ಉಚಿತ ಸ್ಯಾನಿಟರಿ ಪ್ಯಾಡ್ ವಿತರಣೆಗೆ ಸ್ಕಾಟ್ಲೆಂಡ್ ಸರ್ಕಾರ ನಿರ್ಧಾರ
ಮಹಿಳೆಯರಿಗೆ ಮುಟ್ಟಿನ ದಿನಗಳಲ್ಲಿ ಸ್ಯಾನಿಟರಿ ಪ್ಯಾಡ್ಗಳು ಅತ್ಯಗತ್ಯ. ನೈರ್ಮಲ್ಯ ಮತ್ತು ಆರೋಗ್ಯದ ದೃಷ್ಟಿಯಿಂದ ಪ್ರತಿ ಹುಡುಗಿಯರು, ಮಹಿಳೆಯರು ಪ್ಯಾಡ್ ಬಳಸುವುದು ಒಳ್ಳೆಯದು. ಈ ನಿಟ್ಟಿನಲ್ಲಿ ಎಲ್ಲ ವರ್ಗದ ಮಹಿಳೆಯರಿಗೂ ಅನುಕೂಲವಾಗುವಂತ ಮಹತ್ಕಾರ್ಯವನ್ನು ಸ್ಕಾಟ್ಲೆಂಡ್ ಸರ್ಕಾರ ಮಾಡಿದೆ.
ಸ್ಕಾಟ್ಲೆಂಡ್ : ಮಹಿಳೆಯರಿಗೆ ಮುಟ್ಟಿನ ದಿನಗಳಲ್ಲಿ ಸ್ಯಾನಿಟರಿ ಪ್ಯಾಡ್ಗಳು ಅತ್ಯಗತ್ಯ. ನೈರ್ಮಲ್ಯ ಮತ್ತು ಆರೋಗ್ಯದ ದೃಷ್ಟಿಯಿಂದ ಪ್ರತಿ ಹುಡುಗಿಯರು, ಮಹಿಳೆಯರು ಪ್ಯಾಡ್ ಬಳಸುವುದು ಒಳ್ಳೆಯದು. ಆದರೆ ಇದರ ಬೆಲೆ ಬಡವರಿಗೆ ದುಬಾರಿ. ಅದೆಷ್ಟೋ ಬಡ ಯುವತಿಯರು, ಮಹಿಳೆಯರು ಪ್ಯಾಡ್ ಕೊಳ್ಳಲಾಗದೆ ಕಷ್ಟಪಡುತ್ತಾರೆ. ಆದರೆ ಅಂಥ ಮಹಿಳೆಯರಿಗೂ ಅನುಕೂಲವಾಗುವಂಥ ಮಹತ್ಕಾರ್ಯವನ್ನು ಸ್ಕಾಟ್ಲೆಂಡ್ ಸರ್ಕಾರ ಮಾಡಿದೆ.
ಎಲ್ಲ ವರ್ಗದ ಮಹಿಳೆಯರಿಗೂ ಸ್ಯಾನಿಟರಿ ಪ್ಯಾಡ್ ಹಾಗೂ ಟ್ಯಾಂಪೂನ್ಗಳನ್ನು ಉಚಿತವಾಗಿ ನೀಡುವ ಘೋಷಣೆಯನ್ನು ಸ್ಕಾಟ್ಲೆಂಡ್ ಮಾಡಿದೆ. ಈ ಮೂಲಕ ಜಗತ್ತಿನಲ್ಲೇ ಮಹಿಳೆಯರ ಪೀರಿಯಡ್ಸ್ಗೆ ಅಗತ್ಯ ಇರುವ ವಸ್ತುಗಳನ್ನು ಉಚಿತವಾಗಿ ನೀಡಿದ ಮೊದಲ ದೇಶ ಎಂಬ ಹೆಗ್ಗಳಿಕೆಗೂ ಪಾತ್ರವಾಗಿದೆ. ಇನ್ನು ಶಾಲೆ, ಕಾಲೇಜು, ಯೂನಿವರ್ಸಿಟಿಗಳಲ್ಲೂ ಈ ಪ್ಯಾಡ್ಗಳು ಉಚಿತವಾಗಿ ಲಭ್ಯ ಇರಲಿವೆ.
ಬಡವರ್ಗದ ಯುವತಿಯರು, ಮಹಿಳೆಯರು ಮುಟ್ಟಿನ ದಿನಗಳಲ್ಲಿ ಪ್ಯಾಡ್ ಇಲ್ಲದೆ ಕಷ್ಟಪಡುವುದನ್ನು ತಪ್ಪಿಸಲು ಸಂಸದೆ ಮೋನಿಕಾ ಲೆನ್ನನ್ ಅವರು 2016ರಿಂದಲೂ ಅಭಿಯಾನ ನಡೆಸುತ್ತಿದ್ದರು. 2019ರ ಏಪ್ರಿಲ್ 23ರಂದು ‘ಪೀರಿಯಡ್ಸ್ ಪ್ರಾಡಕ್ಟ್ಸ್ (ಫ್ರೀ ಪ್ರಾವಿಸನ್)(ಸ್ಕಾಟ್ಲೆಂಡ್) [ಪೀರಿಯಡ್ಸ್ ಉತ್ಪನ್ನಗಳು (ಉಚಿತ ಹಂಚಿಕೆ)(ಸ್ಕಾಟ್ಲೆಂಡ್)] ಮಸೂದೆಯನ್ನು ಸಂಸತ್ತಿನಲ್ಲಿ ಮಂಡಿಸಿದ್ದರು. ಆ ಮಸೂದೆಯನ್ನು ಇಂದು (ನ.25) ಸಂಸತ್ತು ಸರ್ವಾನುಮತದಿಂದ ಅಂಗೀಕರಿಸಿದೆ. ಇದರ ಅನ್ವಯ ಪ್ರತಿ ಹಳ್ಳಿ, ಹಿಂದುಳಿದ ಪ್ರದೇಶಗಳ ಮಹಿಳೆಯರಿಗೆ ಮುಟ್ಟಿನ ದಿನಗಳಲ್ಲಿ ಅಗತ್ಯ ಇರುವ ಪ್ಯಾಡ್ಗಳನ್ನು ವಿತರಿಸುವ ಕೆಲಸವನ್ನು ಆಯಾ ಸ್ಥಳೀಯ ಆಡಳಿತಗಳು ಮಾಡಬೇಕಿದೆ.
ಮಸೂದೆ ಅಂಗೀಕಾರ ಆಗುತ್ತಿದ್ದಂತೆ ಲೆನ್ನನ್ ತುಂಬ ಖುಷಿ ವ್ಯಕ್ತಪಡಿಸಿದ್ದಾರೆ. ಮುಟ್ಟಿನ ದಿನಗಳಲ್ಲಿ ಸ್ಯಾನಿಟೈಸರ್ ಪ್ಯಾಡ್ ಸೇರಿ ಕೆಲವು ವಸ್ತುಗಳು ಅತ್ಯಗತ್ಯವಾಗಿ ಬೇಕಾಗಿರುತ್ತದೆ. ಆದರೆ ಅದೆಷ್ಟೋ ಬಡ ಮಹಿಳೆಯರು ಇದರಿಂದ ವಂಚಿತರಾಗುತ್ತಾರೆ. ಈಗ ಸ್ಕಾಟ್ಲೆಂಡ್ನಲ್ಲಿ ಪ್ರತಿ ಮಹಿಳೆಯೂ ಉಚಿತವಾಗಿ ಪ್ಯಾಡ್ ಪಡೆಯುವಂತಾಗಿದೆ. ಅವರ ಅಗತ್ಯತೆ ಪೂರೈಕೆ ಆದಂತಾಗಿದೆ.
ಮುಟ್ಟು ಐದು ದಿನ ಇರುತ್ತದೆ. ಈ ಅವಧಿಗೆ ಪ್ಯಾಡ್ ಖರೀದಿ ಮಾಡಲು ಸರಾಸರಿ 8 ಪೌಂಡ್ಗಳಷ್ಟು ವೆಚ್ಚ ಆಗಬಹುದು. ಆದರೆ ಪ್ರಸ್ತುತ ಶಾಲೆ, ಕಾಲೇಜು, ವಿಶ್ವ ವಿದ್ಯಾಲಯಗಳಲ್ಲಿ ಸ್ಯಾನಿಟರಿ ಪ್ಯಾಡ್, ಟ್ಯಾಂಪೂನ್ಗಳನ್ನು ಮತ್ತು ಕೆಲವು ಮರುಬಳಕೆ ಮಾಡಬಹುದಾದ ಉತ್ಪನ್ನಗಳು ಒದಗಿಸಲು ಸ್ಕಾಟಿಷ್ ಸರ್ಕಾರ 52 ಲಕ್ಷ ಪೌಂಡ್ (ಸುಮಾರು ₹ 51.36 ಕೋಟಿ) ಮೀಸಲಿಟ್ಟಿದೆ ಎಂದು ತಿಳಿಸಿದ್ದಾರೆ. ಹಾಗೇ, ಎಲ್ಲ ಸಾರ್ವಜನಿಕ ಸ್ಥಳಗಳಲ್ಲಿ ಲಭ್ಯವಾಗುವಂತೆ ವ್ಯವಸ್ಥೆ ಮಾಡಲು 40 ಲಕ್ಷ ಪೌಂಡ್ (ಸುಮಾರು ₹ 31.51 ಕೋಟಿ)ನ್ನು ನೀಡಲಾಗುವುದು ಎಂದು ತಿಳಿಸಿದ್ದಾರೆ.
Published On - 6:35 pm, Wed, 25 November 20