ಇರಾನ್ ಶಾಂತಿ ಮಾತುಕತೆ ತಿರಸ್ಕರಿಸಿದ್ದೇಕೆ, ಅಮೆರಿಕದ ಅತಿಯಾದ ಬೇಡಿಕೆಗಳು ಮತ್ತು ದ್ವಂದ್ವ ನೀತಿಗೆ ಇರಾನ್ ಗರಂ

ಮಧ್ಯಪ್ರಾಚ್ಯದಲ್ಲಿ ಜಾರಿಯಲ್ಲಿರುವ ಕದನ ವಿರಾಮ ಅಂತ್ಯಗೊಳ್ಳಲು ಕೇವಲ ಎರಡು ದಿನಗಳು ಬಾಕಿ ಇರುವಾಗ, ಅಮೆರಿಕ ಮತ್ತು ಇರಾನ್ ನಡುವಿನ ರಾಜತಾಂತ್ರಿಕ ಸಂಘರ್ಷ ತಾರಕಕ್ಕೇರಿದೆ. ಶಾಂತಿ ಒಪ್ಪಂದದ ನಿರೀಕ್ಷೆಯಲ್ಲಿದ್ದ ಜಗತ್ತಿಗೆ ಇರಾನ್‌ನ ಇತ್ತೀಚಿನ ನಿರ್ಧಾರ ಆಘಾತ ನೀಡಿದೆ.ಇರಾನ್‌ನ ರಾಜ್ಯ ಪ್ರಾಯೋಜಿತ ಮಾಧ್ಯಮ 'ಐಆರ್‌ಎನ್ಎ' (IRNA), ಇಸ್ಲಾಮಾಬಾದ್‌ನಲ್ಲಿ ಮಾತುಕತೆ ನಡೆಯಲಿದೆ ಎಂಬ ವರದಿಗಳನ್ನು ಸಂಪೂರ್ಣವಾಗಿ ನಿರಾಕರಿಸಿದೆ. ಅಮೆರಿಕ ತನ್ನ ನಿರ್ಧಾರಗಳನ್ನು ಪದೇ ಪದೇ ಬದಲಿಸುತ್ತಿದೆ ಮತ್ತು ಕದನ ವಿರಾಮದ ನೀತಿಗಳನ್ನು ಉಲ್ಲಂಘಿಸಿ ನೌಕಾ ದಿಗ್ಬಂಧನದ ಮೂಲಕ ಬೆದರಿಕೆ ಹಾಕುತ್ತಿದೆ. ಇಂತಹ ವಾತಾವರಣದಲ್ಲಿ ರಚನಾತ್ಮಕ ಮಾತುಕತೆ ಸಾಧ್ಯವಿಲ್ಲ ಎಂದು ಇರಾನ್ ಕಟುವಾಗಿ ಹೇಳಿದೆ.

ಇರಾನ್ ಶಾಂತಿ ಮಾತುಕತೆ ತಿರಸ್ಕರಿಸಿದ್ದೇಕೆ, ಅಮೆರಿಕದ ಅತಿಯಾದ ಬೇಡಿಕೆಗಳು ಮತ್ತು ದ್ವಂದ್ವ ನೀತಿಗೆ ಇರಾನ್ ಗರಂ
ಡೊನಾಲ್ಡ್ ಟ್ರಂಪ್ -ಖಮೇನಿ
Image Credit source: Google Gemini

Updated on: Apr 20, 2026 | 7:22 AM

ಟೆಹ್ರಾನ್, ಏಪ್ರಿಲ್ 20: ಮಧ್ಯಪ್ರಾಚ್ಯದಲ್ಲಿ ಶಾಂತಿ ಸ್ಥಾಪಿಸುವ ನಿಟ್ಟಿನಲ್ಲಿ ಪಾಕಿಸ್ತಾನದ ಇಸ್ಲಾಮಾಬಾದ್​ನಲ್ಲಿ ನಡೆಯಬೇಕಿದ್ದ ಅಮೆರಿಕ ಮತ್ತು ಇರಾನ್(Iran) ನಡುವಿನ ಎರಡನೇ ಸುತ್ತಿನ ಮಹತ್ವದ ಮಾತುಕತೆಯನ್ನು ಇರಾನ್ ಅಧಿಕೃತವಾಗಿ ತಿರಸ್ಕರಿಸಿದೆ. ಅಮೆರಿಕದ ಅತಿಯಾದ ಬೇಡಿಕೆಗಳು ಮತ್ತು ನೌಕಾ ದಿಗ್ಬಂಧನವೇ ಈ ಬಿಕ್ಕಟ್ಟಿಗೆ ಕಾರಣ ಎಂದು ಇರಾನ್ ದೂರಿದೆ.

ಇರಾನ್​ನ ಐಆರ್​ಎನ್​ಎ ಬಿತ್ತರಿಸಿದ್ದ ವರದಿ ಪ್ರಕಾರ, ಇಸ್ಲಾಮಾಬಾದ್‌ನಲ್ಲಿ ಮಾತುಕತೆ ನಡೆಯಲಿದೆ ಎಂಬ ವರದಿಗಳನ್ನು ಇರಾನ್ ಸಂಪೂರ್ಣವಾಗಿ ನಿರಾಕರಿಸಿದೆ. ಅಮೆರಿಕ ತನ್ನ ನಿರ್ಧಾರಗಳನ್ನು ಪದೇ ಪದೇ ಬದಲಿಸುತ್ತಿದೆ ಮತ್ತು ಕದನ ವಿರಾಮದ ನೀತಿಗಳನ್ನು ಉಲ್ಲಂಘಿಸಿ ನೌಕಾ ದಿಗ್ಬಂಧನದ ಮೂಲಕ ಬೆದರಿಕೆ ಹಾಕುತ್ತಿದೆ. ಇಂತಹ ವಾತಾವರಣದಲ್ಲಿ ರಚನಾತ್ಮಕ ಮಾತುಕತೆ ಸಾಧ್ಯವಿಲ್ಲ ಎಂದು ಇರಾನ್ ಕಟುವಾಗಿ ಹೇಳಿದೆ.

ಟ್ರಂಪ್ ಆಶಾವಾದ ಮತ್ತು ನಿಯೋಗದ ಸಿದ್ಧತೆ
ಮತ್ತೊಂದೆಡೆ, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಈ ಮಾತುಕತೆಯ ಬಗ್ಗೆ ಭಾರಿ ಆಶಾವಾದ ಹೊಂದಿದ್ದರು. ತಮ್ಮ ‘ಟ್ರೂತ್ ಸೋಶಿಯಲ್’ ಪೋಸ್ಟ್‌ನಲ್ಲಿ ಅವರು, ಒಪ್ಪಂದ ಸಿದ್ಧವಾಗಿದೆ, ನಮಗೆ ಉತ್ತಮ ಅವಕಾಶವಿದೆ ಎಂದು ಬರೆದುಕೊಂಡಿದ್ದರು. ಇದಕ್ಕಾಗಿ ಉಪಾಧ್ಯಕ್ಷ ಜೆಡಿ ವ್ಯಾನ್ಸ್, ವಿಶೇಷ ರಾಯಭಾರಿ ಸ್ಟೀವ್ ವಿಟ್ಕಾಫ್ ಮತ್ತು ಅಳಿಯ ಜೇರೆಡ್ ಕುಶ್ನರ್ ಅವರನ್ನೊಳಗೊಂಡ ಉನ್ನತ ಮಟ್ಟದ ನಿಯೋಗವನ್ನು ಪಾಕಿಸ್ತಾನಕ್ಕೆ ಕಳುಹಿಸಲು ಸಿದ್ಧತೆ ನಡೆಸಿದ್ದರು.

ಶಾಂತಿ ಮಾತುಕತೆಗೆ ಅಡ್ಡಿಯಾಗಿರುವುದು ಅಮೆರಿಕ ವಿಧಿಸಿರುವ ನೌಕಾ ದಿಗ್ಬಂಧನ. ಇತ್ತೀಚೆಗೆ ಇರಾನ್‌ನ ಹಡಗೊಂದರ ಮೇಲೆ ಅಮೆರಿಕದ ವಿಧ್ವಂಸಕ ನೌಕೆ ಗುಂಡು ಹಾರಿಸಿ ಅದನ್ನು ವಶಪಡಿಸಿಕೊಂಡ ಘಟನೆ ಪರಿಸ್ಥಿತಿಯನ್ನು ಮತ್ತಷ್ಟು ಜಟಿಲಗೊಳಿಸಿದೆ. “ದಿಗ್ಬಂಧನವನ್ನು ತೆಗೆದುಹಾಕದೆ ಯಾವುದೇ ಮಾತುಕತೆ ಇಲ್ಲ” ಎಂಬುದು ಇರಾನ್‌ನ ಪಟ್ಟು.

ಮತ್ತಷ್ಟು ಓದಿ: ಹಾರ್ಮುಜ್​ನಲ್ಲಿ ಭಾರತದ ಹಡಗುಗಳ ಮೇಲೆ ಇರಾನ್ ದಾಳಿ, ಇರಾನ್ ರಾಯಭಾರಿ ಬಳಿ ವಿವರಣೆ ಕೇಳಿದ ಭಾರತ

ಫೆಬ್ರವರಿ 28 ರಂದು ನಡೆದ ಅಚ್ಚರಿಯ ದಾಳಿಯ ನಂತರ ಜಾರಿಗೆ ಬಂದಿದ್ದ ಎರಡು ವಾರಗಳ ಕದನ ವಿರಾಮವು ಏಪ್ರಿಲ್ 22ಕ್ಕೆ ಮುಕ್ತಾಯಗೊಳ್ಳಲಿದೆ. ಟ್ರಂಪ್ ಅವರು ಇರಾನ್ ಕದನ ವಿರಾಮವನ್ನು ಉಲ್ಲಂಘಿಸಿದೆ ಎಂದು ಆರೋಪಿಸುತ್ತಲೇ, ಮತ್ತೊಂದೆಡೆ ನ್ಯಾಯಯುತ ಒಪ್ಪಂದ ನೀಡುತ್ತಿರುವುದಾಗಿ ಹೇಳುತ್ತಿದ್ದಾರೆ. ಒಂದು ವೇಳೆ ಒಪ್ಪಂದವಾಗದಿದ್ದರೆ ಇರಾನ್‌ನ ಮೂಲಸೌಕರ್ಯಗಳ ಮೇಲೆ ದಾಳಿ ಮಾಡುವುದಾಗಿ ಅವರು ಎಚ್ಚರಿಕೆ ನೀಡಿದ್ದಾರೆ.

ವಾಷಿಂಗ್ಟನ್ ತನ್ನ ಮೇಲೆ ಒತ್ತಡ ಹೇರಲು “ದೂಷಣೆಯ ಆಟ”ವಾಡುತ್ತಿದೆ ಮತ್ತು ಮಾತುಕತೆಯ ಬಗ್ಗೆ ಸುಳ್ಳು ಸುದ್ದಿ ಹರಡುತ್ತಿದೆ ಎಂದು ಟೆಹ್ರಾನ್ ಆರೋಪಿಸಿದೆ. ಇದರಿಂದಾಗಿ ಇಸ್ಲಾಮಾಬಾದ್ ಮಾತುಕತೆಗಳು ಆರಂಭವಾಗುವ ಮೊದಲೇ ವಿಫಲಗೊಂಡಂತಾಗಿವೆ.

ಇಸ್ಲಾಮಾಬಾದ್‌ನಲ್ಲಿ ನಡೆಯಬೇಕಿದ್ದ ಈ ಸಂಧಾನ ಪ್ರಕ್ರಿಯೆಯು ಮಧ್ಯಪ್ರಾಚ್ಯದ ಭವಿಷ್ಯವನ್ನು ನಿರ್ಧರಿಸಬೇಕಿತ್ತು. ಆದರೆ, ಇರಾನ್‌ನ ಕಠಿಣ ನಿಲುವು ಮತ್ತು ಅಮೆರಿಕದ ಬಿಗಿ ಹಿಡಿತದಿಂದಾಗಿ ಕದನ ವಿರಾಮದ ನಂತರ ಮತ್ತೆ ಭೀಕರ ಯುದ್ಧ ಸಂಭವಿಸುವ ಆತಂಕ ಎದುರಾಗಿದೆ. ಈ ಮಾತುಕತೆಗೆ ಪಾಕಿಸ್ತಾನವು ಆತಿಥ್ಯ ವಹಿಸಬೇಕಿತ್ತು ಮತ್ತು ಇತ್ತೀಚೆಗಷ್ಟೇ ಪಾಕ್ ಸೇನಾ ಮುಖ್ಯಸ್ಥ ಆಸಿಮ್ ಮುನೀರ್ ಅವರು ಇರಾನ್‌ಗೆ ಭೇಟಿ ನೀಡಿ ಮಾತುಕತೆಗೆ ವೇದಿಕೆ ಸಿದ್ಧಪಡಿಸಿದ್ದರು. ಆದರೆ ಈಗ ಇರಾನ್ ಹಿಂದೆ ಸರಿದಿರುವುದು ರಾಜತಾಂತ್ರಿಕ ಹಿನ್ನಡೆಯಾಗಿ ಕಂಡುಬರುತ್ತಿದೆ.

 

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Nayana Rajeev

ನಯನಾ ರಾಜೀವ್- ಮೂಲತಃ ಸಾಗರದ ಬಾಳೆಗೆರೆಯವಳು, ಹಿಂದಿಯಲ್ಲಿ ಎಂ.ಎ ಮಾಡಿದ್ದೇನೆ, ಮಾಧ್ಯಮದಲ್ಲಿ 9 ವರ್ಷಗಳ ಅನುಭವವಿದೆ, ಕನ್ನಡ ಪ್ರಭ ದಿನಪತ್ರಿಕೆಯಲ್ಲಿ 3 ವರ್ಷಗಳ ಕಾಲ ಕೆಲಸ ಮಾಡಿದ್ದೇನೆ, ಒನ್​ ಇಂಡಿಯಾ ವೆಬ್​ಸೈಟ್​ನಲ್ಲಿ ನಾಲ್ಕೂವರೆ ವರ್ಷ ಕೆಲಸ ನಿರ್ವಹಿಸಿದ್ದೇನೆ. ಡಿಜಿಟಲ್ ವಿಭಾಗದಲ್ಲಿ ಕಳೆದ 6 ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಟಿವಿ 9 ಕನ್ನಡ ಡಿಜಿಟಲ್​ನಲ್ಲಿ ಸೀನಿಯರ್ ಸಬ್​ ಎಡಿಟರ್ ಆಗಿ ಕಳೆದ ಒಂದೂವರೆ ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಆಸಕ್ತಿಕರ ಕ್ಷೇತ್ರ ಟ್ರೆಕಿಂಗ್, ಸಂಗೀತ

Read More
Follow Us