Myanmar Air Strike: ಮ್ಯಾನ್ಮಾರ್ ಮಿಲಿಟರಿಯಿಂದ ವೈಮಾನಿಕ ದಾಳಿ, ಹಲವು ಮಕ್ಕಳು ಸೇರಿ 100 ಮಂದಿ ಸಾವು
ಮ್ಯಾನ್ಮಾರ್ ಸೇನೆ(Myanmar Military) ಯು ಮಂಗಳವಾರ ನಡೆಸಿದ ವೈಮಾನಿಕ ದಾಳಿಯಲ್ಲಿ ಹಲವು ಮಕ್ಕಳು ಸೇರಿದಂತೆ 100 ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ ಎಂದು ಹೇಳಲಾಗಿದೆ.
ಮ್ಯಾನ್ಮಾರ್ ಸೇನೆ(Myanmar Military) ಯು ಮಂಗಳವಾರ ನಡೆಸಿದ ವೈಮಾನಿಕ ದಾಳಿಯಲ್ಲಿ ಹಲವು ಮಕ್ಕಳು ಸೇರಿದಂತೆ 100 ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ ಎಂದು ಹೇಳಲಾಗಿದೆ. ಮಿಲಿಟರಿ ಆಡಳಿತದ ವಿರೋಧಿಗಳು ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಅವರು ಭಾಗವಹಿಸಿದ್ದರು ಎಂಬ ಕಾರಣಕ್ಕೆ ಸೇನೆಯು ಮನಬಂದಂತೆ ದಾಳಿ ನಡೆಸಿತ್ತು. ಫೆಬ್ರವರಿ 2021 ರಲ್ಲಿ ಆಂಗ್ ಸಾನ್ ಸೂಕಿ ಅವರ ಚುನಾಯಿತ ಸರ್ಕಾರವನ್ನು ಸೇನೆಯು ಉರುಳಿಸಿತು. ಅಂದಿನಿಂದ, ಅವರ ಆಡಳಿತದ ವಿರುದ್ಧ ಪ್ರತಿಭಟನೆಗಳನ್ನು ಹತ್ತಿಕ್ಕಲು ಮಿಲಿಟರಿ ಆಗಾಗ ವೈಮಾನಿಕ ದಾಳಿಗಳನ್ನು ನಡೆಸುತ್ತಿದೆ.
ಅಮೆರಿಕ (America) ವಿದೇಶಾಂಗ ಇಲಾಖೆಯ ವಕ್ತಾರ ವೇದಾಂತ್ ಪಟೇಲ್ ಪ್ರತಿಕ್ರಿಯಿಸಿ, ಹಿಂಸಾತ್ಮಕ ದಾಳಿಗಳ ಆಡಳಿತವು ಮಾನವ ಜೀವನವನ್ನು ಕಡೆಗಣಿಸುತ್ತದೆ. ಅಂತಹ ಆಡಳಿತವನ್ನು ಬಲವಾಗಿ ಖಂಡಿಸುತ್ತೇವೆ. ಫೆಬ್ರವರಿ 2021ರ ದಂಗೆಯ ನಂತರ ಮ್ಯಾನ್ಮಾರ್ ಭೀಕರ ರಾಜಕೀಯ ಬಿಕ್ಕಟ್ಟು ಎದುರಿಸುತ್ತಿದೆ.
ಈ ಹಿನ್ನೆಲೆಯಲ್ಲಿ ಮ್ಯಾನ್ಮಾರ್‍ಗೆ ಮಾನವೀಯ ಜವಾಬ್ದಾರಿಯ ಸರ್ಕಾರ ಬೇಕಿದೆ. ಭೀಕರ ಹಿಂಸಾಚಾರವನ್ನು ನಿಲ್ಲಿಸಿ ಜನರ ಅಂತರ್ಗತ ಪ್ರಜಾಪ್ರಭುತ್ವದ ಆಕಾಂಕ್ಷೆಗಳನ್ನು ಗೌರವಿಸಲು ಅಮೆರಿಕ, ಮ್ಯಾನ್ಮಾರ್ ಆಡಳಿತಕ್ಕೆ ಕರೆ ನೀಡುತ್ತದೆ ಎಂದಿದ್ದಾರೆ.
ವಿಶ್ವಸಂಸ್ಥೆಯ ಮಾನವ ಹಕ್ಕುಗಳ ವಿಭಾಗದ ಮುಖ್ಯಸ್ಥ ವೋಲ್ಕರ್ ಟರ್ಕ್ ಅವರು ವೈಮಾನಿಕ ದಾಳಿಯಿಂದ ನನಗೆ ಗಾಬರಿಯಾಗಿದೆ. ವಿಶ್ವದ ಎಲ್ಲಾ ದೇಶಗಳು ದಾಳಿಯ ಹೊಣೆಗಾರರನ್ನು ಖಂಡಿಸಿ ನ್ಯಾಯಕ್ಕೆ ಒತ್ತಾಯಿಸಬೇಕು ಎಂದು ಮನವಿ ಮಾಡಿದ್ದಾರೆ.
ದಂಗೆಯ ನಂತರ 3,000 ಕ್ಕೂ ಹೆಚ್ಚು ನಾಗರಿಕರು ಭದ್ರತಾ ಪಡೆಗಳಿಂದ ಕೊಲ್ಲಲ್ಪಟ್ಟಿದ್ದಾರೆ ಎಂದು ಅಂದಾಜಿಸಲಾಗಿದೆ. ಸಾಗಯಿಂಗ್ ಪ್ರದೇಶದ ಕಣಬಾಲು ಟೌನ್‌ಶಿಪ್‌ನಲ್ಲಿರುವ ಪಜಿಗಿ ಗ್ರಾಮದ ಹೊರಗೆ ದೇಶದ ವಿರೋಧ ಪಕ್ಷದ ಸ್ಥಳೀಯ ಕಚೇರಿಯನ್ನು ತೆರೆಯಲು ಬೆಳಿಗ್ಗೆ 8 ಗಂಟೆಗೆ ನೆರೆದಿದ್ದ ಜನರ ಗುಂಪಿನ ಮೇಲೆ ಫೈಟರ್ ಜೆಟ್ ಬಾಂಬ್ ಸ್ಫೋಟಿಸಿತು.
ಈ ಪ್ರದೇಶವು ದೇಶದ ಎರಡನೇ ಅತಿ ದೊಡ್ಡ ನಗರವಾದ ಮ್ಯಾಂಡಲೆಯ ಉತ್ತರಕ್ಕೆ ಸುಮಾರು 110 ಕಿಲೋಮೀಟರ್ ದೂರದಲ್ಲಿದೆ. ಸುಮಾರು ಅರ್ಧ ಗಂಟೆಯ ನಂತರ ಹೆಲಿಕಾಪ್ಟರ್‌ನಿಂದ ಗುಂಡು ಹಾರಿಸಲಾಯಿತು ಎಂದು ಪ್ರತ್ಯಕ್ಷದರ್ಶಿ ಹೇಳಿದ್ದಾರೆ. ಸ್ವತಂತ್ರ ಮಾಧ್ಯಮ ವರದಿಗಳ ಪ್ರಕಾರ, ಆರಂಭದಲ್ಲಿ 50 ಜನರು ಕೊಲ್ಲಲ್ಪಟ್ಟರು ಎಂದು ಅಂದಾಜಿಸಲಾಗಿದೆ, ಆದರೆ ಈ ಸಂಖ್ಯೆ ಈಗ 100 ರ ಆಸುಪಾಸಿನಲ್ಲಿದೆ.
ಉದ್ಘಾಟನಾ ಸಮಾರಂಭಕ್ಕೆ ಸುಮಾರು 150 ಜನರು ಜಮಾಯಿಸಿದ್ದರು ಮತ್ತು ಸತ್ತವರಲ್ಲಿ ಮಹಿಳೆಯರು ಮತ್ತು 20-30 ಮಕ್ಕಳು ಸೇರಿದ್ದಾರೆ ಎಂದು ಅವರು ಹೇಳಿದರು.
ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ