11 ದಿನಗಳ ಬಳಿಕ ಎನ್‌ವಿಡಿಯಾಗೆ ಮರಳಿದ ಜೆನ್ಸನ್ ಹುವಾಂಗ್‌ಗೆ ಉದ್ಯೋಗಿಗಳಿಂದ ಅಪ್ಪುಗೆಯ ಸ್ವಾಗತ

ಎನ್‌ವಿಡಿಯಾ ಸಹ-ಸಂಸ್ಥಾಪಕ ಜೆನ್ಸನ್ ಹುವಾಂಗ್ 11 ದಿನಗಳ ಬಳಿಕ ಸಿಇಒ ಸ್ಥಾನಕ್ಕೆ ಮರಳಿದ್ದಾರೆ. ವೈಯಕ್ತಿಕ ವಿವಾದದಿಂದ ರಾಜೀನಾಮೆ ನೀಡಿದ್ದ ಅವರಿಗೆ ಸಿಬ್ಬಂದಿ ಅಪ್ಪುಗೆಯ ಸ್ವಾಗತ ನೀಡಿದ್ದಾರೆ. 'ಮತ್ತೆ ಉತ್ತಮ ಸಿಇಒ ಆಗುತ್ತೇನೆ' ಎಂದ ಹುವಾಂಗ್, ತಮ್ಮ ತಪ್ಪುಗಳಿಗೆ ಕ್ಷಮೆ ಯಾಚಿಸಿದರು. ಎಐ ಚಿಪ್ ತಯಾರಿಕೆಯಲ್ಲಿ ಪ್ರಮುಖವಾಗಿರುವ ಎನ್‌ವಿಡಿಯಾ ಷೇರುಗಳು ಹುವಾಂಗ್ ಮರುನೇಮಕದಿಂದ ಏರಿಕೆ ಕಂಡಿವೆ. ಇದು ಜಾಗತಿಕ ತಂತ್ರಜ್ಞಾನ ವಲಯದಲ್ಲಿ ದೊಡ್ಡ ಚರ್ಚೆಯಾಗಿದೆ.

11 ದಿನಗಳ ಬಳಿಕ ಎನ್‌ವಿಡಿಯಾಗೆ ಮರಳಿದ ಜೆನ್ಸನ್ ಹುವಾಂಗ್‌ಗೆ  ಉದ್ಯೋಗಿಗಳಿಂದ ಅಪ್ಪುಗೆಯ ಸ್ವಾಗತ
ಹುವಾಂಗ್
Image Credit source: India TV

Updated on: Nov 24, 2026 | 8:28 AM

ಕ್ಯಾಲಿಫೋರ್ನಿಯಾ​, ನವೆಂಬರ್ 24: ವಿಶ್ವದ ಪ್ರಮುಖ ತಂತ್ರಜ್ಞಾನ ಕಂಪನಿಗಳಲ್ಲಿ ಒಂದಾದ ಎನ್​ವಿಡಿಯಾದಲ್ಲಿ ಮಹತ್ವದ ಬೆಳವಣಿಗೆ ನಡೆದಿದೆ. ಕಂಪನಿಯ ಸಿಇಒ ಸ್ಥಾನಕ್ಕೆ ರಾಜೀನಾಮೆ ನೀಡಿದ್ದ ಸಂಸ್ಥೆಯ ಸಹ ಸಂಸ್ಥಾಪಕ ಜೆನ್ಸನ್ ಹುವಾಂಗ್ ಮತ್ತೆ ಅದೇ ಹುದ್ದೆಗೆ ಮರಳಿದ್ದಾರೆ. ಸುಮಾರು 11 ದಿನಗಳ ಬಳಿಕ ಕಂಪನಿಯ ಪ್ರಧಾನ ಕಚೇರಿಗೆ ಬಂದ ಅವರಿಗೆ ಸಿಬ್ಬಂದಿ ಅಪ್ಪುಗೆ ಮೂಲಕ ಸ್ವಾಗತ ಕೋರಿದ್ದಾರೆ. ಚಪ್ಪಾಳೆ ತಟ್ಟುತ್ತಾ ಅವರ ಹೆಸರನ್ನು ಕೂಗುತ್ತಾ ಸಂಭ್ರಮಿಸಿದ್ದಾರೆ.

ಕ್ಯಾಲಿಫೋರ್ನಿಯಾದ ಸಾಂಟಾ ಕ್ಲಾರಾದಲ್ಲಿರುವ ಎನ್‌ವಿಡಿಯಾ ಪ್ರಧಾನ ಕಚೇರಿಗೆ ಸೋಮವಾರ ಜೆನ್ಸನ್ ಹುವಾಂಗ್ ಆಗಮಿಸುತ್ತಿದ್ದಂತೆ ನೌಕರರು ‘ಜೆನ್ಸನ್, ಜೆನ್ಸನ್’ ಎಂದು ಘೋಷಣೆ ಕೂಗಿದ್ದಾರೆ. ಈ ಸಂದರ್ಭದಲ್ಲಿ ಮಾತನಾಡಿದ ಹುವಾಂಗ್, ತನಗೆ ಮತ್ತೊಂದು ಅವಕಾಶ ನೀಡಿದ್ದಕ್ಕಾಗಿ ಎಲ್ಲರಿಗೂ ಧನ್ಯವಾದ ತಿಳಿಸಿದ್ದಾರೆ.

Loading...

ಈ ಬಾರಿ ಇನ್ನೂ ಉತ್ತಮ ಸಿಇಒ ಆಗುತ್ತೇನೆ

ಸಿಬ್ಬಂದಿಯನ್ನು ಉದ್ದೇಶಿಸಿ ಮಾತನಾಡಿದ ಜೆನ್ಸನ್ ಹುವಾಂಗ್, “ನನಗೆ ಎರಡನೇ ಅವಕಾಶ ನೀಡಿದ್ದಕ್ಕಾಗಿ ಎಲ್ಲರಿಗೂ ಧನ್ಯವಾದಗಳು. ಈ ಬಾರಿ ನಾನು ಇನ್ನೂ ಉತ್ತಮ ಸಿಇಒ ಆಗುತ್ತೇನೆ” ಎಂದು ಹೇಳಿದ್ದಾರೆ. ಈ ಮಾತು ಕೇಳುತ್ತಿದ್ದಂತೆ ಸಿಬ್ಬಂದಿ ಮತ್ತಷ್ಟು ಹರ್ಷೋದ್ಗಾರ ಮಾಡಿದ್ದಾರೆ.

ಇದನ್ನೂ ಓದಿ: ‘ನಮ್ಮ ಬಾಸ್ ಬೇಕು’: ಜೆನ್ಸೆನ್ ಹುವಾಂಗ್ ಪರ ನಿಂತ ಎನ್​ವಿಡಿಯಾದ 1,600ಕ್ಕೂ ಹೆಚ್ಚು ಉದ್ಯೋಗಿಗಳು

ಇನ್ನೊಂದು ಸಂದರ್ಭದಲ್ಲಿ ಮಾತನಾಡಿದ ಅವರು, “ನಿಮ್ಮೆಲ್ಲರನ್ನೂ ಈ ಪರಿಸ್ಥಿತಿಯನ್ನು ಎದುರಿಸುವಂತೆ ಮಾಡಿದ್ದಕ್ಕೆ ನನಗೆ ತುಂಬಾ ವಿಷಾದವಿದೆ. ನಾನು ಕೆಲವು ಗಂಭೀರ ತಪ್ಪುಗಳನ್ನು ಮಾಡಿದ್ದೇನೆ. ಮತ್ತೆ ನಿಮ್ಮ ವಿಶ್ವಾಸ ಗಳಿಸಲು ಪ್ರಯತ್ನಿಸುತ್ತೇನೆ” ಎಂದು ಕ್ಷಮೆಯಾಚಿಸಿದ್ದಾರೆ.

ಈ ವೇಳೆ ಮಹಿಳಾ ಉದ್ಯೋಗಿಯೊಬ್ಬರು ಮುಂದೆ ಬಂದು ಹುವಾಂಗ್ ಅವರನ್ನು ಅಪ್ಪಿಕೊಂಡಿದ್ದಾರೆ. ಇದನ್ನು ಕಂಡ ಇತರ ಸಿಬ್ಬಂದಿ ಚಪ್ಪಾಳೆ ತಟ್ಟಿ ಸಂಭ್ರಮಿಸಿದ್ದಾರೆ. ಕಚೇರಿಗೆ ಮರಳಿದ ಬಳಿಕ ಹುವಾಂಗ್ ತಮಾಷೆಯ ಮಾತುಗಳನ್ನೂ ಆಡಿದ್ದಾರೆ. “ಇದು ನನ್ನ ಕೆಲಸದ ಮೊದಲ ದಿನ. ನನ್ನ ಬಳಿ ಕಂಪ್ಯೂಟರ್ ಇಲ್ಲ. ಹೀಗಾಗಿ ಐಟಿ ವಿಭಾಗದವರು ನನಗೆ ಹೊಸ ಕಂಪ್ಯೂಟರ್ ಕೊಡಬೇಕಿದೆ” ಎಂದು ಹೇಳಿ ನೌಕರರನ್ನು ನಗೆಗಡಲಲ್ಲಿ ತೇಲಿಸಿದ್ದಾರೆ.

ರಾಜೀನಾಮೆ ನೀಡಿದ್ದೇಕೆ?

ಜೆನ್ಸನ್ ಹುವಾಂಗ್ ನವೆಂಬರ್ 12, 2026ರಂದು ಎನ್‌ವಿಡಿಯಾದ ಸಿಇಒ, ಅಧ್ಯಕ್ಷ ಮತ್ತು ನಿರ್ದೇಶಕ ಮಂಡಳಿಯ ಸದಸ್ಯ ಸ್ಥಾನಗಳಿಗೆ ರಾಜೀನಾಮೆ ನೀಡಿದ್ದರು. ಅವರ ವೈಯಕ್ತಿಕ ಸಂಬಂಧಗಳ ಕುರಿತು ವರದಿಗಳು ಪ್ರಕಟವಾದ ಬೆನ್ನಲ್ಲೇ ಈ ಬೆಳವಣಿಗೆ ನಡೆದಿತ್ತು. ಕೆಲವು ಸಂಬಂಧಗಳು ಕಂಪನಿಯ ಉದ್ಯೋಗಿಗಳೊಂದಿಗೆ ಹೊಂದಿದ್ದವು ಎಂಬ ಆರೋಪಗಳೂ ಕೇಳಿಬಂದಿದ್ದವು. ಅಲ್ಲದೆ, ಚೀನಾ ಮೂಲದ ಮಹಿಳೆಯೊಬ್ಬರ ಜೊತೆಗಿನ ಸಂಬಂಧ ಮತ್ತು ವಿದೇಶಿ ಗುಪ್ತಚರ ಚಟುವಟಿಕೆಗಳ ಸಾಧ್ಯತೆಯ ಬಗ್ಗೆಯೂ ತನಿಖೆಯ ವಿಚಾರ ಮುನ್ನೆಲೆಗೆ ಬಂದಿತ್ತು. ಹುವಾಂಗ್ ರಾಜೀನಾಮೆ ಬಳಿಕ ಎನ್‌ವಿಡಿಯಾದ ಮುಖ್ಯ ಹಣಕಾಸು ಅಧಿಕಾರಿ (CFO) ಕೊಲೆಟ್ ಕ್ರೆಸ್ ಅವರನ್ನು ಹಂಗಾಮಿ ಸಿಇಒ ಆಗಿ ನೇಮಕ ಮಾಡಲಾಗಿತ್ತು.

ಮತ್ತೆ ಸಿಇಒ ಆಗಿ ನೇಮಕ

ನವೆಂಬರ್ 23ರಂದು ಎನ್‌ವಿಡಿಯಾ ನಿರ್ದೇಶಕ ಮಂಡಳಿಯು ಜೆನ್ಸನ್ ಹುವಾಂಗ್ ಅವರನ್ನು ಮತ್ತೆ ಸಿಇಒ ಮತ್ತು ಅಧ್ಯಕ್ಷರನ್ನಾಗಿ ನೇಮಿಸುವ ನಿರ್ಧಾರ ಕೈಗೊಂಡಿದೆ. ಮಂಡಳಿಯು ಅವರೊಂದಿಗೆ ಹಲವು ಸುತ್ತಿನ ಚರ್ಚೆ ನಡೆಸಿದ ಬಳಿಕ ಸರ್ವಾನುಮತದಿಂದ ಈ ನಿರ್ಧಾರ ತೆಗೆದುಕೊಂಡಿದೆ.

ಅವರ ನಾಯಕತ್ವದ ಸಾಮರ್ಥ್ಯ ಮತ್ತು ಪ್ರಾಮಾಣಿಕತೆಯ ಬಗ್ಗೆ ಮಂಡಳಿಗೆ ವಿಶ್ವಾಸವಿದೆ ಎಂದು ಕಂಪನಿ ತಿಳಿಸಿದೆ. ಅಮೆರಿಕದ ಸರ್ಕಾರದ ಹಿರಿಯ ಅಧಿಕಾರಿಗಳಿಂದಲೂ ಈ ನಿರ್ಧಾರಕ್ಕೆ ಸಂಬಂಧಿಸಿದಂತೆ ಅಭಿಪ್ರಾಯ ಪಡೆಯಲಾಗಿದೆ. ಹುವಾಂಗ್ ವಿರುದ್ಧದ ತನಿಖೆ ಮಾತ್ರ ಮುಂದುವರಿಯಲಿದೆ ಎಂದು ಕಂಪನಿ ಸ್ಪಷ್ಟಪಡಿಸಿದೆ.

ಹುವಾಂಗ್ ಮರಳಿದ್ದಕ್ಕೆ ಕಂಪನಿಯಲ್ಲಿ ಸಂಭ್ರಮವೇಕೆ?

ಜೆನ್ಸನ್ ಹುವಾಂಗ್ ಎನ್‌ವಿಡಿಯಾದ ಸಹ-ಸಂಸ್ಥಾಪಕರಾಗಿದ್ದು, ಕಂಪನಿಯನ್ನು ಜಾಗತಿಕ ಮಟ್ಟದಲ್ಲಿ ಬೆಳೆಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಕೃತಕ ಬುದ್ಧಿಮತ್ತೆ (AI) ತಂತ್ರಜ್ಞಾನಕ್ಕೆ ಅಗತ್ಯವಿರುವ ಅತ್ಯಾಧುನಿಕ ಚಿಪ್‌ಗಳ ತಯಾರಿಕೆಯಲ್ಲಿ ಎನ್‌ವಿಡಿಯಾ ಪ್ರಮುಖ ಕಂಪನಿಯಾಗಿದೆ. ಹುವಾಂಗ್ ಮತ್ತೆ ಸಿಇಒ ಆಗಬೇಕೆಂದು ಒತ್ತಾಯಿಸಿ ಉದ್ಯೋಗಿಗಳು ಸೇರಿದಂತೆ 2 ಲಕ್ಷಕ್ಕೂ ಹೆಚ್ಚು ಜನರು ಸಹಿ ಹಾಕಿದ್ದ ಮನವಿಯೂ ಸುದ್ದಿಯಾಗಿತ್ತು. ಅವರ ಮರುನೇಮಕದ ಘೋಷಣೆಯ ಬಳಿಕ ಕಂಪನಿಯ ಷೇರುಗಳ ಬೆಲೆಯಲ್ಲೂ ಭಾರಿ ಏರಿಕೆ ಕಂಡುಬಂದಿದೆ.

ಒಟ್ಟಿನಲ್ಲಿ, ಕೇವಲ 11 ದಿನಗಳಲ್ಲಿ ರಾಜೀನಾಮೆ, ವಿವಾದ, ಮರುನೇಮಕ ಮತ್ತು ಅದ್ಧೂರಿ ಸ್ವಾಗತದ ಮೂಲಕ ಜೆನ್ಸನ್ ಹುವಾಂಗ್ ಅವರ ಮರಳುವಿಕೆ ಜಾಗತಿಕ ತಂತ್ರಜ್ಞಾನ ವಲಯದಲ್ಲಿ ಭಾರಿ ಚರ್ಚೆಗೆ ಕಾರಣವಾಗಿದೆ.

 

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

ನಯನಾ ರಾಜೀವ್

ನಯನಾ ರಾಜೀವ್ ಮೂಲತಃ ಶಿವಮೊಗ್ಗ ಜಿಲ್ಲೆಯ ಸಾಗರದ ಬಾಳೆಗೆರೆಯವರು, ಹಿಂದಿಯಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಮಾಧ್ಯಮ ಕ್ಷೇತ್ರದಲ್ಲಿ 10ಕ್ಕೂ ಹೆಚ್ಚು ವರ್ಷ ಕೆಲಸ ಮಾಡಿದ ಅನುಭವವಿದೆ. ಕನ್ನಡ ಪ್ರಭ ದಿನಪತ್ರಿಕೆಯಲ್ಲಿ 3 ವರ್ಷಗಳ ಕಾಲ ಕೆಲಸ ಮಾಡಿದ್ದಾರೆ. ಒನ್​ ಇಂಡಿಯಾ ಕನ್ನಡ ವೆಬ್​ಸೈಟ್​ನಲ್ಲಿ ನಾಲ್ಕೂವರೆ ವರ್ಷ ಕೆಲಸ ನಿರ್ವಹಿಸಿದ್ದಾರೆ. ಡಿಜಿಟಲ್ ವಿಭಾಗದಲ್ಲಿ ಕಳೆದ 6 ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಟಿವಿ 9 ಕನ್ನಡ ಡಿಜಿಟಲ್​ನಲ್ಲಿ ಸೀನಿಯರ್ ಸಬ್​ ಎಡಿಟರ್ ಆಗಿ ಕಳೆದ ಮೂರು ವರ್ಷಗಳಿಂದ ಕೆಲಸ ಮಾಡುತ್ತಿದ್ದಾರೆ. ಆಸಕ್ತಿಕರ ಕ್ಷೇತ್ರ ಟ್ರೆಕಿಂಗ್ ಮತ್ತು ಸಂಗೀತ.

Read More
Loading...
Unable to load recommendations.
Follow Us