ಭಾರತದಲ್ಲಿ ಹೂಡಿಕೆದಾರರಿಗೆ ಅವಕಾಶಗಳ ಮಹಾಪೂರ: ನಿರ್ಮಲಾ ಸೀತಾರಾಮನ್
ಜಾಗತಿಕ ಪೂರೈಕೆ ಸರಪಣಿಯು ಈಗ ಬದಲಾಗಿದೆ. ಭಾರತದಲ್ಲಿ ಸದೃಢ ಮತ್ತು ಬದ್ಧ ನಾಯಕತ್ವವಿದೆ. ಎಲ್ಲ ಹೂಡಿಕೆದಾರರು ಮತ್ತು ಕೈಗಾರಿಕೋದ್ಯಮಿಗಳಿಗೆ ಭಾರತದಲ್ಲಿ ಅವಕಾಶಗಳು ಲಭ್ಯವಿದೆ ಎಂದು ನಿರ್ಮಲಾ ಸೀತಾರಾಮನ್ ಹೇಳಿದರು.
ವಾಷಿಂಗ್ಟನ್: ಭಾರತದಲ್ಲಿ ಹೂಡಿಕೆದಾರರು ಹಾಗೂ ಕೈಗಾರಿಕೋದ್ಯಮಿಗಳಿಗೆ ಸಾಕಷ್ಟು ಅವಕಾಶಗಳಿವೆ. ಜಾಗತಿಕ ಪೂರೈಕೆ ವ್ಯವಸ್ಥೆಯಲ್ಲಿ ಆಗಿರುವ ಹೊಸ ಬೆಳವಣಿಗೆಗಳು ಹಾಗೂ ಭಾರತಕ್ಕೆ ಇರುವ ಸ್ಪಷ್ಟ ಮನಃಸ್ಥಿತಿಯ ಮತ್ತು ಬದ್ಧ ನಾಯಕತ್ವವು ದೇಶದಲ್ಲಿ ಹೂಡಿಕೆಗೆ ಪೂರಕ ವಾತಾವರಣ ರೂಪಿಸಿವೆ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ. ವಾಷಿಂಗ್ಟನ್ನಿಂದ ಶುಕ್ರವಾರ ತಡರಾತ್ರಿ ನ್ಯೂಯಾರ್ಕ್ಗೆ ಬಂದ ನಿರ್ಮಲಾ ಸೀತಾರಾಮನ್ ವಿಶ್ವಬ್ಯಾಂಕ್ ಮತ್ತು ಅಂತರರಾಷ್ಟ್ರೀಯ ಹಣಕಾಸು ನಿಧಿ (International Monetary Fund – IMF) ಸಂಸ್ಥೆಗಳ ವಾರ್ಷಿಕ ಸಭೆಗಳಲ್ಲಿ ಪಾಲ್ಗೊಂಡಿದ್ದರು.
ಜಾಗತಿಕ ಪೂರೈಕೆ ಸರಪಣಿಯು ಈಗ ಬದಲಾಗಿದೆ. ಭಾರತದಲ್ಲಿ ಸದೃಢ ಮತ್ತು ಬದ್ಧ ನಾಯಕತ್ವವಿದೆ. ಎಲ್ಲ ಹೂಡಿಕೆದಾರರು ಮತ್ತು ಕೈಗಾರಿಕೋದ್ಯಮಿಗಳಿಗೆ ಭಾರತದಲ್ಲಿ ಅವಕಾಶಗಳು ಲಭ್ಯವಿದೆ ಎಂದು ನಿರ್ಮಲಾ ಸೀತಾರಾಮನ್, ವಿಶ್ವದ ಮುಂಚೂಣಿ ಉದ್ಯಮಿಗಳು ಹಾಗೂ ಹೂಡಿಕೆದಾರರ ಸಮಾವೇಶದಲ್ಲಿ ಮಾತನಾಡಿದರು. ಈ ಸಮಾವೇಶವನ್ನು ಭಾರತದ ಕೈಗಾರಿಕೋದ್ಯಮಿಗಳ ಒಕ್ಕೂಟ ಮತ್ತು ಅಮೆರಿಕ-ಭಾರತ ಜಂಟಿ ಸಹಭಾಗಿತ್ವ ವೇದಿಕೆ ಆಯೋಜಿಸಿತ್ತು.
ಭಾರತದಲ್ಲಿ ನವೋದ್ಯಮಗಳು ಅತ್ಯುತ್ತಮ ಪ್ರಗತಿ ಸಾಧಿಸಿವೆ. ಷೇರುಪೇಟೆಗಳಿಂದಲೂ ಸಾಕಷ್ಟ ಕಂಪನಿಗಳು ಹಣ ಗಳಿಸುತ್ತಿವೆ. ಇದೊಂದೇ ವರ್ಷದಲ್ಲಿ 16 ನವೋದ್ಯಮಗಳು ಯೂನಿಕಾರ್ನ್ (ಅತ್ಯುತ್ತಮ ಸ್ಟಾರ್ಟ್ಅಪ್ಗಳು) ಅರ್ಹತೆ ಪಡೆದಿವೆ ಎಂದು ಅವರು ಹೇಳಿದರು. ಅತ್ಯಂತ ಸಂಕಷ್ಟದ ಸಮಯದಲ್ಲಿಯೂ ಭಾರತವು ಡಿಜಿಟಲೀಕರಣ ಪ್ರಕ್ರಿಯೆಯನ್ನು ಯಶಸ್ವಿಯಾಗಿ ಅನುಷ್ಠಾನಗೊಳಿಸಿತು.
ಹಣಕಾಸು ಕ್ಷೇತ್ರದಲ್ಲಿ ತಂತ್ರಜ್ಞಾನದ ಪಾತ್ರ ದೊಡ್ಡದು. ಆರ್ಥಿಕ ಸೇರ್ಪಡೆ ಮತ್ತು ಹಣಕಾಸು ತಂತ್ರಜ್ಞಾನ ಸಂಸ್ಥೆಗಳ ಪಾತ್ರ ಇದರಲ್ಲಿ ಬಹುಮುಖ್ಯವಾದುದು. ಮಾಸ್ಟರ್ಕಾರ್ಡ್ ಕಂಪನಿಯ ಕಾರ್ಯಕಾರಿ ನಿರ್ದೇಶಕ ಅಜಯ್ ಬಂಗಾ, ಸಿಇಒ ಮೈಕೆಲ್ ಮೀಬಾಚ್, ಫೆಡ್ಎಕ್ಸ್ ಕಾರ್ಪೊರೇಷನ್ ಅಧ್ಯಕ್ಷ ಮತ್ತು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಾಜ್ ಸುಬ್ರಹ್ಮಣ್ಯಂ, ಸಿಟಿ ಸಿಇಒ ಜೇನ್ ಫ್ರೇಸರ್ ಮತ್ತು ಐಬಿಎಂ ಅಧ್ಯಕ್ಷ ಹಾಗೂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಅರವಿಂದ್ ಕೃಷ್ಣ ಅವರನ್ನು ನಿರ್ಮಲಾ ಸೀತಾರಾಮನ್ ಭೇಟಿ ಮಾಡಿದರು.
ನಿರ್ಮಲಾ ಸೀತಾರಾಮನ್ ಅವರ ಭೇಟಿಯ ನಂತರ ಪ್ರತಿಕ್ರಿಯಿಸಿದ ಅಜಯ್ ಬಂಗಾ, ಭಾರತವು ಸಾಕಷ್ಟು ಅವಕಾಶಗಳನ್ನು ಹೊಂದಿರುವ ದೊಡ್ಡ ದೇಶ. ಅಲ್ಲಿ ನಡೆಯುತ್ತಿರುವ ನಿರಂತರ ಸುಧಾರಣೆಗಳಿಂದ ಪ್ರಗತಿಗೆ ಹೊಸ ವೇಗ ಸಿಕ್ಕಿದೆ ಎಂದರು. ಉತ್ಪಾದನೆಗೆ ಪ್ರೋತ್ಸಾಹ ನೀಡಲು ಭಾರತ ತೆಗೆದುಕೊಂಡಿರುವ ಉಪಕ್ರಮಗಳ ಬಗ್ಗೆ ನನಗೆ ಮೆಚ್ಚುಗೆಯಿದೆ. ಕಾರ್ಮಿಕ ಕೇಂದ್ರಿತ ಕೈಗಾರಿಕೆಗಳ ಸ್ಥಾಪನೆಯು ಭಾರತದ ಪ್ರಗತಿಗೆ ಹೊಸ ವೇಗ ನೀಡಬಲ್ಲದು ಎಂದು ಅವರು ಅಭಿಪ್ರಾಯಪಟ್ಟರು.
ಇದು ಕೇವಲ ಒಂದು ಸುಧಾರಣೆ ಅಲ್ಲ, ಸತತವಾಗಿ ನಡೆಯುತ್ತಿರುವ ಸುಧಾರಣೆಗಳ ಸರಣಿ. ಭಾರತದ ಪ್ರಗತಿಯ ವೇಗವು ಎಂದಿಗೂ ಕಡಿಮೆಯಾಗದಂತೆ ಇದು ನೆರವಾಗುತ್ತದೆ. ಪೂರೈಕೆ ಸರಪಣಿಯ ಭಾಗವಾಗಲು ಭಾರತಕ್ಕೆ ಸಾಕಷ್ಟು ಅವಕಾಶಗಳಿವೆ. ಮುಂದಿನ ಕೆಲ ವರ್ಷಗಳಲ್ಲಿ ಭಾರತದಲ್ಲಿ ಸಾಕಷ್ಟು ಹೊಸ ಉದ್ಯೋಗಗಳೂ ಸೃಷ್ಟಿಯಾಗಲಿವೆ ಎಂದು ಬಂಗಾ ಹೇಳಿದರು.
Union Finance Minister Smt. @nsitharaman addresses global business leaders and investors at a Roundtable organised by @USISPForum and @ficci_india in New York, today. (1/2) pic.twitter.com/qoO2u1dohb
— Ministry of Finance (@FinMinIndia) October 16, 2021
ಇದನ್ನೂ ಓದಿ: Nirmala Sitharaman: ವಿಶ್ವ ಬ್ಯಾಂಕ್ ಅಧ್ಯಕ್ಷರನ್ನು ಭೇಟಿಯಾಗಿ ವಿವಿಧ ವಿಚಾರ ಚರ್ಚಿಸಿದ ನಿರ್ಮಲಾ ಸೀತಾರಾಮನ್ ಇದನ್ನೂ ಓದಿ: Nirmala Sitharaman In US: ಭಾರತದಲ್ಲಿ ಹೂಡಿಕೆ ಮಾಡಲು ಅಮೆರಿಕದ ಸಿಇಒಗಳಿಗೆ ನಿರ್ಮಲಾ ಸೀತಾರಾಮನ್ ಆಹ್ವಾನ