AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪಿಒಕೆಯ ದೌರ್ಜನ್ಯಗಳಿಗೆ ಪಾಕಿಸ್ತಾನವನ್ನು ಹೊಣೆಗಾರರನ್ನಾಗಿ ಮಾಡಿ’: ಅಂತಾರಾಷ್ಟ್ರೀಯ ಸಮುದಾಯಕ್ಕೆ ಭಾರತ ಆಗ್ರಹ

ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿ (PoK) ಸಾರ್ವಜನಿಕರ ಪ್ರತಿಭಟನೆಯನ್ನು ಹತ್ತಿಕ್ಕಲು ಪಾಕಿಸ್ತಾನ ಸರ್ಕಾರ ನಡೆಸುತ್ತಿರುವ ಬಲಪ್ರಯೋಗ ಹಾಗೂ ಹಿಂಸಾಚಾರವನ್ನು ಭಾರತ ಇಂದು ತೀವ್ರವಾಗಿ ಖಂಡಿಸಿದೆ. ಪ್ರತಿಭಟನೆ ನಡೆಸುತ್ತಿರುವ ಸಾಮಾನ್ಯ ನಾಗರಿಕರನ್ನೇ ‘ಶತ್ರುಗಳು’ ಎಂದು ಕರೆಯುವ ಮೂಲಕ ಪಾಕಿಸ್ತಾನ ಅಲ್ಲಿನ ಜನರ ಮೇಲೆ ತೋರಿಸುತ್ತಿರುವ ನಿರ್ಲಕ್ಷ್ಯವನ್ನು ಬಹಿರಂಗಪಡಿಸಿದೆ ಎಂದು ಭಾರತ ಹೇಳಿದೆ.

ಪಿಒಕೆಯ ದೌರ್ಜನ್ಯಗಳಿಗೆ ಪಾಕಿಸ್ತಾನವನ್ನು ಹೊಣೆಗಾರರನ್ನಾಗಿ ಮಾಡಿ’: ಅಂತಾರಾಷ್ಟ್ರೀಯ ಸಮುದಾಯಕ್ಕೆ ಭಾರತ ಆಗ್ರಹ
Randhir Jaiswal Image Credit source: PTI
ಸುಷ್ಮಾ ಚಕ್ರೆ
|

Updated on: Jul 31, 2026 | 7:17 PM

Share

ನವದೆಹಲಿ, ಜುಲೈ 31: ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿ (PoK) ಸಾರ್ವಜನಿಕರ ಮೇಲಿನ ಕ್ರೂರ ದೌರ್ಜನ್ಯ ಮತ್ತು ಮಾನವ ಹಕ್ಕುಗಳ ಉಲ್ಲಂಘನೆಗಾಗಿ ಪಾಕಿಸ್ತಾನವನ್ನು ಅಂತಾರಾಷ್ಟ್ರೀಯ ಸಮುದಾಯವು ತಕ್ಷಣವೇ ಹೊಣೆಗಾರರನ್ನಾಗಿ ಮಾಡಬೇಕೆಂದು ಭಾರತ ಸರ್ಕಾರ ಬಲವಾಗಿ ಆಗ್ರಹಿಸಿದೆ. ಪಿಒಕೆಯಲ್ಲಿ ನಡೆಯುತ್ತಿರುವ ನಿಯಂತ್ರಣವಿಲ್ಲದ ಹಿಂಸಾಚಾರ, ಶಾಂತಿಯುತ ಪ್ರತಿಭಟನಾಕಾರರ ಹತ್ಯೆ ಮತ್ತು ಅಲ್ಲಿನ ಸ್ಥಳೀಯ ಪ್ರಜೆಗಳ ಹಕ್ಕುಗಳನ್ನು ಹತ್ತಿಕ್ಕುತ್ತಿರುವ ಪಾಕಿಸ್ತಾನಿ ಸರ್ಕಾರದ ನಡೆಯನ್ನು ಭಾರತದ ವಿದೇಶಾಂಗ ವ್ಯವಹಾರಗಳ ಸಚಿವಾಲಯ ತೀವ್ರವಾಗಿ ಖಂಡಿಸಿದೆ.

ವಿದೇಶಾಂಗ ವ್ಯವಹಾರಗಳ ಸಚಿವಾಲಯದ (MEA) ವಕ್ತಾರ ರಣಧೀರ್ ಜೈಸ್ವಾಲ್ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಪಿಒಕೆಯಲ್ಲಿ ಶಾಂತಿಯುತವಾಗಿ ಪ್ರತಿಭಟನೆ ನಡೆಸುತ್ತಿದ್ದ ಜನರ ವಿರುದ್ಧ ಪಾಕಿಸ್ತಾನ ಸರ್ಕಾರ ಕ್ರೂರ ಬಲಪ್ರಯೋಗ ಮಾಡುತ್ತಿದ್ದು, ಇದರಿಂದಾಗಿ 40ಕ್ಕೂ ಹೆಚ್ಚು ನಾಗರಿಕರು ಮೃತಪಟ್ಟಿದ್ದಾರೆ ಮತ್ತು ಅನೇಕರು ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ: ‘ಪಿಒಕೆ ಪ್ರತಿಭಟನಾಕಾರರು ಭಾರತದಂತೆಯೇ ನಮ್ಮ ಶತ್ರುಗಳು’; ಹತ್ಯೆಯನ್ನು ಸಮರ್ಥಿಸಿಕೊಂಡ ಪಾಕಿಸ್ತಾನದ ಸಚಿವ

“ಪಿಒಕೆಯ ಮುಗ್ಧ ಜನರ ಬಗ್ಗೆ ಪಾಕಿಸ್ತಾನಕ್ಕೆ ಇರುವ ತೀವ್ರ ನಿರ್ಲಕ್ಷ್ಯವು ಅವರ ರಕ್ಷಣಾ ಸಚಿವರೇ ಪ್ರತಿಭಟನಾನಿರತ ನಾಗರಿಕರನ್ನು ಶತ್ರುಗಳು ಎಂದು ಕರೆದ ಮೇಲೆ ಸಂಪೂರ್ಣವಾಗಿ ಬಯಲಾಗಿದೆ” ಎಂದು ರಣಧೀರ್ ಜೈಸ್ವಾಲ್ ಹೇಳಿದರು. ಭಾರತದಲ್ಲಿ ರಕ್ತ ಹರಿಸಲು ಪಾಕಿಸ್ತಾನಿ ಸರ್ಕಾರ ತರಬೇತಿ ನೀಡಿ, ಶಸ್ತ್ರಸಜ್ಜಿತಗೊಳಿಸಿದ್ದ ಮುಜಾಹಿದ್ದೀನ್ ಉಗ್ರರು ಈಗ ಅವರ ಮೇಲೆಯೇ ದಾಳಿ ನಡೆಸುತ್ತಿದ್ದಾರೆ, ಸರ್ಕಾರದ ವಿರುದ್ಧವೇ ಅಸ್ತ್ರಗಳನ್ನು ಬಳಸುತ್ತಿದ್ದಾರೆ ಎಂದು ಪಾಕಿಸ್ತಾನ ಪ್ರಧಾನಿಯವರ ರಾಜಕೀಯ ವ್ಯವಹಾರಗಳ ವಿಶೇಷ ಸಹಾಯಕರು ಬಹಿರಂಗವಾಗಿ ಒಪ್ಪಿಕೊಂಡಿದ್ದಾರೆ ಎಂದೂ ಜೈಸ್ವಾಲ್ ಉಲ್ಲೇಖಿಸಿದ್ದಾರೆ.

ಇದನ್ನೂ ಓದಿ: ಪಿಒಕೆಯ ಪ್ರಧಾನಿಯಾಗುವೆ, ಹೊಸ ಇಚ್ಛೆ ವ್ಯಕ್ತಪಡಿಸಿದ ಪಾಕಿಸ್ತಾನ ಮಾಜಿ ಪ್ರಧಾನಿ ನವಾಜ್ ಷರೀಫ್

ಪಿಒಕೆ ಪ್ರತಿಭಟನೆ:

ಕಳೆದ 4 ದಿನಗಳಿಂದ ಪಿಒಕೆಯಲ್ಲಿ ಪ್ರತಿಭಟನಾಕಾರರ ಮೇಲೆ ಪಾಕಿಸ್ತಾನಿ ಭದ್ರತಾ ಪಡೆಗಳು ನಡೆಸಿದ ಕ್ರೂರ ದೌರ್ಜನ್ಯಕ್ಕೆ 40ಕ್ಕೂ ಹೆಚ್ಚು ಜನರು ಬಲಿಯಾಗಿದ್ದು, 200ಕ್ಕೂ ಹೆಚ್ಚು ಜನ ಗಾಯಗೊಂಡಿದ್ದಾರೆ. ಮೃತರಲ್ಲಿ ಜಾಯಿಂಟ್ ಅವಾಮಿ ಆಕ್ಷನ್ ಕಮಿಟಿ (JAAC) ಕೇಂದ್ರ ಸಮಿತಿ ಸದಸ್ಯ ಉಮರ್ ನಜೀರ್ ಅವರ ಸಹೋದರ ಉಸ್ಮಾನ್ ನಜೀರ್ ಕೂಡ ಸೇರಿದ್ದಾರೆ. ಕಳೆದ ತಿಂಗಳಿನಿಂದ ಈ ಪ್ರದೇಶದಲ್ಲಿ ಅತಿಯಾದ ಬೆಲೆ ಏರಿಕೆ, ರಾಜಕೀಯ ತಾರತಮ್ಯ ಮತ್ತು ಅಲ್ಪಸಂಖ್ಯಾತರ ಮೇಲಿನ ದೌರ್ಜನ್ಯಗಳ ವಿರುದ್ಧ ವ್ಯಾಪಕ ಪ್ರತಿಭಟನೆಗಳು ನಡೆಯುತ್ತಿವೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us