ಭಾರತದ ಮೇಲೆ ದಾಳಿಯಾದರೆ ಅಮೆರಿಕ ರಕ್ಷಣೆಗೆ ಧಾವಿಸುತ್ತದೆ; ಮೋದಿಗೆ ಟ್ರಂಪ್ ಭರವಸೆ

ಫ್ರಾನ್ಸ್‌ನ ಎವಿಯಾನ್‌ನಲ್ಲಿ ನಡೆಯುತ್ತಿರುವ ಜಿ7 (G7) ಶೃಂಗಸಭೆಯ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನಡುವೆ ಮಹತ್ವದ ದ್ವಿಪಕ್ಷೀಯ ಮಾತುಕತೆ ನಡೆದಿದೆ. ಕಳೆದ ಒಂದೂವರೆ ವರ್ಷದಿಂದ ಹಳಸಿದ್ದ ಭಾರತ-ಅಮೆರಿಕ ಸಂಬಂಧವನ್ನು ಮರಳಿ ಹಳಿಗೆ ತರುವ ನಿಟ್ಟಿನಲ್ಲಿ ಪ್ರಧಾನಿ ಮೋದಿ ಮತ್ತು ಅಧ್ಯಕ್ಷ ಟ್ರಂಪ್ ಇಂದು ಮಹತ್ವದ ಮಾತುಕತೆ ನಡೆಸಿದ್ದಾರೆ. "ಭಾರತದ ಮೇಲೆ ಯಾರಾದರೂ ದಾಳಿ ಮಾಡಿದರೆ ಅಮೆರಿಕ ಸಹಾಯಕ್ಕೆ ಬರಲಿದೆ" ಎಂದು ಟ್ರಂಪ್ ಭರವಸೆ ನೀಡಿದ್ದಾರೆ.

ಭಾರತದ ಮೇಲೆ ದಾಳಿಯಾದರೆ ಅಮೆರಿಕ ರಕ್ಷಣೆಗೆ ಧಾವಿಸುತ್ತದೆ; ಮೋದಿಗೆ ಟ್ರಂಪ್ ಭರವಸೆ
Donald Trump And Modi
Image Credit source: AP

Updated on: Jun 17, 2026 | 8:46 PM

ಎವಿಯಾನ್, ಜೂನ್ 17: ಭಾರತದ ಮೇಲೆ ಯಾವುದೇ ದೇಶ ದಾಳಿ ನಡೆಸಿದರೆ ಅಮೆರಿಕವು ಭಾರತದ ಸಹಾಯಕ್ಕೆ ಬರಲಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Donald Trump) ಇಂದು ಘೋಷಿಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿ (PM Modi in France) ಅವರೊಂದಿಗೆ ಜಂಟಿಯಾಗಿ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಟ್ರಂಪ್, “ಭಾರತದ ಮೇಲೆ ದಾಳಿಯಾದರೆ ಮತ್ತು ನರೇಂದ್ರ ಮೋದಿಯವರೇ ಅಲ್ಲಿ ಪ್ರಧಾನಿಯಾಗಿದ್ದರೆ ನಾವು ಖಂಡಿತವಾಗಿಯೂ ಅವರ ಸಹಾಯಕ್ಕೆ ಧಾವಿಸುತ್ತೇವೆ” ಎಂದು ಭರವಸೆ ನೀಡಿದ್ದಾರೆ.

ಭಾರತ ಮತ್ತು ಅಮೆರಿಕ ನಡುವಿನ ರಕ್ಷಣಾ ಬಾಂಧವ್ಯದ ಕುರಿತು ಮಾತನಾಡಿದ ಡೊನಾಲ್ಡ್ ಟ್ರಂಪ್, ಎರಡು ದೇಶಗಳ ನಡುವೆ ಅತ್ಯುತ್ತಮ ಸಂಬಂಧವಿದೆ ಎಂದು ಪುನರುಚ್ಚರಿಸಿದರು. “ಭಾರತದ ಮೇಲೆ ದಾಳಿಯಾದರೆ, ನಾವು ಅವರಿಗೆ ಸಹಾಯ ಮಾಡಲು ಖಂಡಿತಾ ಅಲ್ಲಿ ಇರುತ್ತೇವೆ. ಯಾರಾದರೂ ಪ್ರಧಾನಿ ಮೋದಿಯನ್ನು ಗುರಿಯಾಗಿಸಿಕೊಂಡು ದಾಳಿ ಮಾಡಿದರೆ, ನಾವು ಮೋದಿಯವರ ಬೆಂಬಲಕ್ಕೆ ನಿಲ್ಲಲಿದ್ದೇವೆ. ಮೋದಿಯವರು ನಾಯಕರಾಗಿರುವವರೆಗೂ ಭಾರತಕ್ಕೆ ಅಮೆರಿಕದ ಸಂಪೂರ್ಣ ರಕ್ಷಣಾ ಬೆಂಬಲ ಇರಲಿದೆ” ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ.

ಇದನ್ನೂ ಓದಿ: ಫ್ರಾನ್ಸ್‌ನ ಜಿ7 ಶೃಂಗಸಭೆಯ ಗ್ರೂಪ್ ಫೋಟೋ ವೇಳೆಯೂ ಮೌನವಾಗೇ ನಿಂತ ಟ್ರಂಪ್-ಮೋದಿ

“ನಾನು ಅಧ್ಯಕ್ಷನಾಗಿರುವವರೆಗೂ ಭಾರತಕ್ಕೆ ವೈಟ್ ಹೌಸ್‌ನಲ್ಲಿ ಒಬ್ಬ ಅತ್ಯುತ್ತಮ ಸ್ನೇಹಿತನಿದ್ದಾನೆ ಎಂದೇ ಅರ್ಥ. ಇಲ್ಲಿ ನೆರೆದಿರುವ ಪ್ರತಿಯೊಬ್ಬರೂ ಭಾರತವನ್ನು ಪ್ರೀತಿಸುತ್ತಾರೆ ಮತ್ತು ಪ್ರಧಾನಿ ಮೋದಿ ಮೇಲೆ ಅಪಾರ ಗೌರವ ಹೊಂದಿದ್ದಾರೆ” ಎಂದು ಟ್ರಂಪ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.


“ನಾವು ಫ್ರಾನ್ಸ್‌ನಲ್ಲಿ ಅತ್ಯುತ್ತಮ ಸಭೆಗಳನ್ನು ನಡೆಸಿದ್ದೇವೆ. ಪ್ರಸ್ತುತ ಭಾರತ ಮತ್ತು ಅಮೆರಿಕ ನಡುವೆ ದೊಡ್ಡ ಮಟ್ಟದ ವ್ಯಾಪಾರ ಒಪ್ಪಂದಗಳು ನಡೆಯುತ್ತಿವೆ. ಭಾರತವು ಅಮೆರಿಕದಲ್ಲಿ ಭಾರಿ ಹೂಡಿಕೆ ಮಾಡುತ್ತಿದ್ದು, ಫ್ಯಾಕ್ಟರಿಗಳನ್ನು ನಿರ್ಮಿಸುತ್ತಿದೆ. ಮೋದಿಯವರು ದೀರ್ಘಕಾಲದಿಂದ ನನ್ನ ಉತ್ತಮ ಸ್ನೇಹಿತರಾಗಿದ್ದಾರೆ” ಎಂದು ಟ್ರಂಪ್ ಶ್ಲಾಘಿಸಿದ್ದಾರೆ.


ಇದನ್ನೂ ಓದಿ: ಒಪ್ಪಂದ ಇಷ್ಟವಾಗದಿದ್ದರೆ ಮತ್ತೆ ಬಾಂಬ್ ಹಾಕುತ್ತೇವೆ! ಇರಾನ್​ಗೆ ಡೊನಾಲ್ಡ್ ಟ್ರಂಪ್ ಎಚ್ಚರಿಕೆ

ಪಶ್ಚಿಮ ಏಷ್ಯಾದ ಬಿಕ್ಕಟ್ಟಿನಲ್ಲಿ ಭಾರತ ಯಾವುದೇ ಪಾತ್ರ ವಹಿಸಲಿದೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಟ್ರಂಪ್, “ಖಂಡಿತವಾಗಿಯೂ ಹೌದು. ಭಾರತವು ಜಗತ್ತಿನ ಪ್ರತಿಯೊಂದು ವಿಷಯದಲ್ಲೂ ದೊಡ್ಡ ಪಾತ್ರ ವಹಿಸುತ್ತದೆ. ಅದರಲ್ಲೂ ನರೇಂದ್ರ ಮೋದಿಯವರು ನಾಯಕರಾಗಿರುವ ತನಕ ಜಾಗತಿಕ ರಾಜಕಾರಣದಲ್ಲಿ ಭಾರತದ ಪಾತ್ರ ಅತ್ಯಂತ ದೊಡ್ಡದಾಗಿರಲಿದೆ” ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ 

Published On - 8:44 pm, Wed, 17 June 26

Follow Us