ಬ್ರಿಟನ್‌ನಲ್ಲಿ ಸಿಖ್ ಬಸ್ ಚಾಲಕನ ಮೇಲೆ ಹಲ್ಲೆ; ಗಡ್ಡ ಎಳೆದು, ಬಸ್ ಅಪಹರಿಸಿದ ವಿಡಿಯೋ ವೈರಲ್
ಇಂಗ್ಲೆಂಡ್‌ನ ಟೆಲ್‌ಫೋರ್ಡ್‌ನಲ್ಲಿ ಶುಕ್ರವಾರ ಸಂಜೆ ಸಿಖ್ ಸಮುದಾಯದ ಬಸ್ ಚಾಲಕನೋರ್ವನ ಮೇಲೆ ಕ್ರೂರವಾಗಿ ಹಲ್ಲೆ ನಡೆಸಿ, ಗಡ್ಡ ಹಿಡಿದು ಎಳೆದು ಬಸ್ ಅಪಹರಿಸಿದ ಭೀಕರ ಘಟನೆ ನಡೆದಿದೆ. ಅಪಹರಣಕಾರನನ್ನು ಅಲಿ ಬಾಲ್ಹಾದ್ ಎಂಬ ಯೆಮೆನ್ ದೇಶದ ಪ್ರಜೆ ಎಂದು ಗುರುತಿಸಲಾಗಿದ್ದು, ಪೊಲೀಸರು ಆತನನ್ನು ಬಂಧಿಸಿದ್ದಾರೆ. ಈ ಇಡೀ ಧಾಂದಲೆಯ ವೀಡಿಯೋ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ವೈರಲ್ ವಿಡಿಯೋದಲ್ಲಿ ಆರೋಪಿ ಅಲಿ ಬಾಲ್ಹಾದ್ ಸಿಖ್ ಚಾಲಕನ ಗಡ್ಡವನ್ನು ಹಿಡಿದು ಎಳೆಯುವುದು ಹಾಗೂ ತನ್ನ ತಲೆಯಿಂದ ಚಾಲಕನ ತಲೆಗೆ ಬಲವಾಗಿ ಗುದ್ದುವುದು ಕಂಡುಬಂದಿದೆ.

ಲಂಡನ್, ಸೆಪ್ಟೆಂಬರ್ 20:ಇಂಗ್ಲೆಂಡ್‌ನ ಶ್ರೋಪ್‌ಶೈರ್ ಪ್ರಾಂತ್ಯದ ಟೆಲ್‌ಫೋರ್ಡ್ ನಗರದಲ್ಲಿ ಸಿಖ್ ಸಮುದಾಯದ ಬಸ್ ಚಾಲಕನೋರ್ವನ ಮೇಲೆ ದುಷ್ಕರ್ಮಿಯೊಬ್ಬ ಹಲ್ಲೆ ನಡೆಸಿ, ಆತನ ಗಡ್ಡವನ್ನು ಎಳೆದು, ಬಸ್ ಅನ್ನು ಅಪಹರಿಸಿಕೊಂಡು ಹೋದ ಕೃತ್ಯ ನಡೆದಿದೆ. ಬಳಿಕ ಆ ಬಸ್ ಅನ್ನು ರಾಂಗ್ ಸೈಡ್ನಲ್ಲಿ ವೇಗವಾಗಿ ಚಲಾಯಿಸಿ ಹಲವು ಕಾರುಗಳಿಗೆ ಢಿಕ್ಕಿ ಹೊಡೆಸಲಾಗಿದ್ದು, ಈ ಇಡೀ ಘಟನೆಯ ದೃಶ್ಯಾವಳಿಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ. ಈ ಘಟನೆಗೆ ಸಂಬಂಧಿಸಿದಂತೆ ಬ್ರಿಟನ್‌ನ ವೆಸ್ಟ್ ಮೆರ್ಸಿಯಾ ಪೊಲೀಸರು 30 ವರ್ಷದ ಆರೋಪಿಯನ್ನು ತಕ್ಷಣವೇ ಬಂಧಿಸಿದ್ದಾರೆ.
ಶುಕ್ರವಾರ ಸಂಜೆ ಸುಮಾರು 6.37ರ ಸುಮಾರಿಗೆ ಮೆಡ್ಲಿ ಪ್ರದೇಶದ ಕೋರ್ಟ್ ಸ್ಟ್ರೀಟ್‌ನಲ್ಲಿ ಬಸ್ ಚಾಲಕನ ಮೇಲೆ ವ್ಯಕ್ತಿಯೊಬ್ಬ ಹಲ್ಲೆ ನಡೆಸುತ್ತಿರುವ ಕುರಿತು ಕರೆ ಬಂದಿತ್ತು ಎಂದು ಪೊಲೀಸರು ತಿಳಿಸಿದ್ದಾರೆ. ದುಷ್ಕರ್ಮಿಯು ಸಿಖ್ ಚಾಲಕನ ಮೇಲೆ ಹಲ್ಲೆ ನಡೆಸಿ, ಗಡ್ಡ ಹಿಡಿದು ಎಳೆದು, ಆತನನ್ನು ಬಸ್‌ನಿಂದ ಹೊರಗೆ ತಳ್ಳಿ ಬಸ್ ಅನ್ನು ವಶಕ್ಕೆ ಪಡೆದುಕೊಂಡಿದ್ದನು. ಆರೋಪಿಯು ಚಾಲಕನ ಕ್ಯಾಬಿನ್‌ನಲ್ಲಿದ್ದ ಲೈಟ್ ಭಾಗವನ್ನು ಕಿತ್ತು ಚಾಲಕನಿಗೆ ಹೊಡೆಯುವುದಾಗಿ ಬೆದರಿಕೆ ಹಾಕಿದ್ದಾನೆ. ನಿರಂತರವಾಗಿ ಒಂದು ನಿಮಿಷಕ್ಕೂ ಹೆಚ್ಚು ಕಾಲ ಹಲ್ಲೆ ನಡೆಸಿದ ಬಳಿಕ ಚಾಲಕನನ್ನು ಬಸ್‌ನಿಂದ ಹೊರಗೆ ತಳ್ಳಿ, ತಾನೇ ಸ್ಟೀರಿಂಗ್ ಹಿಡಿದು ಬಸ್ ಚಲಾಯಿಸಿಕೊಂಡು ಹೋಗಿದ್ದಾನೆ. ಬಸ್ ಅನ್ನು ಅಪಹರಿಸಿದ ಆರೋಪಿಯು ‘ಪಾರ್ಕ್ ವೇ’ ಮಾರ್ಗವಾಗಿ ‘ಹೈ ಸ್ಟ್ರೀಟ್’ ಕಡೆಗೆ ಭಾರಿ ವೇಗವಾಗಿ ಬಸ್ ಚಾಲನೆ ಮಾಡಿದ್ದಾನೆ. ಈ ವೇಳೆ ಎದುರಿಗೆ ಬಂದ ಹಲವು ಕಾರುಗಳು ಹಾಗೂ ವಾಹನಗಳಿಗೆ ಬಸ್ ನೇರವಾಗಿ ಢಿಕ್ಕಿ ಹೊಡೆದಿದೆ.
ಮಾಹಿತಿ ತಿಳಿಯುತ್ತಿದ್ದಂತೆಯೇ ಸ್ಥಳಕ್ಕಾಗಮಿಸಿದ ಪೊಲೀಸರು ಬಸ್ ಅನ್ನು ಬೆನ್ನಟ್ಟಿ ತಡೆದು ನಿಲ್ಲಿಸಿದ್ದಾರೆ. ಕರೆ ಬಂದ ಕೇವಲ 10 ನಿಮಿಷಗಳಲ್ಲಿ ‘ಮಾಲಿನ್ಸ್‌ಗೇಟ್’ ಪೊಲೀಸ್ ಠಾಣೆಯ ಸಶಸ್ತ್ರ ಪೊಲೀಸರು ಸ್ಥಳಕ್ಕೆ ಧಾವಿಸಿ, ಬಸ್ ತಡೆದು ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ. ಸಿಖ್ ಚಾಲಕನಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ. ಅದೃಷ್ಟವಶಾತ್ ಬೇರೆ ಯಾರಿಗೂ ಗಂಭೀರ ಗಾಯಗಳಾಗಿಲ್ಲ.
🇬🇧 Hoy en En Reino Unido, un enajenado y violento africano asaltó un bus público, agredió fuertemente contra el conductor inmigrante sij, y se llevó el bus que condujo en vía contraria para finalmente estrellarlo contra varios autos. Que hermosa es la diversidad cultural,… pic.twitter.com/vFl81DakMD
— Carlo Martin (@Liberfach0) September 18, 2026
ಅಪಾಯಕಾರಿ ರೀತಿಯಲ್ಲಿ ವಾಹನ ಚಾಲನೆ ಹಾಗೂ ದರೋಡೆ ಆರೋಪದಡಿಯಲ್ಲಿ 30 ವರ್ಷ ವಯಸ್ಸಿನ ವ್ಯಕ್ತಿಯನ್ನು ಸ್ಥಳದಲ್ಲೇ ಬಂಧಿಸಲಾಗಿದೆ. ಸಿಖ್ ಚಾಲಕನ ಧಾರ್ಮಿಕ ಭಾವನೆಗೆ ಧಕ್ಕೆ ತಂದು, ಗಡ್ಡವನ್ನು ಎಳೆದು ಹಲ್ಲೆ ನಡೆಸಿರುವ ಈ ಘಟನೆಯನ್ನು ಬ್ರಿಟನ್‌ನಲ್ಲಿರುವ ಭಾರತೀಯ ಹಾಗೂ ಸಿಖ್ ಸಮುದಾಯದ ನಾಯಕರು ತೀವ್ರವಾಗಿ ಖಂಡಿಸಿದ್ದಾರೆ.
ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ




