
ಜೆರುಸಲೆಮ್, ನವೆಂಬರ್ 22: ಇಸ್ರೇಲ್ನ ಮುಂದಿನ ಸರ್ಕಾರ ರಚನೆಯ ಜವಾಬ್ದಾರಿ ಹೊತ್ತಿರುವ ಗಾಡಿ ಐಸೆನ್ಕೋಟ್ ಮೈತ್ರಿ ಮಾತುಕತೆಗಾಗಿ ಹಂಗಾಮಿ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರ ಬಲಪಂಥೀಯ ಲಿಕುಡ್ ಪಕ್ಷವನ್ನು ಆಹ್ವಾನಿಸಿದ್ದಾರೆ ಎಂದು ಅವರ ಪಕ್ಷ ತಿಳಿಸಿದೆ. ಭಾನುವಾರದಿಂದ ಆರಂಭವಾಗಲಿರುವ ಈ ಮಾತುಕತೆಗಳು “ಸಾಧ್ಯವಾದಷ್ಟು ವಿಶಾಲ ತಳಹದಿಯ ಸರ್ಕಾರವನ್ನು ರಚಿಸುವ ಪ್ರಾಮಾಣಿಕ ಬದ್ಧತೆಯನ್ನು” ಪ್ರತಿಬಿಂಬಿಸುತ್ತವೆ ಎಂದು ಐಸೆನ್ಕೋಟ್ ಅವರ ಮಧ್ಯಮ ಪಂಥೀಯ ‘ಯಶಾರ್’ ಪಕ್ಷ ಹೇಳಿದೆ.
ಅಕ್ಟೋಬರ್ನಲ್ಲಿ ನಡೆದ ಚುನಾವಣೆಯಲ್ಲಿ ಯಾವುದೇ ಬಣಕ್ಕೂ ಸ್ಪಷ್ಟ ಬಹುಮತ ಸಿಗದ ಕಾರಣದಿಂದ ನೆತನ್ಯಾಹು ಅವರ ಬದಲು ನೂತನ ಸರ್ಕಾರವನ್ನು ರಚಿಸಲು ಮಾಜಿ ಸೇನಾ ಮುಖ್ಯಸ್ಥ ಐಸೆನ್ಕೋಟ್ ಅವರಿಗೆ ಮುಂದಿನ ತಿಂಗಳವರೆಗೆ ಕಾಲಾವಕಾಶವಿದೆ. ಅತಿ-ಸಾಂಪ್ರದಾಯಿಕ ಪಕ್ಷಗಳೊಂದಿಗೆ ಮೈತ್ರಿ ಮಾಡಿಕೊಳ್ಳಬೇಕೇ, ಅರಬ್ ಬಹುಸಂಖ್ಯಾತ ಪಕ್ಷಗಳೊಂದಿಗೆ ಸೇರಬೇಕೇ ಅಥವಾ ನೆತನ್ಯಾಹು ಅವರ ಬಣದೊಂದಿಗೆ ರಾಷ್ಟ್ರೀಯ ಏಕತಾ ಸರ್ಕಾರವನ್ನು ರಚಿಸಬೇಕೇ ಎಂಬ ವಿಷಯದಲ್ಲಿ ಐಸೆನ್ಕೋಟ್ ಅವರ ವಿಶಾಲ ಬಣದಲ್ಲಿ ಭಿನ್ನಾಭಿಪ್ರಾಯಗಳು ತಲೆದೋರಿರುವ ನಡುವೆಯೇ ಶನಿವಾರದ ಈ ಘೋಷಣೆ ಹೊರಬಿದ್ದಿದೆ.
“ಹೊಸ ಸರ್ಕಾರವನ್ನು ರಚಿಸುವ ಪ್ರತಿಯೊಂದು ಆಯ್ಕೆಯನ್ನು ಅನ್ವೇಷಿಸುವ ಪ್ರಯತ್ನದಲ್ಲಿ, ಯಶಾರ್ ಪಕ್ಷದ ಅಧ್ಯಕ್ಷ ಗಾಡಿ ಐಸೆನ್ಕೋಟ್ ಅವರು ನಾಳೆ ನಿಗದಿಯಾಗಿರುವ ಸಭೆಯಿಂದ ಆರಂಭವಾಗುವ ಸುದೀರ್ಘ ಸರಣಿ ಮಾತುಕತೆಗಳಿಗೆ ಲಿಕುಡ್ ಪಕ್ಷದ ಪ್ರತಿನಿಧಿಗಳನ್ನು ಆಹ್ವಾನಿಸುವಂತೆ ಪಕ್ಷದ ಸಂಧಾನ ತಂಡಕ್ಕೆ ಸೂಚಿಸಿದ್ದಾರೆ” ಎಂದು ಪಕ್ಷವು ಪ್ರಕಟಣೆಯಲ್ಲಿ ತಿಳಿಸಿದೆ.
ಇದನ್ನೂ ಓದಿ: ನೆತನ್ಯಾಹುಗೆ ಅಧಿಕಾರ ಕಳೆದುಕೊಳ್ಳುವ ಭೀತಿ: ಐಸೆನ್ಕೋಟ್ಗೆ 67 ಸಂಸದರ ಬೆಂಬಲ, ಯಾರಾಗ್ತಾರೆ ಇಸ್ರೇಲ್ ಪ್ರಧಾನಿ?
ಇಸ್ರೇಲ್ನ 120 ಸದಸ್ಯ ಬಲದ ಸಂಸತ್ತಿನಲ್ಲಿ (ನೆಸೆಟ್) ಬಹುಮತಕ್ಕೆ 61 ಸ್ಥಾನಗಳ ಅಗತ್ಯವಿದೆ. ಆದರೆ, ಚುನಾವಣಾ ಫಲಿತಾಂಶದ ಬಳಿಕ ರಾಜಕೀಯ ಧ್ರುವೀಕರಣದಿಂದಾಗಿ ಸರ್ಕಾರ ರಚನೆ ಕಗ್ಗಂಟಾಗಿ ಪರಿಣಮಿಸಿದೆ. ತೀವ್ರ ಬಲಪಂಥೀಯ ಪಕ್ಷಗಳ ಅವಲಂಬನೆಯನ್ನು ತಪ್ಪಿಸಲು ಅಥವಾ ಸ್ಥಿರ ಸರ್ಕಾರವನ್ನು ನೀಡಲು ಲಿಕುಡ್ ಮತ್ತು ಮಧ್ಯಮ ಪಂಥೀಯ ಬಣಗಳ ನಡುವೆ ಒಮ್ಮತ ಮೂಡಿಸುವ ಪ್ರಯತ್ನಗಳು ನಡೆಯುತ್ತಿವೆ.
ಮಾಜಿ ಪ್ರಧಾನಿ ನಫ್ತಾಲಿ ಬೆನೆಟ್ ವಿರೋಧ:
ಐಸೆನ್ಕೋಟ್ ಬಣದ ಪ್ರಮುಖ ವ್ಯಕ್ತಿಯಾಗಿರುವ ಮಾಜಿ ಪ್ರಧಾನಿ ನಫ್ತಾಲಿ ಬೆನೆಟ್ ಶನಿವಾರ ಮಾತನಾಡಿ, “ಐಸೆನ್ಕೋಟ್ ನೇತೃತ್ವದ ಝಿಯೋನಿಸ್ಟ್ ಏಕತಾ ಸರ್ಕಾರ ರಚನೆಗೆ ಕರೆ ನೀಡಿದ್ದು, ನೆತನ್ಯಾಹು ಅಥವಾ ಅವರ ಬಣದೊಂದಿಗೆ ಕೈಜೋಡಿಸಲು ತಮ್ಮ ಪಕ್ಷ ನಿರಾಕರಿಸುತ್ತದೆ” ಎಂದು ಸ್ಪಷ್ಟಪಡಿಸಿದ್ದಾರೆ.
ಆದರೆ, ಇಸ್ರೇಲ್ನ ಭದ್ರತೆಯನ್ನು ಖಾತರಿಪಡಿಸಲು ರಾಷ್ಟ್ರೀಯ ಏಕತಾ ಸರ್ಕಾರದ ಅಗತ್ಯವಿದೆ ಎಂದು ಹೇಳುತ್ತಿರುವ ನೆತನ್ಯಾಹು, ಅದಕ್ಕಾಗಿ ತೀವ್ರ ಪ್ರಯತ್ನ ನಡೆಸುತ್ತಿದ್ದಾರೆ. ಐಸೆನ್ಕೋಟ್ ಅವರ ಘೋಷಣೆಯ ಬೆನ್ನಲ್ಲೇ, ಲಿಕುಡ್ ಪಕ್ಷವು ಐಸೆನ್ಕೋಟ್ ಬಣದೊಂದಿಗೆ ಸರ್ಕಾರ ರಚಿಸುವ ಕುರಿತು ತನ್ನ ನಿಲುವನ್ನು ಸ್ಪಷ್ಟಪಡಿಸಿದೆ.
ಇದನ್ನೂ ಓದಿ: ಇಸ್ರೇಲ್ ರಾಜಕೀಯದಲ್ಲಿ ಮಹತ್ವದ ತಿರುವು: ಸರ್ಕಾರ ರಚಿಸುವ ಹೊಣೆ ಐಸೆನ್ಕೋಟ್ಗೆ, ನೆತನ್ಯಾಹುಗೆ ಹಿನ್ನಡೆ
ನೆತನ್ಯಾಹು ಅವರ ಲಿಕುಡ್ ಪಕ್ಷದ ಸದಸ್ಯರೊಂದಿಗೆ ಸರ್ಕಾರ ರಚಿಸಲು ತಾವು ಮುಕ್ತವಾಗಿರುವುದಾಗಿ ಐಸೆನ್ಕೋಟ್ ಸೂಚಿಸಿದ್ದರೂ, ಸ್ವತಃ ನೆತನ್ಯಾಹು ನೇತೃತ್ವದ ಸರ್ಕಾರದಲ್ಲಿ ಸೇವೆ ಸಲ್ಲಿಸುವುದನ್ನು ಈ ಹಿಂದೆ ತಳ್ಳಿಹಾಕಿದ್ದರು.
ಮೈತ್ರಿ ಮಾತುಕತೆಗೆ ಆಹ್ವಾನ ನೀಡಲಾಗಿದ್ದರೂ, ಅಧಿಕಾರ ಹಂಚಿಕೆ, ಪ್ರಮುಖ ಸಚಿವಾಲಯಗಳ ಹಂಚಿಕೆ, ನ್ಯಾಯಾಂಗ ಸುಧಾರಣೆಗಳು ಮತ್ತು ಭದ್ರತಾ ನೀತಿಗಳ ವಿಷಯದಲ್ಲಿ ಐಸೆನ್ಕೋಟ್ ಹಾಗೂ ನೆತನ್ಯಾಹು ನಡುವೆ ಭಿನ್ನಾಭಿಪ್ರಾಯಗಳಿವೆ. ವಿಶೇಷವಾಗಿ, ಪ್ರಧಾನಿ ಹುದ್ದೆ ಮತ್ತು ಸಮ್ಮಿಶ್ರ ಸರ್ಕಾರದ ನೀತಿ ನಿರೂಪಣೆಗಳ ಕುರಿತು ಲಿಕುಡ್ ಪಕ್ಷ ಯಾವ ನಿಲುವು ತಳೆಯಲಿದೆ ಎಂಬುದು ಕುತೂಹಲ ಮೂಡಿಸಿದೆ.
ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ