
ನವದೆಹಲಿ, ಆಗಸ್ಟ್ 31: ಭಾರತದ ನಾಗರಿಕ ಸಂಸ್ಕೃತಿಯು ಯಾವುದೇ ಭೇದಭಾವವಿಲ್ಲದೆ ಇತರರಿಗೆ ಸಹಾಯ ಮಾಡುವ ತತ್ವದಿಂದ ಸದಾ ಮಾರ್ಗದರ್ಶಿಸಲ್ಪಟ್ಟಿದೆ. ಭಾರತವು ಜಗತ್ತಿಗೆ ‘ವಿಶ್ವಗುರು’ವಾಗಿ ಸೇವೆ ಸಲ್ಲಿಸಿದೆಯೇ ಹೊರತು ‘ಮಹಾಶಕ್ತಿ’ಯಾಗಿ ಅಲ್ಲ ಎಂದು ಆರ್‌ಎಸ್‌ಎಸ್ (RSS) ಸರಸಂಘಚಾಲಕ ಮೋಹನ್ ಭಾಗವತ್ (Mohan Bhagwat) ಹೇಳಿದ್ದಾರೆ. ಕೆನಡಿಯನ್ ಹಿಂದೂಸ್ ಫಾರ್ ಔಟ್‌ರೀಚ್, ರಿಲೇಶನ್ಸ್ ಆ್ಯಂಡ್ ಡೈಲಾಗ್ ಸಂಸ್ಥೆಯು ಕೆನಡಾದ ಟೊರೊಂಟೋದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸೇವೆಯು ಭಾರತೀಯ ನಾಗರಿಕತೆಯ ಮೂಲ ಲಕ್ಷಣವಾಗಿದೆ ಎಂದು ಹೇಳಿದ್ದಾರೆ.
“ಪ್ರಪಂಚದ ಯಾವುದೇ ಭಾಗದಲ್ಲಿ ಭಾರತಕ್ಕೆ ಸಹಾಯಕ್ಕಾಗಿ ವಿನಂತಿ ಬಂದಾಗಲೆಲ್ಲಾ ಅದು ಎಂದಿಗೂ ನಿರಾಕರಿಸಿಲ್ಲ. ಭಾರತ ಕೇಳದಿದ್ದರೂ ತನ್ನ ಕೈಲಾದಷ್ಟು ಸಹಾಯದ ಹಸ್ತವನ್ನು ಚಾಚುತ್ತದೆ. ಇದು ನಮ್ಮ ಪರಂಪರೆ, ಭಾರತದ ಡಿಎನ್‌ಎ. ಅದಕ್ಕಾಗಿಯೇ ‘ಹಿಂದೂಗಳು ಜಾಗೃತರಾದರೆ, ಜಗತ್ತೇ ಜಾಗೃತಗೊಳ್ಳುತ್ತದೆ’ ಎಂಬ ಮಾತನ್ನು ನೀವು ಕೇಳಿರಬಹುದು” ಎಂದು ಮೋಹನ್ ಭಾಗವತ್ ಹೇಳಿದ್ದಾರೆ.
ಇದನ್ನೂ ಓದಿ: ‘ಭಾರತದಲ್ಲಿ ಮುಸ್ಲಿಮರು ಇರಬಾರದು ಎಂದು ಭಾವಿಸುವವರು ಹಿಂದೂಗಳೇ ಅಲ್ಲ’; ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್
ಇದೇ ವೇಳೆ ಸಂತ ಕಬೀರರ ದೋಹೆಗಳನ್ನು ಉಲ್ಲೇಖಿಸಿದ ಮೋಹನ್ ಭಾಗವತ್, ಒಬ್ಬ ವ್ಯಕ್ತಿಯು ಪ್ರೀತಿಯ ಸಂದೇಶವನ್ನು ಅರ್ಥಮಾಡಿಕೊಳ್ಳಲು ವಿಫಲವಾದರೆ ಅವನು ಗಳಿಸಿದ ಎಲ್ಲಾ ಜ್ಞಾನವೂ ನಿರರ್ಥಕ ಎಂದು ಹೇಳಿದರು.
Organized around the timeless Hindu civilizational ideal of “Vasudhaiva Kutumbakam — the world is one family,” , #HinduVishwaBandhu : Embrace the World with Friendship” event celebrated Hindu identity and heritage while emphasizing the importance of meaningful engagement, mutual… https://t.co/tOplXb8giF pic.twitter.com/cJKll32j9i
— RSS (@RSSorg) August 31, 2026
“ನಾವು ಈ ವೈವಿಧ್ಯತೆಯನ್ನು ಸ್ವೀಕರಿಸಬೇಕು, ಗೌರವಿಸಬೇಕು ಮತ್ತು ಸೇವೆ ಮಾಡಬೇಕು. ಏಕೆಂದರೆ ಇದು ಏಕತೆಯ ಅಭಿವ್ಯಕ್ತಿಯಾಗಿದೆ. ಪ್ರಕೃತಿಯಲ್ಲಿ ಸತ್ಯದ ಅಭಿವ್ಯಕ್ತಿ ವೈವಿಧ್ಯಮಯ. ವೈವಿಧ್ಯತೆಯು ನೈಸರ್ಗಿಕವಾದುದು. ಆದರೆ, ಏಕತೆಯೇ ಅಂತಿಮ ಸತ್ಯ. ಅದುವೇ ಭಾರತದ ಪ್ರಾಚೀನ ಸಂಸ್ಕೃತಿ” ಎಂದು ಅವರು ಹೇಳಿದ್ದಾರೆ.
ಇದನ್ನೂ ಓದಿ: ನ್ಯೂಯಾರ್ಕ್ನಲ್ಲಿ ಆಗಸ್ಟ್ 29ರಂದು ಏಕತಾ ಆಚರಣೆಯಲ್ಲಿ ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಭಾಗಿ
“ಉದಾರ ಮನಸ್ಸಿನ ಮತ್ತು ಜ್ಞಾನವುಳ್ಳವರು ‘ವಸುಧೈವ ಕುಟುಂಬಕಂ’ ಭಾವನೆಯನ್ನು ಸ್ವೀಕರಿಸುತ್ತಾರೆ. ಭೌತಿಕ ಜಗತ್ತಿನಲ್ಲಿ ಜನರು ದೇಹ, ಆಕಾರ ಮತ್ತು ಬಣ್ಣದಲ್ಲಿ ಭಿನ್ನವಾಗಿದ್ದರೂ, ಮೂಲತಃ ನಾವೆಲ್ಲರೂ ಒಂದೇ. ಆದ್ದರಿಂದ ಇತರರಿಗೆ ಸೇವೆ ಮಾಡುವುದು ನಮ್ಮ ಕರ್ತವ್ಯ” ಎಂದಿದ್ದಾರೆ.
ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ