ನನ್ನ ವಿರುದ್ಧ ಮಾಡಿರುವ ಲೈಂಗಿಕ ಅತ್ಯಾಚಾರದ ಆರೋಪಗಳು ಸುಳ್ಳು, ನಾನು ಅಮಾಯಕ: ಕೆವಿನ್ ಸ್ಪೇಸಿ, ಖ್ಯಾತ ಹಾಲಿವುಡ್ ನಟ
ತಾನು ನಿರ್ದೋಷಿ ಎಂದು ನ್ಯಾಯಾಲಯದಲ್ಲಿ ಹೇಳುವ ಮೊದಲು ಅವರು ತಮ್ಮ ಹೆಸರು ಮತ್ತು ವಯಸ್ಸನ್ನು ದೃಢೀಕರಿಸಿ ತಮ್ಮ ವಿರುದ್ಧ ಮಾಡಲಾಗಿರುವ ಲೈಂಗಿಕ ಅತ್ಯಾಚಾರದ ಮೂರು ಆರೋಪ ಮತ್ತು ವ್ಯಕ್ತಿಯೊಬ್ಬನಿಗೆ ಅವನ ಇಚ್ಛೆಗೆ ವಿರುದ್ಧವಾಗಿ ತನ್ನೊಂದಿಗೆ ಸೆಕ್ಸ್ ನಲ್ಲಿ ತೊಡಗುವಂತೆ ಬಲವಂತ ಮಾಡಿದ ಆರೋಪವನ್ನು ಅಲ್ಲಗಳೆದರು.
ಲಂಡನ್: ಇಲ್ಲಿನ ಓಲ್ಡ್ ಬೇಲಿ ನ್ಯಾಯಾಲಯವೊಂದರಲ್ಲಿ ಗುರುವಾರದಂದು ಖ್ಯಾತ ಹಾಲಿವುಡ್ ನಟ ಕೆವಿನ್ ಸ್ಪೇಸಿ (Kevin Spacey) ಮೂರು ಪುರುಷರ ಮೇಲೆ ಲೈಂಗಿಕ ಅತ್ಯಾಚಾರದ ಪ್ರಕರಣಗಳಲ್ಲಿ ತಾನು ನಿರ್ದೋಷಿ ಎಂದು ಹೇಳಿದರು. ಯುನೈಟೆಡ್ ಕಿಂಗ್ಡಮ್ (United Kingdom) ಉನ್ನತ ಕ್ರಿಮಿನಲ್ ಕೋರ್ಟ್ನ ಕಟೆಕಟೆಯಲ್ಲಿ ನೀಲಿ ವರ್ಣದ ಸೂಟ್ ಮತ್ತು ನೀಲಿ ಬಣ್ಣದ ಟೈ ಧರಿಸಿ ನಿಂತಿದ್ದ 62-ವರ್ಷ-ವಯಸ್ಸಿನ ನಟ ತಾನು ಅಮಾಯಕ (innocent) ಎಂದರು.
ತಾನು ನಿರ್ದೋಷಿ ಎಂದು ನ್ಯಾಯಾಲಯದಲ್ಲಿ ಹೇಳುವ ಮೊದಲು ಅವರು ತಮ್ಮ ಹೆಸರು ಮತ್ತು ವಯಸ್ಸನ್ನು ದೃಢೀಕರಿಸಿ ತಮ್ಮ ವಿರುದ್ಧ ಮಾಡಲಾಗಿರುವ ಲೈಂಗಿಕ ಅತ್ಯಾಚಾರದ ಮೂರು ಆರೋಪ ಮತ್ತು ವ್ಯಕ್ತಿಯೊಬ್ಬನಿಗೆ ಅವನ ಇಚ್ಛೆಗೆ ವಿರುದ್ಧವಾಗಿ ತನ್ನೊಂದಿಗೆ ಸೆಕ್ಸ್ ನಲ್ಲಿ ತೊಡಗುವಂತೆ ಬಲವಂತ ಮಾಡಿದ ಆರೋಪವನ್ನು ಅಲ್ಲಗಳೆದರು.
ಇಂಗ್ಲೆಂಡ್ ಮತ್ತು ವೇಲ್ಸ್ನಲ್ಲಿ ನಡೆಯುವ ಪ್ರಕರಣಗಳನ್ನು ನಿರ್ವಹಿಸುವ ದಿ ಕ್ರೌನ್ ಪ್ರಿನ್ಸ್ ಸರ್ವಿಸ್ ಹೇಳಿಕೆಯೊಂದನ್ನು ಬಿಡುಗಡೆ ಮಾಡಿ ಮೇನಲ್ಲಿ ಸ್ಪೇಸಿ ವಿರುದ್ಧ ಆರೋಪಪಟ್ಟಿ ಸಲ್ಲಿಸಲಾಗಿದೆ ಎಂದು ಹೇಳಿದೆ.
‘ದಿ ಯೂಸುಯಲ್ ಸಸ್ಪೆಕ್ಟ್ಸ್’ ಮತ್ತು ‘ಅಮೇರಿಕನ್ ಬ್ಯೂಟಿ’ ಚಿತ್ರಗಳಲ್ಲಿ ನೀಡಿದ ಅದ್ಭುತ ಅಭಿನಯಕ್ಕೆ ಎರಡು ಬಾರಿ ಆಸ್ಕರ್ ಪ್ರಶಸ್ತಿ ಪಡೆದಿರುವ ಸ್ಪೇಸಿ ವಿರುದ್ಧ ಕಳೆದ ತಿಂಗಳು ಪೊಲೀಸ್ ಆರೋಪಪಟ್ಟಿ ಸಲ್ಲಿಸಿದ ಕೆಲವೇ ದಿನಗಳ ಬಳಿಕ ಅವರೇ ಸ್ವಯಂಪ್ರೇರಿತರಾಗಿ ನ್ಯಾಯಾಲಯದ ಮುಂದೆ ಹಾಜರಾದರು.
ಕಳೆದ ತಿಂಗಳು ನಡೆದ ವಿಚಾರಣೆಯಲ್ಲಿ ಸ್ಪೇಸಿ ಅವರ ಲಾಯರ್ ಪ್ಯಾಟ್ರಿಕ್ ಗಿಬ್ಸ್ ಅವರು ಈ ಪ್ರಕರಣದಲ್ಲಿರುವ ಎಲ್ಲ ಕ್ರಿಮಿನಲ್ ಅಂಶಗಳನ್ನು ತನ್ನ ಕಕ್ಷಿದಾರ ಬಲವಾಗಿ ನಿರಾಕರಿಸುತ್ತಾರೆ ಎಂದು ಹೇಳಿದರು.
ಸ್ಪೇಸಿ ತಮ್ಮ ಬದುಕಿನಲ್ಲಿ ಮುಂದೆ ಸಾಗಬೇಕಾದರೆ ಪ್ರಕರಣದಲ್ಲಿ ಮಾಡಿರುವ ಎಲ್ಲ ಆರೋಪಗಳಿಗೆ ಅವರು ಉತ್ತರಿಸುವ ಅವಶ್ಯಕತೆಯಿದೆ, ಎಂದು ಆಗಿನ ವಿಚಾರಣೆಯಲ್ಲಿ ಗಿಬ್ಸ್ ಹೇಳಿದ್ದರು.
ಸ್ಪೇಸಿ ಅವರು ತಮ್ಮ ಕುಟುಂಬ ಹಾಗೂ 9-ವರ್ಷ-ವಯಸ್ಸಿನ ನಾಯಿಯೊಂದಿಗೆ ಯುಎಸ್ ನಲ್ಲಿ ವಾಸವಾಗಿದ್ದಾರೆ ಎಂದು ಸಹಾಯಕ ಮುಖ್ಯ ನ್ಯಾಯಾಧೀಶರಿಗೆ ತಿಳಿಸಲಾಯಿತು.
ನ್ಯಾಯಾಲಯದ ಎದುರು ಹಾಜರಾಗಲು ಖುದ್ದು ಸ್ಪೇಸಿಯೇ ಲಂಡನ್ ಗೆ ಆಗಮಿಸಿದ್ದಾರೆಂದು ಗೊತ್ತಾದ ಬಳಿಕ ಮ್ಯಾಜಿಸ್ಟ್ರೇಟ್ ಎರಡು ವಾರಗಳ ಹಿಂದೆ ನಟನ ಬಂಧನಕ್ಕೆ ಜಾರಿಗೊಳಿಸಲಾಗಿದ್ದ ವಾರಂಟನ್ನು ರದ್ದುಮಾಡಿದರು.
ಮಾರ್ಚ್ 2005 ರಲ್ಲಿ ಈಗ 40ರ ಪ್ರಾಯದವರಾಗಿರುವ ವ್ಯಕ್ತಿಯ ಮೇಲೆ ಸ್ಪೇಸಿ ಎರಡು ಬಾರಿ ಲೈಂಗಿಕ ಅತ್ಯಾಚಾರ ನಡೆಸಿದರು ಅನ್ನೋದು ಅವರ ವಿರುದ್ಧ ಮಾಡಲಾಗಿರುವ ಮೊದಲ ಎರಡು ಆರೋಪಗಳಾಗಿವೆ.
ಸ್ಪೇಸಿ ವಿರುದ್ಧ ದಾಖಲಾಗಿರುವ ಮೂರನೇ ಆರೋಪದ ಪ್ರಕಾರ, ಈಗ 30ರ ಪ್ರಾಯದವನಾಗಿರುವ ವ್ಯಕ್ತಿಯ ಮೇಲೆ ಅವರು ಲಂಡನಲ್ಲೇ 2008 ಆಗಸ್ಟ್ ನಲ್ಲಿ ಲೈಂಗಿಕ ಅತ್ಯಾಚಾರ ನಡೆಸಿದರು.
ಮೂವತ್ತು ವರ್ಷ ವಯಸ್ಸಿನ ವ್ಯಕ್ತಿಯೊಂದಿಗೆ ಅವನ ಸಮ್ಮತಿಯಿಲ್ಲದೆ ಬಲವಂತದಿಂದ ಸಲಿಂಗ ಕಾಮದಲ್ಲಿ ತೊಡಗುವಂತೆ ಮಾಡಿದ್ದು ಸ್ಪೇಸಿ ಮೇಲೆ ಹೊರಿಸಿರುವ ಆರೋಪವಾಗಿದೆ.
ಸ್ಪೇಸಿ ವಿರುದ್ಧ ಮಾಡಿರುವ ನಾಲ್ಕನೇ ಆರೋಪ ಇಂಗ್ಲೆಂಡ್ ಪಶ್ಚಿಮ ಭಾಗಕ್ಕಿರುವ ಗ್ಲೌಸೆಸ್ಟರ್ಶೈರ್ ನಲ್ಲಿ ಏಪ್ರಿಲ್ 2013 ರಲ್ಲಿ ನಡೆಯಿತು ಎಂದು ಹೇಳಲಾಗಿದೆ.
ಇಂಗ್ಲಿಷ್ ಕಾನೂನಿನ ಪ್ರಕಾರ ಯಾವುದೇ ಸಂತ್ರಸ್ತನ ಗುರುತು ಬಹಿರಂಗಪಡಿಸುವಂತಿಲ್ಲ.
‘ನ್ಯಾಯಾಲಯ ತಿಳಿಸುವ ದಿನಾಂಕದಂದು ನಾನೇ ಖುದ್ದಾಗಿ ಕೋರ್ಟ್ ಎದುರು ಹಾಜರಾಗಿ ಆರೋಪಗಳ ವಿರುದ್ಧ ನನ್ನನ್ನು ಸಮರ್ಥಿಸಿಕೊಳ್ಳುತ್ತೇನೆ. ನಾನು ಅಮಾಯಕತೆಯನ್ನು ಸಾಬೀತು ಮಾಡುವ ಭರವಸೆ ನನಗಿದೆ,’ ಎಂದು ಸ್ಪೇಸಿ ಹೇಳಿದ್ದಾರೆ.
ಸ್ಪೇಸಿ, 2004 ರಿಂದ 2015 ರವರೆಗೆ ಲಂಡನಲ್ಲಿರುವ ದಿ ಓಲ್ಡ್ ವಿಕ್ ರಂಗಮಂದಿರದಲ್ಲಿ ಕ್ರಿಯೇಟಿವ್ ಡೈರೆಕ್ಟರ್ ಆಗಿದ್ದರು.
#MeToo ಆಂದೋಲನ ಜೋರು ಹಿಡಿದ ದಿನಗಳಲ್ಲಿ ಸ್ಪೇಸಿ ವಿರುದ್ಧ ಆರೋಪಗಳನ್ನು ಮಾಡಲಾಗಿತ್ತು. ಆಗಲೇ ಸಿನಿಮಾ ನಟ ನಟಿಯರನ್ನೊಳಗೊಂಡ ಹಲವಾರು ಲೈಂಗಿಕ ಹಗರಣಗಳು ಬಯಲಿಗೆ ಬಂದವು.
ಹಾಗಾಗೇ, ಲಂಡನ್ ಮೆಟ್ರೊಪಾಲಿಟನ್ ಪೊಲೀಸ್ ತನಿಖೆಯನ್ನು ಕೈಗೆತ್ತಿಕೊಂಡು ದಿ ಓಲ್ಡ್ ವಿಕ್ ಥೇಟರ್ ನಲ್ಲಿ ಸ್ಪೇಸಿ ಕೆಲಸ ಮಾಡುತ್ತಿದ್ದ ದಿನಗಳ ಪರಿಶೀಲನೆ ನಡೆಸಿತು. ಸ್ಪೇಸಿ ವಿರುದ್ಧ 2017ರಲ್ಲಿ ಆರೋಪಗಳನ್ನು ಮಾಡಿದ ನಂತರ ನೆಟ್ ಫ್ಲಿಕ್ಸ್ ನಲ್ಲಿ ಪ್ರಸಾರವಾಗುತ್ತಿದ್ದ ‘ಹೌಸ್ ಆಫ್ ಕಾರ್ಡ್ಸ್’ ಡ್ರಾಮಾದ ಅಂತಿಮ ಸೀಸನ್ ನಿಂದ ಅವರನ್ನು ಕೈಬಿಡಲಾಯಿತು.