ನೇಪಾಳಕ್ಕೆ ವಿದೇಶಾಂಗ ಇಲಾಖೆ ಕಾರ್ಯದರ್ಶಿ: ಸಂಬಂಧ ಸುಧಾರಣೆ ಯತ್ನಗಳಿಗೆ ಮರುಚಾಲನೆ
ನೇಪಾಳದ ವಿದೇಶಾಂಗ ಕಾರ್ಯದರ್ಶಿ ಭಾರತ್ ರಾಜ್ ಪೌಡಿಯಲ್ ಅವರ ಆಹ್ವಾನದ ಮೇರೆಗೆ ಗುರುವಾರ ನೇಪಾಳಕ್ಕೆ ಶ್ರೀಂಗ್ಲಾ ಭೇಟಿ ನೀಡಿದರು.
ಕಠ್ಮಂಡು: ಭಾರತ ಮತ್ತು ನೇಪಾಳದ ರಾಜತಾಂತ್ರಿಕ ಸಂಬಂಧ ಸದೃಢವಾಗಿದೆ. ಭಾರತವು ದ್ವಿಪಕ್ಷೀಯ ಬಾಂಧವ್ಯ ಬಲಪಡಿಸಲು ಉತ್ಸುಕವಾಗಿದೆ ಎಂದು ವಿದೇಶಾಂಗ ಇಲಾಖೆ ಕಾರ್ಯದರ್ಶಿ ಹರ್ಷವರ್ಧನ್ ಶ್ರೀಂಗ್ಲಾ ಹೇಳಿದರು.
ನೇಪಾಳದ ವಿದೇಶಾಂಗ ಕಾರ್ಯದರ್ಶಿ ಭಾರತ್ ರಾಜ್ ಪೌಡಿಯಲ್ ಅವರ ಆಹ್ವಾನದ ಮೇರೆಗೆ ಗುರುವಾರ ನೇಪಾಳಕ್ಕೆ ಶ್ರೀಂಗ್ಲಾ ಭೇಟಿ ನೀಡಿದರು.
ಎರಡು ದಿನಗಳ ನೇಪಾಳ ಪ್ರವಾಸದಲ್ಲಿ ದ್ವಿಪಕ್ಷೀಯ ಸಹಕಾರ ಕುರಿತು ಎರಡೂ ದೇಶಗಳ ಹಿರಿಯ ಅಧಿಕಾರಿಗಳ ನಡುವೆ ಮಾತುಕತೆ ನಡೆಯಲಿದೆ. ನೇಪಾಳಕ್ಕೆ ಶ್ರೀಂಗ್ಲಾ ಅವರ ಚೊಚ್ಚಿಲ ಭೇಟಿಯಿದು. ಅವರಿಗೆ ಆತ್ಮೀಯ ಸ್ವಾಗತ ನೀಡಲಾಗಿದೆ.
ಕಠ್ಮಂಡುವಿನ ತ್ರಿಭುವನ್ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು ‘ನಾನು ಮೊದಲೇ ಇಲ್ಲಿಗೆ ಬರಲು ಇಚ್ಛಿಸಿದ್ದೆ. ಆದರೆ ಕೋವಿಡ್-19ರ ಹಿನ್ನೆಲೆಯಲ್ಲಿ ತಡವಾಯಿತು. ವಿದೇಶಾಂಗ ಕಾರ್ಯದರ್ಶಿಯಾಗಿ ನೇಪಾಳಕ್ಕೆ ಇದು ನನ್ನ ಮೊದಲ ಭೇಟಿ. ಎರಡೂ ದೇಶಗಳ ನಡುವೆ ಉತ್ತಮ ರಾಜತಾಂತ್ರಿಕ ಸಂಬಂಧವಿದೆ. ಈ ಸಂಬಂಧವನ್ನು ನಾವು ಹೇಗೆ ಮುಂದೆ ತೆಗೆದುಕೊಂಡು ಹೋಗಬೇಕು ಎನ್ನುವುದರ ಬಗ್ಗೆ ಚೆಂತನೆ ನಡೆಸುತ್ತಿದ್ದೇವೆ’ ಎಂದು ಹೇಳಿದರು.
ಶ್ರೀಂಗ್ಲಾ ಅವರ ಮೊದಲ ಸಭೆ ನೇಪಾಳದ ವಿದೇಶಾಂಗ ಸಚಿವಾಲಯದಲ್ಲಿ ನಡೆಯಲಿದೆ. ವಿದೇಶಾಂಗ ಇಲಾಖೆ ಸಚಿವ ಪ್ರದೀಪ್ ಗಯಾವಲಿ ಅವರನ್ನೂ ಶ್ರೀಂಗ್ಲಾ ಭೇಟಿ ಮಾಡಲಿದ್ದಾರೆ. ನಂತರ ಕಠ್ಮಂಡುವಿನಲ್ಲಿ ಗಣ್ಯರೊಂದಿಗೆ ಸಭೆ ನಡೆಸಲಿದ್ದು, ಗುರುವಾರ ಶ್ರೀಂಗ್ಲಾ ಪ್ರಧಾನಿ ಕೆ.ಪಿ.ಶರ್ಮಾ ಒಲಿ ಮತ್ತು ಅಧ್ಯಕ್ಷ ವಿದ್ಯಾದೇವಿ ಭಂಡಾರಿ ಅವರನ್ನು ಭೇಟಿ ಮಾಡಲಿದ್ದಾರೆ.
ಕಠ್ಮಂಡುವಿನ ಸೋಲ್ಟಿ ಕ್ರೌನ್ ಪ್ಲಾಜಾ ಹೋಟೆಲ್ನಲ್ಲಿ ಶುಕ್ರವಾರ ಭಾರತ-ನೇಪಾಳ ಸಂಬಂಧ ಕುರಿತು ಉಪನ್ಯಾಸ ನೀಡಲಿದ್ದಾರೆ. 2015 ರ ಭೂಕಂಪದ ಕೇಂದ್ರಬಿಂದುವಾಗಿರುವ ಗೂರ್ಖಾದಲ್ಲಿ ಭಾರತೀಯ ನೆರವಿನಡಿಯಲ್ಲಿ ನಿರ್ಮಿಸಲಾದ ಮೂರು ಶಾಲೆಗಳನ್ನು ಪರಿಶೀಲಿಸಲಿದ್ದಾರೆ. ನೇಪಾಳದ ಮನಂಗ್ ಜಿಲ್ಲೆಯಲ್ಲಿ ಬೌದ್ಧ ಮಠವನ್ನು ಶ್ರೀಂಗ್ಲಾ ಉದ್ಘಾಟಿಸಲಿದ್ದಾರೆ.
ಮೇ 8 ರಂದು ಉತ್ತರಖಂಡದ ಧಾರ್ಚುಲಾದೊಂದಿಗೆ ಲಿಪುಲೆಖ್ ಪಾಸ್ ಸಂಪರ್ಕಿಸುವ 80 ಕಿ.ಮೀ ಉದ್ದ ಕಾರ್ಯಂತ್ರದ ಪ್ರಮುಖ ರಸ್ತೆಯನ್ನು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಉದ್ಘಾಟಿಸಿದ ನಂತರ ಉಭಯ ದೇಶಗಳ ನಡುವಿನ ಬಾಂಧವ್ಯ ಹದಗೆಟ್ಟಿತ್ತು. ಸದ್ಯ ಉಭಯ ದೇಶಗಳು ಮಾತುಕತೆಗಳ ಮೂಲಕ ಗಡಿ ಗೊಂದಲ ಪರಿಹರಿಸಿಕೊಳ್ಳಲು ಮುಂದಾಗಿವೆ.
Published On - 4:49 pm, Thu, 26 November 20