ಪಿಒಕೆಯಲ್ಲಿ ಮುಂದುವರಿದ ಹಿಂಸಾಚಾರ; 8 ಬಲಿ; ಪ್ರತಿಭಟನೆಗಳಿಗೆ ಏನು ಕಾರಣ
PoK violent protests: ಪಾಕಿಸ್ತಾನದ ಪಿಒಕೆ ಪ್ರಾಂತ್ಯದಲ್ಲಿ ಪ್ರತಿಭಟನೆಗಳು ಮೂರನೇ ದಿನಕ್ಕೆ ಕಾಲಿಟ್ಟಿವೆ. ಅವಾಮಿ ಆ್ಯಕ್ಷನ್ ಕಮಿಟಿ ನೇತೃತ್ವದಲ್ಲಿ ನಡೆಯುತ್ತಿರುವ ಪ್ರತಿಭಟನೆಗಳು ಹಿಂಸಾರೂಪಕ್ಕೆ ತಿರುಗಿವೆ. ಪ್ರತಿಭಟನೆ ಹತ್ತಿಕ್ಕಲು ಪಾಕಿಸ್ತಾನ ಸರ್ಕಾರ ತನ್ನ ಸೇನೆಯನ್ನು ಬಳಸಿಕೊಳ್ಳುತ್ತಿದೆ. ಸೈನಿಕರ ಗುಂಡೇಟಿನಿಂದ ಇವತ್ತು ಎಂಟು ಮಂದಿ ಬಲಿಯಾಗಿದ್ದಾರೆ.

ಇಸ್ಲಾಮಾಬಾದ್, ಅಕ್ಟೋಬರ್ 1: ಪಾಕ್ ಆಕ್ರಮಿತ ಕಾಶ್ಮೀರ ಭಾಗದಲ್ಲಿ ಹಿಂಸಾಚಾರ ಮುಂದುವರಿದಿದೆ. ಪಿಒಕೆಯ ವಿವಿಧೆಡೆ ಇಂದು ಬುಧವಾರ ಒಟ್ಟು ಎಂಟಕ್ಕೂ ಹೆಚ್ಚು ನಾಗರಿಕರು ಪಾಕ್ ಸೇನೆಯ ಗುಂಡಿನ ದಾಳಿಗೆ ಬಲಿಯಾಗಿದ್ದಾರೆ. ಪಾಕಿಸ್ತಾನ (Pakistan) ಸರ್ಕಾರದ ದಮನಕಾರಿ ನೀತಿ ವಿರುದ್ಧ ಪಿಒಕೆಯಲ್ಲಿ ಕಳೆದ ಮೂರು ದಿನಗಳಿಂದ ತೀವ್ರತರವಾದ ಪ್ರತಿಭಟನೆಗಳು ಹಿಂಸಾರೂಪಕ್ಕೆ ತಿರುಗಿವೆ. ಈ ಪ್ರತಿಭಟನೆಯನ್ನು ಹತ್ತಿಕ್ಕಲು ಸರ್ಕಾರವು ಸೇನೆಯ ನೆರವನ್ನು ಬಳಸಿದೆ.
ಬಾಘ್ ಜಿಲ್ಲೆಯ ಧೀರ್ಕೋಟ್ನಲ್ಲಿ ನಾಲ್ವರು ಬಲಿಯಾಗಿದ್ದಾರೆ. ಮುಜಾಫರಾಬಾದ್ ಮತ್ತು ಮೀರ್ಪುರ್ನಲ್ಲಿ ತಲಾ ಇಬ್ಬರು ಸಾವನ್ನಪ್ಪಿದ್ದಾರೆ ಎಂದು ಹೇಳಲಾಗಿದೆ. ನಿನ್ನೆ ಮಂಗಳವಾರ ಮುಜಾಫರಾಬಾದ್ನಲ್ಲಿ ಇಬ್ಬರು ಸತ್ತಿದ್ದರು. ಕಳೆದ ಮೂರು ದಿನದಲ್ಲಿ ಪಿಒಕೆ ಪ್ರತಿಭಟನೆಯಲ್ಲಿ ಬಲಿಯಾದವರ ಸಂಖ್ಯೆ 10ಕ್ಕೆ ಏರಿದೆ. ಮುಜಾಫರಾಬಾದ್ನಲ್ಲಿ ಸಾವಿನ ಸಂಖ್ಯೆ 4ಕ್ಕೆ ಏರಿದೆ.
ಇದನ್ನೂ ಓದಿ: ಪಾಕಿಸ್ತಾನದ ಕ್ವೆಟ್ಟಾದಲ್ಲಿ ಭದ್ರತಾ ಪಡೆಗಳ ಪ್ರಧಾನ ಕಚೇರಿ ಹೊರಗೆ ಬಾಂಬ್ ಸ್ಫೋಟ, 8 ಮಂದಿ ಸಾವು
ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಪ್ರತಿಭಟನೆಗಳಿಗೆ ಏನು ಕಾರಣ?
ಅವಾಮಿ ಆ್ಯಕ್ಷನ್ ಕಮಿಟಿ ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಪ್ರತಿಭಟನೆಗಳ ನೇತೃತ್ವ ವಹಿಸಿದೆ. ಈ ಸಮಿತಿಯು ಪಾಕಿಸ್ತಾನ ಸರ್ಕಾರದ ಮುಂದೆ ಒಟ್ಟು 38 ಬೇಡಿಕೆ ಮತ್ತು ಆಗ್ರಹಗಳನ್ನು ಮುಂದಿಟ್ಟಿದೆ.
ಅದರಲ್ಲಿ ಪ್ರಮುಖವಾದುದು ಸ್ಥಳೀಯರ ಮೂಲಭೂತ ಹಕ್ಕನ್ನು ಕಸಿಯುವುದನ್ನು ನಿಲ್ಲಿಸಬೇಕು ಎನ್ನುವುದು. ಪಿಒಕೆಯಲ್ಲಿ ಕಾಶ್ಮೀರಿ ನಿರಾಶ್ರಿತರಿಗೆ ಮೀಸಲಾಗಿರುವ 12 ವಿಧಾನಸಭಾ ಸ್ಥಾನಗಳನ್ನು ರದ್ದುಗೊಳಿಸಬೇಕು ಎನ್ನುವುದು ಪ್ರಮುಖ ಬೇಡಿಕೆ. ಈ ವಿವಿಧ ಬೇಡಿಕೆಗಳನ್ನು ಮುಂದಿಟ್ಟುಕೊಂಡು ಹಲವು ದಿನಗಳಿಂದ ಇಲ್ಲಿ ಪ್ರತಿಭಟನೆಗಳು ನಡೆದಿವೆ.
ಇದನ್ನೂ ಓದಿ: ಅಮೆರಿಕದಲ್ಲಿ ಸರ್ಕಾರಿ ಕಾರ್ಯಗಳು ಸ್ಥಗಿತ, ಟ್ರಂಪ್ಗೆ ಸೆನೆಟ್ನಲ್ಲಿ ಭಾರಿ ಹಿನ್ನಡೆ
ಈಗ ಪ್ರತಿಭಟನೆಗಳು ಹಿಂಸಾರೂಪಕ್ಕೆ ತಿರುಗಲು ವಾರದ ಹಿಂದಿನ ಘಟನೆಯೊಂದು ಕಾರಣ. ಖೈಬರ್ ಪಖ್ತುಂಕ್ವ ಪ್ರಾಂತ್ಯದ ಗ್ರಾಮವೊಂದರ ಮೇಲೆ ಫೈಟರ್ ಜೆಟ್ಗಳು ಲೇಸರ್ ಬಾಂಬ್ಗಳನ್ನು ಹಾಕಲಾಗಿತ್ತು. ಆ ಘಟನೆಯಲ್ಲಿ 30 ಜನರು ಬಲಿಯಾಗಿದ್ದರು. ಇದು ಸ್ಥಳೀಯ ಜನರಲ್ಲಿ ಆಕ್ರೋಶ ಹೆಚ್ಚಲು ಕಾರಣವಾಗಿದೆ.
ಹಾಗೆಯೇ, ಜೈಷೆ ಮೊಹಮ್ಮದ್ನಂತಹ ನಿಷೇಧಿತ ಸಂಘಟನೆಗಳು ಈ ಪ್ರದೇಶಕ್ಕೆ ಬಂದು ಹೊಸ ನೆಲೆಗಳನ್ನು ಸ್ಥಾಪಿಸುತ್ತಿವೆ. ಇಲ್ಲಿ ಹಿಂಸಾಚಾರ ಹೆಚ್ಚಲು ಇದೂ ಒಂದು ಕಾರಣ ಎಂದು ಪರಿಗಣಿಸಲಾಗಿದೆ.
ಇನ್ನಷ್ಟು ಅಂತರರಾಷ್ಟ್ರೀಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ




