ಪಾಕಿಸ್ತಾನದ ಅತ್ಯುನ್ನತ ಮಿಲಿಟರಿ ಶ್ರೇಣಿ ಫೀಲ್ಡ್ ಮಾರ್ಷಲ್ ಆಗಿ ಬಡ್ತಿ ಪಡೆದ ಪಾಕ್ ಸೇನಾ ಮುಖ್ಯಸ್ಥ ಅಸಿಮ್ ಮುನೀರ್
ಪಾಕಿಸ್ತಾನ ಸೇನಾ ಮುಖ್ಯಸ್ಥ ಜನರಲ್ ಅಸಿಮ್ ಮುನೀರ್ ಪಾಕಿಸ್ತಾನ ದೇಶದ ಅತ್ಯುನ್ನತ ಮಿಲಿಟರಿ ಶ್ರೇಣಿಯಾದ ಫೀಲ್ಡ್ ಮಾರ್ಷಲ್ ಆಗಿ ಬಡ್ತಿ ಪಡೆದಿದ್ದಾರೆ. ಮಾಜಿ ಮಿಲಿಟರಿ ಆಡಳಿತಗಾರ ಫೀಲ್ಡ್ ಮಾರ್ಷಲ್ ಅಯೂಬ್ ಖಾನ್ ನಂತರ ಅಸಿಮ್ ಮುನೀರ್ ಈಗ ಪಾಕಿಸ್ತಾನ ದೇಶದ ಇತಿಹಾಸದಲ್ಲಿ ಈ ಗೌರವವನ್ನು ಪಡೆದ ಎರಡನೇ ವ್ಯಕ್ತಿಯಾಗಿದ್ದಾರೆ.

ಇಸ್ಲಾಮಾಬಾದ್, ಮೇ 20: ಭಾರತ-ಪಾಕಿಸ್ತಾನದ ನಡುವಿನ ಉದ್ವಿಗ್ನತೆಯ ನಡುವೆ ಪಾಕಿಸ್ತಾನದ ಪ್ರಧಾನಿ ಶೆಹಬಾಜ್ ಷರೀಫ್ ನೇತೃತ್ವದ ಸರ್ಕಾರವು ಪಾಕ್ ಸೇನಾ ಮುಖ್ಯಸ್ಥ ಜನರಲ್ ಅಸಿಮ್ ಮುನೀರ್ (Asim Munir) ಅವರನ್ನು ಪಾಕಿಸ್ತಾನದ ಅತ್ಯುನ್ನತ ಮಿಲಿಟರಿ ಪದವಿಯಾದ ಫೀಲ್ಡ್ ಮಾರ್ಷಲ್ ಹುದ್ದೆಗೆ ಬಡ್ತಿ ನೀಡಿದೆ. ಮಾಜಿ ಮಿಲಿಟರಿ ಆಡಳಿತಗಾರ ಫೀಲ್ಡ್ ಮಾರ್ಷಲ್ ಅಯೂಬ್ ಖಾನ್ ನಂತರ ದೇಶದ ಇತಿಹಾಸದಲ್ಲಿ ಈ ಗೌರವವನ್ನು ಪಡೆದ ಎರಡನೇ ವ್ಯಕ್ತಿ ಅಸೀಮ್ ಮುನೀರ್. ಈ ಬಡ್ತಿಯೊಂದಿಗೆ ಜನರಲ್ ಮುನೀರ್ ಇಸ್ಲಾಮಾಬಾದ್‌ನ 5 ನಕ್ಷತ್ರಗಳ ಚಿಹ್ನೆಯನ್ನು ಧರಿಸಲಿದ್ದಾರೆ. ಪಾಕಿಸ್ತಾನದ ಫೆಡರಲ್ ಕ್ಯಾಬಿನೆಟ್ ಅನುಮೋದಿಸಿದ ಈ ಬಡ್ತಿಯನ್ನು ಸಾಂಕೇತಿಕ ಮತ್ತು ಕಾರ್ಯತಂತ್ರದ ಎರಡೂ ರೀತಿಯಲ್ಲಿ ಪರಿಗಣಿಸಲಾಗುತ್ತಿದೆ. ಇದು ನವೆಂಬರ್ 2022ರಲ್ಲಿ ಪಾಕಿಸ್ತಾನ ಸೇನೆಯ ಅಧಿಕಾರ ವಹಿಸಿಕೊಂಡ ನಂತರ ಪಾಕಿಸ್ತಾನದಲ್ಲಿ ಬೆಳೆಯುತ್ತಿರುವ ಅಸಿಮ್ ಮುನೀರ್ ಅವರ ಅಧಿಕಾರವನ್ನು ಒತ್ತಿಹೇಳುತ್ತದೆ.
ಪಾಕಿಸ್ತಾನ ಪ್ರಧಾನಿ ಕಚೇರಿ ಬಿಡುಗಡೆ ಮಾಡಿದ ಹೇಳಿಕೆಯ ಪ್ರಕಾರ, ದೇಶದ ಕೇಂದ್ರ ಸಚಿವ ಸಂಪುಟ ಮಂಗಳವಾರ ಮುನೀರ್ ಅವರನ್ನು ಫೀಲ್ಡ್ ಮಾರ್ಷಲ್ ಆಗಿ ಬಡ್ತಿ ನೀಡುವ ಪ್ರಸ್ತಾಪವನ್ನು ಅನುಮೋದಿಸಿದೆ. ಪ್ರಧಾನಿ ಶೆಹಬಾಜ್ ಷರೀಫ್ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಮುನೀರ್ ಅವರ ಬಡ್ತಿ ಕುರಿತು ಚರ್ಚಿಸಲು ಕೇಂದ್ರ ಸಚಿವ ಸಂಪುಟ ಸಭೆ ಸೇರಿತು. ಪಾಕಿಸ್ತಾನ ದೇಶದಲ್ಲಿ ರಾಜಕೀಯ ಅನಿಶ್ಚಿತತೆ ಮತ್ತು ಭದ್ರತಾ ಸವಾಲುಗಳ ಸಮಯದಲ್ಲಿ ಈ ಬೆಳವಣಿಗೆ ಸಂಭವಿಸಿದೆ. ಇದರಲ್ಲಿ ಅಸ್ಥಿರ ಪ್ರದೇಶಗಳಲ್ಲಿ ನಡೆಯುತ್ತಿರುವ ಮಿಲಿಟರಿ ಕಾರ್ಯಾಚರಣೆಗಳು ಮತ್ತು ರಾಷ್ಟ್ರೀಯ ವ್ಯವಹಾರಗಳಲ್ಲಿ ಸೇನೆಯ ನಿರಂತರ ಪ್ರಭಾವವೂ ಸೇರಿದೆ.
ಇದನ್ನೂ ಓದಿ: ಪಾಕಿಸ್ತಾನದಲ್ಲಿ ಆಹಾರ ಸಿಗದೆ ಜನ ಕಂಗಾಲು; 2.1 ಮಿಲಿಯನ್ ಮಕ್ಕಳಿಗೆ ಅಪೌಷ್ಟಿಕತೆ
ಸ್ಥಳೀಯ ಮಾಧ್ಯಮಗಳ ಪ್ರಕಾರ, ಭಾರತದೊಂದಿಗಿನ ಇತ್ತೀಚಿನ ಮಿಲಿಟರಿ ಸಂಘರ್ಷದಲ್ಲಿ ಪಾಕಿಸ್ತಾನದ ಸಶಸ್ತ್ರ ಪಡೆಗಳನ್ನು “ಯಶಸ್ವಿಯಾಗಿ” ಮುನ್ನಡೆಸಿದ್ದಕ್ಕಾಗಿ ಮುನೀರ್ ಅವರಿಗೆ ಬಡ್ತಿ ನೀಡಲಾಗಿದೆ. ಭಾರತದೊಂದಿಗಿನ ಸಂಘರ್ಷದಲ್ಲಿ ಅವರ ಪಾತ್ರಕ್ಕಾಗಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಸ್ಥಳೀಯ ಮಾಧ್ಯಮ ವರದಿಗಳು ತಿಳಿಸಿವೆ. ಪಾಕಿಸ್ತಾನ ದಾಳಿಯಲ್ಲಿ ತಾನೇ ಗೆಲುವು ಸಾಧಿಸಿದೆ ಎಂದು ಹೇಳಿಕೊಳ್ಳುತ್ತಿದೆ. ಆದರೆ, ಭಾರತ ಅದು ಸುಳ್ಳು ಎಂದು ಜಗತ್ತಿನಾದ್ಯಂತ ಸಾಕ್ಷಿಯ ಸಮೇತ ಸಾಬೀತುಪಡಿಸಲು ಮುಂದಾಗಿದೆ.
ಇದನ್ನೂ ಓದಿ: ಜ್ಯೋತಿ ಮಲ್ಹೋತ್ರಾರಿಂದ ಪಾಕಿಸ್ತಾನ ಯಾವ ಕೆಲಸ ಮಾಡಿಸಿಕೊಳ್ಳಲು ಬಯಸಿತ್ತು?
ಸೇನಾ ನಾಯಕತ್ವ ಪುನಾರಚನೆ ನಡುವೆ ಪಾಕಿಸ್ತಾನದ ವಾಯುಪಡೆಯ ಮುಖ್ಯಸ್ಥರ ಅಧಿಕಾರಾವಧಿಯನ್ನು ಕೂಡ ವಿಸ್ತರಿಸಲಾಗಿದೆ. ಪಾಕಿಸ್ತಾನದ ಸೇನಾ ಮುಖ್ಯಸ್ಥ ಜನರಲ್ ಅಸಿಮ್ ಮುನೀರ್ ಅವರ ಬಡ್ತಿಯ ಜೊತೆಗೆ ಪಾಕಿಸ್ತಾನ ಸರ್ಕಾರವು ವಾಯುಪಡೆಯ ಮುಖ್ಯಸ್ಥ ಮಾರ್ಷಲ್ ಜಹೀರ್ ಅಹ್ಮದ್ ಬಾಬರ್ ಸಿಧು ಅವರ ಅಧಿಕಾರಾವಧಿಯನ್ನು ವಿಸ್ತರಿಸಿದೆ. ಪಾಕಿಸ್ತಾನದ ಸಶಸ್ತ್ರ ಪಡೆಗಳು ಆಂತರಿಕ ಸ್ಥಿರತೆಯನ್ನು ಕಾಪಾಡಿಕೊಳ್ಳುವಲ್ಲಿ ಮತ್ತು ಪ್ರಾದೇಶಿಕ ಭದ್ರತಾ ಸವಾಲುಗಳನ್ನು ನಿರ್ವಹಿಸುವಲ್ಲಿ, ವಿಶೇಷವಾಗಿ ಉದ್ವಿಗ್ನ ಅಫ್ಘಾನ್ ಗಡಿಯಲ್ಲಿ ಮತ್ತು ದೇಶದೊಳಗೆ ಹೆಚ್ಚುತ್ತಿರುವ ರಾಜಕೀಯ ಅಶಾಂತಿಯ ನಡುವೆ ನಿರ್ಣಾಯಕ ಪಾತ್ರವನ್ನು ವಹಿಸುತ್ತಿರುವುದರಿಂದ ಈ ವಿಸ್ತರಣೆ ಮಾಡಲಾಗಿದೆ.
ಫೀಲ್ಡ್ ಮಾರ್ಷಲ್ ಹುದ್ದೆಯ ಮಹತ್ವವೇನು?:
ಫೀಲ್ಡ್ ಮಾರ್ಷಲ್ ಎಂಬುದು ಪಾಕಿಸ್ತಾನ ಸೇನೆಯಲ್ಲಿ ಐದು ನಕ್ಷತ್ರಗಳ, ಅತ್ಯುನ್ನತ ಮಿಲಿಟರಿ ಶ್ರೇಣಿಯಾಗಿದೆ. ಇದು ಜನರಲ್ ಹುದ್ದೆಗಿಂತ ಮೇಲಿದ್ದು, ನೌಕಾಪಡೆಯಲ್ಲಿ ಅಡ್ಮಿರಲ್ ಆಫ್ ದಿ ಫ್ಲೀಟ್ ಮತ್ತು ವಾಯುಪಡೆಯಲ್ಲಿ ಮಾರ್ಷಲ್ ಆಫ್ ದಿ ಏರ್ ಫೋರ್ಸ್‌ಗೆ ಸಮನಾಗಿರುತ್ತದೆ. ಇದು ಪಾಕಿಸ್ತಾನ ಸಶಸ್ತ್ರ ಪಡೆಗಳಲ್ಲಿ ಅತ್ಯಂತ ಹಿರಿಯ ಶ್ರೇಣಿಯಾಗಿದ್ದು, ಯಾವುದೇ ಉನ್ನತ ಮಿಲಿಟರಿ ಬಿರುದನ್ನು ಹೊಂದಿಲ್ಲ. ಈ ಶ್ರೇಣಿಯು ಹೆಚ್ಚಿನ ಗೌರವದ್ದಾಗಿದೆ. ಇದು ಯಾವುದೇ ಹೆಚ್ಚುವರಿ ಶಾಸನಬದ್ಧ ಅಧಿಕಾರಗಳನ್ನು ಅಥವಾ ಅದರ ಸಾಂಕೇತಿಕ ಪ್ರತಿಷ್ಠೆಯನ್ನು ಮೀರಿದ ವೇತನವನ್ನು ಹೊಂದಿರುವುದಿಲ್ಲ. ಈ ಹುದ್ದೆ ಅಸಾಧಾರಣ ರಾಷ್ಟ್ರೀಯ ಪ್ರಾಮುಖ್ಯತೆಯ ಸಮಯದಲ್ಲಿ ಅಸಾಧಾರಣ ಸೇವೆಗಾಗಿ ಮೀಸಲಾಗಿದೆ. 1947ರಲ್ಲಿ ಪಾಕಿಸ್ತಾನ ಸ್ವಾತಂತ್ರ್ಯ ಪಡೆದ ನಂತರ ಫೀಲ್ಡ್ ಮಾರ್ಷಲ್ ಹುದ್ದೆಯನ್ನು ಒಮ್ಮೆ ಮಾತ್ರ ನೀಡಲಾಗಿದೆ. 1959ರಲ್ಲಿ ಸೇನಾ ಮುಖ್ಯಸ್ಥ ಮತ್ತು ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ ನಂತರ ಈ ಸ್ಥಾನಕ್ಕೆ ಜನರಲ್ ಮುಹಮ್ಮದ್ ಅಯೂಬ್ ಖಾನ್ ಬಡ್ತಿ ಪಡೆದಿದ್ದರು. ಅವರ ನಂತರ ಇದೀಗ ಅಸಿಮ್ ಮುನಿರ್ ಈ ಫೀಲ್ಡ್ ಮಾರ್ಷಲ್ ಹುದ್ದೆಯನ್ನು ಅಲಂಕರಿಸುತ್ತಿದ್ದಾರೆ.
ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 7:33 pm, Tue, 20 May 25








