ಗಾಳಿಯಲ್ಲಿ 20 ನಿಮಿಷಗಳೊಳಗೆ ದುರ್ಬಲಗೊಳ್ಳುತ್ತದೆ ಕೊವಿಡ್ ವೈರಾಣು; ಮಾಸ್ಕ್ ಹಾಗೂ ಅಂತರ ಕಾಪಾಡುವುದರ ಪ್ರಾಮುಖ್ಯತೆ ವಿವರಿಸಿದ ಅಧ್ಯಯನ
ಮಾಸ್ಕ್ ಧರಿಸುವುದು, ದೈಹಿಕ ಅಂತರ ಕಾಪಾಡಿಕೊಳ್ಳುವುದು ಕೊವಿಡ್ ಹರಡುವಿಕೆ ತಡೆಗಟ್ಟಲು ಪ್ರಮುಖ ಸಾಧನ ಎಂದು ಪರಿಗಣಿಸಲಾಗಿದೆ. ಇದಕ್ಕೆ ಪೂರಕವಾಗಿ ಅಧ್ಯಯನವೊಂದು ಗಾಳಿಯಲ್ಲಿ ಕೊವಿಡ್ ವೈರಾಣು 20 ನಿಮಿಷಗಳೊಳಗೆ ತನ್ನ ಸಾಮರ್ಥ್ಯ ಕಳೆದುಕೊಳ್ಳುತ್ತದೆ ಎಂದು ತಿಳಿಸಿದೆ.
ಮಾಸ್ಕ್ ಧರಿಸುವುದು, ದೈಹಿಕ ಅಂತರ ಕಾಪಾಡಿಕೊಳ್ಳುವುದು ಕೊವಿಡ್ ಹರಡುವಿಕೆ ತಡೆಗಟ್ಟಲು ಪ್ರಮುಖ ಸಾಧನ ಎಂದು ಪರಿಗಣಿಸಲಾಗಿದೆ. ಇದಕ್ಕೆ ಪೂರಕವಾಗಿ ಅಧ್ಯಯನವೊಂದು ಗಾಳಿಯಲ್ಲಿ ಕೊವಿಡ್ ವೈರಾಣು 20 ನಿಮಿಷಗಳೊಳಗೆ ತನ್ನ ಬಹುತೇಕ ಸಾಮರ್ಥ್ಯ ಕಳೆದುಕೊಳ್ಳುತ್ತದೆ ಎಂದು ತಿಳಿಸಿದೆ. ಕೊರೊನಾ ವೈರಸ್ ಗಾಳಿಯಲ್ಲಿ ಪ್ರಭಾವಶಾಲಿಯಾಗಿರುವುದಿಲ್ಲ ಮತ್ತು ದೂರದಲ್ಲಿರುವವರಿಗೆ ತಗುಲುವ ಸಾಧ್ಯತೆ ಬಹಳ ಕಡಿಮೆ ಎಂದು ಬ್ರಿಸ್ಟಲ್ ವಿಶ್ವವಿದ್ಯಾಲಯದ ಏರೋಸಾಲ್ ರಿಸರ್ಚ್ ಸೆಂಟರ್ನ ಅಧ್ಯಯನ ಹೇಳಿದೆ. ವೈರಸ್ ಗಾಳಿಯಲ್ಲಿ 20 ನಿಮಿಷಗಳ ಒಳಗೆ ತನ್ನ 90 ಪ್ರತಿಶತ ಸಾಮರ್ಥ್ಯವನ್ನು ಕಳೆದುಕೊಳ್ಳುತ್ತದೆ. ಅಲ್ಲದೇ ಗಾಳಿಯಲ್ಲಿ ಕೇವಲ ಐದು ನಿಮಿಷಗಳ ಒಳಗೆ ವೈರಸ್ ಬಹುತೇಕ ಶಕ್ತಿ ಕಳೆದುಕೊಂಡಿರುತ್ತದೆ ಎಂದು ಅಧ್ಯಯನದಲ್ಲಿ ತಿಳಿದುಬಂದಿದೆ. ಈ ಅಧ್ಯಯನದ ಮೂಲಕ ವೈರಸ್ ಕಡಿಮೆ ಅಂತರದಲ್ಲಿದ್ದವರಿಗೆ ಹರಡುತ್ತದೆ ಎಂಬುದನ್ನು ಸ್ಪಷ್ಟಪಡಿಸಿದೆ. ಅಲ್ಲದೇ ಇದಕ್ಕಾಗಿ ದೈಹಿಕ ಅಂತರ ಕಾಪಾಡುವುದು ಮತ್ತು ಮಾಸ್ಕ್ಗಳನ್ನು ಧರಿಸುವುದು ಪರಿಣಾಮಕಾರಿ ಎಂಬುದು ಮತ್ತೆ ಸಾಬೀತಾಗಿದೆ.
ವೈರಸ್ ಹರಡುವುದರ ಬಗ್ಗೆ ಯುರೋಪ್ನಲ್ಲಿ ಹಲವು ರೀತಿಯ ಚರ್ಚೆ ನಡೆಯುತ್ತಿವೆ. ಈ ಅಧ್ಯಯನದ ಬಳಿಕ ಆ ಚರ್ಚೆಗಳಿಗೆ ಹೊಸ ನೋಟ ಸಿಕ್ಕಿದಂತಾಗಿದೆ. ಅಧ್ಯಯನದಲ್ಲಿ ಪ್ರಮುಖವಾಗಿ ಇತ್ತೀಚೆಗೆ ಕಂಡುಬಂದ ಕೊರೊನಾದ ಒಮಿಕ್ರಾನ್ ರೂಪಾಂತರಿಯನ್ನೂ ಸೇರಿಸಿ ಮೂರು ರೂಪಾಂತರಗಳನ್ನು ಪರೀಕ್ಷೆಗೆ ಒಳಪಡಿಸಲಾಗಿದೆ. ಉಳಿದ ವೈರಸ್ಗಳು ಇವಕ್ಕಿಂತ ಭಿನ್ನವಾದ ಸ್ವರೂಪ ಹೊಂದಿರುವುದಿಲ್ಲ ಎಂದು ಸಂಶೋಧಕರು ಹೇಳಿದ್ದಾರೆ. ಸಂಶೋಧನಾ ಕೇಂದ್ರದ ನಿರ್ದೇಶಕ ಜೊನಾಥನ್ ರೀಡ್ ಸಂದರ್ಶನವೊಂದರಲ್ಲಿ ಮಾತನಾಡುತ್ತಾ, ವೈರಸ್ನ ಸ್ವರೂಪ ವಿವರಿಸಿದ್ದಾರೆ.
ಜನರು ಅಂತರ ಕಾಯ್ದುಕೊಂಡಾಗ ಅಥವಾ ಸೋಂಕಿತ ವ್ಯಕ್ತಿಯಿಂದ ದೂರವಿದ್ದಷ್ಟೂ ಸೋಂಕು ಹರಡುವ ಸಾಧ್ಯತೆ ಬಹಳ ಕಡಿಮೆ. ಕಾರಣ, ಗಾಳಿಯಲ್ಲಿ ವೈರಸ್ ದುರ್ಬಲಗೊಳ್ಳುತ್ತದೆ ಎಂದು ಜೊನಾಥನ್ ಹೇಳಿದ್ದನ್ನು ಗಾರ್ಡಿಯನ್ ಪತ್ರಿಕೆ ವರದಿ ಮಾಡಿದೆ. ಶ್ವಾಸಕೋಶದಿಂದ ಅಥವಾ ದೇಹದಿಂದ ಹೊರಬಿದ್ದ ವೈರಸ್ ಗಾಳಿಯಲ್ಲಿ ದುರ್ಬಲವಾಗುತ್ತದೆ. ಇದು ಜನರಿಗೆ ಸೋಂಕು ಹರಡುವ ಸಾಧ್ಯತೆಯನ್ನು ಕಡಿಮೆಗೊಳಿಸುತ್ತದೆ ಎಂದು ಹೇಳಲಾಗಿದೆ.
ಸಂಶೋಧನೆಯಲ್ಲಿ ಮತ್ತೊಂದು ಅಚ್ಚರಿಯ ಅಂಶ ಬೆಳಕಿಗೆ ಬಂದಿದೆ. ಗಾಳಿಯ ಆರ್ದ್ರತೆ (ಹ್ಯುಮಿಡಿಟಿ) ಆಧಾರದ ಮೇಲೂ ವೈರಸ್ ದುರ್ಬಲವಾಗುವುದು ನಿರ್ಧಾರವಾಗುತ್ತದೆ. ಶವರ್ ಕೊಠಡಿಗಳಿಗಿಂತ ಆಫೀಸ್ನಲ್ಲಿ ವೈರಸ್ ಬೇಗ ಶಕ್ತಿ ಕಳೆದುಕೊಳ್ಳುತ್ತದೆ ಎಂದು ಹೇಳಲಾಗಿದೆ. ಅರ್ಥಾತ್ ಗಾಳಿಯ ಚಲನೆ ಹೆಚ್ಚಿದ್ದಷ್ಟೂ ವೈರಸ್ ದುರ್ಬಲವಾಗುತ್ತದೆ. ಹಾಗೆಯೇ ಗಾಳಿಯ ಉಷ್ಣತೆಯು ವೈರಸ್ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ ಎಂದೂ ತಿಳಿಸಲಾಗಿದೆ.
ಇದನ್ನೂ ಓದಿ:
Magh mela ಕೊವಿಡ್ ಉಲ್ಬಣದ ನಡುವೆಯೇ ಪ್ರಯಾಗ್ರಾಜ್ ಮಾಘ ಮೇಳದಲ್ಲಿ ಸಾವಿರಾರು ಮಂದಿ ಭಾಗಿ