ಇಸ್ಲಾಮಬಾದ್: ಅಮೆರಿಕಾದ ವಾಲ್ಸ್ಟ್ರೀಟ್ ಜರ್ನಲ್ ವರದಿಗಾರ ಡೇನಿಯಲ್ ಪರ್ಲ್ ಎಂಬಾತನ ಅಪಹರಣ ಹಾಗೂ ಕೊಲೆ ಆರೋಪ ಎದುರಿಸುತ್ತಿದ್ದ ಉಗ್ರಗಾಮಿ ಅಹ್ಮದ್ ಓಮರ್ ಸಯೀದ್ ಶೇಖ್ನನ್ನು ಬಿಡುಗಡೆಗೊಳಿಸಿ ಪಾಕಿಸ್ತಾನ ಕೋರ್ಟ್ ಆದೇಶ ನೀಡಿದೆ.
2002ರಲ್ಲಿ ಈ ಪ್ರಕರಣ ನಡೆದಿತ್ತು. 47 ವರ್ಷದ ಅಹ್ಮದ್ ಓಮರ್ ಸಯೀದ್ ಶೇಖ್ ಈ ಪ್ರಕರಣದಲ್ಲಿ ಭಾಗಿಯಾದ ಬಗ್ಗೆ ಚರ್ಚೆಗಳು ಆರಂಭವಾಗಿದ್ದವು. ಇದೀಗ ಈ ಬಗ್ಗೆ ತೀರ್ಪು ನೀಡಿರುವ ಪಾಕ್ ನ್ಯಾಯಾಲಯ ಅಹ್ಮದ್ ಓಮರ್ ಸಯೀದ್ ಶೇಖ್ನನ್ನು ಬಿಡುಗಡೆ ಮಾಡಿದೆ.
ಕೊಲೆ ಸಂಚಿನಲ್ಲಿ ಅಪರಾಧಿ ಎಂದು ಘೋಷಿಸಿದ್ದ ನ್ಯಾಯಾಲಯವು 2002ರಲ್ಲಿ ಮರಣದಂಡನೆ ವಿಧಿಸಿ ತೀರ್ಪು ನೀಡಿತ್ತು. ಆದರೆ, ಜೈಲುವಾಸ ಅನುಭವಿಸುತ್ತಿದ್ದ ಆರೋಪಿಯ ಪರವಾಗಿ ಹಲವಾರು ಮಂದಿ ಮೇಲ್ಮನವಿ, ವಾದ ಮಂಡಿಸಿದ್ದರು. ತನಿಖೆಯ ಹಾದಿಯೂ ಕ್ರಮೇಣ ಬದಲಾಗಿತ್ತು.
ವಾಲ್ಸ್ಟ್ರೀಟ್ ಜರ್ನಲ್ನ ದಕ್ಷಿಣ ಏಷ್ಯಾ ಬ್ಯೂರೊ ಮುಖ್ಯಸ್ಥನಾಗಿದ್ದ ವರದಿಗಾರ ಡೇನಿಯಲ್ ಪರ್ಲ್, ಅಲ್-ಖೈದಾ ಭಯೋತ್ಪಾದನಾ ಸಂಘಟನೆಯ ಬಗ್ಗೆ ದಕ್ಷಿಣ ಪಾಕಿಸ್ತಾನದ ಕರಾಚಿ ಪ್ರದೇಶದಲ್ಲಿ ತನಿಖೆ ನಡೆಸುತ್ತಿದ್ದ. 2002 ಜನವರಿಯಲ್ಲಿ ಕಣ್ಮರೆಯಾಗಿ, ಕೊಲೆಯಾಗಿದ್ದ.
Published On - 12:40 pm, Fri, 25 December 20