ಭಾರತ ಪ್ರವಾಸ ಮುಗಿಸಿ ಹಿಂತಿರುಗಿದ ಬೆನ್ನಲ್ಲೇ ಆಸ್ಪತ್ರೆಗೆ ದಾಖಲಾದ್ರಾ ಷಿ ಜಿನ್‌ಪಿಂಗ್, ಇಲ್ಲಿದೆ ಮಾಹಿತಿ
ಭಾರತದ ಬ್ರಿಕ್ಸ್ ಶೃಂಗಸಭೆ ಮುಗಿಸಿ ಹಿಂತಿರುಗಿದ ನಂತರ ಚೀನಾ ಅಧ್ಯಕ್ಷ ಷಿ ಜಿನ್‌ಪಿಂಗ್ ಆರೋಗ್ಯದಲ್ಲಿ ಹಠಾತ್ ಏರುಪೇರಾಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂಬ ಮಾಹಿತಿ ವಿಶ್ವಮಟ್ಟದಲ್ಲಿ ಚರ್ಚೆಯಾಗುತ್ತಿದೆ. ಬೀಜಿಂಗ್‌ಗೆ ಬಂದಿಳಿದ ತಕ್ಷಣ ಅವರನ್ನು ಸೇನಾ ಹೆಲಿಕಾಪ್ಟರ್ ಮೂಲಕ '301 ಮಿಲಿಟರಿ ಆಸ್ಪತ್ರೆ'ಗೆ ಕರೆದೊಯ್ಯಲಾಗಿದೆ. ದೆಹಲಿಯಲ್ಲಿದ್ದಾಗಲೇ ಅವರ ಆರೋಗ್ಯ ಹದಗೆಟ್ಟಿತ್ತು ಎನ್ನಲಾಗಿದ್ದು, ಪ್ರಧಾನಿ ಮೋದಿಯವರ ಔತಣಕೂಟಕ್ಕೂ ಅವರು ಗೈರಾಗಿದ್ದರು. ಚೀನಾದ ರಹಸ್ಯ ಸಂಸ್ಕೃತಿಯು ಈ ವರದಿಗಳಿಗೆ ಇನ್ನಷ್ಟು ಕುತೂಹಲ ಮೂಡಿಸಿದೆ.

ಬೀಜಿಂಗ್, ಸೆಪ್ಟೆಂಬರ್ 16: ಭಾರತದ ನವದೆಹಲಿಯಲ್ಲಿ ನಡೆದ ಬ್ರಿಕ್ಸ್ ಶೃಂಗಸಭೆಯಲ್ಲಿ ಭಾಗವಹಿಸಿ ತವರಿಗೆ ಮರಳಿದ ಚೀನಾ ಅಧ್ಯಕ್ಷ ಷಿ ಜಿನ್‌ಪಿಂಗ್ ಅವರ ಆರೋಗ್ಯದಲ್ಲಿ ಹಠಾತ್ ಏರುಪೇರಾಗಿದ್ದು, ಅವರನ್ನು ತುರ್ತು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂಬ ಮಾಹಿತಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ. ಬೀಜಿಂಗ್ ವಿಮಾನ ನಿಲ್ದಾಣಕ್ಕೆ ಬಂದಿಳಿದ ತಕ್ಷಣ ಅವರನ್ನು ಸೇನಾ ಹೆಲಿಕಾಪ್ಟರ್ ಮೂಲಕ ರಾಜಧಾನಿಯ ಪ್ರಸಿದ್ಧ ‘301 ಮಿಲಿಟರಿ ಆಸ್ಪತ್ರೆ’ಗೆ ಕರೆದೊಯ್ಯಲಾಯಿತು ಎಂದು ಚೀನೀ ಡೆಮಾಕ್ರಟಿಕ್ ಪಕ್ಷದ (CDP) ಅಧ್ಯಕ್ಷ ಜಿ ವಾಂಜುನ್ ಹೇಳಿಕೊಂಡಿದ್ದಾರೆ.
ಪ್ರತ್ಯಕ್ಷದರ್ಶಿಗಳನ್ನು ಉಲ್ಲೇಖಿಸಿ ಮಾಹಿತಿ ನೀಡಿರುವ ಜಿ ವಾಂಜುನ್, ಷಿ ಜಿನ್‌ಪಿಂಗ್ ಬೀಜಿಂಗ್‌ಗೆ ಮರಳಿದಾಗ ಚೀನಾದಲ್ಲಿ ಸದಾ ಕಾಣಸಿಗುವ ಅಧಿಕೃತ ಸ್ವಾಗತವಾಗಲಿ ಅಥವಾ ಉನ್ನತ ಅಧಿಕಾರಿಗಳ ಉಪಸ್ಥಿತಿಯಾಗಲಿ ಇರಲಿಲ್ಲ. ವಿಮಾನ ಇಳಿದ ಕೂಡಲೇ ಅವರನ್ನು ತರಾತುರಿಯಲ್ಲಿ ಹೆಲಿಕಾಪ್ಟರ್ ಮೂಲಕ ಆಸ್ಪತ್ರೆಗೆ ಕಳುಹಿಸಲಾಯಿತು ಎಂದು ಹೇಳಿದ್ದಾರೆ.
ಶೃಂಗಸಭೆಯಲ್ಲೇ ಆರೋಗ್ಯ ಹದಗೆಟ್ಟಿತ್ತೇ?: ನವದೆಹಲಿಯಲ್ಲಿ ಶೃಂಗಸಭೆ ನಡೆಯುತ್ತಿದ್ದ ಸಂದರ್ಭದಲ್ಲೇ ಷಿ ಜಿನ್‌ಪಿಂಗ್ ಅವರ ಆರೋಗ್ಯದಲ್ಲಿ ಏರುಪೇರು ಕಾಣಿಸಿಕೊಂಡಿತ್ತು ಹಾಗೂ ಅವರ ವೈದ್ಯಕೀಯ ತಂಡ ಅವರ ಆರೈಕೆ ಮಾಡುತ್ತಿತ್ತು. ಈ ಕಾರಣಕ್ಕಾಗಿಯೇ ಅವರು ತಮ್ಮ ಭಾರತ ಭೇಟಿಯನ್ನು ನಿಗದಿತ ಸಮಯಕ್ಕಿಂತ ಮೊದಲೇ ಮೊಟಕುಗೊಳಿಸಿದರು ಎಂದು ವಾಂಜುನ್ ಹೇಳಿದ್ದಾರೆ.
ಮತ್ತಷ್ಟು ಓದಿ: ಬ್ರಿಕ್ಸ್ ಔತಣಕೂಟ ರಾಜಕೀಯ ಸಂಘರ್ಷ: ಆಹ್ವಾನವಿದ್ದರೂ ಮೋದಿ ಡಿನ್ನರ್ ತಪ್ಪಿಸಿಕೊಂಡ ಕಾಂಗ್ರೆಸ್ ಸಿಎಂಗಳು
ಮೋದಿ ಔತಣಕೂಟಕ್ಕೆ ಗೈರು: ಬ್ರಿಕ್ಸ್ ಶೃಂಗಸಭೆಯ ನೇಪಥ್ಯದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ಷಿ ದ್ವಿಪಕ್ಷೀಯ ಮಾತುಕತೆ ನಡೆಸಿದ್ದರಾದರೂ, ವಿದೇಶಿ ಅತಿಥಿಗಳ ಗೌರವಾರ್ಥ ಪ್ರಧಾನಿ ಮೋದಿ ನೀಡಿದ್ದ ಅಧಿಕೃತ ಭೋಜನಕೂಟಕ್ಕೆ ಅವರು ಹಾಜರಾಗಿರಲಿಲ್ಲ. ಈ ಗೈರುಹಾಜರಿಗೆ ಸ್ಪಷ್ಟ ಕಾರಣ ಸಿಕ್ಕಿರಲಿಲ್ಲ.
7 ವರ್ಷಗಳ ಬಳಿಕ ಭಾರತಕ್ಕೆ ಬಂದಿದ್ದ ಜಿನ್‌ಪಿಂಗ್: 2020ರ ಗಲ್ವಾನ್ ಸಂಘರ್ಷದ ನಂತರ ಉಭಯ ದೇಶಗಳ ಸಂಬಂಧ ತೀವ್ರ ಹಳಸಿದ ಹಿನ್ನೆಲೆಯಲ್ಲಿ, ಷಿ ಜಿನ್‌ಪಿಂಗ್ ಬರೋಬ್ಬರಿ ಏಳು ವರ್ಷಗಳ ನಂತರ ಭಾರತಕ್ಕೆ ಭೇಟಿ ನೀಡಿದ್ದರು. ಈ ಹಿಂದೆ ಅಕ್ಟೋಬರ್ 2019ರಲ್ಲಿ ತಮಿಳುನಾಡಿನ ಮಹಾಬಲಿಪುರಂನಲ್ಲಿ ನಡೆದಿದ್ದ ಅನೌಪಚಾರಿಕ ಶೃಂಗಸಭೆಯಲ್ಲಿ ಅವರು ಭಾಗವಹಿಸಿದ್ದರು.
ಚೀನಾದ ರಹಸ್ಯ ಸಂಸ್ಕೃತಿ: ಚೀನಾದ ಕಮ್ಯುನಿಸ್ಟ್ ಪಕ್ಷದ (ಸಿಪಿಸಿ) ಉನ್ನತ ನಾಯಕರ ವೈಯಕ್ತಿಕ ಜೀವನ ಹಾಗೂ ಆರೋಗ್ಯದ ವಿವರಗಳನ್ನು ಅತ್ಯಂತ ಗೌಪ್ಯವಾಗಿ ಇಡುವುದು ಅಲ್ಲಿನ ವಾಡಿಕೆ. ಈ ಹಿಂದೆಯೂ ಕ್ಸಿ ಜಿನ್‌ಪಿಂಗ್ ಸಾರ್ವಜನಿಕವಾಗಿ ಕೆಲವು ದಿನಗಳು ಕಾಣಿಸದಿದ್ದಾಗ ಇಂತಹ ಆರೋಗ್ಯ ಸಂಬಂಧಿತ ಊಹಾಪೋಹಗಳು ಜಾಗತಿಕ ಮಟ್ಟದಲ್ಲಿ ಹರಿದಾಡಿದ್ದವು.
301 ಆಸ್ಪತ್ರೆಯ ಮಹತ್ವ: ಬೀಜಿಂಗ್‌ನಲ್ಲಿರುವ ಪೀಪಲ್ಸ್ ಲಿಬರೇಷನ್ ಆರ್ಮಿ (PLA) ಜನರಲ್ ಹಾಸ್ಪಿಟಲ್ ಚೀನಾದ ಉನ್ನತ ನಾಯಕರು ಮತ್ತು ಸೇನಾ ಮುಖಂಡರ ಚಿಕಿತ್ಸೆಗೆ ಮೀಸಲಾಗಿರುವ ಅತ್ಯಂತ ಸುರಕ್ಷಿತ ಮತ್ತು ಸುಸಜ್ಜಿತ ವೈದ್ಯಕೀಯ ಕೇಂದ್ರವಾಗಿದೆ.
ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ




