ಅತ್ಯಾಚಾರಿಗಳ ಕಾಮಾಸಕ್ತಿ ಕುಗ್ಗಿಸಲು ರಾಸಾಯನಿಕ ಬಳಕೆಗೆ ಪಾಕ್ ಪ್ರಧಾನಿ ಅನುಮತಿ
ಕೆಮಿಕಲ್ ಕ್ಯಾಸ್ಟ್ರೇಶನ್ (Chemical Castration) ವಿಧಾನದ ಮೂಲಕ ಅತ್ಯಾಚಾರ ಎಸಗಿದ ಅಪರಾಧಿಗಳಲ್ಲಿ ಕಾಮಾಸಕ್ತಿ ಮತ್ತು ಸಂಭೋಗವೇ ಸಾಮರ್ಥ್ಯ ಇಲ್ಲದಂತೆ ಮಾಡಲು ಸರ್ಕಾರ ಉದ್ದೇಶಿಸಿದೆ.
ಇಸ್ಲಾಮಾಬಾದ್: ಅತ್ಯಾಚಾರಿಗಳ ಕಾಮಾಸಕ್ತಿ ಕುಗ್ಗಿಸಲು ರಾಸಾಯನಿಕ ಬಳಸಲು ಪಾಕ್ ಪ್ರಧಾನಿ ಇಮ್ರಾನ್ ಖಾನ್ ತಾತ್ವಿಕ ಒಪ್ಪಿಗೆ ನೀಡಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ.
ಕೆಮಿಕಲ್ ಕ್ಯಾಸ್ಟ್ರೇಶನ್ (Chemical Castration) ವಿಧಾನದ ಮೂಲಕ ಅತ್ಯಾಚಾರ ಎಸಗಿದ ಅಪರಾಧಿಗಳಲ್ಲಿ ಕಾಮಾಸಕ್ತಿ ಮತ್ತು ಸಂಭೋಗದ ಸಾಮರ್ಥ್ಯವೇ ಇಲ್ಲದಂತೆ ಮಾಡಲು ಪಾಕ್ ಸರ್ಕಾರ ಉದ್ದೇಶಿಸಿದೆ.
ಲಾಹೋರ್-ಸಿಯಾಲ್ಕೋಟ್ ರಸ್ತೆಯಲ್ಲಿ ಮಕ್ಕಳ ಎದುರೇ ಮಹಿಳೆಯೊಬ್ಬರ ಮೇಲೆ ನಡೆದ ಸಾಮೂಹಿಕ ಅತ್ಯಾಚಾರ ಘಟನೆಯ ನಂತರ ಪಾಕಿಸ್ತಾನದಲ್ಲಿ ಅತ್ಯಾಚಾರಿಗಳನ್ನು ಸಾರ್ವಜನಿಕವಾಗಿ ಗಲ್ಲಿಗೇರಿಸಬೇಕೆಂಬ ಒತ್ತಾಯ ವ್ಯಾಪಕವಾಗಿ ವ್ಯಕ್ತವಾಗಿತ್ತು. ಪದೇಪದೆ ಲೈಂಗಿಕ ಅಪರಾಧ ಎಸಗುವ ಆರೋಪಿಗಳ ವೃಷಣ ಛೇದನ ಮಾಡಬೇಕು ಎಂದೂ ಹಲವರು ಆಗ್ರಹಿಸಿದ್ದರು.
ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ಕಾನೂನು ಸಚಿವರು ಅತ್ಯಾಚಾರ ತಡೆ ಸುಗ್ರೀವಾಜ್ಞೆಯ ಕರಡು ಮಂಡಿಸಿದರು. ಈ ಕರಡಿಗೆ ಸಂಪುಟ ಮತ್ತು ಪ್ರಧಾನಿ ತಾತ್ವಿಕ ಒಪ್ಪಿಗೆ ನೀಡಿದ್ದಾರೆ ಎಂದು ಜಿಯೊ ಟಿವಿ ವರದಿ ಮಾಡಿದೆ. ಆದರೆ ಈ ಕುರಿತು ಈವರೆಗೆ ಸರ್ಕಾರ ಅಧಿಕೃತವಾಗಿ ಹೇಳಿಕೆ ನೀಡಿಲ್ಲ.
ಇದನ್ನೂ ಓದಿ ಅತ್ಯಾಚಾರಿಗಳಿಗೆ ಈ ಶಿಕ್ಷೆಯೇ ಸರಿ ಎಂದ ಇಮ್ರಾನ್ ಖಾನ್, ಯಾವುದು ಆ ಶಿಕ್ಷೆ?
ಮಹಿಳಾ ಪೊಲೀಸರ ಸಂಖ್ಯೆ ಹೆಚ್ಚಿಸುವುದು, ಅತ್ಯಾಚಾರ ಪ್ರಕರಣಗಳ ವಿಚಾರಣೆಯನ್ನು ವೇಗವಾಗಿ ನಡೆಸುವುದು, ದೂರುದಾರರು ಮತ್ತು ಸಾಕ್ಷಿಗಳಿಗೆ ಭದ್ರತೆ ಒದಗಿಸುವ ಬಗ್ಗೆಯೂ ಈ ಕರಡು ಸುಗ್ರೀವಾಜ್ಞೆಯಲ್ಲಿ ಉಲ್ಲೇಖಗಳಿವೆ.
ಅತ್ಯಾಚಾರಿಗಳಿಗೆ ಅತ್ಯಂತ ಕಠಿಣ ಶಿಕ್ಷೆ ವಿಧಿಸಲಾಗುವುದು. ಅಂಥವರ ಕಾಮಾಸಕ್ತಿ ಕುಗ್ಗಿಸಲು ರಾಸಾಯನಿಕ ಬಳಸುವುದು ಈ ನಿಟ್ಟಿನಲ್ಲಿ ಮೊದಲ ಹೆಜ್ಜೆ ಮಾತ್ರ ಎಂದು ಇಮ್ರಾನ್ ಹೇಳಿದರು. ಕಾಯ್ದೆಯನ್ನು ಶೀಘ್ರ ಸಂಸತ್ತಿನಲ್ಲಿ ಮಂಡಿಸಲಾಗುವುದು ಎಂದು ಪಾಕಿಸ್ತಾನದ ಆಡಳಿತಾರೂಢ ತೆಹ್ರೀಕ್-ಇ-ಇನ್ಸಾಫ್ ಪಕ್ಷದ ಸಂಸದ ಫೈಸಲ್ ಜಾವೇದ್ ಖಾನ್ ಹೇಳಿಕೆ ನೀಡಿದ್ದಾರೆ.
ಈಚಿನ ದಿನಗಳಲ್ಲಿ ಪಾಕಿಸ್ತಾನದಲ್ಲಿ ಅತ್ಯಾಚಾರ ಕಾನೂನುಗಳ ಬಗ್ಗೆ ವ್ಯಾಪಕ ಚರ್ಚೆಯಾಗುತ್ತಿದೆ. ಲೈಂಗಿಕ ದೌರ್ಜನ್ಯ ನಡೆಸುವ ಆರೋಪಿಗಳನ್ನು ಗುರುತಿಸುವುದು ಮತ್ತು ಪೊಲೀಸ್ ನಿಗಾ ಸದೃಢಗೊಳಿಸಲು ಸರ್ಕಾರ ಅಗತ್ಯ ಕ್ರಮ ಕೈಗೊಳ್ಳಲಿದೆ ಎಂದು ಖಾನ್ ಹೇಳಿದ್ದಾರೆ.
ಅತ್ಯಾಚಾರಕ್ಕೆ ಕಡಿವಾಣ ಹಾಕಲು ಮತ್ತು ಮಹಿಳೆಯರ ಸುರಕ್ಷೆ ಖಾತ್ರಿಪಡಿಸಲು ನಮ್ಮ ಸರ್ಕಾರ ಬದ್ಧವಾಗಿವೆ. ಜನರಿಗೆ ಸುರಕ್ಷಿತ ವಾತಾವರಣ ಒದಗಿಸಿಕೊಡುವುದು ನಮ್ಮ ಅದ್ಯತೆ ಎಂದು ಇಮ್ರಾನ್ ಖಾನ್ ಹೇಳಿದ್ದಾರೆ.
ಈ ಕಾನೂನನ್ನು ಕಟ್ಟುನಿಟ್ಟಾಗಿ ಜಾರಿ ಮಾಡಲಾಗುವುದು. ಸಭೆಯಲ್ಲಿ ಪಾಲ್ಗೊಂಡಿದ್ದ ಕೆಲ ಸಚಿವರು ಅತ್ಯಾಚಾರಿಗಳನ್ನು ಸಾರ್ವಜನಿಕವಾಗಿ ಗಲ್ಲಿಗೆ ಹಾಕಬೇಕು ಎಂದು ಒತ್ತಾಯಿಸಿದ್ದಾಗಿ ಕೆಲ ಮಾಧ್ಯಮಗಳು ವರದಿ ಮಾಡಿವೆ. -ಪಿಟಿಐ
Published On - 11:37 am, Wed, 25 November 20