ಝೆಲೆನ್ಸ್ಕಿ ರಷ್ಯಾಕ್ಕೆ ಬಂದರೆ ಭೇಟಿಗೆ ಸಿದ್ಧ; ಉಕ್ರೇನ್ ಸಂಘರ್ಷದ ಬಗ್ಗೆ ಪುಟಿನ್ ಹೇಳಿಕೆ
ಒಂದುವೇಳೆ ಉಕ್ರೇನ್ ಅಧ್ಯಕ್ಷ ಝೆಲೆನ್ಸ್ಕಿ ಮಾಸ್ಕೋಗೆ ಬಂದರೆ ನಾನು ಶಾಂತಿ ಮಾತುಕತೆಗೆ ಸಿದ್ಧನಿದ್ದೇನೆ. ಆದರೆ, ಇದು ಸಾಧ್ಯವಿದೆಯೇ? ಎಂದು ರಷ್ಯಾದ ಅಧ್ಯಕ್ಷ ಪುಟಿನ್ ಪ್ರಶ್ನಿಸಿದ್ದಾರೆ. ಝೆಲೆನ್ಸ್ಕಿ ಅವರೊಂದಿಗಿನ ಭೇಟಿಯನ್ನು ನಾನು ಎಂದಿಗೂ ತಳ್ಳಿಹಾಕಿಲ್ಲ ಎಂದು ಪುಟಿನ್ ಹೇಳಿದ್ದಾರೆ. ಎರಡೂ ದೇಶಗಳ ನಡುವೆ ರಾಜತಾಂತ್ರಿಕ ಮಾತುಕತೆಯ ಮೂಲಕ ಶಾಂತಿ ಸ್ಥಾಪನೆಯಾಗಬೇಕೆಂಬ ಇತರೆ ದೇಶಗಳ ಒತ್ತಾಯದ ನಡುವೆ ಅವರ ಈ ಹೇಳಿಕೆ ಬಂದಿದೆ.

ಮಾಸ್ಕೋ, ಸೆಪ್ಟೆಂಬರ್ 3: ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ (Putin) ಅವರು ಉಕ್ರೇನಿಯನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಅವರನ್ನು ಮಾಸ್ಕೋದಲ್ಲಿ ಭೇಟಿ ಮಾಡಲು ಸಿದ್ಧರಿರುವುದಾಗಿ ಹೇಳಿದ್ದಾರೆ. ಆದರೆ ಕೈವ್‌ನ ಪ್ರಸ್ತುತ ರಾಜಕೀಯ ಮತ್ತು ಸಾಂವಿಧಾನಿಕ ಪರಿಸ್ಥಿತಿಯನ್ನು ಗಮನಿಸಿದರೆ ಅಂತಹ ಮಾತುಕತೆಗಳು ನಿಜವಾದ ತೂಕವನ್ನು ಹೊಂದಿರುತ್ತವೆಯೇ? ಎಂದು ಅವರು ಪ್ರಶ್ನಿಸಿದ್ದಾರೆ. ಉಕ್ರೇನ್ ಮತ್ತು ಪಾಶ್ಚಿಮಾತ್ಯ ರಾಷ್ಟ್ರಗಳು ಪ್ರಾಯೋಗಿಕ ವಿಧಾನವನ್ನು ಅಳವಡಿಸಿಕೊಂಡರೆ ಸಂಘರ್ಷವನ್ನು ರಾಜಕೀಯವಾಗಿ ಪರಿಹರಿಸಬಹುದು ಎಂದು ಅವರು ಸಲಹೆ ನೀಡಿದ್ದಾರೆ. ಝೆಲೆನ್ಸ್ಕಿ ಮಾಸ್ಕೋಗೆ ಬಂದು ಮಾತನಾಡದಿದ್ದರೆ ರಷ್ಯಾ ತನ್ನ ಉದ್ದೇಶಗಳನ್ನು ಮಿಲಿಟರಿ ರೀತಿಯಲ್ಲಿ ಸಾಧಿಸುತ್ತದೆ ಎಂದು ಅವರು ಎಚ್ಚರಿಸಿದ್ದಾರೆ.
ಭಾರತ ಸೇರಿದಂತೆ ಹಲವು ದೇಶಗಳು ಉಕ್ರೇನ್ ಮತ್ತು ರಷ್ಯಾದ ನಡುವೆ ಶಾಂತಿ ಸ್ಥಾಪನೆಯಾಗಿ ಯುದ್ಧ ಕೊನೆಗೊಳ್ಳಬೇಕೆಂದು ಕರೆ ನೀಡುತ್ತಲೇ ಇವೆ. ಭಾರತದ ಪ್ರಧಾನಿ ಮೋದಿ ಚೀನಾದ ಶೃಂಗಸಭೆಯಲ್ಲಿ ಪುಟಿನ್ ಅವರನ್ನು ಭೆಟಿಯಾದಾಗಲೂ ಉಕ್ರೇನ್ ಜೊತೆಗಿನ ಸಂಘರ್ಷ ಆದಷ್ಟು ಬೇಗ ಕೊನೆಗೊಳ್ಳಲಿ ಎಂದು ಸಲಹೆ ನೀಡಿದ್ದರು.
ಇದನ್ನೂ ಓದಿ: ಉಕ್ರೇನ್ ಜೊತೆಗಿನ ಶಾಂತಿ ಒಪ್ಪಂದದ ನಡುವೆ ಇಂಧನ ಒಪ್ಪಂದಗಳ ಕುರಿತು ಅಮೆರಿಕ- ರಷ್ಯಾ ಚರ್ಚೆ
“ಝೆಲೆನ್ಸ್ಕಿಯನ್ನು ಭೇಟಿಯಾಗುವುದನ್ನು ನಾನು ಎಂದಿಗೂ ತಳ್ಳಿಹಾಕಿಲ್ಲ. ಆದರೆ ನಿಜವಾದ ಪ್ರಶ್ನೆ ಎಂದರೆ, ಅಂತಹ ಸಭೆ ಅರ್ಥಪೂರ್ಣವಾಗಿದೆಯೇ ಎಂಬುದಾಗಿದೆ. ರಷ್ಯಾ ಭೂಮಿಗಾಗಿ ಅಲ್ಲ, ಹಕ್ಕುಗಳಿಗಾಗಿ ಹೋರಾಡುತ್ತಿದೆ” ಎಂದು ಪುಟಿನ್ ಹೇಳಿದ್ದಾರೆ.
ಮಾಸ್ಕೋದ ಯುದ್ಧದ ಗುರಿಗಳು ಭೂಪ್ರದೇಶವನ್ನು ವಶಪಡಿಸಿಕೊಳ್ಳುವ ಬದಲು ಸಾಂಸ್ಕೃತಿಕ ಮತ್ತು ಭಾಷಾ ಹಕ್ಕುಗಳನ್ನು ರಕ್ಷಿಸುವುದರ ಮೇಲೆ ಕೇಂದ್ರೀಕೃತವಾಗಿವೆ ಎಂದು ರಷ್ಯಾದ ನಾಯಕ ಪುಟಿನ್ ಒತ್ತಿ ಹೇಳಿದ್ದಾರೆ. “ನಾವು ಭೂಮಿಗಾಗಿ ಹೋರಾಡುತ್ತಿಲ್ಲ, ನಾವು ಜನರ ಹಕ್ಕುಗಳಿಗಾಗಿ ಹೋರಾಡುತ್ತಿದ್ದೇವೆ. ಅವರ ಭಾಷೆಯನ್ನು ಮಾತನಾಡಲು ಮತ್ತು ಅವರ ಸಂಸ್ಕೃತಿಯನ್ನು ಅಭ್ಯಾಸ ಮಾಡಲು ಹೋರಾಡುತ್ತಿದ್ದೇವೆ. ಆ ಜನರು ಪ್ರಜಾಸತ್ತಾತ್ಮಕವಾಗಿ ರಷ್ಯಾಕ್ಕೆ ಸೇರಲು ಆಯ್ಕೆ ಮಾಡಿದರೆ, ನಾವು ಆ ಆಯ್ಕೆಯನ್ನು ಗೌರವಿಸಬೇಕು” ಎಂದಿದ್ದಾರೆ.
ಇದನ್ನೂ ಓದಿ: ಉಕ್ರೇನ್ ಸಂಘರ್ಷ ಬೇಗ ಕೊನೆಗೊಳ್ಳಲಿ; ರಷ್ಯಾ ಅಧ್ಯಕ್ಷ ಪುಟಿನ್ ಜೊತೆ ಪ್ರಧಾನಿ ಮೋದಿ ದ್ವಿಪಕ್ಷೀಯ ಮಾತುಕತೆ
ಉಕ್ರೇನ್ NATOಗೆ ಸೇರುವುದಕ್ಕೆ ಮಾಸ್ಕೋದ ದೀರ್ಘಕಾಲದ ವಿರೋಧವನ್ನು ರಷ್ಯಾದ ಅಧ್ಯಕ್ಷ ಪುಟಿನ್ ಪುನರುಚ್ಚರಿಸಿದ್ದಾರೆ. ಅದನ್ನು ನೇರ ಭದ್ರತಾ ಬೆದರಿಕೆ ಎಂದು ಅವರು ಟೀಕಿಸಿದ್ದಾರೆ. “ಪ್ರತಿಯೊಂದು ದೇಶಕ್ಕೂ ತನ್ನ ಭದ್ರತೆಯನ್ನು ಖಚಿತಪಡಿಸಿಕೊಳ್ಳುವ ಹಕ್ಕಿದೆ. ಆದರೆ ಅದು ಇನ್ನೊಂದು ದೇಶಕ್ಕೆ ಹಾನಿಯಾಗುವಂತೆ ಇರಬಾರದು” ಎಂದಿದ್ದಾರೆ.
ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ




