
ಇಸ್ರೇಲ್, ಅಕ್ಟೋಬರ್ 09: ಫ್ಲೈದುಬೈ ವಿಮಾನದಲ್ಲಿ 174 ಪ್ರಯಾಣಿಕರು ಹಾಗೂ ಸಿಬ್ಬಂದಿಯ ಜೀವ ಉಳಿಸಲು ಧೈರ್ಯದಿಂದ ಹೋರಾಡಿದ ಭಾರತೀಯ ಪೈಲಟ್ ಕ್ಯಾಪ್ಟನ್ ಸ್ಮಿತ್ ಮಚ್ಚರ್ ಅವರಿಗೆ ಇಸ್ರೇಲ್ ತನ್ನ ಪ್ರತಿಷ್ಠಿತ ನಾಗರಿಕ ಶೌರ್ಯ ಪ್ರಶಸ್ತಿಯನ್ನು ನೀಡಿ ಗೌರವಿಸಲು ನಿರ್ಧರಿಸಿದೆ. ಇಸ್ರೇಲ್ ಅಧ್ಯಕ್ಷ ಐಸಾಕ್ ಹೆರ್ಜಾಗ್ ಈ ಘೋಷಣೆ ಮಾಡಿದ್ದು, ಪೈಲಟ್ ಸಂಪೂರ್ಣವಾಗಿ ಚೇತರಿಸಿಕೊಂಡ ಬಳಿಕ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ತಿಳಿಸಿದ್ದಾರೆ.
ವರದಿಗಳ ಪ್ರಕಾರ, ಫ್ಲೈದುಬೈ ವಿಮಾನದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಭಾರತೀಯ ಪೈಲಟ್ ಸ್ಮಿತ್ ಮಚ್ಚರ್ ಅವರ ಮೇಲೆ ಓಮನ್ ಮೂಲದ ಸಹ ಪೈಲಟ್ ಹಮ್ಮಮ್ ಅಲ್-ಹಮ್ಮಮಿ ದಾಳಿ ನಡೆಸಿದ್ದನು. ದಾಳಿಗೆ ಕ್ರ್ಯಾಶ್ ಕೊಡಲಿಯನ್ನು ಬಳಸಲಾಗಿತ್ತು ಎನ್ನಲಾಗಿದೆ. ಈ ಘಟನೆಯಲ್ಲಿ ಮಚ್ಚರ್ ಗಂಭೀರವಾಗಿ ಗಾಯಗೊಂಡು ತೀವ್ರ ರಕ್ತಸ್ರಾವಕ್ಕೆ ಒಳಗಾದರು. ಆದರೂ ಅವರು ಧೈರ್ಯ ಕಳೆದುಕೊಳ್ಳದೆ ಕಾಕ್‌ಪಿಟ್ ಬಾಗಿಲು ತೆರೆದರು. ಇದರಿಂದ ವಿಮಾನದಲ್ಲಿದ್ದ ಇಸ್ರೇಲಿ ಪ್ರಯಾಣಿಕರು ಒಳಗೆ ಪ್ರವೇಶಿಸಿ ದಾಳಿಕೋರನನ್ನು ನಿಯಂತ್ರಿಸಲು ನೆರವಾದರು ಎಂದು ವರದಿಗಳು ತಿಳಿಸಿವೆ.
ದಾಳಿಯ ನಡುವೆಯೂ ವಿಮಾನದ ಮೇಲಿನ ನಿಯಂತ್ರಣವನ್ನು ಮರಳಿ ಪಡೆಯುವ ಪ್ರಯತ್ನ ನಡೆಯಿತು. ವಿಮಾನವನ್ನು ಸೌದಿ ಅರೇಬಿಯಾದ ತಬೂಕ್‌ನಲ್ಲಿ ತುರ್ತಾಗಿ ಇಳಿಸಲಾಯಿತು ಎಂದು ವರದಿಯಾಗಿದೆ. ಪೈಲಟ್‌ಗಳ ಸಮಯೋಚಿತ ಕ್ರಮದಿಂದ ದೊಡ್ಡ ಅನಾಹುತ ತಪ್ಪಿತು. ಗಂಭೀರವಾಗಿ ಗಾಯಗೊಂಡ ಕ್ಯಾಪ್ಟನ್ ಸ್ಮಿತ್ ಅವರನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಯಿತು. ಅವರು ಯುಎಇಯ ಆಸ್ಪತ್ರೆಯಲ್ಲಿ ಚೇತರಿಸಿಕೊಳ್ಳುತ್ತಿದ್ದಾರೆ ಎಂದು ವರದಿಗಳು ತಿಳಿಸಿವೆ.
ಇಸ್ರೇಲ್ ಅಧ್ಯಕ್ಷ ಐಸಾಕ್ ಹೆರ್ಜಾಗ್ ಅವರು ಕ್ಯಾಪ್ಟನ್ ಸ್ಮಿತ್ ಅವರ ಧೈರ್ಯ ಮತ್ತು ವೃತ್ತಿಪರತೆಯನ್ನು ಶ್ಲಾಘಿಸಿದ್ದಾರೆ. “ಕ್ಯಾಪ್ಟನ್ ಮಚ್ಚರ್ ಅವರ ಸಂಪೂರ್ಣ ಚೇತರಿಕೆಗೆ ನಮ್ಮ ಹೃತ್ಪೂರ್ವಕ ಶುಭಾಶಯಗಳು. ಅವರ ಅಸಾಧಾರಣ ಧೈರ್ಯ ಮತ್ತು ವೃತ್ತಿಪರತೆ ದೊಡ್ಡ ದುರಂತವನ್ನು ತಪ್ಪಿಸಲು ನೆರವಾಗಿದೆ. ಅವರು ಚೇತರಿಸಿಕೊಂಡ ಬಳಿಕ ಇಸ್ರೇಲ್ ಜನರ ಪರವಾಗಿ ನಾಗರಿಕ ಶೌರ್ಯಕ್ಕಾಗಿ ನೀಡುವ ಅಧ್ಯಕ್ಷೀಯ ಪ್ರಶಸ್ತಿಯನ್ನು ಪ್ರದಾನ ಮಾಡುವುದು ನನಗೆ ಗೌರವದ ವಿಷಯ,” ಎಂದು ಹೆರ್ಜಾಗ್ ಹೇಳಿದ್ದಾರೆ.
ಮತ್ತಷ್ಟು ಓದಿ: ಮಿಡ್-ಏರ್ ಹೈಡ್ರಾಮಾ ತನಿಖೆಯಲ್ಲಿ ಶಾಕಿಂಗ್ ಸತ್ಯ: ಕ್ಯಾಪ್ಟನ್ ಸ್ಮಿತ್‌ಗೆ ಚಾಕು ಇರಿದಿದ್ದ ಕೋ-ಪೈಲಟ್ ಉಗ್ರ
ವಿಮಾನದಲ್ಲಿದ್ದ ಸಹ ಪ್ರಯಾಣಿಕನ ದಾಳಿಯನ್ನು ತಡೆಯಲು ನೆರವಾದ ಐದು ಇಸ್ರೇಲಿ ನಾಗರಿಕರಿಗೂ ಇಸ್ರೇಲ್ ಅಧ್ಯಕ್ಷರು ಶೌರ್ಯ ಪ್ರಶಸ್ತಿ ನೀಡಿ ಗೌರವಿಸಿದ್ದಾರೆ ಎಂದು ವರದಿಯಾಗಿದೆ. ಅಪಾಯದ ಸಂದರ್ಭದಲ್ಲಿ ಇತರರ ಜೀವ ಉಳಿಸಲು ಅವರು ತೋರಿದ ಧೈರ್ಯವನ್ನು ಅಧ್ಯಕ್ಷರು ಪ್ರಶಂಸಿಸಿದ್ದಾರೆ.
ಕ್ಯಾಪ್ಟನ್ ಸ್ಮಿತ್ ಅವರ ಸಾಹಸವನ್ನು ಭಾರತದ ಪ್ರಧಾನಿ ನರೇಂದ್ರ ಮೋದಿ, ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಮತ್ತು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಶ್ಲಾಘಿಸಿದ್ದಾರೆ ಎಂದು ವರದಿಯಾಗಿದೆ. ತಮ್ಮ ಜೀವವನ್ನೇ ಅಪಾಯಕ್ಕೆ ಒಡ್ಡಿಕೊಂಡು ನೂರಾರು ಜನರ ಸುರಕ್ಷತೆಗೆ ಆದ್ಯತೆ ನೀಡಿದ ಕ್ಯಾಪ್ಟನ್ ಸ್ಮಿತ್ ಅವರ ನಡೆ, ಕರ್ತವ್ಯನಿಷ್ಠೆ ಮತ್ತು ಮಾನವೀಯ ಧೈರ್ಯಕ್ಕೆ ಸಾಕ್ಷಿಯಾಗಿದೆ. ಅವರ ಚೇತರಿಕೆಯ ಬಳಿಕ ನಡೆಯಲಿರುವ ಪ್ರಶಸ್ತಿ ಪ್ರದಾನ ಸಮಾರಂಭದ ಮೇಲೆ ಈಗ ಎಲ್ಲರ ಗಮನ ನೆಟ್ಟಿದೆ.
ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 7:25 am, Fri, 9 October 26