Money Laundering Case; ನೀರವ್ ಮೋದಿಗೆ ಭಾರಿ ಹಿನ್ನಡೆ, ಗಡಿಪಾರು ವಿರುದ್ಧ ಸುಪ್ರೀಂ ಮೆಟ್ಟಿಲೇರಲು ಇಲ್ಲ ಅವಕಾಶ
ಲಂಡನ್ನಲ್ಲಿರುವ ನೀರವ್ ಮೋದಿ, ಭಾರತಕ್ಕೆ ತಮ್ಮನ್ನು ಗಡಿಪಾರು ಮಾಡಬಾರದು ಎಂದು ಯುಕೆ ಹೈಕೋರ್ಟ್ಗೆ ಅರ್ಜಿ ಸಲ್ಲಿಸಿದ್ದರು. ಅದು ಕಳೆದ ತಿಂಗಳು ತಿರಸ್ಕೃತಗೊಂಡಿತ್ತು. ಹೀಗಾಗಿ ಸುಪ್ರೀಂ ಕೋರ್ಟ್ಗೆ ಅರ್ಜಿ ಸಲ್ಲಿಸುವುದೊಂದೇ ಅವರ ಮುಂದಿದ್ದ ಆಯ್ಕೆಯಾಗಿತ್ತು.
ಲಂಡನ್: ಪಂಜಾಬ್ ನ್ಯಾಷನಲ್ ಬ್ಯಾಂಕ್ (PNB) ವಂಚನೆ ಮತ್ತು ಮನಿ ಲಾಂಡರಿಂಗ್ ಆರೋಪದಲ್ಲಿ ಭಾರತಕ್ಕೆ ಗಡಿಪಾರಾಗುವ ಭೀತಿ ಎದುರಿಸುತ್ತಿರುವ ಉದ್ಯಮಿ ನೀರವ್ ಮೋದಿಗೆ ಕಾನೂನು ಸಮರದಲ್ಲಿ ಭಾರಿ ಹಿನ್ನಡೆಯಾಗಿದೆ. ಭಾರತಕ್ಕೆ ಗಡಿಪಾರು ಮಾಡುವುದನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್ ಮೆಟ್ಟಿಲೇರಲು ಅನುಮತಿ ನೀಡಬೇಕು ಎಂದು ಅವರು ಸಲ್ಲಿಸಿರುವ ಮನವಿಯನ್ನು ಯುಕೆ ಹೈಕೋರ್ಟ್ ತಿರಸ್ಕರಿಸಿದೆ. ಸದ್ಯ ಲಂಡನ್ನಲ್ಲಿರುವ ನೀರವ್ ಮೋದಿ, ಭಾರತಕ್ಕೆ ತಮ್ಮನ್ನು ಗಡಿಪಾರು ಮಾಡಬಾರದು ಎಂದು ಯುಕೆ ಹೈಕೋರ್ಟ್ಗೆ ಅರ್ಜಿ ಸಲ್ಲಿಸಿದ್ದರು. ಅದು ಕಳೆದ ತಿಂಗಳು ತಿರಸ್ಕೃತಗೊಂಡಿತ್ತು. ಹೀಗಾಗಿ ಸುಪ್ರೀಂ ಕೋರ್ಟ್ಗೆ ಅರ್ಜಿ ಸಲ್ಲಿಸುವುದೊಂದೇ ಅವರ ಮುಂದಿದ್ದ ಆಯ್ಕೆಯಾಗಿತ್ತು. ಇದೀಗ ಪಾರಾಗಲು ಇರುವ ಮತ್ತೊಂದು ದಾರಿಯನ್ನೂ ಅವರು ಕಳೆದುಕೊಂಡಂತಾಗಿದೆ.
ಪಂಜಾಬ್ ನ್ಯಾಷನಲ್ ಬ್ಯಾಂಕ್‌ಗೆ 11,000 ಕೋಟಿ ರೂ. ವಂಚನೆ ಮಾಡಿರುವುದಕ್ಕೆ ಸಂಬಂಧಿಸಿ ಆರೋಪದ ವಿವರಗಳು ಬಹಿರಂಗಗೊಳ್ಳುವ ಮೊದಲೇ ಅವರು 2018ರಲ್ಲಿ ಭಾರತದಿಂದ ಪಲಾಯನ ಮಾಡಿ ಲಂಡನ್ಗೆ ತೆರಳಿದ್ದರು. ನೀರವ್ ಮೋದಿ ಗುಜರಾತ್ ಮೂಲದವರಾಗಿದ್ದಾರೆ. ‘51 ವರ್ಷದ ವಜ್ರದ ಉದ್ಯಮಿ ನೀರವ್ ಮೋದಿ ಮಾನಸಿಕವಾಗಿ ಕುಗ್ಗಿದ್ದಾರೆ. ಹಾಗಾಗಿ ಅವರನ್ನು ಭಾರತಕ್ಕೆ ಹಸ್ತಾಂತರಿಸಲು ಮುಂದಾದರೆ ಅವರು ಆತ್ಮಹತ್ಯೆ ಮಾಡಿಕೊಳ್ಳುವ ಅಪಾಯ ಇದೆ’ ಎಂದು ಅವರ ಪರ ವಕೀಲರು ನ್ಯಾಯಾಲಯದಲ್ಲಿ ವಾದಿಸಿದ್ದರು. ಆದರೆ, ಇದನ್ನು ಕೋರ್ಟ್ ಪುರಸ್ಕರಿಸಿರಲಿಲ್ಲ ಎಂದು ಸುದ್ದಿ ಸಂಸ್ಥೆ ‘ರಾಯಿಟರ್ಸ್‘ ವರದಿ ಮಾಡಿದೆ.
ನೀರವ್ ಮೋದಿ ಮನವಿ ತಿರಸ್ಕೃತಗೊಂಡಿರುವುದರಿಂದ ಅವರನ್ನು ಈಗ ಭಾರತಕ್ಕೆ ಹಸ್ತಂತಾರ ಮಾಡಲು ಮತ್ತು ಭಾರತ ವಿಚಾರಣೆ ಮಾಡಲು ಯಾವುದೇ ಅಡ್ಡಿ ಎದುರಾಗದು ಎಂದು ಹೇಳಲಾಗುತ್ತಿದೆ. ಕಳೆದ ತಿಂಗಳು ನೀರವ್ ಮೋದಿ ಲಂಡನ್ ಹೈಕೋರ್ಟ್‌ನಲ್ಲಿ ತನ್ನ ಮೇಲ್ಮನವಿಯನ್ನು ಸಲ್ಲಿಸಿದ್ದರು. ಆದರೆ ಕೋರ್ಟ್ ಅವರ ಮನವಿಯನ್ನು ತಿರಸ್ಕರಿಸಿತ್ತು. ಅನ್ಯಾಯ ಅಥವಾ ದಬ್ಬಾಳಿಕೆಯಾಗಿದೆ ಎಂಬುದನ್ನು ನಾವು ಒಪ್ಪುವುದಿಲ್ಲ ಎಂದು ಹೈಕೋರ್ಟ್ ಹೇಳಿತ್ತು. ಆಂಟಿಗುವಾ ಮತ್ತು ಬಾರ್ಬುಡಾದ ಪೌರತ್ವವನ್ನು ಪಡೆದಿರುವ ಅವರ ಚಿಕ್ಕಪ್ಪ ಮೆಹುಲ್ ಚೋಕ್ಸಿ ಕೂಡ PNB ಅನ್ನು ವಂಚಿಸಿದ ಆರೋಪವನ್ನು ಎದುರಿಸುತ್ತಿದ್ದಾರೆ. ಭಾರತಕ್ಕೆ ಅವರಿಬ್ಬರ ಅಗತ್ಯ ಇದೆ ಹಾಗೂ ಅವರನ್ನು ಭಾರತಕ್ಕೆ ಒಪ್ಪಿಸುವುದು ಅನಿವಾರ್ಯ ಎಂದು ಕೋರ್ಟ್ ಹೇಳಿತ್ತು.
ಇದನ್ನು ಓದಿ:ನೀರವ್ ಮೋದಿ ಮೇಲ್ಮನವಿ ತಿರಸ್ಕರಿಸಿದ ಕೋರ್ಟ್; ಭಾರತಕ್ಕೆ ಹಸ್ತಾಂತರಿಸಲು ಆದೇಶ
ಅವರ ವಿರುದ್ಧ ಕಳೆದ ತಿಂಗಳು ಲಂಡನ್ ಹೈಕೋರ್ಟ್ ತೀರ್ಪು ನೀಡಿತ್ತು. ನಂತರ ನೀರವ್ ಮೋದಿ ಯುಕೆ ಸುಪ್ರೀಂ ಕೋರ್ಟ್ನಲ್ಲಿ ಮೇಲ್ಮನಿ ಸಲ್ಲಿಸಲು ಮುಂದಾಗಿದ್ದರು. ಆದರೆ ಪ್ರಕರಣವು ಪ್ರಾಮುಖ್ಯತೆಯನ್ನು ಹೊಂದಿದೆ ಎಂದು ಹೈಕೋರ್ಟ್ ಒಪ್ಪಿಕೊಂಡರೆ ಮಾತ್ರ ಅದನ್ನು ಮನವಿಯನ್ನು ಸ್ವೀಕರಿಸಲು ಸಾಧ್ಯ ಎಂದು ಸುಪ್ರೀಂ ಹೇಳಿತ್ತು.
ನೀರವ್ ಮೋದಿಗೆ ಇನ್ನೂ ಒಂದು ಆಯ್ಕೆ ಇದೆ. ಅವರು ಯುರೋಪಿಯನ್ ಮಾನವ ಹಕ್ಕುಗಳ ನ್ಯಾಯಾಲಯಕ್ಕೆ ಮನವಿ ಸಲ್ಲಿಸಬಹುದು. ಮಾರ್ಚ್ 2019 ರಲ್ಲಿ ಬಂಧನಕ್ಕೊಳಗಾದ ನಂತರ ಅವರು ಲಂಡನ್ ಜೈಲಿನಲ್ಲಿದ್ದಾರೆ ಎಂದು ವರದಿ ಹೇಳಿದೆ. ಭಾರತದಲ್ಲಿ, ಕೇಂದ್ರೀಯ ತನಿಖಾ ದಳ ಮತ್ತು ಜಾರಿ ನಿರ್ದೇಶನಾಲಯಕ್ಕೆ ನೀರವ್ ಮೋದಿ ಬೇಕಾಗಿದ್ದಾರೆ.
ವಿದೇಶಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 4:57 pm, Thu, 15 December 22