ಇಂದು ರಾತ್ರಿ ಪಾಕಿಸ್ತಾನವನ್ನು ಉದ್ದೇಶಿಸಿ ಭಾಷಣ ಮಾಡಲಿದ್ದಾರೆ ಪಾಕ್ ಪ್ರಧಾನಿ ಇಮ್ರಾನ್ ಖಾನ್
ಇಮ್ರಾನ್ ಖಾನ್ ಅವರ ಸರ್ಕಾರವನ್ನು ಉರುಳಿಸಲು ಜಂಟಿ ವಿರೋಧ ಪಕ್ಷವು ಮಂಡಿಸಿದ ಅವಿಶ್ವಾಸ ನಿರ್ಣಯದ ಮೇಲಿನ ಚರ್ಚೆಗಾಗಿ ಪಾಕಿಸ್ತಾನದ ಸಂಸತ್ತಿನ ಕೆಳಮನೆಯು ಗುರುವಾರ ಸಭೆ ಸೇರಲಿದೆ.
ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ (Imran Khan) ಅವರನ್ನು ಪದಚ್ಯುತಗೊಳಿಸುವ ಮತದಾನಕ್ಕೂ ಮುನ್ನ ಇಂದು ದೇಶವನ್ನು ಉದ್ದೇಶಿಸಿ ಮಾತನಾಡಲಿದ್ದಾರೆ ಎಂದು ಪಾಕಿಸ್ತಾನದ ಮಾಹಿತಿ ಸಚಿವ ಫವಾದ್ ಚೌಧರಿ ಟ್ವಿಟರ್‌ನಲ್ಲಿ ತಿಳಿಸಿದ್ದಾರೆ. ಅವಿಶ್ವಾಸ ನಿರ್ಣಯದ ಮತದಾನ ಗುರುವಾರ ಮತ್ತು ಸೋಮವಾರದ ನಡುವೆ ನಡೆಯಬಹುದು. ಖಾನ್ ಅವರ ಪ್ರಮುಖ ಮಿತ್ರಪಕ್ಷ ಸರ್ಕಾರವನ್ನು ತೊರೆದು ಬುಧವಾರ ವಿರೋಧ ಪಕ್ಷಕ್ಕೆ ಸೇರಿದ ನಂತರ ಅವರು ತಮ್ಮ ಸಂಸದೀಯ ಬಹುಮತವನ್ನು ಕಳೆದುಕೊಂಡಿದ್ದಾರೆ. ಸಂಸತ್ತಿನಲ್ಲಿ ಬಹುಮತವನ್ನು ಕಳೆದುಕೊಂಡ ಒಂದು ದಿನದ ನಂತರ ಖಾನ್ ಅವರು ಭದ್ರತಾ ವಿಷಯಗಳ ಚರ್ಚೆಯ ಅತ್ಯುನ್ನತ ವೇದಿಕೆಯಾದ ರಾಷ್ಟ್ರೀಯ ಭದ್ರತಾ ಸಮಿತಿಯ (NSC) ಸಭೆಯನ್ನು ಕರೆದಿದ್ದಾರೆ. ಎನ್‌ಎಸ್‌ಸಿ ಸಭೆಯು ಪ್ರಧಾನಿ ಭವನದಲ್ಲಿ ನಡೆಯಲಿದೆ ಎಂದು ಫವಾದ್ ಚೌಧರಿ (Fawad Chaudhry) ಟ್ವೀಟ್ ಮಾಡಿದ್ದಾರೆ. ಎನ್‌ಎಸ್‌ಸಿ ಪ್ರಧಾನ ಮಂತ್ರಿಯವರ ಅಧ್ಯಕ್ಷತೆಯಲ್ಲಿದೆ ಮತ್ತು ಸೇವಾ ಮುಖ್ಯಸ್ಥರು, ಪ್ರಮುಖ ಮಂತ್ರಿಗಳು, ರಾಷ್ಟ್ರೀಯ ಭದ್ರತಾ ಸಲಹೆಗಾರರು ಮತ್ತು ಉನ್ನತ ಗುಪ್ತಚರ ಅಧಿಕಾರಿಗಳು ಭಾಗವಹಿಸುತ್ತಾರೆ. ಸಂಪುಟ ಸದಸ್ಯರೊಂದಿಗೆ ತರಾತುರಿಯಲ್ಲಿ ಕರೆಯಲಾದ ಸಭೆಯಲ್ಲಿ ತಮ್ಮ ಸರ್ಕಾರವನ್ನು ಪದಚ್ಯುತಗೊಳಿಸಲು “ವಿದೇಶಿ ಪಿತೂರಿ”ಯ ಪುರಾವೆಗಳನ್ನು ತೋರಿಸುತ್ತಿರುವ ಪತ್ರವನ್ನು ಹಂಚಿಕೊಂಡ ಒಂದು ದಿನದ ನಂತರ ಈ ಬೆಳವಣಿಗೆ ನಡೆದಿದೆ.
ಪಾಕ್ ಪ್ರಧಾನಿ ಅವರು ಟಿವಿ ಆ್ಯಂಕರ್‌ಗಳ ಆಯ್ದ ಗುಂಪನ್ನು ಕರೆದು ಅವರಿಗೆ “ಪತ್ರದ ಭಾಷೆ ಬೆದರಿಕೆ ಮತ್ತು ದುರಹಂಕಾರದಿಂದ ಕೂಡಿದೆ” ಮತ್ತು ಅವಿಶ್ವಾಸ ನಿರ್ಣಯ ವಿಫಲವಾದರೆ ಪಾಕಿಸ್ತಾನವು ಭೀಕರ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ ಎಂದು ತಿಳಿಸಿದರು. ಆದರೆ, ಪ್ರಧಾನಿ ಪತ್ರವನ್ನು ಮಾಧ್ಯಮಗಳಿಗೆ ತೋರಿಸಲಿಲ್ಲ ಎಂದು ಡಾನ್ ಪತ್ರಿಕೆ ವರದಿ ಮಾಡಿದೆ.
ಖಾನ್ ಅವರ ಸರ್ಕಾರವನ್ನು ಉರುಳಿಸಲು ಜಂಟಿ ವಿರೋಧ ಪಕ್ಷವು ಮಂಡಿಸಿದ ಅವಿಶ್ವಾಸ ನಿರ್ಣಯದ ಮೇಲಿನ ಚರ್ಚೆಗಾಗಿ ಪಾಕಿಸ್ತಾನದ ಸಂಸತ್ತಿನ ಕೆಳಮನೆಯು ಗುರುವಾರ ಸಭೆ ಸೇರಲಿದೆ. ಎನ್‌ಎಸ್‌ಸಿ ಸಭೆಯು ಪ್ರಧಾನಿ ವಿರುದ್ಧದ ಅವಿಶ್ವಾಸ ನಿರ್ಣಯವನ್ನು ಚರ್ಚಿಸಲು ರಾಷ್ಟ್ರೀಯ ಅಸೆಂಬ್ಲಿ ಅಧಿವೇಶನದ ಜತೆಯಾಗಿಯೇ ನಡೆಯುತ್ತಿದೆ.
ಏತನ್ಮಧ್ಯೆ, ಈ ಪತ್ರವು ಪಾಕಿಸ್ತಾನದ ರಾಯಭಾರಿ ಹೊರತುಪಡಿಸಿ ಬೇರೆ ಯಾರೂ ಬರೆದಿಲ್ಲ ಮತ್ತು ಉಕ್ರೇನ್ ಯುದ್ಧದ ಬಗ್ಗೆ ಪಾಕಿಸ್ತಾನದ ವಿದೇಶಾಂಗ ನೀತಿಯ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ಆತಿಥೇಯ ರಾಷ್ಟ್ರದ ಅಧಿಕಾರಿಗಳೊಂದಿಗೆ ರಾಯಭಾರ ಕಚೇರಿಯ ಅಧಿಕಾರಿಗಳ ಸಭೆಯನ್ನು ಆಧರಿಸಿದೆ ಎಂದು ತೋರುತ್ತದೆ.
ಪ್ರತಿಪಕ್ಷಗಳ ಒತ್ತಡದ ನಂತರ ಪತ್ರದ ಭದ್ರತೆಯ ಬಗ್ಗೆ ಸಂಸತ್ತಿನ ಸಂಸ್ಥೆಗೆ ತಿಳಿಸಲು ಸರ್ಕಾರವು ಸೂಚಿಸಿದೆ. “ಸರ್ಕಾರ ಮತ್ತು ವಿರೋಧ ಪಕ್ಷದ ಸಂಸದೀಯ ನಾಯಕರು ಒಪ್ಪಿದರೆ, ಸೂಕ್ಷ್ಮ ಪತ್ರದ ವಿಷಯವನ್ನು ರಾಷ್ಟ್ರೀಯ ಭದ್ರತೆಯ ಸಂಸದೀಯ ಸಮಿತಿಯ ಇನ್-ಕ್ಯಾಮೆರಾ ಸಭೆಯಲ್ಲಿ ಚರ್ಚಿಸಬಹುದು” ಎಂದು ರಾಷ್ಟ್ರೀಯ ಅಸೆಂಬ್ಲಿಯ ಸ್ಪೀಕರ್ ಅಸಾದ್ ಕೈಸರ್ ಟ್ವೀಟ್ ಮಾಡಿದ್ದಾರೆ.
ಇದನ್ನೂ ಓದಿ:Imran Khan ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ವಿರುದ್ಧದ ಅವಿಶ್ವಾಸ ನಿರ್ಣಯದ ಬಗ್ಗೆ ಇಂದು ಚರ್ಚೆ
Published On - 4:24 pm, Thu, 31 March 22