
ನವದೆಹಲಿ, ಮಾರ್ಚ್ 27: ಇರಾನ್ ಮೇಲೆ ಯುದ್ಧ ಸಾರಿರುವ ಅಮೆರಿಕ ಹಾಗೂ ಇಸ್ರೇಲ್ಗೆ ಭಾರತ ಬಹಿರಂಗವಾಗಿ ಬೆಂಬಲ ಘೋಷಿಸಿಲ್ಲ. ಇಸ್ರೇಲ್ ಸರ್ಕಾರದ ಜೊತೆ ಮಾತನಾಡಿ ಶಾಂತಿ ಮಾತುಕತೆಗೆ ಕರೆ ನೀಡಿದ್ದ ಪ್ರಧಾನಿ ಮೋದಿ ಅತ್ತ ಇರಾನ್ಗೂ ವೈದ್ಯಕೀಯ ನೆರವು ಕಳುಹಿಸಿಕೊಟ್ಟಿತ್ತು. ಮೊನ್ನೆಯಷ್ಟೇ ಫೋನ್ ಮಾಡಿದ್ದ ಅಮೆರಿಕದ ಅಧ್ಯಕ್ಷ ಟ್ರಂಪ್ಗೂ ಈ ಬಿಕ್ಕಟ್ಟನ್ನು ಆದಷ್ಟು ಬೇಗ ಬಗೆಹರಿಸಿಕೊಳ್ಳುವುದು ಉತ್ತಮ ಎಂಬ ಸಂದೇಶ ನೀಡಿದ್ದರು. ಇರಾನ್ ಮೇಲೆ ಇನ್ನೂ ಕತ್ತಿ ಮಸೆಯುತ್ತಲೇ ಇರುವ ಟ್ರಂಪ್ (Donald Trump) ಇದೀಗ ಇದ್ದಕ್ಕಿದ್ದಂತೆ ಪ್ರಧಾನಿ ನರೇಂದ್ರ ಮೋದಿಯನ್ನು ಹೊಗಳಿದ್ದಾರೆ.
ಭಾರತದಲ್ಲಿನ ಅಮೆರಿಕ ರಾಯಭಾರ ಕಚೇರಿಯ ಮೂಲಕ ಹಂಚಿಕೊಂಡ ಸಂದೇಶದಲ್ಲಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ “ಭಾರತದೊಂದಿಗಿನ ನಮ್ಮ ಅದ್ಭುತ ಸಂಬಂಧವು ಮುಂದಿನ ದಿನಗಳಲ್ಲಿ ಇನ್ನಷ್ಟು ಬಲಗೊಳ್ಳುತ್ತದೆ. ಪ್ರಧಾನಿ ಮೋದಿ ಮತ್ತು ನಾನು ಕೆಲಸಗಳನ್ನು ಮಾಡುವ ಇಬ್ಬರು ವ್ಯಕ್ತಿಗಳು. ಹೆಚ್ಚಿನವರ ವಿಷಯದಲ್ಲಿ ಈ ಕುರಿತು ಏನೂ ಹೇಳಲಾಗದು” ಎಂದಿದ್ದಾರೆ.
ಇದನ್ನೂ ಓದಿ: ಪ್ರಧಾನಿ ಮೋದಿಗೆ ಕರೆ ಮಾಡಿದ ಟ್ರಂಪ್; ಇರಾನ್ ಮೇಲಿನ ಯುದ್ಧ, ಹಾರ್ಮುಜ್ ಜಲಸಂಧಿಯ ಬಗ್ಗೆ ಚರ್ಚೆ
ಮಾರ್ಚ್ 24ರಂದು ಟ್ರಂಪ್ ಪ್ರಧಾನಿ ನರೇಂದ್ರ ಮೋದಿಗೆ ಕರೆ ಮಾಡಿ ಮಧ್ಯಪ್ರಾಚ್ಯದಲ್ಲಿ ತೀವ್ರಗೊಳ್ಳುತ್ತಿರುವ ಸಂಘರ್ಷದ ಕುರಿತು ಚರ್ಚಿಸಿದ್ದರು. ಈ ಯುದ್ಧ ಈಗ ನಾಲ್ಕನೇ ವಾರಕ್ಕೆ ಕಾಲಿಟ್ಟಿದೆ. ಇದು ಜಾಗತಿಕ ಇಂಧನ ಪೂರೈಕೆಗೆ ಗಮನಾರ್ಹ ಅಡಚಣೆಗಳನ್ನು ಉಂಟುಮಾಡಿದೆ. ಇರಾನ್‌ನಲ್ಲಿ ನಡೆಯುತ್ತಿರುವ ಸಂಘರ್ಷವು ಭೌಗೋಳಿಕ ರಾಜಕೀಯ ಅಪಾಯಗಳನ್ನು ಹೆಚ್ಚಿಸುತ್ತಿರುವ ಸಮಯದಲ್ಲಿ ಹಾರ್ಮುಜ್ ಜಲಸಂಧಿಯನ್ನು ಮುಕ್ತ ಮತ್ತು ಸುರಕ್ಷಿತವಾಗಿಸುವುದು ಬಹಳ ಮುಖ್ಯ ಎಂದು ಅವರಿಬ್ಬರೂ ಚರ್ಚಿಸಿದ್ದರು.
ಇದನ್ನೂ ಓದಿ: ಮೊದಲು ಐದು, ಈಗ ಹತ್ತು ದಿನ, ಹಾರ್ಮುಜ್ ಜಲಸಂಧಿ ತೆರೆಯಲು ಏಪ್ರಿಲ್ 6ರವರೆಗೆ ಗಡುವು ವಿಸ್ತರಿಸಿದ ಟ್ರಂಪ್
“ಟ್ರಂಪ್ ಅವರಿಂದ ಕರೆ ಸ್ವೀಕರಿಸಿದೆ. ಪಶ್ಚಿಮ ಏಷ್ಯಾದ ಪರಿಸ್ಥಿತಿಯ ಕುರಿತು ಅಭಿಪ್ರಾಯ ವಿನಿಮಯ ಮಾಡಿಕೊಂಡೆವು. ಭಾರತವು ಸಾಧ್ಯವಾದಷ್ಟು ಬೇಗ ಉದ್ವಿಗ್ನತೆಯನ್ನು ಕಡಿಮೆ ಮಾಡಲು ಮತ್ತು ಶಾಂತಿಯನ್ನು ಪುನಃಸ್ಥಾಪಿಸಲು ಬೆಂಬಲ ನೀಡುತ್ತದೆ. ಹಾರ್ಮುಜ್ ಜಲಸಂಧಿಯು ಮುಕ್ತ, ಸುರಕ್ಷಿತ ಮತ್ತು ಪ್ರವೇಶಿಸಬಹುದಾದ ಸ್ಥಳವಾಗಿರುವುದನ್ನು ಖಚಿತಪಡಿಸಿಕೊಳ್ಳುವುದು ಇಡೀ ಜಗತ್ತಿಗೆ ಅತ್ಯಗತ್ಯ” ಎಂದು ಪ್ರಧಾನಿ ಮೋದಿ ಅಮೆರಿಕ ಅಧ್ಯಕ್ಷರೊಂದಿಗಿನ ತಮ್ಮ ದೂರವಾಣಿ ಕರೆಯ ಹೇಳಿಕೆ ನೀಡಿದ್ದರು.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 6:28 pm, Fri, 27 March 26