AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನೇಪಾಳ ಪ್ರವಾಹ, 160ಕ್ಕೂ ಹೆಚ್ಚು ಮಂದಿ ಸಾವು, 133 ಭಾರತೀಯರು ಸೇರಿ 700ಕ್ಕೂ ಅಧಿಕ ಮಂದಿ ನಾಪತ್ತೆ

ನೇಪಾಳದಲ್ಲಿ ಭೂಕಂಪ ಮತ್ತು ಹಿಮನದಿ ಸರೋವರ ಸ್ಫೋಟದಿಂದ ಭೀಕರ ಪ್ರವಾಹ ಉಂಟಾಗಿದೆ. 160ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದು, 133 ಭಾರತೀಯರು ಸೇರಿ 750ಕ್ಕೂ ಅಧಿಕ ಮಂದಿ ನಾಪತ್ತೆಯಾಗಿದ್ದಾರೆ. ಭಾರತವು ತಕ್ಷಣವೇ ಮಾನವೀಯ ನೆರವು ಹಾಗೂ ತುರ್ತು ಪರಿಹಾರ ಸಾಮಗ್ರಿಗಳನ್ನು ರವಾನಿಸಿದೆ. ಪ್ರಧಾನಿ ಮೋದಿ ನೇಪಾಳಕ್ಕೆ ಸಂಪೂರ್ಣ ಬೆಂಬಲ ಭರವಸೆ ನೀಡಿದ್ದಾರೆ.

ನೇಪಾಳ ಪ್ರವಾಹ, 160ಕ್ಕೂ ಹೆಚ್ಚು ಮಂದಿ ಸಾವು, 133 ಭಾರತೀಯರು ಸೇರಿ 700ಕ್ಕೂ ಅಧಿಕ ಮಂದಿ ನಾಪತ್ತೆ
ನೇಪಾಳ
ನಯನಾ ರಾಜೀವ್
|

Updated on: Aug 27, 2026 | 8:15 AM

Share

ಕಠ್ಮಂಡು, ಆಗಸ್ಟ್​ 27: ಟಿಬೆಟ್ ಗಡಿಭಾಗದಲ್ಲಿ ಸಂಭವಿಸಿದ ಪ್ರಬಲ ಭೂಕಂಪ ಹಾಗೂ ಹಿಮನದಿ ಸರೋವರ ಸ್ಫೋಟದಿಂದಾಗಿ (GLOF) ನೇಪಾಳ(Nepal)ದಲ್ಲಿ ಭೀಕರ ಹಠಾತ್ ಪ್ರವಾಹ ಉಂಟಾಗಿದ್ದು, ಕನಿಷ್ಠ 160 ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ. ಭೋಟೆ ಕೋಶಿ ಮತ್ತು ತ್ರಿಶೂಲಿ ನದಿಗಳ ಪ್ರವಾಹಕ್ಕೆ ಸಿಲುಕಿ 133 ಭಾರತೀಯರು ಸೇರಿದಂತೆ 750 ಕ್ಕೂ ಹೆಚ್ಚು ನಾಗರಿಕರು ನಾಪತ್ತೆಯಾಗಿದ್ದಾರೆ.

ಭೂಕಂಪ ಮತ್ತು ಹಿಮಸ್ಫೋಟ: ಬುಧವಾರ ಬೆಳಗ್ಗೆ ಟಿಬೆಟ್‌ನಲ್ಲಿ ಸಂಭವಿಸಿದ ಭೂಕಂಪದ ಪರಿಣಾಮವಾಗಿ ಸೂಪರ್‌ಗ್ಲೇಶಿಯಲ್ ಸರೋವರ ಒಡೆದು ಭೋಟೆ ಕೋಶಿ ನದಿಗೆ ಅಪಾರ ಪ್ರಮಾಣದ ನೀರು ನುಗ್ಗಿತು. ಪ್ರವಾಹವು ರಸುವಾ, ಧಾಡಿಂಗ್, ನುವಾಕೋಟ್, ಚಿತಾವಾನ್, ಗೂರ್ಖಾ, ತನಹು ಮತ್ತು ನವಲ್ಪರಾಸಿ ಪೂರ್ವ ಸೇರಿದಂತೆ ಕಠ್ಮಂಡುವಿನ ಸುತ್ತಮುತ್ತಲಿನ ಬಹುತೇಕ ಜಿಲ್ಲೆಗಳನ್ನು ಜಲಾವೃತಗೊಳಿಸಿದೆ.

ನಾಪತ್ತೆಯಾಗಿರುವ 750 ಕ್ಕೂ ಹೆಚ್ಚು ಜನರಲ್ಲಿ391 ವಿದೇಶಿ ಪ್ರಜೆಗಳಿದ್ದು, ಇದರಲ್ಲಿ ಭಾರತದ 133 ನಾಗರಿಕರು ಸೇರಿದ್ದಾರೆ. ರಸುವಾಗಧಿ (111 MW), ಸಂಜೆನ್ ಖೋಲಾ (78 MW) ಮತ್ತು ಅಪ್ಪರ್ ತ್ರಿಶೂಲಿ 3A (60 MW) ಸೇರಿದಂತೆ ಒಂದು ಡಜನ್‌ಗೂ ಹೆಚ್ಚು ಪ್ರಮುಖ ಜಲವಿದ್ಯುತ್ ಯೋಜನೆಗಳು ಸಂಪೂರ್ಣ ಹಾನಿಗೊಳಗಾಗಿವೆ.

ನೇಪಾಳ ಸೇನೆಯ ಶೋಧ: ನೇಪಾಳಿ ಸೇನೆಯು 12 ಹೆಲಿಕಾಪ್ಟರ್‌ಗಳು ಮತ್ತು ವಿಪತ್ತು ನಿರ್ವಹಣಾ ಪಡೆಗಳನ್ನು ನಿಯೋಜಿಸಿ ಯುದ್ಧೋಪಾದಿಯಲ್ಲಿ ಶೋಧ ಕಾರ್ಯ ನಡೆಸುತ್ತಿದೆ. ಭಾರತ ಸರ್ಕಾರವು ತಕ್ಷಣವೇ ಸ್ಪಂದಿಸಿ 10 ಟನ್ ಮಾನವೀಯ ನೆರವು, ವಿಪತ್ತು ಪರಿಹಾರ ಸಾಮಗ್ರಿಗಳು (HADR) ಮತ್ತು ತುರ್ತು ಔಷಧಿಗಳನ್ನು ಕಠ್ಮಂಡುಗೆ ರವಾನಿಸಿದೆ.

ಮತ್ತಷ್ಟು ಓದಿ: ಪ್ರವಾಹ ಪೀಡಿತ ನೇಪಾಳಕ್ಕೆ ಭಾರತದಿಂದ 10 ಟನ್ ಮಾನವೀಯ ನೆರವು ರವಾನೆ

ಪ್ರಧಾನಿ ಮೋದಿ ಅಭಯ: ಪ್ರಧಾನಿ ನರೇಂದ್ರ ಮೋದಿ ಅವರು ನೇಪಾಳ ಪ್ರಧಾನಿ ಬಲೇಂದ್ರ ಶಾ ಅವರೊಂದಿಗೆ ಮಾತನಾಡಿ ಭಾರತದ ಸಂಪೂರ್ಣ ಬೆಂಬಲದ ಭರವಸೆ ನೀಡಿದ್ದಾರೆ.

ಭಾರತೀಯ ರಾಯಭಾರ ಕಚೇರಿ ಸಹಾಯವಾಣಿ: ಕಠ್ಮಂಡುವಿನಲ್ಲಿರುವ ಭಾರತೀಯ ರಾಯಭಾರ ಕಚೇರಿಯು ಸಂತ್ರಸ್ತ ಭಾರತೀಯರಿಗಾಗಿ +977 9851316807 ಮತ್ತು +977 9709107500 ತುರ್ತು ಸಹಾಯವಾಣಿಗಳನ್ನು ಆರಂಭಿಸಿದೆ.

ಚೀನಾ ಸೇನೆ ನಿಯೋಜನೆ: ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಅವರ ಆದೇಶದಂತೆ ಟಿಬೆಟ್ ಗಡಿ ಬಂದರು ಪ್ರದೇಶದಲ್ಲಿ ಶೋಧ ಕಾರ್ಯಕ್ಕಾಗಿ ಪೀಪಲ್ಸ್ ಆರ್ಮ್ಡ್ ಪೊಲೀಸ್‌ನ ೧೪೫ ಸೈನಿಕರನ್ನು ನಿಯೋಜಿಸಲಾಗಿದೆ. ನೂರಾರು ಸೇತುವೆಗಳು, ರಸ್ತೆಗಳು ಮತ್ತು ಮೊಬೈಲ್ ಟವರ್‌ಗಳು ಕೊಚ್ಚಿಹೋಗಿದ್ದು, ಹಲವು ಹಳ್ಳಿಗಳು ಸಂಪೂರ್ಣವಾಗಿ ಬಾಹ್ಯ ಪ್ರಪಂಚದಿಂದ ಕಡಿದುಕೊಂಡಿವೆ.

ಭೋಟೆ ಕೋಶಿ ನದಿಯು ಭಾರತದ ಬಿಹಾರ ಪ್ರವೇಶಿಸುವಾಗ ‘ಗಂಡಕ್ ನದಿ’ಯಾಗಿ ಹರಿಯುವುದರಿಂದ, ಬಿಹಾರದ ವಾಲ್ಮೀಕಿ ನಗರ ಬ್ಯಾರೇಜ್ ಹಾಗೂ ಉತ್ತರ ಪ್ರದೇಶದ ತಗ್ಗು ಪ್ರದೇಶಗಳಲ್ಲಿ ಪ್ರವಾಹ ಮುನ್ನೆಚ್ಚರಿಕೆ  ಘೋಷಿಸಲಾಗಿದೆ. ಭಾರತೀಯ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ ಗಡಿ ಭಾಗದ ನದಿ ಪಾತ್ರಗಳಲ್ಲಿ ಹೆಚ್ಚಿನ ಕಟ್ಟೆಚ್ಚರ ವಹಿಸಿದೆ.

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Follow Us