
ಟೆಹ್ರಾನ್, ಸೆಪ್ಟೆಂಬರ್ 08: ಬಿಷ್ಕೆಕ್‌ನಲ್ಲಿ ನಡೆದ ಎಸ್‌ಸಿಒ (SCO) ಶೃಂಗಸಭೆಯ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ಇರಾನ್ ಅಧ್ಯಕ್ಷ ಮಸೌದ್ ಪೆಜೆಶ್ಕಿಯಾನ್ ನಡುವೆ ನಡೆದ ಮಹತ್ವದ ಸಭೆಯ ನಂತರ, ಇರಾನ್ ಭಾರತದೊಂದಿಗಿನ ತನ್ನ ಸಂಬಂಧವನ್ನು ಮುಕ್ತಕಂಠದಿಂದ ಶ್ಲಾಘಿಸಿದೆ. ಭಾರತದೊಂದಿಗಿನ ಐತಿಹಾಸಿಕ ಮತ್ತು ನಾಗರಿಕ ಒಡನಾಟಕ್ಕೆ ತಾವು ಹೆಚ್ಚು ಪ್ರಾಮುಖ್ಯತೆ ನೀಡುವುದಾಗಿ ತಿಳಿಸಿರುವ ಇರಾನ್, ನವದೆಹಲಿಯಲ್ಲಿ ನಡೆಯಲಿರುವ ಮುಂಬರುವ ಬ್ರಿಕ್ಸ್ (BRICS) ಶೃಂಗಸಭೆಯ ಮೂಲಕ ಉಭಯ ದೇಶಗಳ ವ್ಯಾಪಾರ ಮತ್ತು ಆರ್ಥಿಕ ಬಾಂಧವ್ಯವನ್ನು ಮತ್ತಷ್ಟು ಬಲಪಡಿಸಿಕೊಳ್ಳಲು ಉತ್ಸುಕವಾಗಿದೆ.
ಬಲಿಷ್ಠ ನಾಗರಿಕ ಸಂಬಂಧ: ಇರಾನ್ ವಿದೇಶಾಂಗ ಸಚಿವಾಲಯದ ವಕ್ತಾರ ಎಸ್ಮಾಯಿಲ್ ಬಘೈ ಮಾತನಾಡಿ, “ಭಾರತ ಮತ್ತು ಇರಾನ್ ನಡುವೆ ದೀರ್ಘಕಾಲದ ಐತಿಹಾಸಿಕ ಸಂಬಂಧವಿದೆ. ಎಸ್‌ಸಿಒ ಹಾಗೂ ಬ್ರಿಕ್ಸ್ ವೇದಿಕೆಗಳೆರಡರಲ್ಲೂ ಭಾರತ ಪ್ರಮುಖ ಪಾಲುದಾರನಾಗಿದ್ದು, ವ್ಯಾಪಾರ-ವಹಿವಾಟಿನಲ್ಲಿ ನಮ್ಮ ಸಂಬಂಧ ದಿನದಿಂದ ದಿನಕ್ಕೆ ವಿಕಸನಗೊಳ್ಳುತ್ತಿದೆ” ಎಂದಿದ್ದಾರೆ.
ಚಬಹಾರ್ ಬಂದರು ಹಾಗೂ ಬ್ರಿಕ್ಸ್ ಮಾತುಕತೆ: ಸೆಪ್ಟೆಂಬರ್ 11 ರಿಂದ 13 ರವರೆಗೆ ಭಾರತದ ಅಧ್ಯಕ್ಷತೆಯಲ್ಲಿ ನವದೆಹಲಿಯಲ್ಲಿ ನಡೆಯಲಿರುವ 18ನೇ ಬ್ರಿಕ್ಸ್ ಶೃಂಗಸಭೆಯಲ್ಲಿ ಭಾಗವಹಿಸುವುದನ್ನು ಇರಾನ್ ಖಚಿತಪಡಿಸಿದೆ. ಈ ವೇಳೆ ಉಭಯ ದೇಶಗಳ ನಡುವಿನ ಆಯಕಟ್ಟಿನ ‘ಚಬಹಾರ್ ಬಂದರು ಯೋಜನೆ’ ಸೇರಿದಂತೆ ಹಲವು ದ್ವಿಪಕ್ಷೀಯ ವಿಚಾರಗಳ ಕುರಿತು ಪ್ರಧಾನಿ ಮೋದಿಯವರೊಂದಿಗೆ ಮತ್ತಷ್ಟು ಚರ್ಚೆ ನಡೆಸಲು ಇರಾನ್ ಆಸಕ್ತಿ ತೋರಿದೆ.
ಮತ್ತಷ್ಟು ಓದಿ: ಕೇಂದ್ರ ಸಚಿವರ ಪ್ರಗತಿ ಪರಿಶೀಲನೆಗೆ ಪ್ರಧಾನಿ ಮೋದಿ ಅಖಾಡಕ್ಕೆ: ಕಲ್ಯಾಣ ಯೋಜನೆಗಳ ಅನುಷ್ಠಾನಕ್ಕೆ ವಿಶೇಷ ಒತ್ತು, ಸೋಮವಾರ ಮಹತ್ವದ ಸಭೆ
ಬಿಷ್ಕೆಕ್ ಮುಖಾಮುಖಿ: ಪಶ್ಚಿಮ ಏಷ್ಯಾದಲ್ಲಿ ಯುದ್ಧದ ಕಾರ್ಮೋಡ ಕವಿದ ನಂತರ ಆಗಸ್ಟ್ 31 ರಂದು ಬಿಷ್ಕೆಕ್‌ನಲ್ಲಿ ಪ್ರಧಾನಿ ಮೋದಿ ಮತ್ತು ಅಧ್ಯಕ್ಷ ಪೆಜೆಶ್ಕಿಯಾನ್ ಮೊದಲ ಬಾರಿಗೆ ಮುಖಾಮುಖಿ ಭೇಟಿಯಾಗಿ ಮಾತುಕತೆ ನಡೆಸಿದ್ದರು.
ಅಮೆರಿಕದ ಎಚ್ಚರಿಕೆಯ ಅಸ್ತ್ರ: ಇರಾನ್ ಜೊತೆಗಿನ ಭಾರತದ ಸಾಮೀಪ್ಯವನ್ನು ಅಮೆರಿಕ ಸೂಕ್ಷ್ಮವಾಗಿ ಗಮನಿಸುತ್ತಿದೆ. ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಮಾರ್ಕೊ ರುಬಿಯೊ ಇತ್ತೀಚೆಗೆ ಪ್ರತಿಕ್ರಿಯಿಸಿ, “ಪ್ರತಿಯೊಂದು ದೇಶಕ್ಕೂ ಸ್ವತಂತ್ರ ವಿದೇಶಾಂಗ ನೀತಿಯಿದೆ. ಆದರೆ ಇರಾನ್‌ಗೆ ಆರ್ಥಿಕ ಮಾರ್ಗಗಳನ್ನು ಕಲ್ಪಿಸಿ, ಅಮೆರಿಕದ ನಿರ್ಬಂಧಗಳನ್ನು ಮುರಿಯಲು ನೆರವಾಗುವ ಯಾವುದೇ ದೇಶವಾದರೂ ಅಮೆರಿಕದ ದಂಡನಾತ್ಮಕ ನಿರ್ಬಂಧಗಳನ್ನು ಎದುರಿಸಬೇಕಾಗುತ್ತದೆ” ಎಂದು ಎಚ್ಚರಿಸಿದ್ದರು.
ಚಬಹಾರ್‌ನ ಕಾರ್ಯತಂತ್ರ ಪ್ರಾಮುಖ್ಯತೆ: ಪಾಕಿಸ್ತಾನವನ್ನು ಸಂಪೂರ್ಣವಾಗಿ ಬೈಪಾಸ್ ಮಾಡಿ ಅಫ್ಘಾನಿಸ್ತಾನ ಹಾಗೂ ಮಧ್ಯ ಏಷ್ಯಾವನ್ನು ತಲುಪಲು ಭಾರತಕ್ಕೆ ಇರಾನ್‌ನ ಚಬಹಾರ್ ಬಂದರು ಅತ್ಯಂತ ಪ್ರಮುಖ ಹೆಬ್ಬಾಗಿಲಾಗಿದೆ. ಅಮೆರಿಕದ ಒತ್ತಡ ಹಾಗೂ ಭೌಗೋಳಿಕ ಉದ್ವಿಗ್ನತೆಯ ನಡುವೆಯೂ ಭಾರತವು ತನ್ನದೇ ಆದ ಆಯಕಟ್ಟಿನ ರಾಷ್ಟ್ರೀಯ ಹಿತಾಸಕ್ತಿ ಹಾಗೂ ಇಂಧನ-ಸಂಪರ್ಕ ಸುರಕ್ಷತೆಗೆ ಮೊದಲ ಆದ್ಯತೆ ನೀಡುತ್ತಿದೆ.
ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ