ವೇಗವಾಗಿ ಕರಗುತ್ತಿರುವ ಹಿಮಾಲಯ ನೀಡುತ್ತಿದೆ ಗಂಭೀರ ಎಚ್ಚರಿಕೆ: ನೇಪಾಳದಲ್ಲಿ ಬಾಂಬ್​​ನಂತೆ ಅಪ್ಪಳಿಸಿದ ಹಿಮದ ತುಂಡುಗಳು

Nepal Flood: ನೇಪಾಳ-ಟಿಬೆಟ್ ಗಡಿಯಲ್ಲಿ ಬೃಹತ್ ಹಿಮನದಿ ತುಂಡಾಗಿ ಭೀಕರ ಜಲಪ್ರಳಯ ಸಂಭವಿಸಿದೆ. ಹಿಮಾಲಯ ಕರಗುವಿಕೆಯ ವೇಗ ಹೆಚ್ಚಿರುವುದು ಮತ್ತು ಭೂಕಂಪ ಇದರ ಪ್ರಚೋದಕವಾಗಿ ವಿಜ್ಞಾನಿಗಳು ವಿವರಿಸಿದ್ದಾರೆ. ಈ ದುರಂತವು ಜಲವಿದ್ಯುತ್ ಸ್ಥಾವರಗಳು, ಫ್ರೆಂಡ್‌ಶಿಪ್ ಸೇತುವೆ ಸೇರಿದಂತೆ ಮೂಲಸೌಕರ್ಯಗಳಿಗೆ ತೀವ್ರ ಹಾನಿಯುಂಟು ಮಾಡಿದೆ. ಜಾಗತಿಕ ತಾಪಮಾನ ಏರಿಕೆಯಿಂದ ಮತ್ತಷ್ಟು ಪ್ರವಾಹಗಳ ಭೀತಿ ಇದೆ.

ವೇಗವಾಗಿ ಕರಗುತ್ತಿರುವ ಹಿಮಾಲಯ ನೀಡುತ್ತಿದೆ ಗಂಭೀರ ಎಚ್ಚರಿಕೆ: ನೇಪಾಳದಲ್ಲಿ ಬಾಂಬ್​​ನಂತೆ ಅಪ್ಪಳಿಸಿದ ಹಿಮದ ತುಂಡುಗಳು
ನೇಪಾಳ ಪ್ರವಾಹ

Updated on: Aug 27, 2026 | 10:33 AM

ಕಠ್ಮಂಡು, ಆಗಸ್ಟ್​ 27: ನೇಪಾಳ-ಟಿಬೆಟ್ ಗಡಿಭಾಗದಲ್ಲಿ ಸಂಭವಿಸಿದ ವಿನಾಶಕಾರಿ ಜಲಪ್ರಳಯದ ಹಿಂದಿನ ನಿಖರ ವೈಜ್ಞಾನಿಕ ಕಾರಣವನ್ನು ಅಂತಾರಾಷ್ಟ್ರೀಯ ಭೂವಿಜ್ಞಾನಿಗಳು ಮತ್ತು ಹಿಮನದಿ ತಜ್ಞರು ಬಹಿರಂಗಪಡಿಸಿದ್ದಾರೆ. ಉಪಗ್ರಹ ಚಿತ್ರಗಳ ವಿಶ್ಲೇಷಣೆಯ ಪ್ರಕಾರ, ಸುಮಾರು 17 ಸಾವಿರ ಅಡಿ ಎತ್ತರದಲ್ಲಿದ್ದ ಬರೋಬ್ಬರಿ 2 ಸಾವಿರ ಅಡಿ ಅಗಲದ ಬೃಹತ್ ಹಿಮನದಿಯ ತುಂಡು ಏಕಾಏಕಿ ಕಳಚಿ ಬಿದ್ದ ಪರಿಣಾಮ ಈ ಮಾರಕ ಪ್ರವಾಹ(Flood) ಸೃಷ್ಟಿಯಾಗಿದೆ.

ಈ ದೈತ್ಯ ಹಿಮರಾಶಿ ಸುಮಾರು 4 ಸಾವಿರ ಅಡಿ ಆಳದ ಕಣಿವೆಗೆ (1 ಕಿ.ಮೀ ಗಿಂತ ಹೆಚ್ಚು ಎತ್ತರದಿಂದ) ಅಪ್ಪಳಿಸಿದಾಗ, ಅಪಾರ ಪ್ರಮಾಣದ ಮಂಜುಗಡ್ಡೆ ಪುಡಿಯಾಗಿ ನೀರು, ಬಂಡೆಗಳು ಮತ್ತು ಮಣ್ಣಿನೊಂದಿಗೆ ಬೆರೆತು ಭೋಟೆಕೋಶಿ ಹಾಗೂ ಲ್ಹೆಂಡೆ ಖೋಲಾ ನದಿಗಳಿಗೆ ಅಪ್ಪಳಿಸಿತು.

ಬಾಂಬ್ ಸ್ಫೋಟದಂತೆ ಅಪ್ಪಳಿಸಿದ ಹಿಮ
ವೈಜ್ಞಾನಿಕ ವಿಶ್ಲೇಷಣೆ: ಕೆನಡಾದ ಕ್ಯಾಲ್ಗರಿ ವಿಶ್ವವಿದ್ಯಾಲಯದ ಭೂವಿಜ್ಞಾನಿ ಡೇನಿಯಲ್ ಶುಗರ್ ಪ್ರಕಾರ, ಹಿಮನದಿಯಲ್ಲಾದ ಅಗಾಧ ಬಿರುಕಿನಿಂದ ಈ ಬೃಹತ್ ಮಂಜುಗಡ್ಡೆ ಕಳಚಿಬಿದ್ದಿದೆ. ಕಣಿವೆಯ ತಳಭಾಗವು ಬಾಂಬ್ ಸ್ಫೋಟಗೊಂಡ ಜಾಗದಂತೆ ಸಂಪೂರ್ಣವಾಗಿ ನುಚ್ಚುನೂರಾಗಿದೆ.

ಅಪಾರ ಸಂಭಾವ್ಯ ಶಕ್ತಿ: ಡುಂಡೀ ವಿಶ್ವವಿದ್ಯಾಲಯದ ವಿಜ್ಞಾನಿ ಸೈಮನ್ ಕುಕ್ ವಿವರಿಸುವಂತೆ, ಎತ್ತರದಿಂದ ಬೀಳುವಾಗ ಉಂಟಾದ ಅಗಾಧ ಘರ್ಷಣೆಗೆ ಮಂಜುಗಡ್ಡೆ ಕ್ಷಣಾರ್ಧದಲ್ಲಿ ಕರಗಿ ನೀರಿನ ಜೊತೆ ಕಲ್ಲು-ಮಣ್ಣುಗಳ ಬೃಹತ್ ಗೋಡೆಯಾಗಿ ರೂಪಾಂತರಗೊಂಡು ಕೆಳಭಾಗದ ಗ್ರಾಮಗಳನ್ನು ಆವರಿಸಿತು.

ಮತ್ತಷ್ಟು ಓದಿ: ಪ್ರವಾಹ ಪೀಡಿತ ನೇಪಾಳಕ್ಕೆ ಭಾರತದಿಂದ 10 ಟನ್ ಮಾನವೀಯ ನೆರವು ರವಾನೆ

ಬುಧವಾರ ಮುಂಜಾನೆ ಗಡಿ ಭಾಗದಲ್ಲಿ ಸಂಭವಿಸಿದ 4.4ತೀವ್ರತೆಯ ಭೂಕಂಪವು ಈ ದುರ್ಬಲ ಹಿಮನದಿ ಕುಸಿಯಲು ಪ್ರಚೋದಕ (Trigger) ಕಾರಣವಾಗಿರಬಹುದು ಎಂದು ಶಂಕಿಸಲಾಗಿದೆ.

ಮೂಲಸೌಕರ್ಯ ಮತ್ತು ಜಲವಿದ್ಯುತ್‌ಗೆ ಭಾರಿ ಹೊಡೆತ
ಪ್ರವಾಹದ ಅಬ್ಬರಕ್ಕೆ ರಸುವಾಗಧಿ ಸೇರಿದಂತೆ ಕಣಿವೆಯಲ್ಲಿದ್ದ ಪ್ರಮುಖ ಜಲವಿದ್ಯುತ್ ಸ್ಥಾವರಗಳ ಟರ್ಬೈನ್‌ಗಳು ಮತ್ತು ಡ್ಯಾಮ್‌ಗಳು ಹೂಳಿನಿಂದ ಮುಚ್ಚಿಹೋಗಿದ್ದು, ಸುಮಾರು 430 ಮೆಗಾವ್ಯಾಟ್ ವಿದ್ಯುತ್ ಉತ್ಪಾದನೆ ಸಂಪೂರ್ಣ ಸ್ಥಗಿತಗೊಂಡಿದೆ.

ಫ್ರೆಂಡ್‌ಶಿಪ್ ಸೇತುವೆ ನಾಶ: ಕಳೆದ ವರ್ಷವಷ್ಟೇ ಪುನರ್ನಿರ್ಮಿಸಲಾಗಿದ್ದ ನೇಪಾಳ ಮತ್ತು ಚೀನಾವನ್ನು ಸಂಪರ್ಕಿಸುವ ಐತಿಹಾಸಿಕ ‘ಸ್ನೇಹ ಸೇತುವೆ’ (Friendship Bridge) ನೀರಿನ ರಭಸಕ್ಕೆ ಮತ್ತೊಮ್ಮೆ ಕೊಚ್ಚಿಹೋಗಿದೆ. ಕೈಲಾಸ ಮಾನಸ ಸರೋವರ ಯಾತ್ರಾರ್ಥಿಗಳು ಬಳಸುತ್ತಿದ್ದ ಟಿಬೆಟ್‌ನ ಗೈರಾಂಗ್ ಬಂದರಿನ ಇಮಿಗ್ರೇಷನ್ ಕಚೇರಿ ಮತ್ತು ತಿಮುರೆ ಬಾಜಾ ಪ್ರದೇಶಗಳು ಸಂಪೂರ್ಣ ಕೆಸರಿನಡಿಯಲ್ಲಿ ಸಿಲುಕಿವೆ.

ಇಂಟರ್ನ್ಯಾಷನಲ್ ಸೆಂಟರ್ ಫಾರ್ ಇಂಟಿಗ್ರೇಟೆಡ್ ಮೌಂಟೇನ್ ಡೆವಲಪ್‌ಮೆಂಟ್ (ICIMOD) ವರದಿಗಳ ಪ್ರಕಾರ, ಹಿಂದೂ ಕುಶ್ ಹಿಮಾಲಯ ಶ್ರೇಣಿಯು ಜಾಗತಿಕ ತಾಪಮಾನ ಏರಿಕೆಯಿಂದಾಗಿ ಹಿಂದೆಂದಿಗಿಂತಲೂ ವೇಗವಾಗಿ ಹಿಮವನ್ನು ಕಳೆದುಕೊಳ್ಳುತ್ತಿದೆ. 2000 ಇಸವಿಯ ನಂತರ ಹಿಮನದಿಗಳು ಕರಗುವ ವೇಗ ದುಪ್ಪಟ್ಟಾಗಿದೆ.

ಮತ್ತೊಂದು ಪ್ರವಾಹದ ಭೀತಿ: ಲ್ಹೆಂಡೆ ಖೋಲಾ ನದಿ ಪಾತ್ರದಲ್ಲಿ ಹಿಮ ಮತ್ತು ಬಂಡೆಗಳ ಅವಶೇಷಗಳಿಂದ ಕೃತಕ ಜಲಾಶಯಗಳು ಸೃಷ್ಟಿಯಾಗಿದ್ದು, ಅವು ಒಡೆದರೆ ಕೆಳಭಾಗಕ್ಕೆ ಮತ್ತೊಂದು ಪ್ರವಾಹ ನುಗ್ಗುವ ಅಪಾಯವಿರುವುದರಿಂದ ಗಡಿ ನದಿ ಪಾತ್ರದ ಜನರಿಗೆ ಮುಂಚಿನ ಎಚ್ಚರಿಕೆ ನೀಡಲಾಗಿದೆ.

 

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ನಯನಾ ರಾಜೀವ್

ನಯನಾ ರಾಜೀವ್ ಮೂಲತಃ ಶಿವಮೊಗ್ಗ ಜಿಲ್ಲೆಯ ಸಾಗರದ ಬಾಳೆಗೆರೆಯವರು, ಹಿಂದಿಯಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಮಾಧ್ಯಮ ಕ್ಷೇತ್ರದಲ್ಲಿ 10ಕ್ಕೂ ಹೆಚ್ಚು ವರ್ಷ ಕೆಲಸ ಮಾಡಿದ ಅನುಭವವಿದೆ. ಕನ್ನಡ ಪ್ರಭ ದಿನಪತ್ರಿಕೆಯಲ್ಲಿ 3 ವರ್ಷಗಳ ಕಾಲ ಕೆಲಸ ಮಾಡಿದ್ದಾರೆ. ಒನ್​ ಇಂಡಿಯಾ ಕನ್ನಡ ವೆಬ್​ಸೈಟ್​ನಲ್ಲಿ ನಾಲ್ಕೂವರೆ ವರ್ಷ ಕೆಲಸ ನಿರ್ವಹಿಸಿದ್ದಾರೆ. ಡಿಜಿಟಲ್ ವಿಭಾಗದಲ್ಲಿ ಕಳೆದ 6 ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಟಿವಿ 9 ಕನ್ನಡ ಡಿಜಿಟಲ್​ನಲ್ಲಿ ಸೀನಿಯರ್ ಸಬ್​ ಎಡಿಟರ್ ಆಗಿ ಕಳೆದ ಮೂರು ವರ್ಷಗಳಿಂದ ಕೆಲಸ ಮಾಡುತ್ತಿದ್ದಾರೆ. ಆಸಕ್ತಿಕರ ಕ್ಷೇತ್ರ ಟ್ರೆಕಿಂಗ್ ಮತ್ತು ಸಂಗೀತ.

Read More
Loading...
Unable to load recommendations.
Follow Us