Rishi Sunak: ಸರ್ಕಾರ ಅನುದಾನ ನೀಡುವ ಸಂಸ್ಥೆಯಲ್ಲಿ ಅಕ್ಷತಾಮೂರ್ತಿ ಹೂಡಿಕೆ; ರಿಷಿ ಸುನಕ್ಗೆ ಸಂಕಷ್ಟ
ಬ್ರಿಟನ್ ಪ್ರಧಾನಿ ರಿಷಿ ಸುನಕ್ ಅವರು ಪತ್ನಿ ಅಕ್ಷತಾಮೂರ್ತಿ ಅವರ ಉದ್ಯಮ ಚಟುವಟಿಕೆಗೆ ಸಂಬಂಧಿಸಿ ತನಿಖೆ ಎದುರಿಸಬೇಕಾಗಲಿದೆ ಎಂದು ವರದಿಯಾಗಿದೆ. ಸುನಕ್ ವಿರುದ್ಧ ತನಿಖೆ ಆರಂಭಿಸಲಾಗಿದೆ ಎಂಬುದಾಗಿ ಬ್ರಿಟಿಷ್ ಪಾರ್ಲಿಮೆಂಟ್ನ ‘ಕಮಿಷನರ್ ಆಫ್ ಸ್ಟಾಂಡರ್ಡ್ಸ್’ ವೆಬ್ಸೈಟ್ ಉಲ್ಲೇಖಿಸಿದೆ.
ಲಂಡನ್: ಬ್ರಿಟನ್ ಪ್ರಧಾನಿ ರಿಷಿ ಸುನಕ್ (Rishi Sunak) ಅವರು ಪತ್ನಿ ಅಕ್ಷತಾಮೂರ್ತಿ (Akshata Murthy) ಅವರ ಉದ್ಯಮ ಚಟುವಟಿಕೆಗೆ ಸಂಬಂಧಿಸಿ ತನಿಖೆ ಎದುರಿಸಬೇಕಾಗಲಿದೆ ಎಂದು ವರದಿಯಾಗಿದೆ. ಸುನಕ್ ವಿರುದ್ಧ ತನಿಖೆ ಆರಂಭಿಸಲಾಗಿದೆ ಎಂಬುದಾಗಿ ಬ್ರಿಟಿಷ್ ಪಾರ್ಲಿಮೆಂಟ್ನ ‘ಕಮಿಷನರ್ ಆಫ್ ಸ್ಟಾಂಡರ್ಡ್ಸ್’ ವೆಬ್ಸೈಟ್ ಉಲ್ಲೇಖಿಸಿದೆ. ಉದ್ಯಮಕ್ಕೆ ಸಂಬಂಧಿಸಿದ ಮಾಹಿತಿ ವಿಚಾರದಲ್ಲಿ ಏಪ್ರಿಲ್ 13ರಂದು ತನಿಖೆ ಆರಂಭಿಸಲಾಗಿದೆ ವೆಬ್ಸೈಟ್ನಲ್ಲಿ ತಿಳಿಸಲಾಗಿದೆ. ತನಿಖೆ ನಡೆಯುತ್ತಿರುವುದು ಅಕ್ಷತಾಮೂರ್ತಿ ಅವರು ಚೈಲ್ಡ್ಕೇರ್ ಸಂಸ್ಥೆಯೊಂದರಲ್ಲಿ ಮಾಡಿರುವ ಹೂಡಿಕೆಗೆ ಸಂಬಂಧಿಸಿ ಎಂದು ರಿಷಿ ಸುನಕ್ ಅವರ ವಕ್ತಾರರು ತಿಳಿಸಿದ್ದಾರೆ.
ಸರ್ಕಾರದಿಂದ ಪ್ರಯೋಜನ ಪಡೆಯುತ್ತಿರುವ ಚೈಲ್ಡ್ಕೇರ್ ಸಂಸ್ಥೆಯಲ್ಲಿ ಅಕ್ಷತಾಮೂರ್ತಿ ಅವರು ಪಾಲು ಹೊಂದಿದ್ದಾರೆ ಎಂಬ ಮಾಧ್ಯಮ ವರದಿಗಳ ಬಗ್ಗೆ ತನಿಖೆಯಾಗಬೇಕು ಎಂದು ಲಿಬರಲ್ ಡೆಮಾಕ್ರಟ್ ಪಕ್ಷದ ನಾಯಕರು ಆಗ್ರಹಿಸಿದ್ದರು. ಮಾರ್ಚ್ನಲ್ಲಿ ಮಂಡನೆ ಮಾಡಿದ್ದ ಬಜೆಟ್ನಲ್ಲಿ ಆ ಚೈಲ್ಡ್ಕೇರ್ ಸಂಸ್ಥೆಗೆ ಬ್ರಿಟನ್ ಸರ್ಕಾರ ಅನುದಾನ ಘೋಷಿಸಿತ್ತು.
ಬ್ರಿಟನ್ ಸಂಸತ್ತಿನ ಮಾದರಿ ನೀತಿ ಸಂಹಿತೆ ಉಲ್ಲಂಘನೆ ಬಗ್ಗೆ ತನಿಖೆ ನಡೆಸುವುದು ‘ಕಮಿಷನರ್ ಆಫ್ ಸ್ಟಾಂಡರ್ಡ್ಸ್’ ಜವಾಬ್ದಾರಿಯಾಗಿದೆ. ರಿಷಿ ಸುನಕ್ ವಿರುದ್ಧದ ತನಿಖೆಗೆ ಸಂಬಂಧಿಸಿದ ಹೆಚ್ಚಿನ ಮಾಹಿತಿಯನ್ನು ವೆಬ್ಸೈಟ್ನಲ್ಲಿ ಬಹಿರಂಗಪಡಿಸಲಾಗಿಲ್ಲ.
ಇದನ್ನೂ ಓದಿ: Sudan conflict: ಸಂಘರ್ಷಪೀಡಿತ ಸುಡಾನ್ನಲ್ಲಿ ಸಿಲುಕಿರುವ ಕನ್ನಡಿಗರಿಂದ ನೆರವಿಗಾಗಿ ಮೊರೆ
ನೀತಿ ಸಂಹಿತೆ ಪ್ರಕಾರ, ಸಂಸತ್ನ ಎಲ್ಲ ಸದಸ್ಯರು ಅವರ ಮತ್ತು ಅವರು ರೂಪಿಸುವ ನೀತಿಗಳ ಮೇಲೆ ಪ್ರಭಾವ ಬೀರಬಲ್ಲಂಥ ಸಮೀಪ ಸಂಬಂಧಿಗಳ ಉದ್ಯಮ ಹಿತಾಸಕ್ತಿಗಳ ವಿವರವನ್ನು ಸಲ್ಲಿಸುವುದು ಕಡ್ಡಾಯವಾಗಿದೆ. ತನಿಖೆ ವೇಳೆ, ರಿಷಿ ಸುನಕ್ ಅವರು ನಿಯಮ ಉಲ್ಲಂಘಿಸಿದ್ದು ಕಂಡುಬಂದಲ್ಲಿ ಕ್ಷಮೆ ಕೋರುವಂತೆ ಅವರಿಗೆ ಸೂಚಿಸುವ ಮತ್ತು ಉದ್ಯಮ ಹಿತಾಸಕ್ತಿಗೆ ಸಂಬಂಧಿಸಿದ ವಿವರಗಳನ್ನು ನೀಡುವಂತೆ ನಿರ್ದೇಶನ ನೀಡುವ ಸಾಧ್ಯತೆಗಳಿವೆ. ಈ ಮೂಲಕ ಮುಂದೆ ಅಂಥ ಎಡವಟ್ಟುಗಳಾಗದಂತೆ ತಡೆಯಬಹುದಾಗಿದೆ ಎಂದು ಮಾಧ್ಯಮ ವರದಿಗಳು ಉಲ್ಲೇಖಿಸಿವೆ.
ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ