ಇಂಧನದ ಬಿಕ್ಕಟ್ಟಿಗೆ ಕಂಗೆಟ್ಟ ಪಾಕಿಸ್ತಾನ; ಅಧಿಕಾರಿಗಳ ವಿದೇಶ ಪ್ರವಾಸ ನಿಷೇಧ, ಮದುವೆಗೆ ಒಂದೇ ಖಾದ್ಯ

ಮಧ್ಯಪ್ರಾಚ್ಯದಲ್ಲಿ ಇರಾನ್, ಸೌದಿ ಅರೇಬಿಯಾ ಹಾಗೂ ಹೌತಿ ಸಂಘರ್ಷದಿಂದ ಜಾಗತಿಕ ತೈಲ ಮತ್ತು ಅನಿಲ ಪೂರೈಕೆ ಏರುಪೇರಾಗಿದ್ದು, ತೀವ್ರ ಆರ್ಥಿಕ ಹಾಗೂ ಇಂಧನ ಬಿಕ್ಕಟ್ಟಿಗೆ ಸಿಲುಕಿರುವ ಪಾಕಿಸ್ತಾನ ಸರ್ಕಾರ ತನ್ನ ದೇಶದಲ್ಲಿ ಕಠಿಣ ನಿಯಮಗಳನ್ನು ಘೋಷಿಸಿದೆ. ಇಂಧನದ ಕೊರತೆಯನ್ನು ಸರಿದೂಗಿಸಲು ರಾಜಕಾರಣಿಗಳು ಮತ್ತು ಅಧಿಕಾರಿಗಳ ವಿದೇಶಿ ಪ್ರವಾಸ, ಹೊಸ ವಾಹನಗಳ ಖರೀದಿಗೆ ಸಂಪೂರ್ಣ ನಿಷೇಧ ಹೇರಲಾಗಿದೆ. ಅಲ್ಲದೆ, ಇಂಧನ ಹಾಗೂ ವಿದ್ಯುತ್ ಉಳಿತಾಯಕ್ಕಾಗಿ ಮಾರುಕಟ್ಟೆ ಮತ್ತು ಮಾಲ್‌ಗಳನ್ನು ರಾತ್ರಿ 9 ಗಂಟೆಗೆ ಹಾಗೂ ಹೋಟೆಲ್‌ಗಳನ್ನು ರಾತ್ರಿ 11 ಗಂಟೆಗೆ ಮುಚ್ಚಲು ಕಟ್ಟುನಿಟ್ಟಿನ ಆದೇಶ ನೀಡಲಾಗಿದೆ.

ಇಂಧನದ ಬಿಕ್ಕಟ್ಟಿಗೆ ಕಂಗೆಟ್ಟ ಪಾಕಿಸ್ತಾನ; ಅಧಿಕಾರಿಗಳ ವಿದೇಶ ಪ್ರವಾಸ ನಿಷೇಧ, ಮದುವೆಗೆ ಒಂದೇ ಖಾದ್ಯ
Pakistan Pm Shehbaz Sharif
Image Credit source: AP

Updated on: Sep 17, 2026 | 8:35 PM

ಇಸ್ಲಾಮಾಬಾದ್, ಸೆಪ್ಟೆಂಬರ್ 17: ಮಧ್ಯಪ್ರಾಚ್ಯ ಹಾಗೂ ಗಲ್ಫ್ ಪ್ರದೇಶದಲ್ಲಿ ಯುದ್ಧದ ಪರಿಸ್ಥಿತಿ ಭೀಕರ ಸ್ವರೂಪ ಪಡೆದುಕೊಂಡಿದ್ದು, ಜಾಗತಿಕವಾಗಿ ತೈಲ ಮತ್ತು ಅನಿಲ ಬೆಲೆಗಳು ತೀವ್ರವಾಗಿ ಏರಿಕೆಯಾಗಿವೆ. ಈ ಹಿನ್ನೆಲೆಯಲ್ಲಿ ಇಂಧನ ಬಿಕ್ಕಟ್ಟನ್ನು ಎದುರಿಸಲು ಪಾಕಿಸ್ತಾನ ಸರ್ಕಾರವು ಇಂದು ಸರ್ಕಾರಿ ವಾಹನಗಳಿಗೆ ಇಂಧನ ಕಡಿತ, ಹೊಸ ವಾಹನ ಖರೀದಿಗೆ ನಿಷೇಧ, ಅಧಿಕಾರಿಗಳ ವಿದೇಶಿ ಪ್ರವಾಸಗಳಿಗೆ ತಡೆ ಹಾಗೂ ಸರ್ಕಾರಿ ಔತಣಕೂಟಗಳ ರದ್ದು ಸೇರಿದಂತೆ ಹಲವಾರು ಕಠಿಣ ಕ್ರಮಗಳನ್ನು ಘೋಷಿಸಿದೆ. ಗಲ್ಫ್ ಸಂಘರ್ಷದಿಂದಾಗಿ ದ್ರವೀಕೃತ ನೈಸರ್ಗಿಕ ಅನಿಲ (ಎಲ್​ಎನ್​ಜಿ) ಪೂರೈಕೆಯಲ್ಲಿ ಅಡಚಣೆ ಉಂಟಾಗಿದ್ದು, ಪಾಕಿಸ್ತಾನದಲ್ಲಿ ಪೆಟ್ರೋಲ್, ಡೀಸೆಲ್ ಬೆಲೆಗಳು ಗಗನಕ್ಕೇರಿವೆ.

ವಾಹನ ಖರೀದಿ ಮತ್ತು ವಿದೇಶ ಪ್ರವಾಸ ನಿಷೇಧ:

ಪಾಕಿಸ್ತಾನ ಸರ್ಕಾರದ ವೆಚ್ಚದಲ್ಲಿ ಯಾವುದೇ ಹೊಸ ವಾಹನಗಳನ್ನು ಖರೀದಿಸುವಂತಿಲ್ಲ. ಸಚಿವರು, ಸಂಸದರು ಮತ್ತು ಹಿರಿಯ ಅಧಿಕಾರಿಗಳ ವಿದೇಶಿ ಪ್ರವಾಸಗಳ ಮೇಲೆ 3 ತಿಂಗಳ ಕಾಲ ಸಂಪೂರ್ಣ ನಿಷೇಧ ಹೇರಲಾಗಿದೆ. ಅತ್ಯಗತ್ಯ ಪ್ರವಾಸವಿದ್ದರೆ ಕೇವಲ ‘ಎಕನಾಮಿ ಕ್ಲಾಸ್’ನಲ್ಲಿ ಮಾತ್ರ ಪ್ರಯಾಣಿಸಬೇಕು.

ಇದನ್ನೂ ಓದಿ: ಭಾರತದ ನಿಷೇಧಿತ ಉಗ್ರ ಸಂಘಟನೆಯ ಪಟ್ಟಿಗೆ ಸೇರಿದ ಪಾಕಿಸ್ತಾನದ ಶಹಜಾದ್ ಭಟ್ಟಿ ನೆಟ್‌ವರ್ಕ್; ಸರ್ಕಾರ ಘೋಷಣೆ

ಹೋಟೆಲ್, ರೆಸ್ಟೋರೆಂಟ್​​ಗಳಿಗೂ ನಿರ್ಬಂಧ:

ಸರ್ಕಾರಿ ವಾಹನಗಳಿಗೆ ಒದಗಿಸಲಾಗುತ್ತಿದ್ದ ಇಂಧನ ಕೋಟಾದಲ್ಲಿ ಶೇ. 50ರಷ್ಟು ಕಡಿತಗೊಳಿಸಲಾಗಿದೆ. ತುರ್ತು ಸೇವೆಗಳು ಮತ್ತು ಸೇನಾ ವಾಹನಗಳಿಗೆ ಮಾತ್ರ ಇದರಿಂದ ವಿನಾಯಿತಿ ನೀಡಲಾಗಿದೆ. ವಿದ್ಯುತ್ ಉಳಿತಾಯಕ್ಕಾಗಿ ಅಂಗಡಿ-ಮುಗ್ಗಟ್ಟುಗಳು, ಮಾರುಕಟ್ಟೆಗಳು ಮತ್ತು ಶಾಪಿಂಗ್ ಮಾಲ್‌ಗಳನ್ನು ರಾತ್ರಿ 9 ಗಂಟೆಗೆ ಮುಚ್ಚಬೇಕು. ಕಲ್ಯಾಣ ಮಂಟಪಗಳು ರಾತ್ರಿ 10 ಗಂಟೆಗೆ ಹಾಗೂ ಹೋಟೆಲ್, ರೆಸ್ಟೋರೆಂಟ್‌ಗಳನ್ನು ರಾತ್ರಿ 11 ಗಂಟೆಯೊಳಗೆ ಬಂದ್ ಮಾಡಬೇಕು. ಸರ್ಕಾರಿ ವೆಚ್ಚದ ಔತಣಕೂಟಗಳು, ವಿಚಾರಸಂಕಿರಣಗಳನ್ನು ನಿಷೇಧಿಸಲಾಗಿದ್ದು, ಮದುವೆ ಸಮಾರಂಭಗಳಲ್ಲಿ ಕೇವಲ ‘ಸಿಂಗಲ್ ಡಿಶ್’ (ಒಂದೇ ಮಾದರಿಯ ಅಡುಗೆ) ಬಡಿಸಲು ನಿಯಮ ರೂಪಿಸಲಾಗಿದೆ.

ಇದನ್ನೂ ಓದಿ: ‘ನಮ್ಮದು ಹಗ್ಗದ ಮೇಲಿನ ನಡಿಗೆ’; ಅಮೆರಿಕ-ಇರಾನ್ ಸಂಘರ್ಷದ ಕುರಿತು ಶಾಕಿಂಗ್ ಹೇಳಿಕೆ ನೀಡಿದ ಪಾಕಿಸ್ತಾನ

ಪಾಕಿಸ್ತಾನದಲ್ಲಿ ಈ ವರ್ಷದಲ್ಲೇ ಎರಡನೇ ಬಾರಿಗೆ ಇಂತಹ ತುರ್ತು ಕ್ರಮಗಳನ್ನು ಕೈಗೊಳ್ಳಲಾಗಿದೆ. ಪ್ರತಿಯೊಂದು ಸಭೆಯನ್ನೂ ವಿಡಿಯೋ ಕಾನ್ಫರೆನ್ಸ್ ಮೂಲಕವೇ ನಡೆಸಲು ಸೂಚಿಸಲಾಗಿದೆ. ಏರಿಕೆಯಾಗುತ್ತಿರುವ ಇಂಧನ ದರದಿಂದ ಬಡ ಹಾಗೂ ಮಧ್ಯಮ ವರ್ಗದ ಜನರನ್ನು ರಕ್ಷಿಸಲು ಇಸ್ಲಾಮಾಬಾದ್ ಸರ್ಕಾರ ಬುಧವಾರದಿಂದ ಹೊಸ ಯೋಜನೆಯೊಂದನ್ನು ಜಾರಿಗೆ ತಂದಿದೆ. ಇದರ ಅಡಿಯಲ್ಲಿ ಬೈಕ್, ಆಟೋ ರಕ್ಷಾ ಮತ್ತು ಸಣ್ಣ ಕಾರುಗಳ ಮಾಲೀಕರಿಗೆ ನಿಗದಿತ ಮಾಸಿಕ ಕೋಟಾದಡಿ ಲೀಟರ್‌ಗೆ 100 ಪಾಕಿಸ್ತಾನಿ ರೂಪಾಯಿ ಸಬ್ಸಿಡಿ ನೀಡಲಾಗುತ್ತಿದೆ.

ಗಲ್ಫ್ ಯುದ್ಧ ಮತ್ತು ತೈಲ ಪೂರೈಕೆ ಸ್ಥಗಿತ:

6 ತಿಂಗಳ ಹಿಂದೆ ಇರಾನ್ ಮೇಲಿನ ದಾಳಿಗಳ ನಂತರ ಹಾರ್ಮುಜ್ ಜಲಸಂಧಿ ಮೂಲಕ ನಡೆಯುತ್ತಿದ್ದ ತೈಲ ಮತ್ತು ಅನಿಲ ರಫ್ತು ಸ್ಥಗಿತಗೊಂಡಿತ್ತು. ಈಗ ಸೌದಿ ಅರೇಬಿಯಾ ಮತ್ತು ಇರಾನ್ ಬೆಂಬಲಿತ ಹೌತಿ ದಂಗೆಕೋರರ ನಡುವಿನ ಕಾಳಗವು ಕೆಂಪು ಸಮುದ್ರದ ಜಲಮಾರ್ಗವನ್ನೂ ಅಪಾಯಕ್ಕೆ ಸಿಲುಕಿಸಿದೆ.

ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ 

Published On - 8:16 pm, Thu, 17 September 26

Loading...
Unable to load recommendations.
Follow Us