ತರಗತಿಯಲ್ಲಿ ಪ್ರವಾದಿ ಮೊಹಮ್ಮದ್ ಪೇಂಟಿಂಗ್ ತೋರಿಸಿದ ಪ್ರಾಧ್ಯಾಪಕಿ ಅಮಾನತು
ಅಮೆರಿಕದ ಹ್ಯಾಮ್‌ಲೈನ್ ವಿಶ್ವವಿದ್ಯಾನಿಲಯದಲ್ಲಿ ಇತಿಹಾಸದ ತರಗತಿಯಲ್ಲಿ ಪಾಠ ಮಾಡುತ್ತಿದ್ದ ಪ್ರೊಫೆಸರ್ ಇಸ್ಲಾಮಿಕ್ ಕಲೆಯ ವಿಷಯದ ಬಗ್ಗೆ ಪ್ರಸ್ತಾಪಿಸಿ ತನ್ನ ತರಗತಿಯಲ್ಲಿ ಪ್ರವಾದಿ ಮೊಹಮ್ಮದ್ ಅವರ ಎರಡು ವರ್ಣಚಿತ್ರಗಳನ್ನು ಪ್ರದರ್ಶಿಸಿದರು.
ನ್ಯೂಯಾರ್ಕ್: ಅಮೆರಿಕದ ಪ್ರಾಧ್ಯಾಪಕರೊಬ್ಬರು ತರಗತಿಯಲ್ಲಿ ಪ್ರವಾದಿ ಮೊಹಮ್ಮದ್ (Prophet Muhammad) ಅವರ ವರ್ಣಚಿತ್ರಗಳನ್ನು ತೋರಿಸಿದ ಹಿನ್ನೆಲೆಯಲ್ಲಿ ಮುಸ್ಲಿಂ ವಿದ್ಯಾರ್ಥಿಗಳು (Muslim Students) ಮತ್ತು ಆ ಸಮುದಾಯದವರು ಆಕ್ರೋಶಗೊಂಡಿದ್ದಾರೆ. ತಮ್ಮ ತರಗತಿಯಲ್ಲಿ ವಿದ್ಯಾರ್ಥಿಗಳೊಂದಿಗೆ ಇಸ್ಲಾಮಿಕ್ ಕಲೆಯ ಬಗ್ಗೆ ಮಾತನಾಡುತ್ತಿದ್ದ ಅವರು ಪ್ರವಾದಿ ಮೊಹಮ್ಮದ್ ಅವರ ಪೇಂಟಿಂಗ್ಗಳನ್ನು ತೋರಿಸಿದ್ದರು. ಈ ಹಿನ್ನೆಲೆಯಲ್ಲಿ ಆ ಪ್ರಾಧ್ಯಾಪಕಿಯನ್ನು ಅಮಾನತುಗೊಳಿಸಲಾಗಿದೆ.
ಅಮೆರಿಕದ ಮಿನ್ನೇಸೋಟದಲ್ಲಿರುವ ಹ್ಯಾಮ್‌ಲೈನ್ ವಿಶ್ವವಿದ್ಯಾನಿಲಯದಲ್ಲಿ ಇತಿಹಾಸದ ತರಗತಿಯಲ್ಲಿ ಪಾಠ ಮಾಡುತ್ತಿದ್ದ ಪ್ರೊಫೆಸರ್ ಇಸ್ಲಾಮಿಕ್ ಕಲೆಯ ವಿಷಯದ ಬಗ್ಗೆ ಪ್ರಸ್ತಾಪಿಸಿ ತನ್ನ ತರಗತಿಯಲ್ಲಿ ಪ್ರವಾದಿ ಮೊಹಮ್ಮದ್ ಅವರ ಎರಡು ವರ್ಣಚಿತ್ರಗಳನ್ನು ಪ್ರದರ್ಶಿಸಿದರು. ಇದು ಆಕ್ರೋಶದ ಅಲೆ ಏಳಲು ಕಾರಣವಾಯಿತು.
ಇದನ್ನೂ ಓದಿ: ಮೆಸೆಂಜರ್ ಆರ್ಎನ್ಎ ಕೊವಿಡ್ ಲಸಿಕೆಯಿಂದ ಗಂಭೀರ ಆರೋಗ್ಯ ಸಮಸ್ಯೆ ಉಂಟಾಗಬಹುದು; ಅಮೆರಿಕದ ವಿಜ್ಞಾನಿ ಎಚ್ಚರಿಕೆ
ನ್ಯೂಯಾರ್ಕ್ ಟೈಮ್ಸ್ ವರದಿ ಪ್ರಕಾರ, ಈ ಘಟನೆಯು ಕಳೆದ ವರ್ಷ ಅಕ್ಟೋಬರ್ 6ರಂದು ನಡೆದಿದೆ. ಎರಿಕಾ ಲೋಪೆಜ್ ಪ್ರೇಟರ್ ಎಂಬ ಹೆಮ್ಲೈನ್ ವಿಶ್ವವಿದ್ಯಾಲಯದ ಮಹಿಳಾ ಪ್ರಾಧ್ಯಾಪಕಿ ಪ್ರವಾದಿಯ ಎರಡು ಪೇಂಟಿಂಗ್ಗಳನ್ನು ಪ್ರದರ್ಶಿಸಿದರು. ಅವುಗಳಲ್ಲಿ ಒಂದು 14ನೇ ಶತಮಾನದ್ದಾಗಿತ್ತು. ಇನ್ನೊಂದು 16ನೇ ಶತಮಾನದಲ್ಲಿ ರಚಿಸಲ್ಪಟ್ಟಿದ್ದಾಗಿತ್ತು.
ಪ್ರವಾದಿ ಮೊಹಮ್ಮದ್ ಅವರ ಪೇಂಟಿಂಗ್ನಿಂದಾಗಿ ಪ್ರೊಫೆಸರ್ ವಿರುದ್ಧ ಭಾರೀ ಆಕ್ರೋಶ ಉಂಟಾಗಿದೆ. ಆಕೆಯ ತರಗತಿಯ ವಿದ್ಯಾರ್ಥಿಗಳು ಆಕೆಯ ವಿರುದ್ಧ ದೂರು ದಾಖಲಿಸಿದ ನಂತರ ಆಕೆಯನ್ನು ಹ್ಯಾಮ್ಲೈನ್ ವಿಶ್ವವಿದ್ಯಾಲಯದಿಂದ ವಜಾಗೊಳಿಸಲಾಯಿತು. ಇಸ್ಲಾಂ ಧರ್ಮದ ಮಾನದಂಡಗಳ ಪ್ರಕಾರ, ಪ್ರವಾದಿ ಮೊಹಮ್ಮದ್ ಅವರ ಯಾವುದೇ ಫೋಟೋ ಅಥವಾ ವರ್ಣಚಿತ್ರವನ್ನು ಪವಿತ್ರವೆಂದು ಪರಿಗಣಿಸಲಾಗುತ್ತದೆ.
ಇದನ್ನೂ ಓದಿ: US Judge: ಶಾಲೆಯನ್ನು ಅರ್ಧಕ್ಕೆ ಬಿಟ್ಟು, ಬೀಡಿ ಕಟ್ಟುತ್ತಿದ್ದ ಕೇರಳದ ವ್ಯಕ್ತಿ ಇದೀಗ ಅಮೆರಿಕದಲ್ಲಿ ನ್ಯಾಯಾಧೀಶ
ಪ್ರೊಫೆಸರ್ ಎರಿಕಾ ಅವರ ವರ್ತನೆಯ ಬಗ್ಗೆ ಚರ್ಚೆ ನಡೆಸುತ್ತಿರುವಾಗ ಒಬ್ಬ ಮುಸ್ಲಿಂ ಭಾಷಣಕಾರರು ಪ್ರವಾದಿ ಮೊಹಮ್ಮದ್ ಅವರ ಫೋಟೋಗಳನ್ನು ತರಗತಿಯೊಳಗೆ ತೋರಿಸುವುದು ಅಡಾಲ್ಫ್ ಹಿಟ್ಲರ್ ಅನ್ನು ಹೊಗಳುವುದಕ್ಕಿಂತ ಕೆಟ್ಟದು ಎಂದು ಹೇಳಿದ್ದಾರೆ.
ಇನ್ನು, ಪ್ರೊಫೆಸರ್ ಎರಿಕಾ ಹ್ಯಾಮ್ಲೈನ್ ವಿಶ್ವವಿದ್ಯಾನಿಲಯಕ್ಕೆ ಕ್ಷಮೆ ಯಾಚಿಸಿದ್ದಾರೆ. “ನಾನು ತರಗತಿಯಲ್ಲಿ ತೋರಿಸಿದ ಪೇಂಟಿಂಗ್ ನಿಮಗೆ ಅನಾನುಕೂಲವನ್ನುಂಟುಮಾಡಿದೆ, ನಿಮ್ಮ ಭಾವನೆಗೆ ಧಕ್ಕೆ ಉಂಟುಮಾಡಿದೆ ಎಂದಾದರೆ ನಾನು ಕ್ಷಮೆಯಾಚಿಸುತ್ತೇನೆ” ಎಂದು ಅವರು ಹೇಳಿದ್ದಾರೆ.
ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 4:20 pm, Tue, 10 January 23