ಅಫ್ಘಾನಿಸ್ತಾನದ ಮೇಲೆ ಪಾಕಿಸ್ತಾನ ವಾಯುಸೇನೆ ಏರ್‌ಸ್ಟ್ರೈಕ್: ಕುನಾರ್, ಪಕ್ತಿಕಾದಲ್ಲಿ ಬಾಂಬ್ ದಾಳಿಗೆ ಮೂವರು ಸಾವು, ಹಲವರಿಗೆ ಗಾಯ

ಪಾಕಿಸ್ತಾನ ಅಫ್ಘಾನಿಸ್ತಾನದ ಕುನಾರ್ ಮತ್ತು ಪಕ್ತಿಕಾ ಪ್ರಾಂತ್ಯಗಳ ಮೇಲೆ ವಾಯುದಾಳಿ ನಡೆಸಿದ್ದು, ಮೂವರು ಸಾವನ್ನಪ್ಪಿದ್ದಾರೆ. ಗಡಿ ದಾಟಿ ನಡೆದ ಈ ದಾಳಿಯಿಂದ ತೀವ್ರ ಆಕ್ರೋಶಗೊಂಡ ತಾಲಿಬಾನ್, ತಮ್ಮ ಸಾರ್ವಭೌಮತ್ವಕ್ಕೆ ಧಕ್ಕೆ ಬಂದರೆ ತಕ್ಕ ಪ್ರತ್ಯುತ್ತರ ನೀಡುವ ಎಚ್ಚರಿಕೆ ನೀಡಿದೆ. ತೆಹ್ರೀಕ್-ಎ-ತಾಲಿಬಾನ್ (ಟಿಟಿಪಿ) ಉಗ್ರರ ನೆಪವೊಡ್ಡಿ ಪಾಕಿಸ್ತಾನ ಈ ದಾಳಿ ನಡೆಸಿದೆ. ಇದರಿಂದ ಗಡಿಯಲ್ಲಿ ಉದ್ವಿಗ್ನತೆ ಹೆಚ್ಚಾಗಿದ್ದು, ಮಾನವೀಯ ಬಿಕ್ಕಟ್ಟು ಸೃಷ್ಟಿಯಾಗಿದೆ.

ಅಫ್ಘಾನಿಸ್ತಾನದ ಮೇಲೆ ಪಾಕಿಸ್ತಾನ ವಾಯುಸೇನೆ ಏರ್‌ಸ್ಟ್ರೈಕ್: ಕುನಾರ್, ಪಕ್ತಿಕಾದಲ್ಲಿ ಬಾಂಬ್ ದಾಳಿಗೆ ಮೂವರು ಸಾವು, ಹಲವರಿಗೆ ಗಾಯ
ದಾಳಿ
Image Credit source: Afghanistan Guardian

Updated on: Sep 21, 2026 | 12:25 PM

ಕಾಬೂಲ್, ಸೆಪ್ಟೆಂಬರ್ 21: ಗಡಿಯಾಚೆಗಿನ ಉಗ್ರರ ಉಪಟಳದ ಆರೋಪದ ಹಿನ್ನೆಲೆಯಲ್ಲಿ ಪಾಕಿಸ್ತಾನ ಮತ್ತು ಅಫ್ಘಾನಿಸ್ತಾನದ ತಾಲಿಬಾನ್ ಆಡಳಿತದ ನಡುವೆ ಉದ್ವಿಗ್ನತೆ ತಾರಕಕ್ಕೇರಿದೆ. ಸೋಮವಾರ ಮುಂಜಾನೆ ಅಫ್ಘಾನಿಸ್ತಾನದ ಕುನಾರ್ ಮತ್ತು ಪಕ್ತಿಕಾ ಪ್ರಾಂತ್ಯಗಳ ಮೇಲೆ ಪಾಕಿಸ್ತಾನ ವಾಯುಪಡೆ ಯುದ್ಧ ವಿಮಾನಗಳಿಂದ ಭೀಕರ ವೈಮಾನಿಕ ದಾಳಿ ನಡೆಸಿದೆ. ಕುನಾರ್‌ನಲ್ಲಿ ನಡೆದ ದಾಳಿಯಲ್ಲಿ ಕನಿಷ್ಠ ಮೂವರು ಸಾವನ್ನಪ್ಪಿದ್ದು, ಹಲವರು ಗಾಯಗೊಂಡಿದ್ದಾರೆ. ಈ ದಾಳಿಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿರುವ ತಾಲಿಬಾನ್, ತನ್ನ ಸಾರ್ವಭೌಮತ್ವಕ್ಕೆ ಧಕ್ಕೆ ತಂದರೆ ಭೀಕರ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಇಸ್ಲಾಮಾಬಾದ್‌ಗೆ ನೇರ ಎಚ್ಚರಿಕೆ ನೀಡಿದೆ.

ಕುನಾರ್ ಮತ್ತು ಪಕ್ತಿಕಾದಲ್ಲಿ ಬಾಂಬ್ ದಾಳಿ: ಸೋಮವಾರ ಮುಂಜಾನೆ ಪಾಕಿಸ್ತಾನದ ಯುದ್ಧ ವಿಮಾನಗಳು ಅಫ್ಘಾನ್ ಗಡಿಯೊಳಗೆ ನುಗ್ಗಿ ಬಾಂಬ್ ಸುರಿಸಿವೆ. ಪಕ್ತಿಕಾ ಪ್ರಾಂತ್ಯದ ಬರ್ಮಲ್ ಜಿಲ್ಲೆಯ ರಖಾ ಮತ್ತು ತೋರ್ಕಂಡಿ ಪ್ರದೇಶಗಳಲ್ಲಿ ಖಾಲಿ ಮನೆ ಮತ್ತು ಅಂಗಡಿಯೊಂದರ ಮೇಲೆ ದಾಳಿ ನಡೆದಿದ್ದು, ಯಾವುದೇ ಸಾವುನೋವು ಸಂಭವಿಸಿಲ್ಲ. ಆದರೆ ಕುನಾರ್ ಪ್ರಾಂತ್ಯದಲ್ಲಿ ನಡೆದ ವಾಯುದಾಳಿಯಲ್ಲಿ ಮೂವರು ಮೃತಪಟ್ಟಿದ್ದು, ಹಲವರು ಗಂಭೀರವಾಗಿ ಗಾಯಗೊಂಡಿದ್ದಾರೆ.

ಪಾಕಿಸ್ತಾನದ ಸಮರ್ಥನೆ: ತೆಹ್ರೀಕ್-ಎ-ತಾಲಿಬಾನ್ ಪಾಕಿಸ್ತಾನ್ (ಟಿಟಿಪಿ) ಸೇರಿದಂತೆ ವಿವಿಧ ಉಗ್ರ ಸಂಘಟನೆಗಳು ಪಾಕ್ ನೆಲದಲ್ಲಿ ರಕ್ತಪಾತ ನಡೆಸಲು ಅಫ್ಘಾನಿಸ್ತಾನದ ನೆಲವನ್ನು ತರಬೇತಿ ಮತ್ತು ಶಸ್ತ್ರಾಸ್ತ್ರ ಪೂರೈಕೆಗೆ ಬಳಸಿಕೊಳ್ಳುತ್ತಿವೆ; ತಮ್ಮ ದೇಶದ ಭದ್ರತಾ ಹಿತದೃಷ್ಟಿಯಿಂದ ಈ ಕ್ರಮ ಅನಿವಾರ್ಯ ಎಂದು ಪಾಕಿಸ್ತಾನ ಸೇನೆ ಸಮರ್ಥಿಸಿಕೊಂಡಿದೆ.

ತಾಲಿಬಾನ್ ವಕ್ತಾರನ ಎಚ್ಚರಿಕೆ: ಪಾಕಿಸ್ತಾನದ ಆರೋಪಗಳನ್ನು ಸಾರಾಸಾಗಟಾಗಿ ತಳ್ಳಿಹಾಕಿರುವ ತಾಲಿಬಾನ್ ವಕ್ತಾರ ಜಬಿಹುಲ್ಲಾ ಮುಜಾಹಿದ್, “ವಿಶ್ವಸಂಸ್ಥೆಯ ಚಾರ್ಟರ್‌ನ ಆರ್ಟಿಕಲ್ ೫೧ (ಆತ್ಮರಕ್ಷಣೆಯ ಹಕ್ಕು) ನೆಪವೊಡ್ಡಿ ಪಾಕಿಸ್ತಾನ ನಮ್ಮ ದೇಶದ ಗಡಿ ಮತ್ತು ಸಾರ್ವಭೌಮತ್ವವನ್ನು ಉಲ್ಲಂಘಿಸಿದರೆ, ತನ್ನ ರಕ್ಷಣೆ ಮಾಡಿಕೊಳ್ಳುವ ಸಂಪೂರ್ಣ ಹಕ್ಕು ಅಫ್ಘಾನಿಸ್ತಾನಕ್ಕಿದೆ ಮತ್ತು ನಾವು ತಕ್ಕ ಪ್ರತ್ಯುತ್ತರ ನೀಡಲಿದ್ದೇವೆ” ಎಂದು ಗುಡುಗಿದ್ದಾರೆ.

ಅಫ್ಘಾನಿಸ್ತಾನದಲ್ಲಿರುವ ವಿಶ್ವಸಂಸ್ಥೆಯ ಮಿಷನ್ (UNAMA) ಪ್ರಕಾರ, ಗಡಿಯಾಚೆಗಿನ ಪಾಕ್ ಮಿಲಿಟರಿ ದಾಳಿಗಳಿಂದ ಅಮಾಯಕ ಜನಸಾಮಾನ್ಯರು ಜೀವ ಕಳೆದುಕೊಳ್ಳುತ್ತಿದ್ದಾರೆ. 2026ರ ಏಪ್ರಿಲ್‌ನಿಂದ ಜೂನ್‌ವರೆಗಿನ ಮೂರು ತಿಂಗಳಲ್ಲಿ ಪಾಕ್ ಪಡೆಗಳ ದಾಳಿಯಿಂದಾಗಿ 57 ಸಾವುಗಳು ಮತ್ತು 352 ಗಾಯಗಳು ಸೇರಿದಂತೆ ಒಟ್ಟು 399 ನಾಗರಿಕ ಸಾವುನೋವುಗಳು ಸಂಭವಿಸಿವೆ. ಇದರಲ್ಲಿ 26 ಮಕ್ಕಳು ಮತ್ತು ೬ ಮಹಿಳೆಯರು ಮೃತಪಟ್ಟಿದ್ದಾರೆ.

ಮತ್ತಷ್ಟು ಓದಿ:ಸರ್ವನಾಶವೋ, ಆರ್ಥಿಕ ದಿವಾಳಿತನವೋ ಅಥವಾ ಡೀಲೋ?: ಇರಾನ್​ ಎದುರು ಟ್ರಂಪ್ ಇಟ್ಟ 3 ಆಯ್ಕೆಗಳು, ಹಾರ್ಮುಜ್‌ನಲ್ಲಿ ಹೈ ಅಲರ್ಟ್

ಬ್ರಿಟಿಷರ ಕಾಲದಲ್ಲಿ ಎಳೆಯಲಾದ 2,640 ಕಿ.ಮೀ. ಉದ್ದದ ‘ಡುರಾಂಡ್ ಲೈನ್’ ಗಡಿಯನ್ನು ಅಫ್ಘಾನಿಸ್ತಾನವು ಎಂದಿಗೂ ಅಧಿಕೃತ ಅಂತಾರಾಷ್ಟ್ರೀಯ ಗಡಿಯೆಂದು ಸಂಪೂರ್ಣವಾಗಿ ಒಪ್ಪಿಕೊಂಡಿಲ್ಲ. ಪಾಕಿಸ್ತಾನ ಈ ಗಡಿಯಲ್ಲಿ ತಂತಿಬೇಲಿ ಅಳವಡಿಸಲು ಆರಂಭಿಸಿದಾಗಿನಿಂದ ಉಭಯ ದೇಶಗಳ ನಡುವೆ ಸಶಸ್ತ್ರ ಘರ್ಷಣೆಗಳು ನಿರಂತರವಾಗಿ ನಡೆಯುತ್ತಿವೆ.

ವಿಡಿಯೋ

ಟಿಟಿಪಿ (TTP) ತಂದಿಟ್ಟ ವೈಷಮ್ಯ: ಕಾಬೂಲ್‌ನಲ್ಲಿ ತಾಲಿಬಾನ್ ಅಧಿಕಾರಕ್ಕೆ ಬಂದ ನಂತರ ಪಾಕಿಸ್ತಾನದಲ್ಲಿ ತೆಹ್ರೀಕ್-ಎ-ತಾಲಿಬಾನ್ ಪಾಕಿಸ್ತಾನ್ ಉಗ್ರರ ಉಪಟಳ ತೀವ್ರಗೊಂಡಿದೆ. ತಾಲಿಬಾನ್ ಸರ್ಕಾರವು ಟಿಟಿಪಿಗೆ ಆಶ್ರಯ ನೀಡುತ್ತಿದೆ ಎಂದು ಪಾಕಿಸ್ತಾನ ಆರೋಪಿಸುತ್ತಿದ್ದರೆ, ತನ್ನ ಆಂತರಿಕ ಭದ್ರತಾ ವೈಫಲ್ಯವನ್ನು ಮುಚ್ಚಿಕೊಳ್ಳಲು ಪಾಕಿಸ್ತಾನ ನಮ್ಮ ಮೇಲೆ ಗೂಬೆ ಕೂರಿಸುತ್ತಿದೆ ಎಂದು ತಾಲಿಬಾನ್ ಪ್ರತ್ಯಾರೋಪ ಮಾಡುತ್ತಿದೆ.

ಮಾನವೀಯ ಬಿಕ್ಕಟ್ಟು: ಗಡಿ ಪ್ರಾಂತ್ಯಗಳಾದ ಕುನಾರ್, ಪಕ್ತಿಕಾ ಮತ್ತು ಪಕ್ತ್ಯಾಗಳಲ್ಲಿ ನಿರಂತರ ನಡೆಯುತ್ತಿರುವ ಶೆಲ್ ದಾಳಿ ಮತ್ತು ವಾಯುದಾಳಿಗಳಿಂದಾಗಿ ಸಾವಿರಾರು ಗಡಿ ನಿವಾಸಿ ಕುಟುಂಬಗಳು ಮನೆಗಳನ್ನು ತೊರೆದು ಆಂತರಿಕವಾಗಿ ಸ್ಥಳಾಂತರಗೊಳ್ಳುತ್ತಿದ್ದು, ಆ ಭಾಗದಲ್ಲಿ ತೀವ್ರ ಮಾನವೀಯ ಬಿಕ್ಕಟ್ಟು ಸೃಷ್ಟಿಯಾಗಿದೆ.

 

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

 

 

Published On - 12:24 pm, Mon, 21 September 26

ನಯನಾ ರಾಜೀವ್

ನಯನಾ ರಾಜೀವ್ ಮೂಲತಃ ಶಿವಮೊಗ್ಗ ಜಿಲ್ಲೆಯ ಸಾಗರದ ಬಾಳೆಗೆರೆಯವರು, ಹಿಂದಿಯಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಮಾಧ್ಯಮ ಕ್ಷೇತ್ರದಲ್ಲಿ 10ಕ್ಕೂ ಹೆಚ್ಚು ವರ್ಷ ಕೆಲಸ ಮಾಡಿದ ಅನುಭವವಿದೆ. ಕನ್ನಡ ಪ್ರಭ ದಿನಪತ್ರಿಕೆಯಲ್ಲಿ 3 ವರ್ಷಗಳ ಕಾಲ ಕೆಲಸ ಮಾಡಿದ್ದಾರೆ. ಒನ್​ ಇಂಡಿಯಾ ಕನ್ನಡ ವೆಬ್​ಸೈಟ್​ನಲ್ಲಿ ನಾಲ್ಕೂವರೆ ವರ್ಷ ಕೆಲಸ ನಿರ್ವಹಿಸಿದ್ದಾರೆ. ಡಿಜಿಟಲ್ ವಿಭಾಗದಲ್ಲಿ ಕಳೆದ 6 ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಟಿವಿ 9 ಕನ್ನಡ ಡಿಜಿಟಲ್​ನಲ್ಲಿ ಸೀನಿಯರ್ ಸಬ್​ ಎಡಿಟರ್ ಆಗಿ ಕಳೆದ ಮೂರು ವರ್ಷಗಳಿಂದ ಕೆಲಸ ಮಾಡುತ್ತಿದ್ದಾರೆ. ಆಸಕ್ತಿಕರ ಕ್ಷೇತ್ರ ಟ್ರೆಕಿಂಗ್ ಮತ್ತು ಸಂಗೀತ.

Read More
Loading...
Unable to load recommendations.
Follow Us