡಿದೆ. ಭಾರತದ ರಾಜಧಾನಿ ದೆಹಲಿ ಚಳಿಗಾಲದಲ್ಲಿ ಅತ್ಯಂತ ಕೆಟ್ಟ ವಾಯು ಮಾಲಿನ್ಯವನ್ನು ಅನುಭವಿಸುತ್ತಿದೆ ಎಂದು ಅದು ಹೇಳಿದೆ.

ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ