ನೇಪಾಳದಲ್ಲಿ ಮತ್ತೆ ಭುಗಿಲೆದ್ದ ಜೆನ್-ಝಡ್ ಪ್ರತಿಭಟನೆ; ಪ್ರಧಾನಿ ಬಾಲೆನ್ ಶಾ ವಿರುದ್ಧ ಆಕ್ರೋಶಕ್ಕೆ ಕಾರಣವೇನು?
ನೇಪಾಳದಲ್ಲಿ ಕಳೆದ ಮಾರ್ಚ್‌ನಲ್ಲಿ ಭಾರಿ ಬಹುಮತದೊಂದಿಗೆ ಪ್ರಧಾನಿಯಾಗಿ ಅಧಿಕಾರ ವಹಿಸಿಕೊಂಡ ಮಾಜಿ ರ‍್ಯಾಪರ್ ಹಾಗೂ ಯುವ ನಾಯಕ ಬಾಲೆನ್ ಶಾ (ಬಾಲೇಂದ್ರ ಶಾ) ವಿರುದ್ಧ ಅಲ್ಲಿನ 'ಜೆನ್ ಝಡ್' (ಯುವ ಪೀಳಿಗೆ) ತೀವ್ರ ಆಕ್ರೋಶಗೊಂಡು ಮತ್ತೆ ಬೀದಿಗೆ ಇಳಿದಿದೆ. ಹಿಂದಿನ ಸರ್ಕಾರದ ಪತನಕ್ಕೆ ಕಾರಣವಾಗಿದ್ದ ಯುವಕರ ಪ್ರತಿಭಟನೆಯ ಬಳಿಕ ಯುವಕರೇ ವೋಟ್ ಹಾಕಿ ಬಾಲೆನ್ ಶಾ ಅವರನ್ನು ಗೆಲ್ಲಿಸಿದ್ದರು. ಆದರೆ, ಇದೀಗ ಅದೇ ತಮ್ಮ ನೆಚ್ಚಿನ ನಾಯಕನ ವಿರುದ್ಧವೇ ಕೇವಲ ನೂರು ದಿನಗಳಲ್ಲಿ ಯುವಕರು ತಿರುಗಿಬಿದ್ದಿರುವುದೇಕೆ? ಎಂಬುದರ ವಿವರಗಳು ಇಲ್ಲಿವೆ.

ಕಠ್ಮಂಡು, ಜುಲೈ 13: ನೇಪಾಳದಲ್ಲಿ ಮತ್ತೊಮ್ಮೆ ಯುವಪೀಳಿಗೆ ರಸ್ತೆಗಿಳಿದು ಪ್ರತಿಭಟನೆ ನಡೆಸುತ್ತಿದೆ. ಯಾವುದೇ ಪರ್ಯಾಯ ಪುನರ್ವಸತಿ ಯೋಜನೆ ಇಲ್ಲದೆ ಕೊಳೆಗೇರಿ ನಿವಾಸಿಗಳನ್ನು ಒಕ್ಕಲೆಬ್ಬಿಸುತ್ತಿರುವ ಸರ್ಕಾರದ ನೀತಿಯನ್ನು ವಿರೋಧಿಸಿ ಭಾನುವಾರ ನೇಪಾಳದ ರಾಜಧಾನಿ ಕಠ್ಮಂಡುವಿನಲ್ಲಿ ನೂರಾರು ಜನರು ಬೃಹತ್ ಪ್ರತಿಭಟನೆ ನಡೆಸಿದ್ದಾರೆ. ಇದರಿಂದಾಗಿ ಕೆಲವೇ ತಿಂಗಳುಗಳ ಹಿಂದೆ ಭಾರಿ ಬಹುಮತದೊಂದಿಗೆ ಅಧಿಕಾರಕ್ಕೆ ಬಂದ ಪ್ರಧಾನಿ ಬಾಲೇಂದ್ರ ಶಾ (ಬಾಲೆನ್ ಶಾ) ನೇತೃತ್ವದ ಸರ್ಕಾರಕ್ಕೆ ಸಂಕಷ್ಟ ಎದುರಾಗಿದೆ.
ಭೂಮಿಹೀನರು ಮತ್ತು ಕೊಳೆಗೇರಿ ನಿವಾಸಿಗಳ ಒಕ್ಕಲೆಬ್ಬಿಸುವುದು ಯುವ ಪೀಳಿಗೆಯ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಕಠ್ಮಂಡು ಕಣಿವೆ ಸೇರಿದಂತೆ ದೇಶದ ವಿವಿಧ ಭಾಗಗಳಲ್ಲಿ ಅನಧಿಕೃತವಾಗಿ ವಾಸಿಸುತ್ತಿದ್ದ ಸಾವಿರಾರು ಭೂಮಿಹೀನರು ಮತ್ತು ಕೊಳೆಗೇರಿ ನಿವಾಸಿಗಳ ತಾತ್ಕಾಲಿಕ ಶೆಡ್‌ಗಳನ್ನು ಸರ್ಕಾರ ತೆರವುಗೊಳಿಸಿದೆ. ಯಾವುದೇ ಬದಲಿ ವಸತಿ ಅಥವಾ ಪುನರ್ವಸತಿ ವ್ಯವಸ್ಥೆ ಕಲ್ಪಿಸದೆ ಸುಮಾರು 2,600 ಕುಟುಂಬಗಳ 15,000ಕ್ಕೂ ಹೆಚ್ಚು ಜನರನ್ನು ಏಕಾಏಕಿ ಬೀದಿಗೆ ತಳ್ಳಲಾಗಿದೆ ಎಂದು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತವಾಗಿದೆ.
ನೆರೆ ಹಾವಳಿ ಹಾಗೂ ಸರ್ಕಾರದ ನಿರ್ಲಕ್ಷ್ಯ:
ಇತ್ತೀಚೆಗೆ ಕಠ್ಮಂಡುವಿನ ತಾತ್ಕಾಲಿಕ ಪುನರ್ವಸತಿ ಕೇಂದ್ರವೊಂದಕ್ಕೆ ಪ್ರವಾಹದ ನೀರು ನುಗ್ಗಿದಾಗ ಜನರು ಪರದಾಡಬೇಕಾಯಿತು. ಬಡವರ ಮೇಲಿನ ಈ ದೌರ್ಜನ್ಯ ಮತ್ತು ಮಾನವ ಹಕ್ಕುಗಳ ಉಲ್ಲಂಘನೆಯನ್ನು ವಿರೋಧಿಸಿ ‘ಜೆನ್ ಝಡ್’ ಯುವಕರು “ಬಡವರ ಮೇಲಿನ ದೌರ್ಜನ್ಯ ನಿಲ್ಲಿಸಿ”, “ಮಾನವ ಹಕ್ಕು ಗೌರವಿಸಿ” ಎಂದು ಘೋಷಣೆ ಕೂಗುತ್ತಾ ಕಠ್ಮಂಡುವಿನ ಮೈತಿಘರ್ ಮಂಡಲದಲ್ಲಿ ಬೃಹತ್ ಪ್ರತಿಭಟನೆ ನಡೆಸಿದರು.
ಇದನ್ನೂ ಓದಿ: ನೇಪಾಳ: ಬಲೆನ್ ಶಾ ಅಧಿಕಾರ ಸ್ವೀಕಾರ ಬೆನ್ನಲ್ಲೇ ಮಾಜಿ ಪ್ರಧಾನಿ ಕೆಪಿ ಶರ್ಮಾ ಒಲಿ ಬಂಧನ
ಜಾಗತಿಕ ಬಿಕ್ಕಟ್ಟು ಹಾಗೂ ಹೆಚ್ಚುತ್ತಿರುವ ಹಣದುಬ್ಬರ:
ಬಾಲೆನ್ ಶಾ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಪಶ್ಚಿಮ ಏಷ್ಯಾದಲ್ಲಿ ಯುದ್ಧದ ಪರಿಸ್ಥಿತಿ ನಿರ್ಮಾಣವಾಯಿತು. ಇದರ ನೇರ ಹೊಡೆತ ನೇಪಾಳದ ಮೇಲೆ ಬಿದ್ದಿದೆ. ಅಡುಗೆ ಅನಿಲ ಮತ್ತು ಇಂಧನದ ಬೆಲೆಗಳು ಗಗನಕ್ಕೇರಿವೆ. ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದಾಗಿ ಸಾಮಾನ್ಯ ಜನಜೀವನ ದುಸ್ತರವಾಗಿದೆ. 100 ದಿನಗಳಲ್ಲಿ ಭ್ರಷ್ಟಾಚಾರ ಮುಕ್ತ ಆಡಳಿತ ನೀಡುತ್ತೇವೆ ಎಂದಿದ್ದ ಸರ್ಕಾರ ಹಣದುಬ್ಬರ ನಿಯಂತ್ರಿಸುವಲ್ಲಿ ವಿಫಲವಾಗಿದೆ ಎಂದು ಯುವಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ನೇಪಾಳದ ಯುವಕರು ವಿದೇಶಗಳಿಗೆ (ವಿಶೇಷವಾಗಿ ಗಲ್ಫ್ ದೇಶಗಳಿಗೆ) ವಲಸೆ ಹೋಗುವುದನ್ನು ತಪ್ಪಿಸಲು ಬಾಲೆನ್ ಶಾ ಅವರ ‘ರಾಷ್ಟ್ರೀಯ ಸ್ವತಂತ್ರ ಪಾರ್ಟಿ’ (RSP) ಮುಂದಿನ 5 ವರ್ಷಗಳಲ್ಲಿ 12 ಲಕ್ಷ ಉದ್ಯೋಗ ಸೃಷ್ಟಿ ಮಾಡುವುದಾಗಿ ಭರವಸೆ ನೀಡಿತ್ತು. ಆದರೆ ಯಾವುದೇ ಉದ್ಯೋಗಾವಕಾಶಗಳು ಸೃಷ್ಟಿಯಾಗುತ್ತಿಲ್ಲ. ಇದು ಕೂಡ ಯುವಕರ ಆಕ್ರೋಶಕ್ಕೆ ಕಾರಣವಾಗಿದೆ.
ಸರ್ಕಾರವನ್ನೇ ಪತನಗೊಳಿಸಿತ್ತು ಯುವಕರ ಪ್ರತಿಭಟನೆ:
ನೇಪಾಳದಲ್ಲಿ 2025ರ ಅಂತ್ಯದಲ್ಲಿ ಸೋಷಿಯಲ್ ಮೀಡಿಯಾ ನಿಷೇಧ ಹಾಗೂ ಭ್ರಷ್ಟಾಚಾರದ ವಿರುದ್ಧ ‘ಜೆನ್ ಝಡ್’ ಯುವಕರು ಬೃಹತ್ ಕ್ರಾಂತಿ ನಡೆಸಿ ಅಂದಿನ ಪ್ರಧಾನಿ ಕೆ.ಪಿ. ಶರ್ಮಾ ಓಲಿ ನೇತೃತ್ವದ ಸರ್ಕಾರವನ್ನು ಪತನಗೊಳಿಸಿದ್ದರು. ಆ ಆಂದೋಲನದ ಆಕ್ರೋಶದ ಅಲೆಯನ್ನೇ ರಾಜಕೀಯ ಶಕ್ತಿಯಾಗಿ ಪರಿವರ್ತಿಸಿಕೊಂಡು 35 ವರ್ಷದ ಬಾಲೆನ್ ಶಾ 2026ರ ಮಾರ್ಚ್‌ನಲ್ಲಿ ಪ್ರಧಾನಿಯಾದರು. ಅವರು ಅಲ್ಲಿನ ವ್ಯವಸ್ಥೆಯನ್ನು ಬದಲಾಯಿಸುತ್ತಾರೆ ಎಂದು ನಂಬಿದ್ದ ಅದೇ ಯುವಕರು, ಇಂದು ಅದೇ ನಾಯಕನ ವಿರುದ್ಧ ಮತ್ತೆ ಪ್ರತಿಭಟನೆಗೆ ಇಳಿದಿದ್ದಾರೆ.
ಇದನ್ನೂ ಓದಿ: ಭಾರತದ ಜೊತೆಗಿನ ಗಡಿ ವಿವಾದ ಬಗೆಹರಿಸಲು ಬ್ರಿಟನ್ ಸಹಾಯ ಬೇಕಿಲ್ಲ; ನೇಪಾಳದ ಪ್ರಧಾನಿ ಬಾಲೆನ್ ಶಾ ಸ್ಪಷ್ಟನೆ
ಪ್ರತಿಭಟನಾಕಾರರ ಪ್ರಮುಖ ಬೇಡಿಕೆಗಳು:
ನೇಪಾಳದ ಯುವಪೀಳಿಗೆ ಮತ್ತು ಪ್ರತಿಭಟನಾಕಾರರು ಸರ್ಕಾರದ ಮುಂದೆ ಕೆಲವು ಪ್ರಮುಖ ಬೇಡಿಕೆಗಳನ್ನು ಇಟ್ಟಿದ್ದಾರೆ. ಅವುಗಳೆಂದರೆ,
- ಪ್ರಧಾನಿ ಬಾಲೆನ್ ಶಾ ರಾಜೀನಾಮೆ ನೀಡಬೇಕು.
- ಯುವ ನಿರುದ್ಯೋಗ ಸಮಸ್ಯೆಯನ್ನು ಎದುರಿಸಲು ತಕ್ಷಣ ಆರ್ಥಿಕ ಸುಧಾರಣೆಗಳನ್ನು ತರಬೇಕು.
- ಸೂಕ್ತ ಪುನರ್ವಸತಿ ಕಲ್ಪಿಸದೆ ಬಲವಂತವಾಗಿ ಕೊಳೆಗೇರಿ ನಿವಾಸಿಗಳನ್ನು ಒಕ್ಕಲೆಬ್ಬಿಸುವುದನ್ನು ನಿಲ್ಲಿಸಬೇಕು.
- ಬಂಧಿತ ಯುವ ಕಾರ್ಯಕರ್ತರನ್ನು ತಕ್ಷಣ ಬಿಡುಗಡೆ ಮಾಡಬೇಕು.
- ನಿರಾಶ್ರಿತ ಕುಟುಂಬಗಳಿಗೆ ಖಾಯಂ ವಸತಿ ಒದಗಿಸಬೇಕು.
ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ




