ಯೇಸು ಕ್ರಿಸ್ತನ ಅಂತ್ಯಕ್ರಿಯೆಗೆ ಬಳಸಿದ್ದ ಬಟ್ಟೆಗೆ ಭಾರತದ ನಂಟು; ವಿಜ್ಞಾನಿಗಳ ಸಂಶೋಧನೆ ಹೇಳೋದೇನು?

ಯೇಸು ಕ್ರಿಸ್ತನ ಟುರಿನ್ ಶ್ರೌಡ್ (ಅಂತ್ಯಕ್ರಿಯೆ ವೇಳೆ ದೇಹವನ್ನು ಸುತ್ತಲು ಬಳಸಲಾಗುವ ಬಟ್ಟೆ) ಬಗ್ಗೆ ಆಗಾಗ ಚರ್ಚೆಗಳು, ಸಂಶೋಧನೆಗಳು ನಡೆಯುತ್ತಲೇ ಇರುತ್ತವೆ. ಇದೀಗ ಇಟಲಿಯ ವಿಜ್ಞಾನಿಗಳ ತಂಡವೊಂದು ನಡೆಸಿದ ಸಂಶೋಧನೆಯಲ್ಲಿ ಈ ಬಟ್ಟೆಗೂ ಭಾರತಕ್ಕೂ ನಂಟಿದೆ ಎಂಬ ಸತ್ಯ ಬೆಳಕಿಗೆ ಬಂದಿದೆ. ಈ ಬಟ್ಟೆಯ ಡಿಎನ್​ಎಯಲ್ಲಿ ಭಾರತೀಯ ಸಸ್ಯಗಳ ಕುರುಹಿದೆ. ಇದು ಲಿನಿನ್ ಬಟ್ಟೆಯಾಗಿದ್ದು, ಇದರ ನೇಯ್ಗೆಯಲ್ಲಿ ಅನೇಕ ದೇಶಗಳಲ್ಲಿರುವ ಸಸ್ಯಗಳ ಡಿಎನ್​ಎ ಇದೆಯಂತೆ. ಅದರಲ್ಲಿ ಭಾರತದ ಡಿಎನ್​ಎ ಕೂಡ ಸಿಕ್ಕಿದೆ.

ಯೇಸು ಕ್ರಿಸ್ತನ ಅಂತ್ಯಕ್ರಿಯೆಗೆ ಬಳಸಿದ್ದ ಬಟ್ಟೆಗೆ ಭಾರತದ ನಂಟು; ವಿಜ್ಞಾನಿಗಳ ಸಂಶೋಧನೆ ಹೇಳೋದೇನು?
Shroud Of Turin
Image Credit source: blogs.reuters.com

Updated on: Apr 01, 2026 | 8:32 PM

ನವದೆಹಲಿ, ಏಪ್ರಿಲ್ 1: ಕ್ರೈಸ್ತ ಧರ್ಮೀಯರಿಂದ ಪೂಜಿಸಲ್ಪಡುವ ಯೇಸು ಕ್ರಿಸ್ತನ ಬಗ್ಗೆ ಇಂದಿಗೂ ಸಂಶೋಧನೆಗಳು ನಡೆಯುತ್ತಲೇ ಇವೆ. ಟುರಿನ್ ಶ್ರೌಡ್ (ಯೇಸು ಕ್ರಿಸ್ತನ ಅಂತ್ಯಕ್ರಿಯೆ ವೇಳೆ ಸುತ್ತಲು ಬಳಸಲಾದ ಬಿಳಿಯ ಬಟ್ಟೆ) ಕುರಿತು ಈಗ ಹೊಸ ಸಂಶೋಧನೆ ಅಚ್ಚರಿಯ ಸಂಗತಿಯನ್ನು ಬಯಲು ಮಾಡಿದೆ. ಅತ್ಯಾಧುನಿಕ ಡಿಎನ್‌ಎ (DNA) ವಿಶ್ಲೇಷಣೆ ಈ ಬಟ್ಟೆಗೂ ಭಾರತಕ್ಕೂ ಸಂಬಂಧವಿದೆ ಎಂದು ತಿಳಿಸಿದೆ. ವಿಜ್ಞಾನಿಗಳು ಈ ಬಟ್ಟೆಯ ಮೇಲಿರುವ ಧೂಳಿನ ಕಣಗಳು ಮತ್ತು ಪರಾಗವನ್ನು ಪರೀಕ್ಷಿಸಿದಾಗ ಅದರಲ್ಲಿ ಪ್ರಪಂಚದ ವಿವಿಧ ಭಾಗಗಳ ಸಸ್ಯಗಳ ಡಿಎನ್‌ಎ ಪತ್ತೆಯಾಗಿದೆ. ಅವುಗಳಲ್ಲಿ ಭಾರತಕ್ಕೆ ಸೇರಿದ ಸಸ್ಯಗಳ ಡಿಎನ್​ಎ ಕೂಡ ಇದೆ.

ಈ ಬಟ್ಟೆಯನ್ನು ತಯಾರಿಸಲು ಬಳಸಲಾದ ನೂಲು ಭಾರತದ ಗಿಡದ್ದಾಗಿರಬಹುದು ಅಥವಾ ಈ ಬಟ್ಟೆಯ ನೇಯ್ಗೆಯನ್ನು ಭಾರತದಲ್ಲಿ ನಡೆಸಿರಬಹುದು ಅಥವಾ ಈ ಬಟ್ಟೆಯು ಭಾರತದ ಮೂಲಕ ಮಧ್ಯಪ್ರಾಚ್ಯಕ್ಕೆ ರವಾನೆಯಾಗಿರಬಹುದು ಎಂದು ವಿಜ್ಞಾನಿಗಳು ಅಭಿಪ್ರಾಯಪಟ್ಟಿದ್ದಾರೆ. ಇಟಲಿಯ ಪಡುವಾ ವಿಶ್ವವಿದ್ಯಾಲಯದ ಸಂಶೋಧಕರು ಈ ಅಧ್ಯಯನ ನಡೆಸಿದ್ದಾರೆ. ಜೀನ್ ಸೀಕ್ವೆನ್ಸಿಂಗ್ ತಂತ್ರಜ್ಞಾನವನ್ನು ಬಳಸಿಕೊಂಡು ಸಂಶೋಧನೆ ಮಾಡಿದ್ದಾರೆ.


ಇದನ್ನೂ ಓದಿ: ಯೇಸುಕ್ರಿಸ್ತನ ಜನ್ಮಸ್ಥಳವಾದ ಬೆಥ್ ಲೆಹೆಮ್‌ನಲ್ಲಿ ಕ್ರಿಸ್‌ಮಸ್ ಟ್ರೀ ಇಲ್ಲ, ಹಬ್ಬದ ಸಂಭ್ರಮವೂ ಇಲ್ಲ

ಯೇಸು ಕ್ರಿಸ್ತನ ಮೈಮೇಲಿದ್ದ ಈ ಬಟ್ಟೆಯ ಮೇಲೆ ಕೇವಲ ಭಾರತದ್ದು ಮಾತ್ರವಲ್ಲದೆ ಚೀನಾ, ಮಧ್ಯಪ್ರಾಚ್ಯ ಮತ್ತು ಯುರೋಪ್‌ಗೆ ಸೇರಿದ ಸಸ್ಯಗಳ ಡಿಎನ್‌ಎ ಕೂಡ ಪತ್ತೆಯಾಗಿದೆ. ಹೀಗಾಗಿ ಈ ಬಟ್ಟೆಯು ಜಗತ್ತಿನಾದ್ಯಂತ ಸಂಚರಿಸಿದೆ ಎಂಬುದು ಸಾಬೀತಾಗಿದೆ. ​ಇಟಲಿಯ ಟುರಿನ್ ನಗರದ ಸೇಂಟ್ ಜಾನ್ ದಿ ಬ್ಯಾಪ್ಟಿಸ್ಟ್ ಕೆಥೆಡ್ರಲ್‌ನಲ್ಲಿ ಈ ಬಟ್ಟೆಯನ್ನು ಇರಿಸಲಾಗಿದೆ. ಇದು 4.4 ಮೀಟರ್ ಉದ್ದ ಮತ್ತು 1.1 ಮೀಟರ್ ಅಗಲದ ಲಿನಿನ್ ಬಟ್ಟೆಯಾಗಿದ್ದು, ಇದರ ಮೇಲೆ ಶಿಲುಬೆಗೇರಿಸಲ್ಪಟ್ಟ ವ್ಯಕ್ತಿಯ ಅಸ್ಪಷ್ಟ ಚಿತ್ರವಿದೆ. ಇದು ಯೇಸು ಕ್ರಿಸ್ತರ ಅಂತ್ಯಕ್ರಿಯೆಯ ವೇಳೆ ಬಳಸಿದ ಬಟ್ಟೆ ಎಂದು ಕ್ರೈಸ್ತ ಧರ್ಮದ ಭಕ್ತರು ನಂಬುತ್ತಾರೆ. ಆದರೆ, ಇದುವರೆಗೂ ಈ ಬಗ್ಗೆ ಹಲವು ಸಂಶೋಧನೆಗಳು ನಡೆದಿವೆ.

ಇದನ್ನೂ ಓದಿ: Christmas 2025: ಯೇಸುಕ್ರಿಸ್ತರ ಜನ್ಮ ದಿನಾಚರಣೆಯ ಸಂಭ್ರಮ; ಕ್ರಿಸ್ಮಸ್‌ ಹಬ್ಬದ ಇತಿಹಾಸ, ಮಹತ್ವವನ್ನು ತಿಳಿಯಿರಿ

ಈ ಬಟ್ಟೆಯಲ್ಲಿ ಯೇಸು ಕ್ರಿಸ್ತನ ದೇಹವನ್ನು ಶಿಲುಬೆಗೇರಿಸಿದ ನಂತರ ಸುತ್ತಿಡಲಾಗಿದೆ ಎಂದು ನಂಬಲಾಗಿದೆ. ಇದರ ಮೇಲೆ ಕ್ರಿಸ್ತನನ್ನು ಹೋಲುವ ಮುಖವೂ ಇದೆ. ಇಟಲಿಯ ಪಡೋವಾ ವಿಶ್ವವಿದ್ಯಾಲಯದ ಗಿಯಾನಿ ಬಾರ್ಕಾಸಿಯಾ, 2015ರಲ್ಲಿ ಮೊದಲು ಇದು ಭಾರತದಲ್ಲಿ ತನ್ನ ಮೂಲವನ್ನು ಹೊಂದಿರಬಹುದು ಎಂದು ಅಭಿಪ್ರಾಯಪಟ್ಟಿದ್ದರು.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ 

Published On - 8:31 pm, Wed, 1 April 26

Follow Us