Russia Ukraine War: ದೂರವಾಣಿ ಕರೆ ಮಾಡಿ ಪುಟಿನ್ ಜೊತೆಗೆ ಪ್ರಧಾನಿ ಮೋದಿ ಚರ್ಚೆ
Russia Ukraine Conflict Highlights: ರಷ್ಯಾದ ಪಡೆಗಳು ಉಕ್ರೇನ್ ರಾಜಧಾನಿ ಕೀವ್ ನಗರ ಪ್ರವೇಶಿಸುತ್ತಿವೆ. ಉಕ್ರೇನ್‌ಗೆ ಪೊಲೆಂಡ್ ಯುದ್ಧವಿಮಾನಗಳನ್ನು ಕಳಿಸಿಕೊಟ್ಟಿದ್ದರೆ ಆಸ್ಟ್ರೇಲಿಯಾ ಸೇರಿದಂತೆ ಹಲವು ದೇಶಗಳು ತುರ್ತು ಮಿಲಿಟರಿ ನೆರವು ಒದಗಿಸಲು ಮುಂದಾಗಿವೆ. ಇಡೀ ದೇಶದಲ್ಲಿ ಆತಂಕದ ವಾತಾವರಣ ನಿರ್ಮಾಣಗೊಂಡಿದೆ. ಉಕ್ರೇನ್‌ನಲ್ಲಿ ಸಿಲುಕಿರುವ ಭಾರತ ಮತ್ತು ಇತರ ದೇಶಗಳ ವಿದ್ಯಾರ್ಥಿಗಳ ಸ್ವದೇಶಗಳಿಗೆ ಮರಳಲು ತಹತಹಿಸುತ್ತಿದ್ದಾರೆ.
Russia Attacks Ukraine: ಜಾಗತಿಕ ಸೂಪರ್ಪವರ್ ರಷ್ಯಾ (Russia) ತನ್ನ ನೆರೆಯ ಉಕ್ರೇನ್ (Ukraine) ವಿರುದ್ಧ ದಂಡೆತ್ತಿ ಹೋಗಿರುವುದು ವಿಶ್ವದೆಲ್ಲೆಡೆ ತಲ್ಲಣ ಹುಟ್ಟಿಸಿದೆ. ವಿದ್ಯಾಭ್ಯಾಸಕ್ಕೆಂದು ಉಕ್ರೇನ್‌ಗೆ ತೆರಳಿರುವ ತನ್ನ ವಿದ್ಯಾರ್ಥಿಗಳನ್ನು ತರಾತುರಿಯಲ್ಲಿ ಹಿಂದಕ್ಕೆ ಕರೆಸಿಕೊಳ್ಳಲು ಭಾರತವೂ ಸೇರಿದಂತೆ ವಿವಿಧ ದೇಶಗಳ ವಿದೇಶಾಂಗ ವ್ಯವಹಾರಗಳ ಇಲಾಖೆಯು ಕೊನೇ ಕ್ಷಣದ ಪ್ರಯತ್ನಗಳನ್ನು ಮುಂದುವರಿಸಿವೆ. ಉಕ್ರೇನ್‌ನಲ್ಲಿ ರಷ್ಯನ್ ಪಡೆಗಳ ದಾಳಿಗೆ ಹಾವೇರಿಯ ನವೀನ್ ಗ್ಯಾನಗೌಡರ್ ಮೃತಪಟ್ಟಿದ್ದಾರೆ. ಸಂಘರ್ಷ ಆರಂಭವಾದ ನಂತರ ಉಕ್ರೇನ್‌ನಲ್ಲಿ ಮೃತಪಟ್ಟ ಮೊದಲ ಭಾರತೀಯ ವಿದ್ಯಾರ್ಥಿ ಇವರು. ರಷ್ಯಾ ಬೆದರಿಕೆಗಳಿಗೆ ಸೊಪ್ಪು ಹಾಕದ ಉಕ್ರೇನ್ ತನ್ನಿಂದ ಸಾಧ್ಯವಿರುವ ಎಲ್ಲ ರೀತಿಯಲ್ಲಿಯೂ ಹೋರಾಟ ಮುಂದುವರಿಸಿದ್ದು, ತುರ್ತು ನೆರವಿಗಾಗಿ ವಿಶ್ವ ಸಮುದಾಯದ ಮೊರೆಯಿಟ್ಟಿದೆ. ಪೊಲೆಂಡ್ ಯುದ್ಧವಿಮಾನಗಳನ್ನು ಉಕ್ರೇನ್‌ಗೆ ಕಳುಹಿಸಿಕೊಟ್ಟಿದ್ದರೆ ಆಸ್ಟ್ರೇಲಿಯಾ ಸೇರಿದಂತೆ ಹಲವು ದೇಶಗಳು ಹಣಕಾಸು ಮತ್ತು ಮಿಲಿಟರಿ ನೆರವು ಒದಗಿಸಲು ಮುಂದೆ ಬಂದಿವೆ. ಬೆಂಕಿಯುಂಡೆ ಆಗಿರೋ ಉಕ್ರೇನ್‌ನಿಂದ ತಪ್ಪಿಸಿಕೊಂಡು ಬರುತ್ತಿರುವವರ ಜೀವನ ಅಕ್ಷರಶಃ ನರಕವಾಗಿದೆ. ಉಕ್ರೇನ್‌ನಲ್ಲಿ ಸಿಲುಕಿರುವ ಭಾರತೀಯ ವಿದ್ಯಾರ್ಥಿಗಳು ಸಂಕಷ್ಟ ಪರಿಸ್ಥಿತಿ ಅನುಭವಿಸುತ್ತಿದ್ದಾರೆ. ಈ ನಡುವೆ ರಷ್ಯಾ ದೇಶದ ಟಿವಿ ಚಾನೆಲ್ಗಳನ್ನು ವಿಶ್ವದ ಹಲವು ದೇಶಗಳು ನಿಷೇಧಿಸಿವೆ, ಮಾತ್ರವಲ್ಲದೆ ರಷ್ಯಾ ವಿರುದ್ಧ ಕಠಿಣ ಅರ್ಥಿಕ ದಿಗ್ಬಂಧನಗಳನ್ನು ವಿಧಿಸಿವೆ. ಆದರೆ ರಷ್ಯಾ ಮಾತ್ರ ಇದ್ಯಾವುದಕ್ಕೂ ಜಗ್ಗುತ್ತಿಲ್ಲ. ಉಕ್ರೇನ್ ಮತ್ತು ರಷ್ಯಾ ನಡುವೆ ಬೆಲರೂಸ್ನಲ್ಲಿ ಒಂದು ಸುತ್ತಿನ ಮಾತುಕತೆ ನಡೆಯಿತಾದರೂ ಹೆಚ್ಚು ಪ್ರಯೋಜನವಾಗಿಲ್ಲ. ಉಕ್ರೇನ್ ರಾಜಧಾನಿ ಕೀವ್ನಿಂದ ನಾಗರಿಕರು ಹೊರಹೋಗಬೇಕು ಎಂದು ರಷ್ಯಾ ತಾಕೀತು ಮಾಡುತ್ತಿದೆ. ಆದರೆ ಉಕ್ರೇನ್ ನಾಗರಿಕರು ರಷ್ಯಾ ವಿರುದ್ಧದ ಹೋರಾಟಕ್ಕೆ ಶಸ್ತ್ರ ಕೈಗೆತ್ತಿಕೊಂಡಿದ್ದಾರೆ. ದಿನದಿಂದ ದಿನಕ್ಕೆ ಹೊಸ ಸ್ವರೂಪ ತೆಗೆದುಕೊಳ್ಳುತ್ತಿರುವ ಸಂಘರ್ಷದ ಮುಂದಿನ ತಿರುವು ಹೀಗೆ ಎಂದು ಹೇಳಲು ಆಗುತ್ತಿಲ್ಲ. ರಷ್ಯಾ-ಉಕ್ರೇನ್ ಸಂಘರ್ಷದ ಕ್ಷಣಕ್ಷಣದ ಮಾಹಿತಿ ಇಲ್ಲಿದೆRu.
LIVE NEWS & UPDATES
-
ರಷ್ಯಾದ ಯುದ್ಧ ದಾಹ ಖಂಡಿಸಿದ ವಿಶ್ವಸಂಸ್ಥೆ ಸಾಮಾನ್ಯ ಸಭೆ
ಸಭೆಯಲ್ಲಿ ರಷ್ಯಾದ ವಿರುದ್ಧ ಐತಿಹಾಸಿಕ ನಿರ್ಣಯ ಅಂಗೀಕಾರ ಮಾಡಲಾಗಿದ್ದು, ಸಭೆಯ ನಿರ್ಣಯವನ್ನು ವಿಶ್ವದ 141 ರಾಷ್ಟ್ರಗಳು ಬೆಂಬಲಿಸಿದೆ. ಉಕ್ರೇನ್ ಮೇಲೆ ರಷ್ಯಾ ದಾಳಿ ಖಂಡಿಸಿದ ನಿರ್ಣಯಕ್ಕೆ 5 ರಾಷ್ಟ್ರಗಳು ವಿಶ್ವಸಂಸ್ಥೆ ಸಾಮಾನ್ಯ ಸಭೆ ನಿರ್ಣಯದ ವಿರುದ್ಧ ನಿಂತಿವೆ. ಇನ್ನೂ ಮತದಾನದಿಂದ ಭಾರತ ಸೇರಿದಂತೆ 35 ರಾಷ್ಟ್ರಗಳು ದೂರ ಉಳಿದಿವೆ.
-
ವಿಶ್ವಸಂಸ್ಥೆ ಸಾಮಾನ್ಯ ಸಭೆಯಲ್ಲಿ ಖಂಡನಾ ನಿರ್ಣಯ ಅಂಗೀಕಾರ
ಉಕ್ರೇನ್‌ನಲ್ಲಿ ರಷ್ಯಾ ಸೇನೆ ದಾಳಿ ಮುಂದುವರಿಸಿರುವ ಹಿನ್ನೆಲೆಯಲ್ಲಿ ವಿಶ್ವಸಂಸ್ಥೆ ಸಾಮಾನ್ಯ ಸಭೆಯಲ್ಲಿ ಖಂಡನಾ ನಿರ್ಣಯ ಅಂಗೀಕಾರ ಮಾಡಲಾಗಿದೆ. ಆ ಮೂಲಕ ಉಕ್ರೇನ್ ಮೇಲೆ ರಷ್ಯಾದ ಆಕ್ರಮಣ ಖಂಡಿಸುವ ನಿರ್ಣಯ ಮಾಡಲಾಗಿದೆ.
-
ಉಕ್ರೇನ್‌ನಿಂದ ಈವರೆಗೂ ಬೆಂಗಳೂರಿಗೆ ಬಂದ ವಿದ್ಯಾರ್ಥಿಗಳು
ಮೊದಲ ಬ್ಯಾಚ್ನಲ್ಲಿ 12 ಜನ ಬೆಳಗ್ಗೆ 09 ಗಂಟೆ, ಎರಡನೇ ಬ್ಯಾಚ್ನಲ್ಲಿ 06 ಜನ ರಾತ್ರಿ 7 ಗಂಟೆ, ಮೂರನೇ ಬ್ಯಾಚ್ 13 ಜನ ರಾತ್ರಿ 09 ಗಂಟೆ, ನಾಲ್ಕನೇ ಬ್ಯಾಚ್ 05 ಜನ ರಾತ್ರಿ 07:30 ಗಂಟೆ 5ನೇ ಬ್ಯಾಚ್ 7 ಜನ, 6ನೇ ಬ್ಯಾಚ್ 5 ಜನ, ಸೇರಿ ಇಂದು 10 ಬ್ಯಾಚ್ನಲ್ಲಿ ವಿದ್ಯಾರ್ಥಿಗಳು ಆಗಮಿಸಿದ್ದಾರೆ.
ಭಾರತೀಯ ಕಾಲಮಾನ ರಾತ್ರಿ 9.30ರೊಳಗೆ ಉಕ್ರೇನ್ ತೊರೆಯುವಂತೆ ಎಚ್ಚರಿಕೆ
ಉಕ್ರೇನ್ ಕಾಲಮಾನ ಸಂಜೆ 6ರೊಳಗೆ ಖಾರ್ಕಿವ್ ತೊರೆಯಿರಿ ಎಂದು ಸೂಚನೆ ನೀಡಲಾಗಿದೆ. ಖಾರ್ಕಿವ್‌ನಲ್ಲಿ ಸಂಜೆ 6ರ ನಂತರ ಮತ್ತಷ್ಟು ದಾಳಿ ಸಾಧ್ಯತೆ ಇದೆ. ಸಂಜೆ 6ರೊಳಗೆ ಖಾರ್ಕಿವ್ ನಗರ ತೊರೆಯುವಂತೆ ಎಚ್ಚರಿಕೆ ನೀಡಲಾಗಿದೆ. ಭಾರತೀಯ ಕಾಲಮಾನ ರಾತ್ರಿ 9.30ರೊಳಗೆ ಉಕ್ರೇನ್ ತೊರೆಯುವಂತೆ ಎಚ್ಚರಿಕೆ ನೀಡಲಾಗಿದೆ.
ರಷ್ಯಾದ ತೈಲ ಆಮದುಗಳ ವಿರುದ್ಧ ನಿರ್ಬಂಧಗಳಿಲ್ಲ: ಎಂಎ ಬೈಡನ್
ಉಕ್ರೇನ್‌ನಲ್ಲಿ ರಷ್ಯಾ ಸೇನೆ ದಾಳಿ ಮುಂದುವರಿಸಿದೆ. ಹೀಗಿದ್ದರು ರಷ್ಯಾದ ತೈಲ ಆಮದುಗಳ ವಿರುದ್ಧ ನಿರ್ಬಂಧಗಳಿಲ್ಲ ಎಂದು ಎಂಎ ಬೈಡನ್ ತಿಳಿಸಿದ್ದಾರೆ.
ಝೈಟೊಮಿರ್ನಲ್ಲಿ ರಷ್ಯಾದ ಕ್ಷಿಪಣಿ ದಾಳಿಗೆ ನಾಲ್ವರ ಬಲಿ
ಉಕ್ರೇನ್‌ನಲ್ಲಿ ರಷ್ಯಾ ಸೇನೆ ದಾಳಿ ಮುಂದುವರಿಸಿದೆ. ಝೈಟೊಮಿರ್ನಲ್ಲಿ ರಷ್ಯಾದ ಕ್ಷಿಪಣಿ ದಾಳಿಗೆ ನಾಲ್ವರು ಬಲಿಯಾಗಿದ್ದಾರೆ. ವಾಯುನೆಲೆ ಗುರಿಯಾಗಿಸಿ ನಡೆದ ದಾಳಿಯಲ್ಲಿ ನಾಲ್ವರು ಸಾವನ್ನಪ್ಪಿದ್ದಾರೆ.
ನಾಳೆ ಉಕ್ರೇನ್, ರಷ್ಯಾ ನಿಯೋಗಗಳ ಶಾಂತಿ ಮಾತುಕತೆ
ಉಕ್ರೇನ್‌ನಲ್ಲಿ ರಷ್ಯಾ ಸೇನೆ ದಾಳಿ ಮುಂದುವರಿಸಿದೆ. ಹೀಗಾಗಿ ನಾಳೆ ಉಕ್ರೇನ್, ರಷ್ಯಾ ನಿಯೋಗಗಳ ಶಾಂತಿ ಮಾತುಕತೆ ನಡೆಯಲಿದೆ.
ರಷ್ಯಾದ ಮೇಲೆ ನಿರ್ಬಂಧ ವಿಧಿಸಲ್ಲ ಎಂದ ಮೆಕ್ಸಿಕೋ
ರಷ್ಯಾದ ಮೇಲೆ ಯಾವುದೇ ಆರ್ಥಿಕ ನಿರ್ಬಂಧ ಎಂದು ರಷ್ಯಾದ ಮೇಲೆ ಮೆಕ್ಸಿಕೋ ಅಧ್ಯಕ್ಷರ ಸಾಫ್ಟ್ ಕಾರ್ನರ್ ತೋರಿದ್ದಾರೆ.
ರಷ್ಯಾ ವಿರುದ್ಧ ಕಠಿಣ ನಿರ್ಬಂಧ ವಿಧಿಸಲ್ಲ ಎಂದ ಚೀನಾ
ಉಕ್ರೇನ್‌ನಲ್ಲಿ ರಷ್ಯಾ ಸೇನೆ ದಾಳಿ ಮುಂದುವರಿಸಿದೆ. ರಷ್ಯಾ ಮೇಲೆ ಚೀನಾ ಸಾಫ್ಟ್ಕಾರ್ನರ್ ತೋರುತ್ತಿದೆ. ರಷ್ಯಾ ವಿರುದ್ಧ ಕಠಿಣ ನಿರ್ಬಂಧ ವಿಧಿಸಲ್ಲ. ರಷ್ಯಾದ ಮೇಲೆ ನಮ್ಮ ಕ್ರಮಗಳು ಸೀಮಿತ ಎಂದು ಚೀನಾ ತಿಳಿಸಿದೆ.
ದೂರವಾಣಿ ಕರೆ ಮಾಡಿ ಪುಟಿನ್ ಜೊತೆಗೆ ಮೋದಿ ಚರ್ಚೆ
ಉಕ್ರೇನ್‌ನಲ್ಲಿ ರಷ್ಯಾ ಸೇನೆ ದಾಳಿ ಮುಂದುವರಿಸಿರುವ ಹಿನ್ನೆಲೆಯಲ್ಲಿ ರಷ್ಯಾ ಅಧ್ಯಕ್ಷ ಪುಟಿನ್ಗೆ ಪ್ರಧಾನಿ ಮೋದಿ ಕರೆ ಮಾಡಿ ಮಾತನಾಡಿದ್ದಾರೆ.
ಸಂಜೆ ದೆಹಲಿಯಿಂದ ಬೆಂಗಳೂರು ವಿಮಾನ ನಿಲ್ದಾಣಕ್ಕೆ ಬಂದಿಳಿದ ಸಿದ್ದೇಶ್
ಸಿದ್ದೇಶ್ ಉಕ್ರೇನ್‌ನಲ್ಲಿ ವೈದ್ಯಕೀಯ ವ್ಯಾಸಂಗ ಮಾಡುತ್ತಿದ್ದ. ಉಕ್ರೇನ್‌ನ ಕೀವ್ ನಗರದಲ್ಲಿ ವ್ಯಾಸಂಗ ಮಾಡುತ್ತಿದ್ದ ಸಿದ್ದೇಶ್ ಹಂಗೇರಿ ಮೂಲಕ ಬೆಳಗ್ಗೆ ದೆಹಲಿಗೆ ಬಂದಿದ್ದರು. ಸಂಜೆ ದೆಹಲಿಯಿಂದ ಬೆಂಗಳೂರು ವಿಮಾನ ನಿಲ್ದಾಣಕ್ಕೆ ಸಿದ್ದೇಶ್ ಬಂದಿಳಿದಿದ್ದಾರೆ. ಸಿದ್ದೇಶ್ನನ್ನು ಕುಟುಂಬಸ್ಥರು ಬರಮಾಡಿಕೊಂಡಿದ್ದಾರೆ.
ಖಾರ್ಕೀವ್ನಿಂದ 16 ಕಿ.ಮೀ. ನಡೆದು ಹೊರಟಿರುವ ವಿದ್ಯಾರ್ಥಿಗಳು
ಬಾಗಲಕೋಟೆ ಮೂಲದ ಕಿರಣ ಸವದಿ ಹಾಗೂ ನೂರಾರು ವಿದ್ಯಾರ್ಥಿಗಳು ಖಾರ್ಕೀವ್ನಿಂದ 16 ಕಿ.ಮೀ. ನಡೆದು ಹೊರಟಿದ್ದಾರೆ. ಖಾರ್ಕೀವ್ ಪಕ್ಕದ ಹಳ್ಳಿಯೊಂದರಲ್ಲಿ ವಿದ್ಯಾರ್ಥಿಗಳು ಆಶ್ರಯ ಪಡೆದಿದ್ದಾರೆ. ಈಗ ವಿದ್ಯಾರ್ಥಿಗಳು ಹತ್ತು ಕಿ.ಮೀ. ಸಂಚರಿಸಿದ್ದಾರೆ. ಅಲ್ಲಿ ಸ್ವಲ್ಪ ಹೊತ್ತು ವಿಶ್ರಾಂತಿ ಪಡೆದು ಬಳಿಕ 6 ಕಿ.ಮೀ. ನಡೆದು ವಿದ್ಯಾರ್ಥಿಗಳು ಹಳ್ಳಿ ಸೇರಿಕೊಳ್ಳಲಿದ್ದಾರೆ. ಕಿರಣ ಸವದಿ ಹಾಗೂ 800 ವಿದ್ಯಾರ್ಥಿಗಳು ನಡೆದುಕೊಂಡು ಹೋಗುತ್ತಿರುವ ಬಗ್ಗೆ ಕಿರಣ ತಂದೆ ಲಕ್ಷ್ಮಣಗೆ ಫೋನ್ ಮೂಲಕ ತಿಳಿಸಿದ್ದಾರೆ.
ಯುದ್ಧದಲ್ಲಿ ಈವರೆಗೆ 2 ಸಾವಿರಕ್ಕೂ ಹೆಚ್ಚು ಉಕ್ರೇನಿಗರು ಸಾವು
ಉಕ್ರೇನ್ ಮೇಲೆ ರಷ್ಯಾ ಯುದ್ಧ ಮುಂದುವರಿಸಿದ್ದು, ಯುದ್ಧದಲ್ಲಿ ಈವರೆಗೆ 2 ಸಾವಿರಕ್ಕೂ ಹೆಚ್ಚು ಜನ ಸಾವನ್ನಪ್ಪಿದ್ದಾರೆ. ಇದುವರೆಗೆ 2 ಸಾವಿರಕ್ಕೂ ಹೆಚ್ಚು ಉಕ್ರೇನಿಗರು ಸಾವನ್ನಪ್ಪಿದ್ದಾರೆ.
ನವೀನ್ ಪ್ರೌಢಶಾಲೆ ಸ್ನೇಹಿತರು, ಕಾಲೇಜು ಸಹಪಾಠಿಗಳಿಂದ ಶ್ರದ್ಧಾಂಜಲಿ
ಉಕ್ರೇನ್‌ನಲ್ಲಿ ಕನ್ನಡಿಗ ವಿದ್ಯಾರ್ಥಿ ನವೀನ್ ಸಾವು ಹಿನ್ನೆಲೆ-ನಂಜನಗೂಡಿನಲ್ಲಿ ನವೀನ್ ವಾಸವಾಗಿದ್ದ ಮನೆ ಬಳಿ ನವೀನ್ ಪ್ರೌಢಶಾಲೆ ಸ್ನೇಹಿತರು, ಕಾಲೇಜು ಸಹಪಾಠಿಗಳಿಂದ ಶ್ರದ್ಧಾಂಜಲಿ ಸಲ್ಲಿಸಿದ್ದಾರೆ. ಮೇಣದ ಬತ್ತಿ ಬೆಳಗಿಸಿ ಶ್ರದ್ಧಾಂಜಲಿ ಸಲ್ಲಿಸಿದ್ದಾರೆ. ಉಕ್ರೇನ್‌ನಲ್ಲಿರುವ ಭಾರತೀಯರನ್ನು ಸುರಕ್ಷಿತವಾಗಿ ಕರೆತರುವಂತೆ ಮನವಿ ಮಾಡಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಉನ್ನತಮಟ್ಟದ ಸಭೆ ಆರಂಭ
ಉಕ್ರೇನ್ ಮೇಲೆ ರಷ್ಯಾ ಯುದ್ಧ ಮುಂದುವರಿಸಿರುವ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಉನ್ನತಮಟ್ಟದ ಸಭೆ ಆರಂಭವಾಗಿದೆ.
ಖಾರ್ಕಿವ್‌ನಲ್ಲಿ ಕ್ಷಿಪಣಿ ದಾಳಿ ಹಿನ್ನೆಲೆ ಕರ್ಫ್ಯೂ ಜಾರಿ
ಉಕ್ರೇನ್ ಮೇಲೆ ರಷ್ಯಾ ಯುದ್ಧ ಮುಂದುವರಿಸಿದೆ. ಖಾರ್ಕಿವ್‌ನಲ್ಲಿ ಕ್ಷಿಪಣಿ ದಾಳಿ ಹಿನ್ನೆಲೆ ಕರ್ಫ್ಯೂ ಜಾರಿ ಮಾಡಲಾಗಿದೆ. ನಿರಂತರವಾಗಿ ರಷ್ಯಾ ಕ್ಷಿಪಣಿ ದಾಳಿ ನಡೆಸುತ್ತಿದೆ.
ರಾತ್ರಿ 8.30ಕ್ಕೆ ಉನ್ನತಮಟ್ಟದ ಸಭೆ ನಡೆಸಲಿರುವ ಮೋದಿ
ಉಕ್ರೇನ್ ಮೇಲೆ ರಷ್ಯಾ ಯುದ್ಧ ಮುಂದುವರಿಸಿರುವ ಹಿನ್ನೆಲೆಯಲ್ಲಿ ರಾತ್ರಿ 8.30ಕ್ಕೆ ಪ್ರಧಾನಿ ನರೇಂದ್ರ ಮೋದಿ ಉನ್ನತಮಟ್ಟದ ಸಭೆ ನಡೆಸಲಿದ್ದಾರೆ.
ವಿದ್ಯಾರ್ಥಿಗಳ ಪೋಷಕರಿಗೆ ಪ್ರಧಾನಿ ಮೋದಿ ಧೈರ್ಯ
ಉಕ್ರೇನ್‌ನಲ್ಲಿ ಭಾರತೀಯ ವಿದ್ಯಾರ್ಥಿಗಳು ಸಿಲುಕಿರುವ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳ ಪೋಷಕರಿಗೆ ಪ್ರಧಾನಿ ಮೋದಿ ಧೈರ್ಯ ಹೇಳಿದ್ದಾರೆ. ಮನೆ ಬಾಗಿಲಿಗೆ ಸರ್ಕಾರ ಎಂದು ಉಕ್ರೇನ್‌ನಲ್ಲಿ ಸಿಲುಕಿದ ವಿದ್ಯಾರ್ಥಿಗಳ ಪೋಷಕರಿಗೆ ಪ್ರಧಾನಿ ಧೈರ್ಯ ಹೇಳಿದ್ದಾರೆ.
ಕೀವ್ನ ನರಕ ದರ್ಶನದ ಬಗ್ಗೆ ಎಳೆ ಎಳೆಯಾಗಿ ಬಿಚ್ಚಿಟ್ಟ ವಿದ್ಯಾರ್ಥಿಗಳು
ಉಕ್ರೇನ್‌ನ ಕೀವ್‌ನಲ್ಲಿ ಉದ್ವಿಗ್ನ ಪರಿಸ್ಥಿತಿ ಹಿನ್ನೆಲೆ ಕೀವ್ನಿಂದ ಬೆಂಗಳೂರಿಗೆ ಬಂದ ವಿದ್ಯಾರ್ಥಿಗಳು, ಕೀವ್ನ ನರಕ ದರ್ಶನದ ಬಗ್ಗೆ ಎಳೆ ಎಳೆಯಾಗಿ ಬಿಚ್ಚಿಟ್ಟಿದ್ದಾರೆ. ಮೂರು ದಿನಗಳ ಕಾಲ ಬಂಕರ್‌ನಲ್ಲಿ ವಾಸ ಮಾಡಿದ್ವಿ, ಮಹಿಳೆಯರಿಗೆ ಶೌಚಾಲಯವು ಇಲ್ಲದೆ ಸಾಕಷ್ಟು ಪರದಾಡಬೇಕಾಯ್ತು. ಬಂಕರ್‌ನಲ್ಲಿ ಅನ್ನ, ನೀರು ಸಿಗದೆ ಪರದಾಡುವಂತ್ತಾಗಿತ್ತು. ನಾವೇ ನಮ್ಮ ರಿಸ್ಕ್ ಮೇಲೆ ಕೀವ್ನಿಂದ ಬಾರ್ಡರ್ಗೆ ಬಂದ್ವಿ. ಉಕ್ರೇನ್‌ನ ಲೋಕಲ್ ಸ್ನೇಹಿತರ ಸಹಕಾರದಿಂದ ಟ್ಯಾಕ್ಸಿ ಬಸ್ ಹತ್ತಿಕೊಂಡು ಬರಬೇಕಾಯ್ತು. ಬಾರ್ಡರ್ಗೆ ಬರುವವರೆಗೂ ಯಾವುದೇ ಎಂಬ್ಬೇಸ್ಸಿ ಅಧಿಕಾರಿಗಳು ಸಂಪರ್ಕಕ್ಕೆ ಸಿಗಲಿಲ್ಲ. ತುಂಬಾ ಹರಸಾಹಸ ಪಟ್ಟು ಬಾರ್ಡರ್ ತಲುಪಿ ತವರಿಗೆ ಬಂದಿದ್ದೇವೆ. ನಮ್ಮ ರೀತಿ ಇನ್ನೂ ಸಾಕಷ್ಟು ಜನ ಕೀವ್‌ನಲ್ಲಿ ಸಿಲುಕಿ ಪರದಾಡ್ತಿದ್ದಾರೆ. ಅವರು ಹೊರಗಡೆ ಬರಲು ಸಾಧ್ಯವಾಗ್ತಿಲ್ಲ. ಅವರನ್ನೆಲ್ಲ ಸುರಕ್ಷಿತವಾಗಿ ಕರೆದುಕೊಂಡು ಬರುವ ನಿಟ್ಟಿನಲ್ಲಿ ಸರ್ಕರ ಕ್ರಮ ಕೈಗೊಳ್ಳಬೇಕು ಎಂದು ಬೆಂಗಳೂರಿಗೆ ಬಂದ ವಿದ್ಯಾರ್ಥಿನಿ ಮೊನಿಷ ಹೇಳಿಕೆ ನೀಡಿದ್ದಾರೆ.
ಉಕ್ರೇನ್‌ನಲ್ಲಿ ಕನ್ನಡಿಗ ವಿದ್ಯಾರ್ಥಿ ನವೀನ್ ಸಾವು; ಕಲಬುರಗಿ ನಗರದಲ್ಲಿ ಎಐಡಿಎಸ್ಒ ಸಂಘಟನೆಯಿಂದ ಶ್ರದ್ಧಾಂಜಲಿ
ಕಲಬುರಗಿ ನಗರದ ಸರ್ದಾರ್ ವಲ್ಲಭಭಾಯಿ ಪಟೇಲ್ ವೃತ್ತದಲ್ಲಿ ಉಕ್ರೇನ್‌ನಲ್ಲಿ ಕನ್ನಡಿಗ ವಿದ್ಯಾರ್ಥಿ ನವೀನ್ಗೆ ಶ್ರದ್ಧಾಂಜಲಿ ಸಲ್ಲಿಸಿದ್ದಾರೆ. ಮೇಣದ ಬತ್ತಿ ಬೆಳಗಿಸಿ ಶ್ರದ್ಧಾಂಜಲಿ ಸಲ್ಲಿಸಿದ್ದಾರೆ. ಬಳಿಕ ಉಕ್ರೇನ್ನಲ್ಲಿರೋ ಭಾರತೀಯರನ್ನು ಸುರಕ್ಷಿತವಾಗಿ ಕರೆತರಬೇಕು ಎಂದು ಆಗ್ರಹಿಸಿದ್ದಾರೆ.
ಉಕ್ರೇನ್ ಪ್ರಜೆ ವಿಡಿಯೋ ಮಾಡುತ್ತಿದ್ದಾಗ ಕ್ಷಿಪಣಿ ದಾಳಿ
ಉಕ್ರೇನ್ ಮೇಲೆ ರಷ್ಯಾ ಯುದ್ಧ ಮುಂದುವರಿಸಿದ್ದು, ಉಕ್ರೇನ್ ಪ್ರಜೆ ವಿಡಿಯೋ ಮಾಡುತ್ತಿದ್ದಾಗ ಕ್ಷಿಪಣಿ ದಾಳಿ ನಡೆಸಿದೆ. ಕೂದಲೆಳೆ ಅಂತರದಲ್ಲಿ ಉಕ್ರೇನ್ ಪ್ರಜೆ ಪಾರಾಗಿದ್ದಾರೆ.
ರಷ್ಯಾಗೆ ಶಾಕ್ ಕೊಟ್ಟ ನೋಕಿಯಾ ಕಂಪನಿ
ಉಕ್ರೇನ್ ಮೇಲೆ ರಷ್ಯಾ ಯುದ್ಧ ಮುಂದುವರಿಸಿರುವ ಹಿನ್ನೆಲೆಯಲ್ಲಿ ರಷ್ಯಾಗೆ ನೋಕಿಯಾ ಕಂಪನಿ ಶಾಕ್ ನೀಡಿದೆ. ಸಂವಹನಕ್ಕೆ ಬಳಸುವ ತಾಂತ್ರಿಕ ಉಪಕರಣ ನೀಡದಿರಲು ನೋಕಿಯಾ ಕಂಪನಿ ನಿರ್ಧಾರ ಮಾಡಿದೆ.
ಬೆಂಗಳೂರಿಗೆ ಹಿಂದಿರುಗಿದ ರಾಜ್ಯದ 8 ವಿದ್ಯಾರ್ಥಿಗಳು
ಉಕ್ರೇನ್‌ನಲ್ಲಿ ಸಿಲುಕಿದ್ದ ವಿದ್ಯಾರ್ಥಿಗಳ ಏರ್‌ಲಿಫ್ಟ್ ಹಿನ್ನೆಲೆ ಉಕ್ರೇನ್‌ನಿಂದ ದೆಹಲಿಗೆ ಬಂದು ದೆಹಲಿಯಿಂದ ಬೆಂಗಳೂರಿಗೆ 8 ವಿದ್ಯಾರ್ಥಿಗಳು ಬಂದಿದ್ದಾರೆ. 3 ದಿನಗಳಿಂದ ಬಂಕರ್‌ನಲ್ಲಿ ಉಳಿದುಕೊಂಡು ಹರಸಾಹಸ ಪಟ್ಟು ವಿದ್ಯಾರ್ಥಿಗಳು ಇಂದು ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿದ್ದಾರೆ. ಬೆಂಗಳೂರಿಗೆ ಬರ್ತಿದ್ದಂತೆ ಪೋಷಕರು ಮಕ್ಕಳನ್ನ ತಬ್ಬಿಕೊಂಡು ಕಣ್ಣೀರು ಹಾಕಿದ್ದಾರೆ.
ಭಾರತೀಯ ಮೂಲದ ವಿದ್ಯಾರ್ಥಿಗಳನ್ನು ಭೇಟಿ ಮಾಡಿ, ಧೈರ್ಯ ತುಂಬಿದ ಕೇಂದ್ರ ಸಚಿವ ಕಿರಣ್ ರಿಜಿಜು
ಸ್ಲೋವಾಕಿಯಾದ ಕೊಸಿಸ್ ನಗರದಲ್ಲಿ ಭಾರತೀಯ ಮೂಲದ ವಿದ್ಯಾರ್ಥಿಗಳನ್ನು ಭೇಟಿ ಮಾಡಿ, ಕೇಂದ್ರ ಸಚಿವ ಕಿರಣ್ ರಿಜಿಜು ಧೈರ್ಯ ತುಂಬಿದ್ದಾರೆ. ಭಾರತದ ಕಾನೂನು ಸಚಿವ ಕಿರಣ್ ರಿಜಿಜು ಸ್ಲೋವಾಕಿಯಾದ ಕೊಸಿಸ್ ನಗರ ತಲುಪಿದ್ದಾರೆ. ಉಕ್ರೇನ್‌ನಲ್ಲಿರುವ ಭಾರತೀಯರ ರಕ್ಷಣಾ ಕಾರ್ಯಾಚರಣೆ ಸಂಬಂಧ ಕೇಂದ್ರ ಸಚಿವ ಕಿರಣ್ ರಿಜಿಜು ಸ್ಲೋವಾಕಿಯಾದ ಕೊಸಿಸ್ ನಗರ ತಲುಪಿದ್ದಾರೆ.
ರಷ್ಯಾಗೆ ನಿರ್ಬಂಧ ವಿಧಿಸಿದ ಆನ್ಲೈನ್ ಸ್ಟೋರ್ ಎಎಸ್ಒಎಸ್
ಉಕ್ರೇನ್ ಮೇಲೆ ರಷ್ಯಾ ಯುದ್ಧ ಮುಂದುವರಿಸಿರುವ ಹಿನ್ನೆಲೆಯಲ್ಲಿ ರಷ್ಯಾಗೆ ಆನ್ಲೈನ್ ಸ್ಟೋರ್ ಎಎಸ್ಒಎಸ್ ನಿರ್ಬಂಧ ವಿಧಿಸಿದೆ. ರಷ್ಯಾಗೆ ಸರಕುಗಳನ್ನ ತಲುಪಿಸುವುದನ್ನ ಎಎಸ್ಒಎಸ್ ನಿಲ್ಲಿಸಿದೆ.
ಉಕ್ರೇನ್‌ಗೆ 19 ರಾಷ್ಟ್ರಗಳಿಂದ ಶಸ್ತ್ರಾಸ್ತ್ರ ಪೂರೈಕೆ
ಉಕ್ರೇನ್ ಮೇಲೆ ರಷ್ಯಾ ಯುದ್ಧ ಮುಂದುವರಿಸಿರುವ ಹಿನ್ನೆಲೆಯಲ್ಲಿ ಉಕ್ರೇನ್‌ಗೆ 19 ರಾಷ್ಟ್ರಗಳು ಶಸ್ತ್ರಾಸ್ತ್ರ ಪೂರೈಕೆ ಮಾಡಿವೆ.
ಪಿಹೆಚ್ಡಿ ಮಾಡುತ್ತಿರುವ ನವೀನ್ ಅಣ್ಣನಿಗೆ ಸರ್ಕಾರ ಉದ್ಯೋಗ ನೀಡಬೇಕು: ಪ್ರಮೋದ್ ಮುತಾಲಿಕ್
ಓದಲು ಹೋಗಿರುವವರನ್ನ ಸುರಕ್ಷಿತವಾಗಿ ಕರೆತರುವುದು ಕರ್ತವ್ಯ. ನವೀನ್ ಪಾರ್ಥಿವ ಶರೀರವನ್ನಾದರೂ ತರುವ ವ್ಯವಸ್ಥೆ ಮಾಡಬೇಕು. ಪಿಹೆಚ್ಡಿ ಮಾಡುತ್ತಿರುವ ನವೀನ್ ಅಣ್ಣನಿಗೆ ಸರ್ಕಾರ ಉದ್ಯೋಗ ನೀಡಬೇಕು ನವೀನ್ ಅಣ್ಣನಿಗೆ ಉದ್ಯೋಗ ಕೊಡದಿದ್ದರೆ ಹೋರಾಟ ಮಾಡುತ್ತೇವೆ. ನಮ್ಮ ದೇಶದಲ್ಲಿ ಹಣ ಲೂಟಿಗಾಗಿ ಮೆಡಿಕಲ್ ಕಾಲೇಜು ನಡೀತಿವೆ. ಇಲ್ಲಿ ವ್ಯವಸ್ಥೆ ಸರಿಯಾಗಿದ್ದರೆ ನವೀನ್ ಏಕೆ ಉಕ್ರೇನ್‌ಗೆ ಹೋಗುತ್ತಿದ್ದ. ರಾಜಕಾರಣಿಗಳು, ಮಠಾಧಿಪತಿಗಳು ಮೆಡಿಕಲ್ ಕಾಲೇಜು ನಡೆಸ್ತಿದ್ದಾರೆ. ವೈದ್ಯಕೀಯ ವಿದ್ಯಾರ್ಥಿ ನವೀನ್ ಸಾವಿಗೆ ಇವರೆಲ್ಲರೂ ಕಾರಣಕರ್ತರು ಎಂದು ಚಳಗೇರಿ ಗ್ರಾಮಯಲ್ಲಿ ಶ್ರೀರಾಮಸೇನೆ ಸಂಸ್ಥಾಪಕ ಮುತಾಲಿಕ್ ಹೇಳಿಕೆ ನೀಡಿದ್ದಾರೆ.
ಇಂದು ರಾತ್ರಿ ರಷ್ಯಾ ಅಧ್ಯಕ್ಷ ಪುಟಿನ್ ಜತೆ ಪ್ರಧಾನಿ ಚರ್ಚೆ
ಉಕ್ರೇನ್ ಮೇಲೆ ರಷ್ಯಾ ಯುದ್ಧ ಮುಂದುವರಿಸಿರುವ ಹಿನ್ನೆಲೆಯಲ್ಲಿ ಇಂದು ರಾತ್ರಿ ರಷ್ಯಾ ಅಧ್ಯಕ್ಷ ಪುಟಿನ್ ಜತೆ ಪ್ರಧಾನಿ ಚರ್ಚೆ ನಡೆಸಲಿದ್ದಾರೆ.
ಉಕ್ರೇನ್‌ನ ಖಾರ್ಕಿವ್‌ನಲ್ಲಿ ಕನ್ನಡಿಗ ವಿದ್ಯಾರ್ಥಿಗಳು ಕಂಗಾಲು
ಖಾರ್ಕಿವ್ ತೊರೆಯಲು ಭಾರತ ಸರ್ಕಾರ ಸೂಚನೆ ನೀಡಿರುವ ಹಿನ್ನೆಲೆ ಖಾರ್ಕಿವ್‌ನಿಂದ ಲಿವೀವ್‌ಗೆ ಹೋಗಲು ರೈಲು ಸಿಗದೇ ವಿದ್ಯಾರ್ಥಿಗಳು ಪರದಾಡುವಂತಾಗಿದೆ. ಕರ್ನಾಟಕದ ವಿದ್ಯಾರ್ಥಿ ಪೂರನ್ ಚಂದ್ರಶೇಖರ್ ಸೇರಿ 80 ಜನ ಕಂಗಾಲಾಗಿದ್ದಾರೆ. ಬೆಂಗಳೂರಿನ ಖಾಸಗಿ ಕಂಪನಿ ಉದ್ಯೋಗಿ ಚಂದ್ರಶೇಖರ್ ಪುತ್ರ ಖಾರ್ಕಿವ್ ನ್ಯಾಷನಲ್ ಮೆಡಿಕಲ್ ಯೂನಿವರ್ಸಿಟಿಯಲ್ಲಿ ವ್ಯಾಸಂಗ ಮಾಡುತ್ತಿದ್ದ. ಈ ವಿದ್ಯಾರ್ಥಿ ಸದ್ಯ ಮಾಹಿತಿ ನೀಡಿದ್ದು, ಖಾರ್ಕಿವ್‌ನಿಂದ ಹೋಗಲು ರೈಲಿನಲ್ಲಿ ಅವಕಾಶ ನೀಡುತ್ತಿಲ್ಲ. ಪ್ರಯಾಣಿಸಲು ಕೇವಲ ಉಕ್ರೇನ್ ಪ್ರಜೆಗಳಿಗೆ ಮಾತ್ರ ಅವಕಾಶ ನೀಡಿದ್ದಾರೆ ಎಂದು ತಿಳಿಸಿದ್ದಾರೆ.
ರಷ್ಯಾ ಮೇಲೆ ಸಾಧ್ಯವಾದಷ್ಟು ಒತ್ತಡ ಹೇರಲು ಇಂಗ್ಲೆಂಡ್, ಉಕ್ರೇನ್ ನಿರ್ಧಾರ
ಉಕ್ರೇನ್ ಮೇಲೆ ರಷ್ಯಾ ಯುದ್ಧ ಮುಂದುವರಿಸಿರುವ ಹಿನ್ನೆಲೆಯಲ್ಲಿ ರಷ್ಯಾ ಮೇಲೆ ಸಾಧ್ಯವಾದಷ್ಟು ಒತ್ತಡ ಹೇರಲು ಇಂಗ್ಲೆಂಡ್, ಉಕ್ರೇನ್ ನಿರ್ಧಾರ ಮಾಡಿದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ನಿರ್ಬಂಧ ವಿಧಿಸಲು ನಿರ್ಧಾರ ಮಾಡಿದೆ.
ಖಾರ್ಕಿವ್ ಸಿಟಿ ಕೌನ್ಸಿಲ್ ಕಟ್ಟಡದ ಮೇಲೆ ಕ್ಷಿಪಣಿ ದಾಳಿ
ಖಾರ್ಕಿವ್ಲ್ಲಿ ರಷ್ಯಾದ ಕ್ಷಿಪಣಿ ದಾಳಿ ಮುಂದುವರಿದಿದೆ. ಖಾರ್ಕಿವ್ ಸಿಟಿ ಕೌನ್ಸಿಲ್ ಕಟ್ಟಡದ ಮೇಲೆ ಕ್ಷಿಪಣಿ ದಾಳಿ ನಡೆಸಿದೆ. ರಷ್ಯಾ ದಾಳಿಯಿಂದ ಖಾರ್ಕಿವ್ ಸಿಟಿ ಜನರು ತತ್ತರಿಸಿಹೋಗಿದ್ದಾರೆ.
ಮೃತ ನವೀನ ನಿವಾಸಕ್ಕೆ ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದ ಶ್ರೀರಾಮ ಸೇನೆ ಮುಖಂಡ ಪ್ರಮೋದ ಮುತಾಲಿಕ್
ಹಾವೇರಿ ಜಿಲ್ಲೆ ರಾಣೆಬೆನ್ನೂರು ತಾಲೂಕಿನ ಚಳಗೇರಿ ಗ್ರಾಮದಲ್ಲಿರೋ ನವೀನ್ ನಿವಾಸಕ್ಕೆ ಶ್ರೀರಾಮ ಸೇನೆ ಮುಖಂಡ ಪ್ರಮೋದ ಮುತಾಲಿಕ್ ಭೇಟಿ ನೀಡಿದ್ದಾರೆ. ಈ ವೇಳೆ ಮಾತನಾಡಿದ ಅವರು ಕಳೆದ ಒಂದು ವಾರದಿಂದ ನಡೆದ ಯುದ್ಧದಲ್ಲಿ ನವೀನ ಮೃತಪಟ್ಟಿದ್ದಾನೆ. ಇದು ಬಹಳ ದುಃಖದ ವಿಷಯ. ದುರಂತ ಆಗಬಾರದಿತ್ತು. ಎರಡು ದೇಶದ ನಡುವೆ ನಡೆದ ಯುದ್ಧದಲ್ಲಿ ನಮ್ಮ ದೇಶದವರು ಬಲಿಯಾಗಿದ್ದು ದುರಂತ. ನಮ್ಮ ದೇಶದಿಂದ ಅಲ್ಲಿಗೆ ಓದಲು ಹೋದವರನ್ನ ಸುರಕ್ಷಿತವಾಗಿ ಕರೆತರುವಂಥದ್ದು ಕರ್ತವ್ಯ. ಎಲ್ಲೋ ಒಂದು ಕಡೆ ಬರೋರು ಸಂಖ್ಯೆ ಕಡಿಮೆ ಇದೆ. ಸಿಎಂ ಇದೆ ಜಿಲ್ಲೆಯವರು ಇರೋದ್ರಿಂದ ಕರೆದುಕೊಂಡು ಬರುವವರ ವೇಗ ಜಾಸ್ತಿ ಆಗಬೇಕು. ನವೀನ ರ್ಯಾಂಕ್ ಇರೋ ಹುಡುಗ. ಈ ದುರಂತ ಬಹಳ ದುಃಖಕರ ಘಟನೆ. ಮೃತನ ಕುಟುಂಬಕ್ಕೆ ದೇವರು ಧೈರ್ಯ ಕೊಡಲಿ. ನವೀನನ ಪಾರ್ಥೀವ ಶರೀರವನ್ನಾದ್ರೂ ತರೋ ವ್ಯವಸ್ಥೆ ಮಾಡಬೇಕು. ನವೀನ ಗೆಳೆಯರಿಗೆ ಕೇಳಿದ್ರೆ ದುರಂತ ಎಲ್ಲಿ ಆಯ್ತು ಅನ್ನೋದು ಗೊತ್ತಾಗುತ್ತೆ ಎಂದು ಹೇಳಿದ್ದಾರೆ.
ಖಾರ್ಕಿವ್‌ನಲ್ಲಿ ಶಾಲಾ ಕಟ್ಟಡದ ಮೇಲೆ ರಷ್ಯಾ ದಾಳಿ
ಉಕ್ರೇನ್ ಮೇಲೆ ರಷ್ಯಾ ಯುದ್ಧ ಮುಂದುವರಿಸಿದ್ದು, ಖಾರ್ಕಿವ್ನಲ್ಲಿನ ಶಾಲಾ ಕಟ್ಟಡದ ಮೇಲೆ ರಷ್ಯಾ ದಾಳಿ ನಡೆಸಿದೆ. ಖಾರ್ಕಿವ್ ನಗರದಲ್ಲಿ ರಷ್ಯಾ ಅಟ್ಟಹಾಸ ಮುಂದುವರಿದಿದೆ.
ರಷ್ಯಾ ವಿರುದ್ಧ ಮತ್ತಷ್ಟು ಆರ್ಥಿಕ ನಿರ್ಬಂಧ ಹೇರಿದ ಇಯು
7 ರಷ್ಯನ್ ಬ್ಯಾಂಕ್ಗಳಿಗೆ ಯುರೋಪಿಯನ್ ಒಕ್ಕೂಟ ನಿರ್ಬಂಧ ಹೇರಿದೆ. ಆ ಮೂಲಕ ಇಯು ರಷ್ಯಾ ವಿರುದ್ಧ ಮತ್ತಷ್ಟು ಆರ್ಥಿಕ ನಿರ್ಬಂಧ ಹೇರಿದೆ.
ಸತತ 100 ಗಂಟೆಗಳಿಂದ ಖಾರ್ಕಿವ್ ಮೇಲೆ ರಷ್ಯಾ ದಾಳಿ
ಸತತ 100 ಗಂಟೆಗಳಿಂದ ಖಾರ್ಕಿವ್ ಮೇಲೆ ರಷ್ಯಾ ದಾಳಿ ನಡೆಸುತ್ತಿದೆ. ಹೀಗಾಗಿ ಖಾರ್ಕಿವ್‌ನಲ್ಲಿರುವ ಭಾರತೀಯರಿಗೆ ತುರ್ತು ಸಲಹೆ ನೀಡಲಾಗಿದೆ. ಖಾರ್ಕಿವ್‌ನಲ್ಲಿರುವ ಭಾರತೀಯರು ತಕ್ಷಣ ತೊರೆಯಲು ಸಲಹೆ ನೀಡಲಾಗಿದೆ.
ಉಕ್ರೇನ್‌ನ ಖಾರ್ಕಿವ್ ನಗರದಲ್ಲಿರುವ ಭಾರತೀಯರಿಗೆ ತುರ್ತು ಸಂದೇಶ
ತಕ್ಷಣವೇ ಖಾರ್ಕಿವ್ ನಗರ ತೊರೆಯುವಂತೆ ಉಕ್ರೇನ್ ರಾಯಭಾರ ಕಚೇರಿ ಸೂಚನೆ ನೀಡಿದೆ. ಸಂಜೆ 6 ಗಂಟೆಯೊಳಗೆ ನಿಗದಿತ ಸ್ಥಳಕ್ಕೆ ತಲುಪುವಂತೆ ಕರ್ನಾಟಕ ವಿಪತ್ತು ನಿರ್ವಹಣಾ ಇಲಾಖೆ ಸೂಚನೆ ನೀಡಿದೆ. ಖಾರ್ಕಿವ್ ನಗರದಲ್ಲಿರುವ ಮಕ್ಕಳಿಗೆ ಸಂದೇಶ ರವಾನಿಸುವಂತೆ ಪೋಷಕರಿಗೂ ಸೂಚನೆ ನೀಡಲಾಗಿದೆ. ಯಾವುದೇ ಪರಿಸ್ಥಿತಿಯಲ್ಲೂ ತಕ್ಷಣ ಖಾರ್ಕಿವ್ ನಗರ ತೊರೆಯುವಂತೆ ಸೂಚನೆ ನೀಡಲಾಗಿದೆ.
ಖಾರ್ಕಿವ್‌ನಲ್ಲಿ ಪೊಲೀಸ್ ಕಚೇರಿ ಕಟ್ಟಡದ ಮೇಲೆ ದಾಳಿ
ಉಕ್ರೇನ್ ಮೇಲೆ ರಷ್ಯಾ ಯುದ್ಧ ಮುಂದುವರಿಸಿದ್ದು, ಖಾರ್ಕಿವ್‌ನಲ್ಲಿ ಪೊಲೀಸ್ ಕಚೇರಿ ಕಟ್ಟಡದ ಮೇಲೆ ದಾಳಿ ನಡೆಸಿದೆ. ಜನವಸತಿ ಪ್ರದೇಶಗಳನ್ನೇ ಟಾರ್ಗೆಟ್ ಮಾಡಿ ರಷ್ಯಾ ದಾಳಿ ನಡೆಸುತ್ತಿದೆ. ಈಗಾಗಲೇ ಆಸ್ಪತ್ರೆ ಮತ್ತು ಬಹುಮಹಡಿ ಕಟ್ಟಡಗಳ ಮೇಲೆ ರಷ್ಯಾ ದಾಳಿ ಮಾಡಿದೆ.
ಉಕ್ರೇನ್‌ನಿಂದ ಕರ್ನಾಟಕಕ್ಕೆ 77 ಜನರು ವಾಪಸ್
ನಿನ್ನೆ ಕರ್ನಾಟಕದ 450 ಕ್ಕೂ ಹೆಚ್ಚು ಜನರನ್ನು ಸಂಪರ್ಕ ಮಾಡಲಾಗಿದ್ದು, ಆ ಪೈಕಿ ಇಂದು ಉಕ್ರೇನ್‌ನಿಂದ ಕರ್ನಾಟಕಕ್ಕೆ 77 ಜನರು ವಾಪಸ್ ಬಂದಿದ್ದಾರೆ.
ಸಂಜೆ 6 ರೊಳಗೆ ಖಾರ್ಕಿವ್ ತೊರೆಯಲು ಭಾರತೀಯರಿಗೆ ಸಲಹೆ
ಉಕ್ರೇನ್ ಮೇಲೆ ರಷ್ಯಾ ಯುದ್ಧ ಮುಂದುವರಿಸಿದ್ದು, ಸಂಜೆ 6 ರೊಳಗೆ ಖಾರ್ಕಿವ್ ತೊರೆಯಲು ಭಾರತೀಯರಿಗೆ ಸಲಹೆ ನೀಡಿದ್ದಾರೆ.
ನಾನು ಸರ್ಕಾರವಲ್ಲ ನಾನು ಕೇವಲ ಜನಪ್ರತಿನಿಧಿಯಷ್ಟೇ: ಸಂಸದ ಜಿ.ಎಂ.ಸಿದ್ದೇಶ್ವರ್
ಮೃತ ನವೀನ್ ಮನೆಗೆ ಸಂಸದ ಜಿ.ಎಂ.ಸಿದ್ದೇಶ್ವರ್ ಭೇಟಿ ನೀಡಿದ್ದು, ಈ ವೇಳೆ ಮಾತನಾಡಿದ ಅವರು, ನವೀನ್ ಪಾರ್ಥಿವ ಶರೀರ ತರುವ ವಿಶ್ವಾಸದಲ್ಲಿದ್ದೇವೆ. ನಾನು ಸರ್ಕಾರವಲ್ಲ ನಾನು ಕೇವಲ ಜನಪ್ರತಿನಿಧಿಯಷ್ಟೇ. ಪಾರ್ಥಿವ ಶರೀರ ತರಲು ಹೆಚ್ಚಿನ ಪ್ರಯತ್ನ ಮಾಡುತ್ತೇವೆ ಎಂದು ತಿಳಿಸಿದ್ದಾರೆ.
ಉಕ್ರೇನ್‌ನಲ್ಲಿ ಭಾರತದ ಇನ್ನೊಬ್ಬ ವಿದ್ಯಾರ್ಥಿ ಸಾವು
ಉಕ್ರೇನ್‌ನಲ್ಲಿ ಭಾರತದ ಇನ್ನೊಬ್ಬ ವಿದ್ಯಾರ್ಥಿ ಮೃತಪಟ್ಟಿದ್ದಾನೆ. ಪಂಜಾಬ್ ಮೂಲದ ಚಂದನ್ ಜಿಂದಾಲ್ (22) ಮೃತ ಯುವಕ. ಈತ ಉಕ್ರೇನ್‌ನಲ್ಲಿರುವ ವಿನ್ನಿಟ್ಸಿಯಾ ಮೆಮೋರಿಯಲ್ ಮೆಡಿಕಲ್ ಯೂನಿವರ್ಸಿಟಿಯಲ್ಲಿ ವೈದ್ಯಕೀಯ ಕೋರ್ಸ್ ಮಾಡುತ್ತಿದ್ದ. ಚಂದನ್ಗೆ ಇಸ್ಕೆಮಿಕ್ ಸ್ಟ್ರೋಕ್ ಆಗಿತ್ತು(ಅಂದರೆ ಮಿದುಳಿಗೆ ರಕ್ತ ಪೂರೈಕೆ ಸರಿಯಾಗಿ ಆಗದಾಗ ಉಂಟಾಗುವ ಸ್ಟ್ರೋಕ್). ರಷ್ಯಾ ದಾಳಿಯಿಂದ ಚಂದನ್ ಜಿಂದಾಲ್ ಮೃತಪಟ್ಟಿಲ್ಲ.
ನವದೆಹಲಿಯಲ್ಲಿ ಹಾವೇರಿ ಸಂಸದ ಶಿವಕುಮಾರ್ ಉದಾಸಿ ಸುದ್ದಿಗೋಷ್ಠಿ
ನನ್ನ ಮತ ಕ್ಷೇತ್ರದ ವಿದ್ಯಾರ್ಥಿ ಉಕ್ರೇನ್‌ನಲ್ಲಿ ಸಾವನ್ನಪ್ಪಿದ್ದಾರೆ. ನವೀನ್ ಪಾರ್ಥೀವ ಶರೀರ ವಾಪಸ್ ತರಬೇಕಿದೆ. ಕೇಂದ್ರ ವಿದೇಶಾಂಗ ಸಚಿವ ಜೈಶಂಕರ್ ಭೇಟಿಯಾಗಿದ್ದೇನೆ. ಪಾರ್ಥೀವ ಶರೀರ ತರಬೇಕು ಎಂದು ಮನವಿ ಮಾಡಿದ್ದೇನೆ. ಪಾರ್ಥೀವ ಶರೀರ ತರುವ ಬಗ್ಗೆ ಪ್ರಯತ್ನ ನಡೆಯುತ್ತಿದೆ ಎಂದಿದ್ದಾರೆ. ರಷ್ಯಾ ಮತ್ತು ಉಕ್ರೇನ್ ರಾಯಬಾರಿ ಅಧಿಕಾರಿಗಳೊಂದಿಗೆ ಮಾತನಾಡಿದ್ದಾರೆ. ಭಾರತೀಯರ ಮೇಲೆ ದಾಳಿಯಾಗದಂತೆ ನೊಡಿಕೊಳ್ಳಬೇಕು ಎಂದು ಮನವಿ ಮಾಡಿದ್ದಾರೆ. ಉಕ್ರೇನ್‌ನ ಪೂರ್ವದಲ್ಲಿ 3000 ಜನರು ಇರುವ ಮಾಹಿತಿ ಇದೆ ಎಂದು ಸಂಸದ ಶಿವಕುಮಾರ್ ಉದಾಸಿ ಹೇಳಿದ್ದಾರೆ.
ಖಾರ್ಕಿವ್ ನಗರದಲ್ಲಿ ರಷ್ಯಾ ಬ್ಯಾಕ್ ಟು ಬ್ಯಾಕ್ ದಾಳಿ
ಉಕ್ರೇನ್ ಮೇಲೆ ರಷ್ಯಾ ಯುದ್ಧ ಮುಂದುವರಿಸಿದ್ದು, ಖಾರ್ಕಿವ್‌ನಲ್ಲಿ ಶೆಲ್ ದಾಳಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ.
ಮೃತ ನವೀನ ನಿವಾಸಕ್ಕೆ ದಾವಣಗೆರೆ ಸಂಸದ ಜಿ.ಎಂ.ಸಿದ್ದೇಶ್ವರ ಭೇಟಿ
ಉಕ್ರೇನ್ ಮತ್ತು ರಷ್ಯಾ ಯುದ್ಧದಲ್ಲಿ ಕನ್ನಡಿಗ ನವೀನ ಮೃತಪಟ್ಟ ಹಿನ್ನೆಲೆಯಲ್ಲಿ ಮೃತ ನವೀನ ನಿವಾಸಕ್ಕೆ ದಾವಣಗೆರೆ ಸಂಸದ ಜಿ.ಎಂ.ಸಿದ್ದೇಶ್ವರ ಭೇಟಿ ನೀಡಿದ್ದಾರೆ. ಮೃತ ನವೀನ್ ಕುಟುಂಬಸ್ಥರಿಗೆ ಸಂಸದ ಸಿದ್ದೇಶ್ವರ ಸಾಂತ್ವನ ಹೇಳಿದ್ದಾರೆ.
ಉಕ್ರೇನ್‌ನಿಂದ ಈವರೆಗೆ 8,36,000 ಜನರ ಪಲಾಯನ
ಉಕ್ರೇನ್ ಮೇಲೆ ರಷ್ಯಾ ಯುದ್ಧ ಮುಂದುವರಿಸಿದ್ದು, ಉಕ್ರೇನ್‌ನಿಂದ ಈವರೆಗೆ 8,36,000 ಜನರು ಪಲಾಯನ ಮಾಡಿದ್ದಾರೆ. ನೆರೆಹೊರೆಯ ರಾಷ್ಟ್ರಗಳಿಗೆ 8,36,000 ಜನರು ತೆರಳಿದ್ದಾರೆ ಎಂದು ವಿಶ್ವಸಂಸ್ಥೆ ಮಾಹಿತಿ ನೀಡಿದೆ.
ಉಕ್ರೇನ್‌ನಲ್ಲಿ ಸಿಲುಕಿದ ವಿದ್ಯಾರ್ಥಿಗಳ ಜತೆ ಮಾತಾಡಿದ ಶಾಸಕ ಮಹೇಶ್ ಕುಮಟಳ್ಳಿ
ಬೆಳಗಾವಿ ಜಿಲ್ಲೆ ವಿದ್ಯಾರ್ಥಿಗಳು ಉಕ್ರೇನ್‌ನಲ್ಲಿ ಸಿಲುಕಿ ಪರದಾಡುತ್ತಿದ್ದಾರೆ. ಉಕ್ರೇನ್‌ನಲ್ಲಿ ಸಿಲುಕಿ 19 ಎಂಬಿಬಿಎಸ್ ವಿದ್ಯಾರ್ಥಿಗಳು ಸಂಕಷ್ಟದಲ್ಲಿದ್ದಾರೆ. ವಿದ್ಯಾರ್ಥಿಗಳ ಜತೆ ಮಾತಾಡಿದ ಶಾಸಕ ಮಹೇಶ್ ಕುಮಟಳ್ಳಿ, ಪರಿಸ್ಥಿತಿಯ ಮಾಹಿತಿ ಪಡೆದು ಧೈರ್ಯ ತುಂಬಿದ್ದಾರೆ.
ಉಕ್ರೇನ್ ಅಧ್ಯಕ್ಷ ಝೆಲೆನ್‌ಸ್ಕಿ ಪದಚ್ಯುತಿಗೆ ಹುನ್ನಾರ
ಝೆಲೆನ್‌ಸ್ಕಿ ಪದಚ್ಯುತಿಗೆ ರಷ್ಯಾ ಅಧ್ಯಕ್ಷ ಹುನ್ನಾರ ನಡೆಸುತ್ತಿದ್ದಾರೆ. ಉಕ್ರೇನ್ ಮಾಜಿ ಅಧ್ಯಕ್ಷ ವಿಕ್ಟರ್ ಯಾನುಕೋವಿಚ್ಗೆ ಅಧ್ಯಕ್ಷ ಪಟ್ಟ ಕಟ್ಟಲು ತಯಾರಿ ನಡೆಸುತ್ತಿದ್ದಾರೆ. ರಷ್ಯಾ ಮಿನ್ಸ್ಕ್‌ಗೆ ವಿಕ್ಟರ್ ಯಾನುಕೋವಿಚ್ ಕರೆತಂದಿದ್ದು, ವಿಕ್ಟರ್ನನ್ನ ಉಕ್ರೇನ್ ಹೊಸ ಅಧ್ಯಕ್ಷನಾಗಿ ಮಾಡಲು ಸಿದ್ಧತೆ ಮಾಡಲಾಗಿದೆ ಎಂದು ರಷ್ಯಾ ಅಧ್ಯಕ್ಷ ಪುಟಿನ್ ವಿರುದ್ಧ ಉಕ್ರೇನ್ ಸರ್ಕಾರ ಆರೋಪ ಮಾಡಿದೆ.
ಉಕ್ರೇನ್ ದೇಶದಲ್ಲಿ ಸಿಲುಕಿದ ಚಿಕ್ಕೋಡಿ ಉಪವಿಭಾಗದ ಎಂಬಿಬಿಎಸ್ ವಿದ್ಯಾರ್ಥಿಗಳ ಪರದಾಟ
ಅಥಣಿ ತಾಲೂಕಿನ 5, ರಾಯಭಾಗ ನಿಪ್ಪಾಣಿ ತಾಲೂಕಿನ ತಲಾ 1 ವಿದ್ಯಾರ್ಥಿಗಳು ಉಕ್ರೇನ್ ದೇಶದಲ್ಲಿ ಸಿಲುಕಿದ್ದಾರೆ. ಅಥಣಿ ತಾಲೂಕಿನ 5 ವಿದ್ಯಾರ್ಥಿಗಳ ಪೈಕಿ ಇಬ್ಬರು ವಿದ್ಯಾರ್ಥಿಗಳು ಖಾರ್ಕಿವ್‌ನಿಂದ ಸ್ವದೇಶಕ್ಕೆ ಸಂಚಾರ ಮಾಡುತ್ತಿದ್ದಾರೆ. ಅಥಣಿ ತಾಲೂಕಿನ ತೆಲಸಂಗ ಗ್ರಾಮದ ವಿದ್ಯಾರ್ಥಿಗಳು ಸದ್ಯ ರೈಲು ಮೂಲಕ ಸಂಚಾರ ಬೆಳೆಸಿದ್ದಾರೆ. ರಾಕೇಶ್ ಎಂ ಪೂಜಾರಿ ಹಾಗೂ ನಾಗೇಶ ಪೂಜಾರಿ ಸಂಚಾರ ಮಾಡುತ್ತಿದ್ದಾರೆ ಈ ಬಗ್ಗೆ ಅಥಣಿ ಶಾಸಕ ಮಹೇಶ್ ಕುಮಟಳ್ಳಿ ಮಾಹಿತಿ ನೀಡಿದ್ದಾರೆ.
ಉಕ್ರೇನ್‌ನಿಂದ ಜರ್ಮನಿಗೆ ಹೋಗುವುದಕ್ಕೆ 5,300 ಜನರು ನೋಂದಣಿ
ಉಕ್ರೇನ್ ಮೇಲೆ ರಷ್ಯಾ ಯುದ್ಧ ಮುಂದುವರಿಸಿರುವ ಹಿನ್ನೆಲೆಯಲ್ಲಿ ಜೀವ ಭಯದಿಂದ ಜನರು ಉಕ್ರೇನ್ ತೊರೆಯುತ್ತಿದ್ದಾರೆ. ಉಕ್ರೇನ್‌ನಿಂದ ಜರ್ಮನಿಗೆ ಹೋಗುವುದಕ್ಕೆ 5,300 ಜನರು ನೋಂದಯಿಸಿಕೊಂಡಿದ್ದಾರೆ ಎಂದು ಜರ್ಮನ್ ಆಂತರಿಕ ಸಚಿವಾಲಯ ಮಾಹಿತಿ ನೀಡಿದೆ.
ಖಾರ್ಕಿವ್‌ನಲ್ಲಿ ಜನವಸತಿ ಪ್ರದೇಶಗಳ ಮೇಲೆ ರಷ್ಯಾ ದಾಳಿ
ಖಾರ್ಕಿವ್‌ನಲ್ಲಿ ಜನವಸತಿ ಪ್ರದೇಶಗಳ ಮೇಲೆ ರಷ್ಯಾ ದಾಳಿ ಮಾಡಿದೆ. ರಷ್ಯಾದ ಏರ್ಸ್ಟ್ರೈಕ್ ಜನವಸತಿ ಪ್ರದೇಶಗಳ ಮೇಲೆ ದಾಳಿ ನಡೆಸಿದೆ.
ನಮ್ಮ ಮಗನನ್ನ ಬೇಗನೆ ಕರೆತನ್ನಿ: ಉಕ್ರೇನ್‌ನಲ್ಲಿ ಸಿಲುಕಿರೋ ಗಗನ್ ಗೌಡ ತಾಯಿ ಸುಜಾತ
ನೆನ್ನೆ ರಾತ್ರಿ ಮಗನ ಜೊತೆ ಮಾತಾಡಿದ್ದೇವೆ. ನೆನ್ನೇ ಒಂದೇ ಸಲ ತಿಂಡಿಕೊಟ್ಟಿದಾರೆ. ಜೀವದ ಹಂಗುತೊರೆದು ಹತ್ತು ಕಿಲೋಮೀಟರ್ ನಡೆದು ಕೀವ್ ರೈಲ್ವೆ ನಿಲ್ದಾಣಕ್ಕೆ ಬಂದಿದ್ದಾರೆ. ಅಲ್ಲಿನ ರಾಯಭಾರ ಕಛೇರಿ ಸಂಕಷ್ಟದಲ್ಲಿರೊ ಮಕ್ಕಳಿಗೆ ಸರಿಯಾಗಿ ನೆರವಾಗ್ತಿಲ್ಲ. ಕನಿಷ್ಠ ಈಗಲಾದರೂ ರೈಲ್ವೆ ನಿಲ್ದಾಣದಿಂದ ಗಡಿ ತಲುಪಲು ನೆರವಾಗಿ. ಹೇಗೋ ಇಷ್ಟಪಟ್ಟು ಹೊರಗೆ ಬಂದಿದಾರೆ. ಅವರಿಗೆ ಊಟ ತಿಂಡಿ ನೀಡಿ ಸಹಕರಿಸಿ. ರೈಲು ನಿಲ್ದಾಣದಲ್ಲಿ ಭಾರೀ ಸಂಖ್ಯೆಯಲ್ಲಿ ಜನರು ಇದ್ದಾರಂತೆ. ಬಂಕರ್‌ನಲ್ಲಿ ಹೇಗೋ ಒಳಗೆ ಇದ್ದರು ಆದ್ರೆ ಈಗ ಓಪನ್ ಪ್ಲೇಸ್ನಲ್ಲಿ ಇದ್ದಾರೆ. ಹಿಂದಿಗಿಂತ ಅಪಾಯ ಹೆಚ್ಚಾಗಿದೆ ನಮಗೆ ಭಯವೂ ಜಾಸ್ತಿ ಆಗಿದೆ ಎಂದು ಉಕ್ರೇನ್‌ನಲ್ಲಿ ಸಿಲುಕಿರೋ ಗಗನ್ ಗೌಡ ತಾಯಿ ಸುಜಾತ ಆತಂಕ ವ್ಯಕ್ತಪಡಿಸಿದ್ದಾರೆ.
ಉಕ್ರೇನ್‌ನ ಸುಮಿ ನಗರದಲ್ಲಿ ಸಿಲುಕಿರುವ 600 ಭಾರತೀಯರು
ಉಕ್ರೇನ್ ಮೇಲೆ ರಷ್ಯಾ ಯುದ್ಧ ಮುಂದುವರಿಸಿದ್ದು, ಉಕ್ರೇನ್‌ನ ಸುಮಿ ನಗರದಲ್ಲಿ ಸಿಲುಕಿರುವ 600 ಭಾರತೀಯರು ಸ್ಥಳಾಂತರಕ್ಕಾಗಿ ಕಾಯುತ್ತಿದ್ದಾರೆ.
ಮೃತ ನವೀನ ಕುಟುಂಬಕ್ಕೆ ಒಂದು ಕೋಟಿ ರೂಪಾಯಿ ಪರಿಹಾರ ಕೊಡಬೇಕು: ಎಸ್.ಆರ್.ಪಾಟೀಲ
ಪ್ರಧಾನಿ ನರೇಂದ್ರ ಮೋದಿಯವರು ತ್ವರಿತವಾಗಿ ವಿದ್ಯಾರ್ಥಿಗಳನ್ನ ಕರೆತರೋ ಕೆಲಸ ಮಾಡಬೇಕು. ಊಟಕ್ಕೂ ಪರದಾಡೋ ಪರಿಸ್ಥಿತಿ ಅಲ್ಲಿದೆ. ಹೀಗಾಗಿ ಕೂಡಲೆ ಸರಕಾರ ಅಲ್ಲಿ ಸಿಲುಕಿರೋ ಎಲ್ಲ ವಿದ್ಯಾರ್ಥಿಗಳನ್ನ ಕರೆತರೋ ಕೆಲಸ ಮಾಡಬೇಕಿದೆ. ಆದಷ್ಟು ಬೇಗ ಮೃತ ನವೀನನ ಪಾರ್ಥೀವ ಶರೀರವನ್ನ ತರೋ ಕೆಲಸ ಮಾಡಬೇಕು. ಯುದ್ಧದ ಮುನ್ಸೂಚನೆ ಅರಿತು ಉಕ್ರೇನ್ನಲ್ಲಿದ್ದ ಮಕ್ಕಳನ್ನ ಮೊದಲೇ ಕರೆತರಬೇಕಿತ್ತು. ಮೊದಲೆ ಕರೆತಂದಿದ್ದರೆ ನವೀನ ಬದುಕಿ ಉಳಿತಿದ್ದ. ಅನ್ನ, ನೀರು ಇಲ್ಲದೆ ಸಾಯುವಂಥಾ ಪರಿಸ್ಥಿತಿ ನಿರ್ಮಾಣ ಆಗ್ತಿದೆ. ಬಂಕರ್‌ನಲ್ಲಿ ಸಿಲುಕಿರೋ ಎಲ್ಲರನ್ನ ಆದ್ಯತೆ ಮೇರೆಗೆ ಕರೆತರೋ ಕೆಲಸವನ್ನ ಕೇಂದ್ರ ಸರಕಾರ ಮಾಡಬೇಕು. ಯುದ್ಧದ ಬಗ್ಗೆ ಬಹಳಷ್ಟು ದಿನಗಳಿಂದ ಚರ್ಚೆ ಆಗಿತ್ತು. ಮೃತ ನವೀನ ಕುಟುಂಬಕ್ಕೆ ಒಂದು ಕೋಟಿ ರೂಪಾಯಿ ಪರಿಹಾರ ಕೊಡಬೇಕು. ನವೀನ ಅಣ್ಣ ಪಿಎಚ್ಡಿ ಓದುತ್ತಿದ್ದಾನೆ. ನವೀನ ಅಣ್ಣನಿಗೆ ಯೋಗ್ಯ ಸರಕಾರಿ ಕೆಲಸ ಒದಗಿಸಿಕೊಡಬೇಕು ಎಂದು ಮೃತ ನವೀನನ ಮನೆಗೆ ಭೇಟಿ ನೀಡಿ, ಕುಟುಂಬದವರಿಗೆ ಸಾಂತ್ವನ ಹೇಳಿದ ನಂತರ ಮಾಜಿ ಪ್ರತಿಪಕ್ಷದ ನಾಯಕ ಎಸ್.ಆರ್.ಪಾಟೀಲ ಹೇಳಿಕೆ ನೀಡಿದ್ದಾರೆ.
ನವೀನ್ ಸಾವಿನ ತನಿಖೆ ನಡೆಯಲಿದೆ: ರಾಯಭಾರಿ
ಉಕ್ರೇನ್‌ನಲ್ಲಿ ಭಾರತೀಯ ವಿದ್ಯಾರ್ಥಿ ಸಾವು ಪ್ರಕರಣದ ಬಗ್ಗೆ ರಷ್ಯಾ ತನಿಖೆ ನಡೆಸಲಿದೆ ಎಂದು ರಾಯಭಾರಿ ತಿಳಿಸಿದ್ದಾರೆ.
3ನೇ ಯುದ್ಧ ಹೆಚ್ಚು ವಿನಾಶಕಾರಿಯಾಗಿರುತ್ತದೆ: ರಷ್ಯಾ ವಿದೇಶಾಂಗ ಸಚಿವ ಸೆರ್ಗೆಯ್ ಲಾವ್ರೊವ್
ಉಕ್ರೇನ್ ಪರಮಾಣು ಶಸ್ತ್ರಾಸ್ತ್ರ ತಯಾರಿಸಲು ಬಿಡಲ್ಲ. 3ನೇ ಯುದ್ಧ ಹೆಚ್ಚು ವಿನಾಶಕಾರಿಯಾಗಿರುತ್ತದೆ. ಪತ್ರಕರ್ತರು, ಕ್ರೀಡಾಪಟುಗಳನ್ನು ಗುರಿಯಾಗಿಸಬೇಡಿ. ಅಮೆರಿಕ ಹೇಳಿದಂತೆ ಉಕ್ರೇನ್ ನಡೆಯುತ್ತಿದೆ. ನಾವು ಮತ್ತೊಂದು ಸುತ್ತಿನ ಮಾತುಕತೆಗೆ ಸಿದ್ಧರಿದ್ದೇವೆ ಎಂದು ರಷ್ಯಾ ವಿದೇಶಾಂಗ ಸಚಿವ ಸೆರ್ಗೆಯ್ ಲಾವ್ರೊವ್ ಹೇಳಿಕೆ ನೀಡಿದ್ದಾರೆ.
ನವೀನ ಮನೆಯಲ್ಲಿ ಮಡುಗಟ್ಟಿದ ದುಃಖ, ಸಂಬಂಧಿಕರ ಆಕ್ರಂದನ
ನವೀನ್ನನ್ನು ನೆನೆದು ಸೋದರತ್ತೆ ಗಿರಿಜಮ್ಮ ಕಣ್ಣೀರು ಹಾಕಿದ್ದಾರೆ. ಹಾವೇರಿ ಜಿಲ್ಲೆ ರಾಣೆಬೆನ್ನೂರು ತಾಲೂಕಿನ ಚಳಗೇರಿ ಗ್ರಾಮದ ನಿವಾಸಕ್ಕೆ ಆಗಮಿಸಿದ ಸೋದರತ್ತೆ ಕಣ್ಣೀರು ಹಾಕಿದ್ದಾರೆ. ಈ ವೇಳೆ ನವೀನ್ ತಂದೆ ಶೇಖರಗೌಡ ಕೂಡ ಕಣ್ಣೀರಿಟ್ಟಿದ್ದಾರೆ.
ಅಮೆರಿಕಾ ಹೇಳಿದಂತೆ ಉಕ್ರೇನ್ ನಡೆಯುತ್ತಿದೆ: ರಷ್ಯಾ ವಿದೇಶಾಂಗ ಸಚಿವ
ಅಮೆರಿಕಾ ಹೇಳಿದಂತೆ ಉಕ್ರೇನ್ ನಡೆಯುತ್ತಿದೆ ಎಂದು ರಷ್ಯಾ ವಿದೇಶಾಂಗ ಸಚಿವ ತಿಳಿಸಿದ್ದಾರೆ.
ಸ್ಲೋವಾಕಿಯಾದ ಕೊಸಿಸ್ ನಗರ ತಲುಪಿದ ಕಿರಣ್ ರಿಜಿಜು
ಭಾರತದ ಕಾನೂನು ಸಚಿವ ಕಿರಣ್ ರಿಜಿಜು ಸ್ಲೋವಾಕಿಯಾದ ಕೊಸಿಸ್ ನಗರ ತಲುಪಿದ್ದಾರೆ. ಉಕ್ರೇನ್‌ನಲ್ಲಿರುವ ಭಾರತೀಯರ ರಕ್ಷಣಾ ಕಾರ್ಯಾಚರಣೆ ಸಂಬಂಧ ಕೇಂದ್ರ ಸಚಿವ ಕಿರಣ್ ರಿಜಿಜು ಸ್ಲೋವಾಕಿಯಾದ ಕೊಸಿಸ್ ನಗರ ತಲುಪಿದ್ದಾರೆ.
ಉಕ್ರೇನ್-ರಷ್ಯಾ ಮಧ್ಯೆ 7ನೇ ದಿನವೂ ಮುಂದುವರಿದ ಯುದ್ಧ
ಉಕ್ರೇನ್-ರಷ್ಯಾ ಮಧ್ಯೆ ಇಂದು ಮತ್ತೊಂದು ಸುತ್ತಿನ ಮಾತುಕತೆ ನಡೆದಿದೆ. ಸಂಜೆ ಮತ್ತೊಂದು ಸುತ್ತಿನ ಮಾತುಕತೆ ನಡೆಯುವ ಸಾಧ್ಯತೆ ಇದೆ. ಒಟ್ಟಾರೆ ಉಕ್ರೇನ್-ರಷ್ಯಾ ಮಧ್ಯೆ 7ನೇ ದಿನವೂ ಯುದ್ಧ ಮುಂದುವರಿದಿದೆ.
ಈವರೆಗೆ ಹಿಮಾಚಲ ಪ್ರದೇಶದ 108 ಜನರ ಸ್ಥಳಾಂತರ
ಉಕ್ರೇನ್‌ನಲ್ಲಿ ಸಿಲುಕಿರುವ ಭಾರತೀಯರ ರಕ್ಷಣಾ ಕಾರ್ಯದಲ್ಲಿ ಈವರೆಗೆ ಹಿಮಾಚಲ ಪ್ರದೇಶದ 108 ಜನರ ಸ್ಥಳಾಂತರ ಮಾಡಲಾಗಿದೆ. ಕೀವ್‌ನಲ್ಲಿ ಹಿಮಾಚಲ ಪ್ರದೇಶದ ಯಾವುದೇ ವಿದ್ಯಾರ್ಥಿಗಳಿಲ್ಲ. ಖಾರ್ಕಿವ್ ಪ್ರದೇಶದಲ್ಲಿ ಕೆಲವರು ಸಿಲುಕಿದ್ದಾರೆ ಎಂದು ಮಾಹಿತಿ ಲಭಿಸಿದೆ.
ರಷ್ಯಾ ಗ್ರಾಹಕರಿಗೆ ತನ್ನ ಸೇವೆ ನಿಲ್ಲಿಸಿದ ಲುಫ್ತಾನ್ಸಾ ಏರ್‌ಲೈನ್
ರಷ್ಯಾ ಗ್ರಾಹಕರಿಗೆ ತನ್ನ ಸೇವೆ ನೀಡುತ್ತಿದ್ದ ಜರ್ಮನಿಯ ಲುಫ್ತಾನ್ಸಾ ಏರ್‌ಲೈನ್ ತನ್ನ ಸೇವೆ ಸ್ಥಗಿತಗೊಳಿಸಿದೆ.
ನನ್ನ ಮಗ ಸದಾ ನಗುನಗುತಿದ್ದ: ನವೀನ್ ತಾಯಿ ವಿಜಯಲಕ್ಷ್ಮಿ
ನಿನ್ನೆ ಉಕ್ರೇನ್‌ನಲ್ಲಿ ಶೆಲ್ ದಾಳಿಗೆ ಮಗ ನವೀನ ಮೃತಪಟ್ಟಿದ್ದಾನೆ. ನನ್ನ ಮಗ ಸದಾ ನಗುನಗುತಿದ್ದ. ಆರು ತಿಂಗಳ ಹಿಂದಷ್ಟೆ ಮನೆಗೆ ಬಂದಿದ್ದ. ನಮಗೆ ಆಸ್ತಿಯಿಲ್ಲ, ನಾವು ಬಡವರು. ನಮಗೆ ಇಬ್ಬರು ಮಕ್ಕಳೆ ಆಸ್ತಿ. ಎರಡು ಕಣ್ಣುಗಳಲ್ಲಿ ಒಂದು ಕಣ್ಣು ಕಳೆದುಕೊಂಡಿದ್ದೇನೆ. ನನ್ನ ಮಗ ಪ್ರತಿಭಾವಂತನಾಗಿದ್ದ. ಜಾತಿ ಮೀಸಲಾತಿ ಕಾರಣಕ್ಕೆ ಮಗನಿಗೆ ಸ್ವಲ್ಪದರಲ್ಲೆ ಸರಕಾರಿ ಕೋಟಾದ ಮೆಡಿಕಲ್ ಸೀಟು ಕೈತಪ್ಪಿತು. ನಮಗೆ ಕೋಟಿ ಕೋಟಿ ಖರ್ಚು ಮಾಡಿ ಕಲಿಸೋ ಶಕ್ತಿ ಇಲ್ಲ ಎಂದು ನವೀನ್ ತಾಯಿ ಟಿವಿ9 ಮುಂದೆ ಅಳಲು ತೋಡಿಕೊಂಡಿದ್ದಾರೆ.
ಪೋಲ್ಯಾಂಡ್‌ನತ್ತ ತೆರಳುತ್ತಿರುವ ಸ್ನೇಹಾ ಹಾಗೂ ಕರ್ನಾಟಕದ ಇತರ ವಿದ್ಯಾರ್ಥಿಗಳು
ಸ್ನೇಹಾ ಸೇರಿದಂತೆ ಸುಮಾರು 20-40 ವಿದ್ಯಾರ್ಥಿಗಳು ಟೆಂಪೋ ವಾಹನಗಳಲ್ಲಿ ಪೋಲ್ಯಾಂಡ್ ಬಾರ್ಡರ್‌ನತ್ತ ತೆರಳುತ್ತಿದ್ದಾರೆ. ಉತ್ತರಕನ್ನಡ ಜಿಲ್ಲೆಯ ಮುಂಡಗೋಡ ನಿವಾಸಿಯಾಗಿರುವ ಸ್ನೇಹಾ ಫಕೀರಪ್ಪ, ತಾವು ಪ್ರಯಾಣ ಬೆಳೆಸುತ್ತಿರುವ ಬಗ್ಗೆ ಸಣ್ಣದಾದ ವಿಡಿಯೋ ಮಾಡಿ ಕಳುಹಿಸಿದ್ದಾರೆ. ಉಕ್ರೇನ್‌ನ ಖಾರ್ಕೀವ್ ಬಂಕರ್‌ನಲ್ಲಿ ಸಿಲುಕಿಕೊಂಡಿದ್ದ ಸ್ನೇಹಾ ಹಾಗೂ ಕರ್ನಾಟಕದ ಇತರ ವಿದ್ಯಾರ್ಥಿಗಳು ಸ್ವಯಂ ಜಾಗ್ರತೆ ಮಾಡಿಕೊಂಡು ಬಾರ್ಡರ್ ಪ್ರದೇಶಗಳಿಗೆ ತೆರಳಲು ಎಂಇಎ ಸೂಚಿಸಿದ ಹಿನ್ನೆಲೆ ಪ್ರಯಾಣ ಬೆಳೆಸಿದ್ದಾರೆ.
ಕೇಂದ್ರ, ರಾಜ್ಯ ಸರ್ಕಾರ ಕಣ್ಮುಚ್ಚಿ ಕುಳಿತಿದೆ: ಅಜಯ್ ಸಿಂಗ್
ಮೀನಾಕ್ಷಿ ಲೇಕಿ ಅವರು ಸದ್ಘುರು ಆಶ್ರಮದಲ್ಲಿ ಇದ್ದಾರೆ. ಇವರು ಆರಾಮಾಗಿ ಅಲ್ಲಿ ಇದ್ದಾರೆ. ಇನ್ನು ನಮ್ಮ ಯುವಕರು ಹೇಗೆ ವಾಪಸ್ ಬರೋದು. ಒಂದು ವಿಮಾನ ಬಂದರೆ ಸಾಕು ಎಲ್ಲಾ ಮಿನಿಸ್ಟರ್, ಎಂಪಿಗಳು ಸೆಲ್ಫಿ ತೆಗದುಕೊಂಡು ಬಾರುತ್ತಾ ಇದ್ದಾರೆ. ಕೇಂದ್ರ ಮತ್ತು ರಾಜ್ಯ ಸರ್ಕಾರ ಕೋಆರ್ಡಿನೇಷನ್ ಆಗಬೇಕಿದೆ. ಅನೇಕರು ಬಂಕರ್, ಬೇಸ್ಮೆಂಟ್, ಮೆಟ್ರೋ ಸ್ಟೇಷನ್ನಲ್ಲಿ ಇದ್ದಾರೆ. ಯಾವಾಗ ಏನಾಗುತ್ತೋ ಗೊತ್ತಿಲ್ಲ ಅಂತಹ ಸ್ಥಿತಿಯಲ್ಲಿ ಇದ್ದಾರೆ. ಅನೇಕರ ಬಳಿ ಊಟ, ನೀರು ಏನೂ ಇಲ್ಲ. ಈ ಸಮಯದಲ್ಲಿ ಕೇಂದ್ರ ರಾಜ್ಯ ಸರ್ಕಾರ ಕಣ್ಮುಚ್ಚಿ ಕುಳಿತಿದೆ. ಬೇರೆ ಬೇರೆ ರಾಜ್ಯದವರು ಎಷ್ಟು ಸಹಾಯ ಮಾಡ್ತಾ ಇದ್ದಾರೆ ಅವರಿಗೆಲ್ಲ. ಆದರೆ ನಮ್ಮ ಸರ್ಕಾರ ಏನು ಮಾಡ್ತಾ ಇದೆ. ಒಬ್ಬ ನವೀನ್ನ ನಾವು ಕಳೆದುಕೊಂಡಿದೆ ಇನ್ನೂ ಅನೇಕರು ಅಲ್ಲಿ ಇದ್ದಾರೆ ಎಂದು ಅಜಯ್ ಸಿಂಗ್ ಹೇಳಿದ್ದಾರೆ.
ವಿದೇಶಾಂಗ ಸಚಿವರನ್ನು ಭೇಟಿಯಾಗಲಿರುವ ಹಾವೇರಿ ಸಂಸದ ಶಿವಕುಮಾರ ಉದಾಸಿ
ಉಕ್ರೇನ್‌ನಿಂದ ನವೀನ್ ಮೃತದೇಹ ತರುವ ವಿಚಾರಕ್ಕೆ ಸಂಬಂಧಪಟ್ಟಂತೆ ವಿದೇಶಾಂಗ ಸಚಿವರನ್ನು ಭೇಟಿಯಾಗಲಿರುವ ಹಾವೇರಿ ಸಂಸದ ಶಿವಕುಮಾರ ಉದಾಸಿ, ನವೀನ್ ಮೃತದೇಹ ತರುವ ಬಗ್ಗೆ ಚರ್ಚೆ ನಡೆಸಲಿದ್ದಾರೆ. ಈಗಾಗಲೇ ಸಿದ್ಧತೆ ಮಾಡಿಕೊಂಡಿದ್ದು, ವಿದೇಶಾಂಗ ಸಚಿವ ಜೈಶಂಕರ್ರನ್ನು ಸಂಸದ ಶಿವಕುಮಾರ್ ಉದಾಸಿ ಭೆಟಿಯಾಗಲಿದ್ದಾರೆ.
ಜೊತೆಗಿದ್ದವರಿಗೆ ತಿಂಡಿ ತರಲು ಹೋಗಿ ಮೃತಪಟ್ಟನಾ ನವೀನ್?
ಉಕ್ರೇನ್‌ನಲ್ಲಿ ರಾಜ್ಯದ ವಿದ್ಯಾರ್ಥಿ ನವೀನ್ ಸಾವು ಪ್ರಕರಣಕ್ಕೆ ಸಂಬಂಧಪಟ್ಟಂತೆ ರಾಯಚೂರು ಮೂಲದ ರುಬಿನಾ ತಂದೆ ಪ್ರತಿಕ್ರಿಯೆ ನೀಡಿದ್ದಾರೆ.ಇತರರಿಗೆ ಬಿಸ್ಕೇಟ್ ಸೇರಿ ಇತರೆ ತಿಂಡಿ ತರಲು ಹೋಗಿ ನವೀನ್ ಮೃತಪಟ್ಟಿದ್ದಾನೆ. ಇದೇ ನವೀನ್ ಇರೊ ಬಂಕರ್‌ನಲ್ಲಿ ನಮ್ಮ ಮಗಳು ರುಬಿನಾ ಇದ್ದಳು. ನವೀನ್, ಜೊತೆಗಿದ್ದವರ ಸಹಾಯಕ್ಕೆ ನಿಲ್ಲುತ್ತಿದ್ದನಂತೆ. ಹಾಗೇ ನಿನ್ನೆ ತಿಂಡಿ ತರಲು ಹೋದಾಗ ಮೃತಪಟ್ಟಿದ್ದಾನೆ. ನವೀನ್ ಬಂಕರ್‌ನಲ್ಲಿ ನಮ್ಮಗಳು ಇದ್ದಳು. ಹೀಗಾಗಿ ನಿನ್ನೆ ಇಡೀ ರಾತ್ರಿ ನಾವು ಮಲಗಿಲ್ಲ. ಇಂದು ಬೆಳಿಗ್ಗೆ ರುಬಿನಾ ಕರೆ ಮಾಡಿ, ಟ್ರೈನ್ ನಲ್ಲಿದ್ದಿವಿ ಅಂದ್ಲು ಎಂದು ತಿಳಿಸಿದ್ದಾರೆ.
ಕೇಂದ್ರ ಸರ್ಕಾರದಿಂದ ಯಾವ ಸಹಕಾರ ಕೂಡ ಸಿಕ್ಕಿಲ್ಲ: ಅಜಯ್ ಸಿಂಗ್
ನವೀನ್ನನ್ನು ಕಳೆದುಕೊಂಡಿದ್ದೇವೆ. ಅವರ ಕುಟುಂಬದ ಜೊತೆ ನಾವಿದ್ದೇವೆ. ಇದು ಕೇಂದ್ರ ಸರ್ಕಾರದ ಇಂಟಲಿಜೆನ್ಸ್ ಫೆಲ್ಯೂರ್. ಯುದ್ಧ ಪ್ರಾರಂಭವಾಗಿ ಆರು ದಿನ ಆಗಿದೆ. ಆರು ದಿನದಲ್ಲಿ 2000 ವಿದ್ಯಾರ್ಥಿಗಳನ್ನು ಕರೆ ತಂದಿದ್ದಾರೆ. ಅನೇಕರು ಕೂಡ ಇನ್ನೂ ಅಲ್ಲೇ ಇದ್ದಾರೆ. ಕೇಂದ್ರ ಸರ್ಕಾರದಿಂದ ಯಾವ ಸಹಕಾರ ಕೂಡ ಸಿಕ್ಕಿಲ್ಲ. ಎಂಬಸಿ ಕೂಡ ಕಾಲ್ ಕಟ್ ಮಾಡ್ತಾ ಇದ್ದಾರೆ. ಬಾರ್ಡರ್ ರೀಚ್ ಆಗಿ ಅಂತಿದ್ದಾರೆ ಅಷ್ಟೆ. ನವೀನ್ ಕೂಡ ಕರೆನ್ಸಿ ಬದಲಾವಣೆ ಮಾಡಿ ದಿನಸಿ ತರಲು ಹೋದಾಗ ದುರ್ಘಟನೆ ನಡೆದಿದೆ ಎಂದು ಅಜಯ್ ಸಿಂಗ್ ಹೇಳಿದ್ದಾರೆ.
ಭಾರತದ ಮನವಿಯನ್ನು ನಾವು ಸ್ವೀಕರಿಸಿದ್ದೇವೆ: ಭಾರತದಲ್ಲಿನ ರಷ್ಯಾ ರಾಯಭಾರಿ ಡೆನಿಸ್ ಅಲಿಪೋವ್
ಖಾರ್ಕಿವ್, ಪೂರ್ವ ಉಕ್ರೇನ್‌ನ ಇತರ ಪ್ರದೇಶಗಳಲ್ಲಿರುವ ಭಾರತೀಯರ ರಕ್ಷಣೆ ಸಂಬಂಧ ಅಧಿಕಾರಿಗಳ ಜತೆ ಸಂಪರ್ಕ ಮಾಡಿದ್ದೇವೆ. ಭಾರತೀಯ ಅಧಿಕಾರಿಗಳ ಜತೆ ಸಂಪರ್ಕದಲ್ಲಿದ್ದೇವೆ. ರಷ್ಯಾ ಮಾರ್ಗವಾಗಿ ಅವರನ್ನು ಸ್ಥಳಾಂತರಿಸಲು ಮನವಿ ಮಾಡಿದ್ದಾರೆ. ಭಾರತದ ಮನವಿಯನ್ನು ನಾವು ಸ್ವೀಕರಿಸಿದ್ದೇವೆ ಎಂದು ಭಾರತದಲ್ಲಿನ ರಷ್ಯಾ ರಾಯಭಾರಿ ಡೆನಿಸ್ ಅಲಿಪೋವ್ ಹೇಳಿಕೆ ನೀಡಿದ್ದಾರೆ.
ಆದಷ್ಟು ಬೇಗ ಈ ಯುದ್ಧ ನಿಲ್ಲಲಿ, ಶಾಂತಿ ವಾತಾವರಣ ಉಂಟಾಗಲಿ: ಸಿದ್ದಗಂಗಾ ಮಠದ ಸಿದ್ದಲಿಂಗಶ್ರೀ
ರಾಜ್ಯದ ಹಾಗೂ ದೇಶದ ವಿದ್ಯಾರ್ಥಿಗಳು ಉಕ್ರೇನ್‌ನಲ್ಲಿ ಸಿಲುಕಿಕೊಂಡಿರುವ ಹಿನ್ನೆಲೆಯಲ್ಲಿ ತುಮಕೂರಿನ ಸಿದ್ದಗಂಗಾ ಮಠ ಪೀಠಾಧ್ಯಕ್ಷರು ಸಿದ್ದಲಿಂಗ ಶ್ರೀ ಹೇಳಿಕೆ ನೀಡಿದ್ದು, ನಮ್ಮ ದೇಶ ರಾಜ್ಯದ ವಿದ್ಯಾರ್ಥಿಗಳು ಹೊರದೇಶಕ್ಕೆ ವಿದ್ಯಾಭ್ಯಾಸಕ್ಕಾಗಿ ಹೋಗಿರುವುದು ಎಲ್ಲಾ ಕಡೆ ಇದೆ.ಹಾಗೇ ಉಕ್ರೇನ್ಗೂ ಕೂಡ ವೈದ್ಯಕೀಯ ಅಭ್ಯಾಸಕ್ಕಾಗಿ ಬಹಳಷ್ಟು ವಿದ್ಯಾರ್ಥಿಗಳು ಹೋಗಿದ್ದಾರೆ. ಅಲ್ಲಿ ಗುಣಮಟ್ಟದ ಶಿಕ್ಷಣ ಹಾಗೂ ಕಡಿಮೆ ವೆಚ್ಚದಲ್ಲಿ ವೈದ್ಯಕೀಯ ಶಿಕ್ಷಣ ಸಿಗುತ್ತಿರುವ ಕಾರಣ ಹೋಗಿದ್ದಾರೆ. ಉಕ್ರೇನ್‌ನಲ್ಲಿ ಸಹಸ್ರಾರು ವಿದ್ಯಾರ್ಥಿಗಳು ಅಭ್ಯಾಸಕ್ಕೆ ಹೋಗಿ ತೊಂದರೆಗೆ ಸಿಲುಕಿದ್ದಾರೆ. ರಷ್ಯಾ ಹಾಗೂ ಉಕ್ರೇನ್ ನಡುವೆ ಆಗುತ್ತಿರುವ ಯುದ್ಧದ ಪರಿಣಾಮವಾಗಿ ನಿನ್ನೆ ವಿದ್ಯಾರ್ಥಿ ಆಕಸ್ಮಿಕವಾಗಿ ಹೊರಗಡೆ ಬಂದಾಗ ಬಲಿಯಾಗಿರುವುದು ತುಂಬಾ ದುಃಖಕರ ಸಂಗತಿ. ಆದರೂ ಕೇಂದ್ರ ಸರ್ಕಾರ ಈಗಾಗಲೇ ನಾಲ್ಕು ತಂಡ ಮಾಡಿ ಹೇಗಾದರೂ ವಿದ್ಯಾರ್ಥಿಗಳನ್ನು ತರಲು ವ್ಯವಸ್ಥೆ ಮಾಡಿದ್ದಾರೆ. ವಾಯುವಿಮಾನಗಳನ್ನ ಕಳಿಸಿ ತರಲು ವ್ಯವಸ್ಥೆ ಮಾಡುತ್ತಿದೆ. ಆದಷ್ಟು ಬೇಗ ಎಲ್ಲಾ ವಿದ್ಯಾರ್ಥಿಗಳನ್ನ ತರಲು ವ್ಯವಸ್ಥೆ ಮಾಡಲಿ. ಯಾರಿಗೂ ಜೀವಹಾನಿ ಆಗುವುದು ಬೇಡ ಎಂದು ತುಮಕೂರಿನಲ್ಲಿ ಸಿದ್ದಗಂಗಾ ಮಠದ ಸಿದ್ದಲಿಂಗಶ್ರೀ ಹೇಳಿಕೆ ನೀಡಿದ್ದಾರೆ.
ಕೇವಲ ವಿದ್ಯಾರ್ಥಿಗಳ ಲೆಕ್ಕ ಸಿಗುತ್ತಿದೆ, ಉಳಿದವರ ಕಥೆ ಏನು: ಕೆಪಿಸಿಸಿ ವಕ್ತಾರ ಪ್ರಿಯಾಂಕ್ ಖರ್ಗೆ
ಉಕ್ರೇನ್‌ನಲ್ಲಿ ರಾಯಭಾರ ಕಚೇರಿಯನ್ನು ಮುಚ್ಚಲಾಗಿದೆ. ಉಕ್ರೇನ್‌ನಲ್ಲಿ ಸಿಲುಕಿರುವ ಭಾರತೀಯರನ್ನು ಹೇಗೆ ರಕ್ಷಿಸುತ್ತೀರಿ. ಕೇಂದ್ರ ನೇಮಿಸಿರುವ ಸಚಿವರು ಯಾರ ಬಳಿ ಮಾತಾಡುತ್ತಾರೆ? ಪಾಕ್ನವರಿಗೆ ಸೇಫ್ ಪ್ಯಾಸೇಜ್ ಸಿಕ್ಕಿದೆ. ಭಾರತಕ್ಕೆ ಏಕೆ ಸಿಕ್ಕಿಲ್ಲ. ಆತಂಕದಲ್ಲಿ ಮನೆಗೆ ಹೋಗಬೇಕು ಎನ್ನುವವರ ಮುಂದೆ ಭಾಷಣ ಮಾಡಲಾಗುತ್ತಿದೆ. ಕೇವಲ ವಿದ್ಯಾರ್ಥಿಗಳ ಲೆಕ್ಕ ಸಿಗುತ್ತಿದೆ, ಉಳಿದವರ ಕಥೆ ಏನು? 10 ವಿದ್ಯಾರ್ಥಿಗಳನ್ನು ಕರೆತಂದು ಬೆನ್ನು ಚಪ್ಪರಿಸಿಕೊಳ್ಳುತ್ತಿದ್ದೀರಾ. ಸಾವಿರಾರು ಜನರನ್ನ ಅಲ್ಲೇ ಬಿಟ್ಟು ಬಂದಿದ್ದೀರಲ್ಲ ಅವರ ಕತೆ ಏನು? ಹೀಗೆ ಮಾಡಿದರೆ ಭಾರತ ವಿಶ್ವಗುರು ಹೇಗಾಗುತ್ತೆ? ಮೋದಿ ಅಧಿಕಾರಕ್ಕೆ ಬಂದಾಗಿನಿಂದ ದೇಶದ ಘನತೆ ಕುಂದಿದೆ. ಈ ಮೊದಲು ಅಕ್ಕಪಕ್ಕದ ದೇಶಗಳು ನಮ್ಮ ಕಡೆ ನೋಡುತ್ತಿದ್ದವು. ಹೀಗೆ ಆದರೆ ನೇಪಾಳದವರೂ ನಿಮ್ಮ ಮಾತು ಕೇಳಲ್ಲ ನೆನಪಿಡಿ. ಈಗ ಆ ದೇಶಗಳೆಲ್ಲ ಚೀನಾ ಜೊತೆ ಹೋಗುತ್ತಿವೆ ಎಂದು ಪ್ರಿಯಾಂಕ ಖರ್ಗೆ ತಿಳಿಸಿದ್ದಾರೆ.
ಕೊನೆಗೂ ಖಾರ್ಕಿವ್ ನಗರದಿಂದ ಹೊರಟ ಕನ್ನಡಿಗ ವಿದ್ಯಾರ್ಥಿಗಳು
ಬಾಗಲಕೋಟೆಯ ಕಿರಣ ಸವದಿ ಸೇರಿದಂತೆ ರಾಜ್ಯದ ಇತರೆ ಹಾಗೂ ಭಾರತೀಯರು ಸೇರಿ ಒಟ್ಟು 100ಕ್ಕೂ ಹೆಚ್ಚು ವಿದ್ಯಾರ್ಥಿಗಳು ರೊಮೇನಿಯಾ ಗಡಿ ಭಾಗದ ಕಡೆಗೆ ಆಗಮಿಸುತ್ತಿದ್ದಾರೆ. ಟ್ರೇನ್ ಮೂಲಕ ಖಾರ್ಕಿವ್ ನಿಂದ ವಿದ್ಯಾರ್ಥಿಗಳು ಹೊರಟಿದ್ದಾರೆ. ಇಡೀ ಹಾಸ್ಟೆಲ್ನವರು ಹೊರಟಿದ್ದೇವೆ. ಹಾಸ್ಟೆಲ್ನಿಂದ ಬಿಡುತ್ತಿದ್ದೇವೆ ತಾಸಿಗೊಮ್ಮೆ ಕಾಲ್ ಮಾಡುತ್ತೇನೆ ಭಯಪಡಬೇಡಿ ಎಂದು ವಿದ್ಯಾರ್ಥಿ ಕಿರಣ ಸವದಿ ತಂದೆಗೆ ವಾಯ್ಸ್ ಮೆಸೇಜ್ ಹಾಕಿದ್ದಾರೆ.
ರಷ್ಯಾದಲ್ಲಿರುವ ಉಕ್ರೇನ್ ರಾಯಭಾರ ಕಚೇರಿ ಬಂದ್
ರಷ್ಯಾದಲ್ಲಿರುವ ಉಕ್ರೇನ್ ರಾಯಭಾರ ಕಚೇರಿ ಬಂದ್ ಮಾಡಲಾಗಿದೆ. ಎಲ್ಲಾ ಸಿಬ್ಬಂದಿಯನ್ನು ಹೊರಗೆ ಕಳಿಸಿ ಕಚೇರಿಗೆ ಬೀಗ ಹಾಕಲಾಗಿದ್ದು, ಕಚೇರಿ ಮೇಲಿದ್ದ ಉಕ್ರೇನ್ ಬಾವುಟ ಸಹ ಇಳಿಸಲಾಗಿದೆ.
ಭಾರತೀಯರನ್ನು ಕರೆತರುವ ಯಾವುದೇ ಪ್ರಯತ್ನ ಬಿಡಲ್ಲ: ಪ್ರಧಾನಿ ಮೋದಿ
ಉಕ್ರೇನ್‌ನಲ್ಲಿ ಸಿಲುಕಿರುವ ಭಾರತೀಯರ ರಕ್ಷಣಾ ಕಾರ್ಯಕ್ಕೆ ಸಂಬಂಧಪಟ್ಟಂತೆ ಪ್ರಧಾನಿ ನರೇಂದ್ರ ಮೋದಿ ಮಾತನಾಡಿದ್ದಾರೆ. ಭಾರತದ ಹೆಚ್ಚುತ್ತಿರುವ ಶಕ್ತಿಯಿಂದಾಗಿ ಇದು ಸಾಧ್ಯವಾಗಿದೆ. ಭಾರತೀಯರನ್ನು ಕರೆತರುವ ಯಾವುದೇ ಪ್ರಯತ್ನ ಬಿಡಲ್ಲ. ಆಪರೇಷನ್ ಗಂಗಾ ಅಡಿ ಎಲ್ಲ ರೀತಿ ಪ್ರಯತ್ನ ಮಾಡುತ್ತೇವೆ. ಸಾವಿರಾರು ಭಾರತೀಯರನ್ನ ವಾಪಸ್ ಕರೆತರಲಾಗಿದೆ. ಕಾರ್ಯಾಚರಣೆಗೆ ವೇಗ ನೀಡಲು ನಾಲ್ವರು ಕೇಂದ್ರ ಸಚಿವರನ್ನು ಉಕ್ರೇನ್‌ನ ನೆರೆಯ ರಾಷ್ಟ್ರಗಳಿಗೆ ಕಳಿಸಲಾಗಿದೆ ಎಂದು ಏರ್‌ಲಿಫ್ಟ್ ಕಾರ್ಯಾಚರಣೆ ಬಗ್ಗೆ ಪ್ರಧಾನಿ ಮೋದಿ ಹೇಳಿಕೆ ನೀಡಿದ್ದಾರೆ.
ವಿದ್ಯಾರ್ಥಿ ನವೀನ್ ಸಾವು ಖಂಡಿಸಿ ಹುಬ್ಬಳ್ಳಿಯಲ್ಲಿ ಪ್ರತಿಭಟನೆ
ಯೂಕ್ರೇನ್ನಲ್ಲಿ ಹಾವೇರಿ ಮೂಲದ ವಿದ್ಯಾರ್ಥಿ ಸಾವು ಹಿನ್ನೆಲೆಯಲ್ಲಿ ವಿದ್ಯಾರ್ಥಿ ಸಾವು ಖಂಡಿಸಿ ಹುಬ್ಬಳ್ಳಿಯಲ್ಲಿ ಪ್ರತಿಭಟನೆ ನಡೆಸಲಾಗಿದೆ. ಎನ್ಎಸ್ಯುಐ ವಿದ್ಯಾರ್ಥಿ ಸಂಘಟನೆಯಿಂದ ಪ್ರತಿಭಟನೆ ಮಾಡಲಾಗಿದೆ. ನಗರದ ಕಿಮ್ಸ್ ಮುಂಭಾಗದಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ಕೂಗಿ ವಿದ್ಯಾರ್ಥಿ ಒಕ್ಕೂಟ ಪ್ರತಿಭಟನೆ ಮಾಡಿದೆ. ಯೂಕ್ರೇನ್ನಲ್ಲಿ ಭಾರತದ ಹಾಗೂ ಕರ್ನಾಟಕದ ಸಾವಿರಾರು ವಿದ್ಯಾರ್ಥಿಗಳು ಸಿಲುಕಿಕೊಂಡಿದ್ದಾರೆ. ಅಲ್ಲಿ ಸಿಲುಕಿರೋ ವಿದ್ಯಾರ್ಥಿಗಳನ್ನ ಸುರಕ್ಷಿತವಾಗಿ ಭಾರತಕ್ಕೆ ಕರೆತರುವಲ್ಲಿ ಸರ್ಕಾರ ಮೀನಾಮೇಷ ಎಣಿಸುತ್ತಿದೆ. ಶೀಘ್ರವೇ ಆತಂಕಗೊಂಡ ವಿದ್ಯಾರ್ಥಿಗಳನ್ನ ತವರಿಗೆ ಕರೆತರಬೇಕು ಎಂದು ಆಗ್ರಹಿಸಿದ್ದಾರೆ. ಜತೆಗೆ ಈ ವಿಷಯದಲ್ಲಿ ನಿರ್ಲಕ್ಷ್ಯ ವಹಿಸಿದಲ್ಲಿ ಉಗ್ರ ಹೋರಾಟ ನಡೆಸುವುದಾಗಿ ವಿದ್ಯಾರ್ಥಿ ಒಕ್ಕೂಟ ಎಚ್ಚರಿಕೆ ನೀಡಿದೆ.
ನವೀನ್ ಸಾವಿಗೆ ಸರ್ಕಾರದ ಆಲಸ್ಯವೇ ಕಾರಣ: ಪ್ರಿಯಾಂಕ ಖರ್ಗೆ
ನವೀನ್ ಕನಸು ಕನಸಾಗಿಯೇ ಉಳಿದಿದೆ. ಇದಕ್ಕೆ ನೇರ ಹೊಣೆ ಸರ್ಕಾರದ ಆಲಸ್ಯವೇ ಕಾರಣ. ನಿರ್ಧಾರ ಕೈಗೊಳ್ಳುವುದಲ್ಲಿ ನಿರ್ಲಕ್ಷ್ಯವೇ ಕಾರಣ. ಸಾವಿರಾರು ಮಂದಿ ವಿದ್ಯಾರ್ಥಿಗಳು ಅಲ್ಲಿ ಸಿಲುಕಿದ್ದಾರೆ. ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರದಲ್ಲಿ ಎಷ್ಟೋ ಮಂದಿಯ ಮಾಹಿತಿಯೇ ಇಲ್ಲ. ಕೇಂದ್ರ ಸರ್ಕಾರದ ಸ್ಪಷ್ಟ ನಿಲುವು ಕಾಣುತ್ತಿಲ್ಲ. ವಿಪಕ್ಷದಲ್ಲಿದ್ದೀವಿ ಅಂತ ನಾವು ವಿರೋಧ ಮಾಡ್ತಿಲ್ಲ. ಫೇ.15 ರಂದು ಮೊದಲ ಅಡ್ವೈಸರಿ ಬಿಡುಗಡೆ ಮಾಡಲಾಗಿತ್ತು. ಅದರಲ್ಲಿ ಯಾವುದೇ ಅಗತ್ಯ ಕೆಲಸ ಇಲ್ಲ ಅಂದ್ರೆ ಉಕ್ರೇನ್ ಬಿಡಬಹುದು ಅಂತ ಸಲಹೆ ಕೊಡ್ತಾರೆ. ಎಲ್ಲೋ ಒಂದು ಕಡೆ ಯುದ್ಧ ಆಗ್ತಿದೆ ಅವರನ್ನು ರಕ್ಷಣೆ ಮಾಡಬೇಕು ಅಂದರೆ ವಿಮಾನ ಬೇಕು ಅನ್ನೋ ಸಾಮಾನ್ಯ ಪ್ರಜ್ಞೆ ಕೂಡ ಕೇಂದ್ರ ಸರ್ಕಾರಕ್ಕಿಲ್ಲ. ಮೊದಲ ಫ್ಲೈಟ್ ಬಂದಾಗ 20 ಸಾವಿರ ಫ್ಲೈಟ್ ಚಾರ್ಜ್ 1 ಲಕ್ಷ ಏರಿಕೆ ಮಾಡ್ತಾರೆ. ಫೇ.20 ರಂದು ಎರಡನೇ ಅಡ್ವೈಸರಿ ಬಿಡುಗಡೆ ಮಾಡಲಾಗಿತ್ತು. ಸ್ವಂತ ವಿಮಾನದಲ್ಲಿ ಬನ್ನಿ ಅಂತ ಸಲಹೆ ನೀಡಲಾಗಿತ್ತು ಎಂದು ಪ್ರಿಯಾಂಕ ಖರ್ಗೆ ಹೇಳಿದ್ದಾರೆ.
ಪ್ರಧಾನಿಗಳ ಮಾತು ಶೋಭೆ ತರುತ್ತದಾ: ಪ್ರಿಯಾಂಕ ಖರ್ಗೆ
ಇಂಥ ಸಂಕಷ್ಟದ ಸಂದರ್ಭದಲ್ಲಿ ಪ್ರಧಾನಿಗಳು ಮೋಟಿವೇಟ್ ಮಾಡಬೇಕು. ಆದ್ರೆ ಪ್ರಧಾನಿಗಳ ಮಾತು ಶೋಭೆ ತರುತ್ತದಾ. ಅವರ ಬಾಸ್ ಹೀಗೆ ಹೇಳಿದ ಮೇಲೆ ಸಚಿವ ಜೋಷಿ ಸುಮ್ನಿರ್ತಾರಾ. ಮಿಸ್ಟರ್ ಜೋಷಿ ನೆನಪಿರಲಿ, ಪಿಯುಸಿನಲ್ಲಿ ನವೀನ್ ಶೇ 94 ಮಾರ್ಕ್ಸ್ ತೆಗೆದುಕೊಂಡಿದ್ರು, ಜೋಷಿ ಪ್ರಕಾರ ಯಾರು 85-90 ತಗೋತಾರೆ ಅವರ ಜೀವನದ ಬೆಲೆ ಹೆಚ್ಚಾ? ಯಾರು ಕಮ್ಮಿ ಮಾರ್ಕ್ಸ್ ತಗೋತಾರೆ ಅವರ ಜೀವದ ಬೆಲೆ ಕಮ್ಮೀನಾ? ಎಂದು ಪ್ರಿಯಾಂಕ ಖರ್ಗೆ ಪ್ರಶ್ನೆ ಮಾಡಿದ್ದಾರೆ.
ನನ್ನ ಮಗನಿಗೆ ಆದ ಸ್ಥಿತಿ ಇನ್ನೊಬ್ಬರ ಮಕ್ಕಳಿಗೆ ಆಗಬಾರದು, ಆ ಮಕ್ಕಳನ್ನಾದ್ರು ಸುರಕ್ಷಿತವಾಗಿ ಕರೆ ತನ್ನಿ: ನವೀನ್ ತಾಯಿ
ನನ್ನ ಮಗನಿಗೆ ಆದ ಸ್ಥಿತಿ ಇನ್ನೊಬ್ಬರ ಮಕ್ಕಳಿಗೆ ಆಗಬಾರದು. ಆ ಮಕ್ಕಳನ್ನಾದ್ರು ಸುರಕ್ಷಿತವಾಗಿ ಕರೆ ತನ್ನಿ ಎಂದು ಉಕ್ರೇನ್‌ನಲ್ಲಿ ಸಾವನ್ನಪ್ಪಿದ ಹಾವೇರಿ ಜಿಲ್ಲೆಯ ರಾಣೆಬೆನ್ನೂರು ತಾಲೂಕಿನ ಚಳಗೇರಿ ಗ್ರಾಮದ ಯುವಕ ನವೀನ್ ತಾಯಿ ವಿಜಯಲಕ್ಷ್ಮಿ ಮನವಿ ಮಾಡಿದ್ದಾರೆ. ಪುತ್ರನ ಸಾವಿನಿಂದ ನಿನ್ನೆಯಿಂದ ನಿರಂತರ ಕಣ್ಣೀರು ಹಾಕುತ್ತಿರುವ ತಾಯಿ ವಿಜಯಲಕ್ಷ್ಮಿ, ಪುತ್ರನ ಶವವನ್ನಾದ್ರು ಸಕಾಲಕ್ಕೆ ವಾಪಸ್ಸು ತರಿಸಿ ಎಂದು ಕೇಂದ್ರ ಸರ್ಕಾರ ಮನವಿ ಮಾಡಿದ್ದಾರೆ.
ಹಿರಿಯೂರಿಗೆ ಜಿಲ್ಲಾಧಿಕಾರಿ ಕವಿತಾ ಮನ್ನಿಕೇರಿ ಭೇಟಿ
ಉಕ್ರೇನ್‌ನಲ್ಲಿ ಕೋಟೆನಾಡಿನ ವಿದ್ಯಾರ್ಥಿಗಳು ಸಿಲುಕಿದ ಹಿನ್ನೆಲೆ ಹಿರಿಯೂರಿಗೆ ಜಿಲ್ಲಾಧಿಕಾರಿ ಕವಿತಾ ಮನ್ನಿಕೇರಿ ಭೇಟಿ ನೀಡಿದ್ದಾರೆ. ಚಿತ್ರದುರ್ಗ ಜಿಲ್ಲೆಯ ಹಿರಿಯೂರು ಪಟ್ಟಣಕ್ಕೆ ಭೇಟಿ ನೀಡಿದ್ದಾರೆ. ಉಕ್ರೇನ್‌ನಿಂದ ವಾಪಸ್ಸಾದ ವಿದ್ಯಾರ್ಥಿನಿ ಶಕ್ತಿಶ್ರೀ ಮನೆಗೆ ಭೇಟಿ ನೀಡಿದ್ದು, ಬಳಿಕ ಉಕ್ರೇನ್‌ನಲ್ಲಿ ಸಿಲುಕಿರುವ ಪಟ್ರೆಹಳ್ಳಿಯ ವಿದ್ಯಾರ್ಥಿ ಎಂ.ವಿಷ್ಣು ಪೋಷಕರ ಮನೆಗೆ ತೆರಳಿ ಅವರಿಗೆ ಆತ್ಮಸ್ಥೈರ್ಯ ಹೇಳಿದ್ದಾರೆ.
ಅಮಾಯಕ ನವೀನ ಮೃತಪಟ್ಟಿರೋದು ಬಹುದೊಡ್ಡ ಆಘಾತ: ಪ್ರಹ್ಲಾದ್ ಜೋಶಿ
ಸಹಜವಾಗಿ ನವೀನ್ ತಂದೆ, ತಾಯಿ ಮತ್ತು ಕುಟುಂಬದವರಿಗೆ ತೀವ್ರವಾದ ಆಘಾತವಾಗಿದೆ. ಯುದ್ಧ ಪ್ರಾರಂಭವಾಗಿದೆ. ಇದರ ಮಧ್ಯೆ ಕುಟುಂಬದವರ ಬೇಡಿಕೆ ಇದೆ. ಮಗನ ಪಾರ್ಥೀವ ಶರೀರದ ಅಂತಿಮ ದರ್ಶನ ಮಾಡಿಸಿ ಅಂತಾ ಬೇಡಿಕೆ ಇದೆ. ಈ ಘಟನೆ ಆಗೋ ಮೊದಲು ನಾನು ಸುಮನ್ ಎಂಬಾತನ ಜೊತೆಗೂ ಮಾತನಾಡಿದ್ದೆ. ಯುದ್ಧ ಪ್ರಾರಂಭ ಆದಾಗಿಂದ ಪ್ರತಿದಿನದ ಮಾಹಿತಿ ಪಡಿತಿದ್ದೇನೆ. ಪಾರ್ಥೀವ ಶರೀರ ತರೋ ವಿಷಯದಲ್ಲಿ ಈಗಾಗಲೆ ಪ್ರಯತ್ನ ಮಾಡಿದ್ದೇವೆ. ಕೇಂದ್ರ ಸಚಿವ ಜೈಶಂಕರರವರು ಈ ಬಗ್ಗೆ ಮಾತನಾಡಿದ್ದಾರೆ. ಕೆಲವು ಗಂಟೆಗಳಾದ್ರೂ ಅಲ್ಲಿ ಬಾಂಬ್ ಹಾಕೋದನ್ನ ನಿಲ್ಲಿಸಬೇಕು ಅಂತಾ ಪ್ರಯತ್ನ ಮಾಡ್ತಿದ್ದೇವೆ. ಖಾಯಂ ಆಗಿ ಯುದ್ಧ ನಿಲ್ಲಿಸಬೇಕು ಅನ್ನೋದು ನಮ್ಮ ನಿಲುವು ಎಂದು ಪ್ರಹ್ಲಾದ್ ಜೋಶಿ ಹೇಳಿದ್ದಾರೆ.
ಮೈಕೊಲೈವ್‌ನಲ್ಲಿ ಅನಿರ್ದಿಷ್ಟಾವಧಿ ಕರ್ಫ್ಯೂ ಜಾರಿ
ಉಕ್ರೇನ್‌ನಲ್ಲಿ ರಷ್ಯಾ ಸೇನೆ ಯುದ್ಧ ಮುಂದುವರಿಸಿದ್ದು, ಮೈಕೊಲೈವ್‌ನಲ್ಲಿ ಅನಿರ್ದಿಷ್ಟಾವಧಿ ಕರ್ಫ್ಯೂ ಜಾರಿ ಮಾಡಲಾಗಿದೆ. ಮೈಕೊಲೈವ್‌ನಲ್ಲಿ ರಷ್ಯಾ ಸೇನೆ ಹೆಲಿಕಾಪ್ಟರ್‌ನಿಂದ ಇಳಿದಿದೆ.
ರಷ್ಯಾ ಮೂಲಕ ಭಾರತೀಯರ ಸ್ಥಳಾಂತರಕ್ಕೆ ಅಸ್ತು: ರಷ್ಯಾ ರಾಯಭಾರಿಯ ಮಹತ್ವದ ಹೇಳಿಕೆ
ಉಕ್ರೇನ್-ರಷ್ಯಾ ಗಡಿಯಲ್ಲಿ ಆಶ್ರಯ ಪಡೆದಿರುವ ಸಾವಿರಾರು ವಿದ್ಯಾರ್ಥಿಗಳನ್ನು ರಷ್ಯಾ ಮೂಲಕವೇ ರಕ್ಷಿಸಿ, ಸ್ವದೇಶಕ್ಕೆ ಕರೆತರಲು ಭಾರತ ಸರ್ಕಾರ ಮುಂದಾಗಿದೆ. ರಷ್ಯಾ ರಾಜಧಾನಿ ಮಾಸ್ಕೊದಲ್ಲಿರುವ ಭಾರತ ರಾಜತಾಂತ್ರಿಕ ಕಚೇರಿ ಈಗಾಗಲೇ ಒಂದು ನಿಯೋಗವನ್ನು ಗಡಿಗೆ ಕಳಿಸಿದೆ. ಈವರೆಗೆ ತೆರೆಮರೆಯಲ್ಲಿ ನಡೆಯುತ್ತಿದ್ದ ಪ್ರಯತ್ನದ ಬಗ್ಗೆ ಇದೇ ಮೊದಲ ಬಾರಿಗೆ ಭಾರತದಲ್ಲಿರುವ ರಷ್ಯಾ ರಾಯಭಾರಿ ಡೆನಿಸ್ ಅಲಿಪೋವ್ ಹೇಳಿಕೆ ನೀಡಿದ್ದಾರೆ.
ಎಲ್ಲಿಯೂ ನಾಗರಿಕರನ್ನು ಗುರಿಯಾಗಿಸಿ ರಷ್ಯಾ ಸೇನೆ ದಾಳಿ ಮಾಡಿಲ್ಲ. ಭಾರತೀಯರು ಸೇರಿದಂತೆ ಯಾವುದೇ ದೇಶದ ವಿದ್ಯಾರ್ಥಿಗಳು ಅಥವಾ ಕಾರ್ಮಿಕರಿಗೆ ತೊಂದರೆ ಕೊಟ್ಟಿಲ್ಲ. ಭಾರತೀಯರ ರಕ್ಷಣೆಗಾಗಿ ಅಧಿಕಾರಿಗಳೊಂದಿಗೆ ನಿರಂತರ ಸಂಪರ್ಕದಲ್ಲಿದ್ದೇವೆ. ಉಕ್ರೇನ್‌ನ ಪೂರ್ವ ಪ್ರದೇಶಗಳಲ್ಲಿ ಸಿಲುಕಿರುವ ಭಾರತೀಯರ ರಕ್ಷಣೆಗೆ ಮತ್ತು ಅವರಿಗೆ ರಷ್ಯಾ ಪ್ರವೇಶಕ್ಕೆ ಅವಕಾಶ ಕಲ್ಪಿಸಿ, ಆ ಮೂಲಕ ಭಾರತೀಯರ ಸ್ಥಳಾಂತರಕ್ಕೆ ಸ್ಥಳಾಂತರಿಸಲು ಅನುವು ಮಾಡಿಕೊಡಬೇಕು ಎನ್ನುವ ಭಾರತ ಸರ್ಕಾರದ ಮನವಿಯನ್ನು ಒಪ್ಪಿಕೊಂಡಿದ್ದೇವೆ ಎಂದು ಭಾರತದಲ್ಲಿರುವ ರಷ್ಯಾ ರಾಯಭಾರಿ ಡೆನಿಸ್ ಅಲಿಪೋವ್ ಹೇಳಿದ್ದಾರೆ.
ಜಿನೆವಾದಲ್ಲಿ ರಷ್ಯಾ ವಿದೇಶಾಂಗ ಸಚಿವರಿಗೆ ಮುಜುಗರ
ಜಿನೆವಾದಲ್ಲಿ ನಡೆಯುತ್ತಿರುವ ನಿಶ್ಯಸ್ತ್ರೀಕರಣ ಸಮ್ಮೇಳನದಲ್ಲಿ ಪಾಲ್ಗೊಂಡ ರಷ್ಯಾದ ವಿದೇಶಾಂಗ ವ್ಯವಹಾರಗಳ ಸಚಿವ ಸೆರ್ಗೆ ಲಾವ್ರೊವ್ ಅವರಿಗೆ ತೀವ್ರ ಮುಖಭಂಗವಾಯಿತು. ವಾವ್ರೊವ್ ಅವರು ಮಾತು ಆರಂಭಿಸುತ್ತಿದ್ದಂತೆಯೇ ಪಾಶ್ಚಿಮಾತ್ಯ ರಾಜತಾಂತ್ರಿಕರು ಹೊರನಡೆದರು.
7ನೇ ದಿನಕ್ಕೆ ರಷ್ಯಾ-ಉಕ್ರೇನ್ ಯುದ್ಧ: ರಕ್ಷಣೆಗೆ ಉಕ್ರೇನ್ ಸತತ ಯತ್ನ
ರಷ್ಯಾ-ಉಕ್ರೇನ್ ನಡುವಣ ಸಂಘರ್ಷ 7ನೇ ದಿನಕ್ಕೆ ಕಾಲಿಟ್ಟಿದೆ. ಈವರೆಗೆ ರಷ್ಯಾದ ಸುಮಾರು 6000 ಯೋಧರನ್ನು ಹತ್ಯೆಗೈದಿದ್ದು, 30 ಯುದ್ಧವಿಮಾನಗಳನ್ನು ನಾಶಪಡಿಸಿದ್ದೇವೆ ಎಂದು ಉಕ್ರೇನ್ ಹೇಳಿಕೊಂಡಿದೆ. 211 ಯುದ್ಧಟ್ಯಾಂಕ್, 31 ಹೆಲಿಕಾಪ್ಟರ್ಗಳು ಮತ್ತು 862 ಸಶಸ್ತ್ರ ವಾಹನಗಳನ್ನು ನಾಶಪಡಿಸಲಾಗಿದೆ ಎಂದು ಉಕ್ರೇನ್ ಹೇಳಿದೆ.
ಕೈಲಿ ಭಾರತದ ಬಾವುಟ ಹಿಡಿದು ಖಾರ್ಕಿವ್‌ನಿಂದ ಹೊರಬಂದ ಭಾರತೀಯ ವಿದ್ಯಾರ್ಥಿಗಳು
ಭಾರತದ ವಿದ್ಯಾರ್ಥಿಗಳು ಮತ್ತು ನೌಕರರು ಇರುವ ದೊಡ್ಡ ಗುಂಪೊಂದು ಕೈಲಿ ಭಾರತದ ಬಾವುಟ ಹಿಡಿದು ಯುದ್ಧಪೀಡಿತ ಖಾರ್ಕಿವ್ ನಗರದಿಂದ ಹೊರಗೆ ಬಂದಿದೆ. ಈ ಗುಂಪಿನಲ್ಲಿ ಇತರ ದೇಶಗಳ ವಿದ್ಯಾರ್ಥಿಗಳೂ ಇದ್ದಾರೆ. ಸುಮಾರು 1000 ಜನರಿರುವ ಈ ಗುಂಪಿನಲ್ಲಿ ಭಾರತೀಯರು 700 ಜನರಿರಬಹುದು. ಸುಮಾರು 7 ಕಿಮೀ ನಡೆದರೆ ಸಿಗುವ ರೈಲು ನಿಲ್ದಾಣ ತಲುಪುವುದು ಈ ಗುಂಪಿನ ಉದ್ದೇಶವಾಗಿದೆ.
ಖೇರ್ಸಾನ್ ನಗರ ನಮ್ಮ ನಿಯಂತ್ರಣದಲ್ಲಿದೆ: ರಷ್ಯಾ ಸೇನೆ
ದಕ್ಷಿಣ ಉಕ್ರೇನ್‌ನ ಪ್ರಮುಖ ನಗರ ಖೆರ್ಸಾನ್ ನಮ್ಮ ನಿಯಂತ್ರಣದಲ್ಲಿದೆ ಎಂದು ರಷ್ಯಾ ಸೇನೆ ಬುಧವಾರ ಹೇಳಿಕೊಂಡಿದೆ. ರಷ್ಯಾದ ಸಶಸ್ತ್ರ ಪಡೆಗಳು ಉಕ್ರೇನ್‌ನ ಪ್ರಾಂತೀಯ ರಾಜಧಾನಿ ಖೇರ್ಸಾನ್ ಪ್ರವೇಶಿಸಿವೆ ಎಂದು ರಷ್ಯಾ ರಕ್ಷಣಾ ಇಲಾಖೆಯ ವಕ್ತಾರ ಇಗೊರ್ ಕೊನಶೆನ್ಕೊವ್ ಹೇಳಿದ್ದಾರೆ.
ಖಾರ್ಕಿವ್‌ನಲ್ಲಿ ಬಾಗಲಕೋಟೆ ವಿದ್ಯಾರ್ಥಿಗಳು
ಬಾಗಲಕೋಟೆಯ ಎಂಬಿಬಿಎಸ್ ವಿದ್ಯಾರ್ಥಿಗಳು ಇಂದಿಗೂ ಯುದ್ಧಪೀಡಿತ ಖಾರ್ಕಿವ್‌ನ ಬಂಕರ್ ಒಂದರಲ್ಲಿ ಆಶ್ರಯ ಪಡೆದಿದ್ದಾರೆ. ಬಾಗಲಕೋಟೆ ಜಿಲ್ಲೆ ಮುಧೋಳ ತಾಲ್ಲೂಕಿನ ಟೀಚರ್ಸ್ ಕಾಲೋನಿ ನಿವಾಸಿ ವಿದ್ಯಾಧರ ಪಾಟಿಲ್ ಈ ಕುರಿತು ಸಹೋದರಿಗೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ. ಬಂಕರ್ ಒಳಗೆ ಇದ್ದರೂ ಅಪಾಯ, ಹೊರಗೆ ಹೋದರೂ ಅಪಾಯ. ಹೀಗಾಗಿ ನಾವು ರಿಸ್ಕ್ ತೆಗೆದುಕೊಳ್ಳಲೇಬೇಕಿದೆ. ಶಿಫ್ಟ್ ಹಿನ್ನೆಲೆಯಲ್ಲಿ ನಾಲ್ಕು ತಾಸು ಪೋನ್ ಬಂದ್ ಮಾಡುತ್ತೇನೆ. ಯಾರೂ ಭಯಪಡಬೇಡಿ ಎಂದು ಸಹೋದರಿ ವೀಣಾ ಅವರಿಗೆ ವಿದ್ಯಾಧರ ಪಾಟಿಲ್ ತಿಳಿಸಿದ್ದಾರೆ. ತಾವು ಇರುವ ಬಂಕರ್ ವಿಡಿಯೊವನ್ನೂ ಹಂಚಿಕೊಂಡಿದ್ದಾರೆ.
6 ದಿನಗಳ ಯುದ್ಧದಲ್ಲಿ 6 ಸಾವಿರ ರಷ್ಯನ್ನರ ಹತ್ಯೆ: ಉಕ್ರೇನ್
ಉಕ್ರೇನ್ ಮೇಲೆ ಆಕ್ರಮಣ ಮಾಡಿರುವ ರಷ್ಯನ್ನರ ವಿರುದ್ಧ ಸತತ ಹೋರಾಟ ಮಾಡುತ್ತಿದ್ದೇವೆ. ಕಳೆದ 6 ದಿನಗಳ ಯುದ್ಧದಲ್ಲಿ 6,000 ರಷ್ಯನ್ನರ ಹತ್ಯೆ ಮಾಡಲಾಗಿದೆ ಎಂದು ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್‌ಸ್ಕಿ ಹೇಳಿದ್ದಾರೆ.
ಉಕ್ರೇನ್‌ನಲ್ಲಿ ಸಿಲುಕಿರುವ ವಿದ್ಯಾರ್ಥಿನಿಯರ ಮನೆಗೆ ಸಂಸದ ನಳಿನ್ ಕುಮಾರ್ ಕಟೀಲ್ ಭೇಟಿ
ಮಂಗಳೂರು: ಉಕ್ರೇನ್‌ನಲ್ಲಿ ಸಿಲುಕಿರೋ ಮಂಗಳೂರಿನ ವೈದ್ಯಕೀಯ ವಿದ್ಯಾರ್ಥಿನಿಯರ ಮನೆಗಳಿಗೆ ಸಂಸದ ನಳಿನ್ ಕುಮಾರ್ ಕಟೀಲ್ ಭೇಟಿ ನೀಡಿ, ಪೋಷಕರಿಗೆ ಧೈರ್ಯ ತುಂಬಿದರು. ಜಿಲ್ಲಾಡಳಿತದ ಅಂಕಿಅಂಶಗಳ ಪ್ರಕಾರ ಜಿಲ್ಲೆಯ 18 ಜನರು ಉಕ್ರೇನ್ನಲ್ಲಿದ್ದಾರೆ. ಕೇಂದ್ರ ಸರ್ಕಾರವು ತೆರವು ಕಾರ್ಯಾಚರಣೆಗಾಗಿ ನಾಲ್ವರು ಮಂತ್ರಿಗಳನ್ನು ನೇಮಿಸಿದೆ. ಪಕ್ಷದ ವತಿಯಿಂದಲೂ ವಾರ್ ರೂಂ ತೆರೆದು ಮನೆಯವರನ್ನು ಸಂಪರ್ಕಿಸಲು ಪ್ರಯತ್ನಿಸಲಾಗುತ್ತಿದೆ. ಕೆಲ ವಿದ್ಯಾರ್ಥಿಗಳು ಪಾಸ್ಪೋರ್ಟ್ ಕಳೆದುಕೊಂಡಿರುವ ಬಗ್ಗೆ ಹೇಳಿದ್ದಾರೆ. ಈ ವಿಚಾರದಲ್ಲಿ ಯಾವುದೇ ಸಮಸ್ಯೆ ಅಗುವುದಿಲ್ಲ ಎಂದು ಪ್ರಧಾನಿ ಭರವಸೆ ನೀಡಿದ್ದಾರೆ. ವಿವಿಧ ದೇಶಗಳಿಗೆ ಪ್ರಧಾನಿ ಮನವಿ ಮಾಡಿದ್ದು, ಪಾಸ್ಪೋರ್ಟ್ ಇಲ್ಲದವರನ್ನೂ ಸ್ವದೇಶಕ್ಕೆ ಕರೆತರಲು ವಿದೇಶಾಂಗ ವ್ಯವಹಾರಗಳ ಇಲಾಖೆ ಯತ್ನಿಸುತ್ತಿದೆ ಎಂದರು.
ಜೀವಭಯದಲ್ಲಿ ಬಂಕರ್ ತೊರೆದ ರಾಯಚೂರು ವಿದ್ಯಾರ್ಥಿನಿ
ಉಕ್ರೇನ್‌ನ ಖಾರ್ಕಿವ್ ನಗರದಲ್ಲಿ ಪರಿಸ್ಥಿತಿ ವಿಷಮಿಸುತ್ತಿದೆ. ಜೀವಭಯದ ಮಧ್ಯೆ ಮೂವರು ವಿದ್ಯಾರ್ಥಿಗಳ ಜೊತೆಗೆ ರಾಯಚೂರಿನ ವಿದ್ಯಾರ್ಥಿನಿ ಬಂಕರ್ ತೊರೆದು ರೈಲು ನಿಲ್ದಾಣದತ್ತ ಹೆಜ್ಜೆ ಹಾಕುತ್ತಿದ್ದಾರೆ ಎಂದು ಅವರ ಪೋಷಕರು ಮಾಹಿತಿ ನೀಡಿದ್ದಾರೆ.
ಖಾರ್ಕಿವ್‌ನಲ್ಲಿ ಹಾಸನದ ಮೂವರು ವಿದ್ಯಾರ್ಥಿಗಳು
ರಷ್ಯಾ ದಾಳಿಗೆ ನಲುಗಿರುವ ಉಕ್ರೇನ್‌ನ ಖಾರ್ಕಿವ್ ನಗರದಲ್ಲಿ ಹಾಸನದ ಮೂವರು ವಿದ್ಯಾರ್ಥಿಗಳು ಸಿಲುಕಿದ್ದಾರೆ ಎಂದು ಜಿಲ್ಲಾಧಿಕಾರಿ ಆರ್.ಗಿರೀಶ್ ಮಾಹಿತಿ ನೀಡಿದ್ದಾರೆ. ಉಕ್ರೇನ್‌ನಲ್ಲಿ ಒಟ್ಟು 6 ವಿದ್ಯಾರ್ಥಿಗಳಿದ್ದಾರೆ. ಈ ಪೈಕಿ ಮೂವರು ಖಾರ್ಕಿವ್ನಲ್ಲೇ ಇದ್ದಾರೆ. ಇಬ್ಬರು ವಿದ್ಯಾರ್ಥಿಗಳು ಸುಮೀ ಪ್ರದೇಶದಲ್ಲಿ ಸಿಲುಕಿದ್ದಾರೆ. ಒಬ್ಬರ ಬಗ್ಗೆ ನಮಗೆ ಮಾಹಿತಿ ಸಿಕ್ಕಿಲ್ಲ. ಈವರೆಗೆ ಹಾಸನದ 7 ಮಂದಿ ಸ್ವದೇಶಕ್ಕೆ ಮರಳಿದ್ದಾರೆ. ಉಳಿದವರ ಏರ್ಲಿಫ್ಟ್ಗೆ ವ್ಯವಸ್ಥೆ ಮಾಡಲು ಯತ್ನಿಸುತ್ತಿದ್ದೇವೆ ಎಂದು ಹಾಸನ ಜಿಲ್ಲಾಧಿಕಾರಿ ಆರ್.ಗಿರೀಶ್ ಮಾಹಿತಿ ನೀಡಿದ್ದಾರೆ.
ಉಕ್ರೇನ್‌ನಲ್ಲಿ ಸಿಲುಕಿದ ಧಾರವಾಡದ ನಾಲ್ವರು ವಿದ್ಯಾರ್ಥಿಗಳು
ಉಕ್ರೇನ್‌ನ ಯುದ್ಧಪೀಡಿತ ಪ್ರದೇಶದಲ್ಲಿ ಧಾರವಾಡದ ನಾಲ್ವರು ವಿದ್ಯಾರ್ಥಿನಿಯರು ಸಿಲುಕಿದ್ದಾರೆ ಎಂದು ಜಿಲ್ಲಾಧಿಕಾರಿ ನಿತೇಶ ಪಾಟೀಲ ತಿಳಿಸಿದ್ದಾರೆ. ಈ ಪೈಕಿ ಕುಂದಗೋಳದ ಚೈತ್ರಾ ಯುದ್ಧ ನಡೆಯುತ್ತಿರುವ ಖಾರ್ಕಿವ್‌ದಲ್ಲಿದ್ದಾರೆ. ಧಾರವಾಡ ಮೂಲದ ಫೌಜಿಯಾ ನಿನ್ನೆ ರಾತ್ರಿಯೇ ರೊಮ್ಯಾನಿಯಾಗೆ ಆಗಮಿಸಿದ್ದು, ಅವರನ್ನು ಊರಿಗೆ ಕರೆತರುವ ಪ್ರಯತ್ನಗಳು ಆರಂಭವಾಗಿವೆ ಎಂದಿದ್ದಾರೆ. ಮಿಲನ್ ದೇವಮಾನೆ ಎನ್ನುವವರು ಗಡಿ ಸಮೀಪಕ್ಕೆ ಬಂದಿದ್ದಾರೆ. ನಾಜಿಯಾ ಸಹ ಉಕ್ರೇನ್ನಲ್ಲಿದ್ದಾರೆ. ಈ ಪೈಕಿ ಚೈತ್ರಾ ಅವರು ಇರುವ ಸ್ಥಳದಲ್ಲಿ ಹಿಂಸಾಚಾರ ನಡೆಯುತ್ತಿದೆ ಎಂದು ಹೇಳಿದ್ದಾರೆ.
ಉಕ್ರೇನ್‌ನಲ್ಲಿ ವಿದ್ಯಾರ್ಥಿಗಳ ಸಂಕಷ್ಟಕ್ಕೆ ನೀಟ್ ಕಾರಣ: ಎಚ್ಡಿಕೆ ಟ್ವೀಟ್
ಉಕ್ರೇನ್‌ನಲ್ಲಿ ಓದಲು ಹೋಗಿ ರಷ್ಯಾ ದಾಳಿಗೆ ತುತ್ತಾದ ವಿದ್ಯಾರ್ಥಿ ನವೀನ್ ಅವರ ದುರಂತ ಸಾವು ನೀಟ್ ವ್ಯವಸ್ಥೆಯ ನಿರ್ಲಜ್ಜ ಮುಖವನ್ನು ಇಡೀ ದೇಶಕ್ಕೆ ದರ್ಶನ ಮಾಡಿಸಿದೆ. ಅರ್ಹತೆ ನೆಪದಲ್ಲಿ ಪ್ರತಿಭಾವಂತ, ಆರ್ಥಿಕ ದುರ್ಬಲ ಮತ್ತು ಗ್ರಾಮೀಣ ವಿದ್ಯಾರ್ಥಿಗಳಿಗೆ ಮಾಡಲಾಗುತ್ತಿರುವ ಅನ್ಯಾಯಕ್ಕೆ ಅಂತ್ಯ ಹಾಡಬೇಕಿದೆ ಎಂದು ಜೆಡಿಎಸ್ ನಾಯಕ ಎಚ್.ಡಿ.ಕುಮಾರಸ್ವಾಮಿ ಟ್ವೀಟ್ ಮಾಡಿದ್ದಾರೆ.
ವೈದ್ಯಶಿಕ್ಷಣದ ಕನಸು ಕಾಣುವ ಬಡ, ಮಧ್ಯಮ ವರ್ಗದ ಬದುಕನ್ನು ಛಿದ್ರಗೊಳಿಸುತ್ತಿರುವ ನೀಟ್ (ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆ- NEET), ವಿದ್ಯಾರ್ಥಿಗಳು & ಪೋಷಕರ ಪಾಲಿಗೆ ಮರಣಶಾಸನವಾಗಿದೆ. ಉನ್ನತ ಶಿಕ್ಷಣವನ್ನು ಉಳ್ಳವರಿಗೆ ಮೀಸಲಿಟ್ಟು ಉಳಿದವರಿಗೆ ವ್ಯವಸ್ಥಿತವಾಗಿ ನಿರಾಕರಿಸಲಾಗುತ್ತಿದೆ.1/10
— H D Kumaraswamy (@hd_kumaraswamy) March 2, 2022
ನವೀನ್ ಪಾರ್ಥಿವ ಶರೀರ ಬರುವುದು ಇನ್ನಷ್ಟು ತಡ
ಉಕ್ರೇನ್‌ನಲ್ಲಿ ಮೃತಪಟ್ಟ ಹಾವೇರಿ ಮೂಲದ ವಿದ್ಯಾರ್ಥಿ ನವೀನ್ ಅವರ ಪಾರ್ಥಿವ ಶರೀರವನ್ನು ಸ್ವಗ್ರಾಮಕ್ಕೆ ತರುವುದು ಹಲವು ದಿನಗಳು ತಡವಾಗಬಹುದು ಎಂದು ಭಾರತೀಯ ರಾಯಭಾರಿ ಕಚೇರಿಯಿಂದ ನವೀನ ಸಹೋದರ ಹರ್ಷನಿಗೆ ಮಾಹಿತಿ ನೀಡಿದೆ. ನವೀನ್ ಅವರ ಪಾರ್ಥಿವ ಶರೀರವನ್ನು ಸ್ಥಳೀಯ ಆಸ್ಪತ್ರೆಯೊಂದರಲ್ಲಿ ಸಂರಕ್ಷಿಸಿಡಲಾಗಿದೆ. ಸದ್ಯ ಉಕ್ರೇನ್‌ನಲ್ಲಿ ಪರಿಸ್ಥಿತಿ ಸರಿಯಿಲ್ಲ. ಹೀಗಾಗಿ ಪಾರ್ಥಿವ ಶರೀರವನ್ನು ಸ್ವದೇಶಕ್ಕೆ ಕಳುಹಿಸುವುದು ತಡವಾಗಬಹುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಉಕ್ರೇನ್ನಲ್ಲೂ ಕನ್ನಡ ಪ್ರೇಮ ಮೆರೆದಿದ್ದ ನವೀನ
ಉಕ್ರೇನ್‌ನಲ್ಲಿ ರಷ್ಯಾ ದಾಳಿಯಿಂದ ಮೃತಪಟ್ಟ ಕನ್ನಡಿಗ ನವೀನ್ ಅಲ್ಲಿಯೂ ಕನ್ನಡ ಬಾವುಟದ ಬಣ್ಣವಿರುವ ಶಾಲು ಹೊದ್ದು ಸ್ನೇಹಿತರೊಂದಿಗೆ ಕಾಲ ಕಳೆದ ವಿಡಿಯೊ ಇದೀಗ ವೈರಲ್ ಆಗಿದೆ.
ಖಾರ್ಕಿವ್ ನಗರದಲ್ಲಿ ರಷ್ಯಾದಿಂದ ಶೆಲ್ ದಾಳಿ
ಉಕ್ರೇನ್‌ನ ಪ್ರಮುಖ ನಗರ ಖಾರ್ಕಿವ್‌ನಲ್ಲಿ ರಷ್ಯಾ ಸೇನೆ ಶೆಲ್ ದಾಳಿ ನಡೆಸುತ್ತಿದೆ. ಶೆಲ್ಲಿಂಗ್‌ನಿಂದಾಗಿ ಈವರೆಗೆ 21 ಜನರು ಸಾವನ್ನಪ್ಪಿದ್ದು 112 ಮಂದಿ ಗಾಯಗೊಂಡಿದ್ದಾರೆ. ಸಮರ ಪರಿಸ್ಥಿತಿ ಬಿಗಡಾಯಿಸಿದ ಹಿನ್ನೆಲೆಯಲ್ಲಿ ಪೋಲೆಂಡ್ನತ್ತ ವಲಸೆ ಬರುತ್ತಿರುವ ಉಕ್ರೇನಿಗರ ಸಂಖ್ಯೆ ಹೆಚ್ಚಾಗಿದೆ. ಯುದ್ಧ ಆರಂಭವಾದಾಗಿನಿಂದ ಈವರೆಗೆ ಸುಮಾರು 4.50 ಲಕ್ಷ ಜನರು ಪೋಲೆಂಡ್ಗೆ ಬಂದಿದ್ದಾರೆ.
ಜಾಗತಿಕ ತೈಲ ಬೆಲೆ 8 ವರ್ಷಗಳ ಗರಿಷ್ಠ ಮಟ್ಟಕ್ಕೆ
ಪುಟಿನ್ ಆಕ್ರಮಣವನ್ನು ತಡೆಯಲು ಪಾಶ್ಚಾತ್ಯ ರಾಷ್ಟ್ರಗಳು ರಷ್ಯನ್ ಕಂಪೆನಿಗಳು ನಿರ್ಬಂಧ ಹೇರಿದ್ದರೂ ತೈಲ ವ್ಯಾಪಾರಕ್ಕೆ ನಿರ್ಬಂಧದಿಂದ ವಿನಾಯಿತಿ ಇದೆ. ಆದರೆ ಏರಿಳಿತದ ಸನ್ನಿವೇಶವನ್ನು ತಡೆಯಲು ಖರೀದಿದಾರರು ರಷ್ಯನ್ ತೈಲವನ್ನು ತಿರಸ್ಕರಿಸಿದ್ದಾರೆ. ಇದರಿಂದ ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆ ಏರಿಕೆಯಾಗಿದೆ.
ಖಾರ್ಕೀವ್ಗೆ ಬಂದಿಳಿದ ರಷ್ಯಾ ವಾಯುಗಾಮಿ ಪಡೆ
ಉಕ್ರೇನ್ ರಾಜ್ಯ ತುರ್ತು ಸೇವೆ ಘಟಕ ವಾಟ್ಸ್ಆ್ಯಪ್ ಹೆಲ್ಪ್ಲೈನ್ ಶುರು ಮಾಡಿದೆ. ಅಲ್ಲಿನ ನಾಗರಿಕರು ತಮ್ಮ ಪರಿಸ್ಥಿತಿ, ತಾವಿರುವ ಸ್ಥಳದಲ್ಲಿ ಏನಾಗುತ್ತಿದೆ ಎಂಬುದನ್ನು ಈ ವಾಟ್ಸ್ಆ್ಯಪ್ ನಂಬರ್ಗೆ ಕಳಿಸಬಹುದಾಗಿದೆ.
ಖಾರ್ಕೀವ್ಗೆ ಬಂದಿಳಿದ ರಷ್ಯಾ ವಾಯುಗಾಮಿ ಪಡೆ; ಉಕ್ರೇನ್‌ನಲ್ಲಿ ತುರ್ತು ಸೇವೆಗಾಗಿ ಸಹಾಯವಾಣಿ ಪ್ರಾರಂಭ#Kharkiv #UkraineUnderAttack #RussianUkrainianWar https://t.co/aGPebtofVj
— TV9 Kannada (@tv9kannada) March 2, 2022
ತೆರವು ಕಾರ್ಯಾಚರಣೆಗೆ ವಾಯುಪಡೆ ವಿಮಾನಗಳು
ಉಕ್ರೇನ್‌ನಲ್ಲಿ ಸಿಲುಕಿರುವ ಭಾರತೀಯ ವಿದ್ಯಾರ್ಥಿಗಳನ್ನು ಕರೆತರಲು ಭಾರತೀಯ ವಾಯುಪಡೆಯ ಸಿ-17 ಗ್ಲೋಬ್ಮಾಸ್ಟರ್ ವಿಮಾನಗಳನ್ನು ಭಾರತ ಸರ್ಕಾರ ನಿಯೋಜಿಸಿದೆ. ಪೊಲೆಂಡ್, ಹಂಗೇರಿ ಮತ್ತು ರೊಮಾನಿಯಾಗಳಿಗೆ ಈ ವಿಮಾನಗಳು ತೆರಳಲಿವೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಈ ನಡುವೆ ಉಕ್ರೇನ್ನಲ್ಲಿದ್ದ 220 ವಿದ್ಯಾರ್ಥಿಗಳು ಟರ್ಕಿ ರಾಜಧಾನಿ ಇಸ್ತಾಂಬುಲ್ ಮಾರ್ಗವಾಗಿ ಭಾರತಕ್ಕೆ ಬಂದಿದ್ದಾರೆ.
Video: ಟೆಂಟ್, ಬ್ಲಾಂಕೆಟ್ ಹೊತ್ತು ಉಕ್ರೇನ್‌ಗೆ ಹೊರಟ ಭಾರತದ ವಿಮಾನ
ಮಾನವೀಯ ದೃಷ್ಟಿಯಿಂದ ಉಕ್ರೇನ್‌ಗೆ ಅಗತ್ಯ ಪರಿಕರಗಳನ್ನು ಒದಗಿಸಲು ಭಾರತ ಸರ್ಕಾರ ನಿರ್ಧರಿಸಿದೆ. ಇದಕ್ಕಾಗಿ ಟೆಂಟ್ ಮತ್ತು ಬ್ಲಾಂಕೆಟ್ಗಳನ್ನು ಹೊತ್ತ ಭಾರತೀಯ ವಾಯುಪಡೆಯ ವಿಮಾನ ಉತ್ತರ ಪ್ರದೇಶದ ಹಿಂಡನ್ ವಾಯುನೆಲೆಯಿಂದ ಟೇಕಾಫ್ ಆಗಲಿದೆ.
#WATCH Indian Air Force aircraft carrying tents, blankets and other humanitarian aid to take off from Hindon airbase shortly#Ukraine pic.twitter.com/gNNnghETQr
— ANI (@ANI) March 2, 2022
ಉಕ್ರೇನ್‌ನಲ್ಲಿ ಸಿಲುಕಿದ ತುಮಕೂರು ವಿದ್ಯಾರ್ಥಿನಿ: ಪೋಷಕರ ಆತಂಕ
ರಷ್ಯಾ-ಉಕ್ರೇನ್ ಸಂಘರ್ಷದಲ್ಲಿ ತುಮಕೂರಿನ ವಿದ್ಯಾರ್ಥಿನಿ ಪ್ರತಿಭಾ ಸಿಲುಕಿದ್ದಾರೆ. ಅವರ ಪೋಷಕರು ಕಂಗಾಲಾಗಿದ್ದಾರೆ. ಹಾವೇರಿಯ ನವೀನ್ ಮೃತಪಟ್ಟ ನಂತರ ಉಕ್ರೇನ್‌ನಲ್ಲಿ ಸಿಲುಕಿರುವ ಭಾರತೀಯ ವಿದ್ಯಾರ್ಥಿಗಳ ಪೋಷಕರಲ್ಲಿ ಆತಂಕ ಮನೆಮಾಡಿದೆ. ತುಮಕೂರಿನ ಪ್ರತಿಭಾ ಅವರು ಗೆಳತಿಯೊಂದಿಗೆ ಸದ್ಯ ಖಾರ್ಕಿವ್ ನಗರದಿಂದ ಟ್ಯಾಕ್ಸಿ ಮಾಡಿಕೊಂಡು ಗಡಿಯತ್ತ ಹೊರಟಿದ್ದಾರೆ. ಸಂಜೆಯವರೆಗೂ ನಮಗೂ ಆತಂಕ ಇದೆ. ಬೆಳಿಗ್ಗೆಯಿಂದಲೂ ನಮ್ಮ ಮಗಳು ವಿಡಿಯೊ ಕಾಲ್ ಮೂಲಕ ಮಾತನಾಡುತ್ತಿದ್ದಾಳೆ. ಸದ್ಯ ಸರ್ಕಾರ ನಮ್ಮ ಮಕ್ಕಳನ್ನ ಸುರಕ್ಷಿತವಾಗಿ ಕರೆತರಲಿ ಎಂಬ ಮನವಿ ನಮ್ಮದು ಎಂದು ಟಿವಿ9ಗೆ ಪ್ರತಿಭಾ ಅವರ ತಾಯಿ ರಾಜೇಶ್ವರಿ ಹಾಗೂ ಬಸವರಾಜ್ ಹೇಳಿಕೆ ನೀಡಿದರು.
ಉಕ್ರೇನ್‌ನಿಂದ ಕೊಡಗಿಗೆ ಸುರಕ್ಷಿತವಾಗಿ ಆಗಮಿಸಿದ ವಿದ್ಯಾರ್ಥಿನಿ
ಉಕ್ರೇನ್‌ನಲ್ಲಿ ವೈದ್ಯಕೀಯ ಶಿಕ್ಷಣ ಪಡೆಯುತ್ತಿದ್ದ ಕೊಡಗು ಜಿಲ್ಲೆ ವಿರಾಜಪೇಟೆ ತಾಲ್ಲೂಕು ಗೋಣಿಕೊಪ್ಪಲು ಗ್ರಾಮದ ಮದೀಹ (21) ತವರೂರಿಗೆ ಸುರಕ್ಷಿತವಾಗಿ ಬಂದಿದ್ದಾರೆ. ರಕ್ಷಣೆಯ ಬಳಿಕ ನನಗೆ ಮರು ಜನ್ಮ ಸಿಕ್ಕಂತೆ ಆಗಿದೆ. ಭಾರತೀಯ ರಾಯಭಾರ ಕಚೇರಿಗೆ ಧನ್ಯವಾದ ಅರ್ಪಿಸುತ್ತೇನೆ. ನವೀನ್ ಸಾವು ತುಂಬಾ ಬೇಸರ ತಂದಿದೆ. ಉಕ್ರೇನ್‌ನಲ್ಲಿ ಉಳಿದಿರುವ ಇತರ ವಿದ್ಯಾರ್ಥಿಗಳನ್ನೂ ಸರ್ಕಾರ ಆದಷ್ಟೂ ಬೇಗ ರಕ್ಷಿಸಿ ಕರೆತರಬೇಕು ಎಂದು ಕೋರಿದ್ದಾರೆ.
ಮಗಳನ್ನು ಕರೆತನ್ನಿ: ಬೀದರ್ ಪೋಷಕರ ಕಣ್ಣೀರ ಮನವಿ
ಹೇಗಾದರೂ ಮಾಡಿ ಯುದ್ಧ ಪೀಡಿತ ಉಕ್ರೇನ್‌ನಲ್ಲಿ ಸಿಲುಕಿರುವ ಮಗಳನ್ನು ಕರೆತನ್ನಿ ಎಂದು ಬಸವಕಲ್ಯಾಣ ತಾಲ್ಲೂಕು ನಾರಾಯಣಪುರ ಗ್ರಾಮದ ಪೋಷಕರು ಮನವಿ ಮಾಡಿದ್ದಾರೆ. ಎಂಬಿಬಿಎಸ್ ಓದುತ್ತಿರುವ ವೈಷ್ಣವಿ ಪಾಟೀಲ್ ಉಕ್ರೇನ್‌ನ ಖಾರ್ಕಿವ್‌ನಲ್ಲಿ ಸಿಲುಕಿದ್ದಾರೆ. ಅನ್ನ, ನೀರಿಲ್ಲದೇ ಬಂಕರ್‌ನಲ್ಲಿ ವಾಸವಿರುವ ಮಗಳನ್ನು ಕರೆತರುವಂತೆ ಪಾಲಕರ ವಿನಂತಿ ಮಾಡಿಕೊಂಡಿದ್ದಾರೆ. ನಿನ್ನೆಯಿಂದ ಫೋನ್ ಸಂಪರ್ಕಕ್ಕೆ ವೈಷ್ಣವಿ ಸಿಗುತ್ತಿಲ್ಲ ಎಂದು ಸಂಬಂಧಿಕರು ತಿಳಿಸಿದ್ದಾರೆ.
ಈ ಗೆಲುವಿಗೆ ಅವರು ಶಿಕ್ಷೆ ಅನುಭವಿಸುತ್ತಾರೆ: ಬೈಡೆನ್
ಉಕ್ರೇನ್ ವಿರುದ್ಧ ದಾಳಿ ನಡೆಸಿದ ರಷ್ಯಾ ಯುದ್ಧಭೂಮಿಯಲ್ಲಿ ಜಯಗಳಿಸಿರಬಹುದು. ಆದರೆ ಈ ದುಸ್ಸಾಹಸಕ್ಕೆ ಅವರು ಮುಂದಿನ ದಿನಗಳಲ್ಲಿ ತಕ್ಕ ಬೆಲೆ ತೆರುತ್ತಾರೆ. ನಾವು ಹಾಗೆ ಮಾಡುತ್ತೇವೆ ಎಂದು ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ವಿರುದ್ಧ ಅಮೆರಿಕ ಅಧ್ಯಕ್ಷ ಜೋ ಬೈಡೆನ್ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಭವಿಷ್ಯದಲ್ಲಿ ಏನಾಗಲಿದೆ ಎಂಬುದು ಪುಟಿನ್ಗೆ ತಿಳಿದಿಲ್ಲ. ಕೆಲವು ನಿರ್ಬಂಧಗಳಿಂದ ರಷ್ಯಾವನ್ನು ಉಸಿರುಗಟ್ಟಿಸುತ್ತಿದ್ದೇವೆ. ಇದು ರಷ್ಯಾದ ಆರ್ಥಿಕ ಶಕ್ತಿಯನ್ನು ಕುಗ್ಗಿಸುತ್ತದೆ. ಮುಂಬರುವ ವರ್ಷಗಳಲ್ಲಿ ರಷ್ಯಾ ಮಿಲಿಟರಿ ದುರ್ಬಲಗೊಳ್ಳಲಿದೆ ಎಂದು ಸ್ಟೇಟ್ ಆಫ್ ದಿ ಯೂನಿಯನ್ ಭಾಷಣದಲ್ಲಿ ಅವರು ಎಚ್ಚರಿಸಿದರು.
ಐರೋಪ್ಯ ಒಕ್ಕೂಟದ ವಿತ್ತ ಸಚಿವರ ಸಭೆ
ಉಕ್ರೇನ್-ರಷ್ಯಾ ನಡುವೆ ಸಂಘರ್ಷ ಮುಂದುವರಿದಿರುವ ಹಿನ್ನೆಲೆಯಲ್ಲಿ ಐರೋಪ್ಯ ಒಕ್ಕೂಟ ಹಣಕಾಸು ಸಚಿವರ ಸಭೆ ಆರಂಭವಾಗಿದ್ದು, ಯುದ್ಧದಿಂದ ಆಗಬಹುದಾದ ಆರ್ಥಿಕ ದುಷ್ಪರಿಣಾಮಗಳನ್ನು ಕಡಿಮೆ ಮಾಡುವ ಕುರಿತು ಚರ್ಚೆ ನಡೆಯುತ್ತಿದೆ.
ಉಕ್ರೇನ್‌ನ ಪ್ರಮುಖ ನಗರ ಖಾರ್ಕಿವ್ಗೆ ರಷ್ಯಾ ಸೇನೆ ಪ್ರವೇಶ
ಉಕ್ರೇನ್‌ನ ಎರಡನೇ ದೊಡ್ಡ ನಗರ ಖಾರ್ಕಿವ್ಗೆ ರಷ್ಯಾ ಸೇನೆ ಪ್ರವೇಶಿಸಿದೆ. ಹೆಲಿಕಾಪ್ಟರ್‌ಗಳಿಂದ ಪ್ಯಾರಾಚೂಟ್ ಸಹಾಯದಿಂದ ಇಳಿದ ರಷ್ಯಾ ಸೈನಿಕರು ನಗರದಲ್ಲಿ ಗಸ್ತು ಆರಂಭಿಸಿದ್ದಾರೆ. ಖಾರ್ಕಿವ್‌ನ ರಸ್ತೆಗಳಲ್ಲಿ ಗುಂಡಿನ ಚಕಮಕಿ ನಡೆಯುತ್ತಿದೆ.
ಉಕ್ರೇನ್‌ನ ಐದು ನಗರಗಳ ಮೇಲೆ ರಷ್ಯಾ ಕಣ್ಣು
ರಾಜಕೀಯ ಮತ್ತು ಯುದ್ಧ ವಿಶ್ಲೇಷಕರ ಪ್ರಕಾರ ರಷ್ಯಾ ಸೇನೆಯು ಉಕ್ರೇನ್ ದೇಶದ ಐದು ಪ್ರಮುಖ ನಗರಗಳನ್ನು ವಶಪಡಿಸಿಕೊಳ್ಳಲು ಹವಣಿಸುತ್ತಿದೆ. ಅವುಗಳು ಯಾವು ಮತ್ತು ಪುಟಿನ್ ಯಾಕೆ ಈ ನಗರಗಳ ಮೇಲೆ ಕಣ್ಣಿಟ್ಟಿದ್ದಾರೆ ಎಂಬ ಮಾಹಿತಿ ಇಲ್ಲಿದೆ.
ಉಕ್ರೇನ್‌ನ ಐದು ಪ್ರಮುಖ ನಗರಗಳನ್ನು ವಶಡಿಸಿಕೊಳ್ಳಲು ರಷ್ಯಾ ಯಾಕೆ ಹವಣಿಸುತ್ತಿದೆ? ಮಾಹಿತಿ ಇಲ್ಲಿದೆ#Ukraine #RussiaUkraine #UkraineRussiaWar https://t.co/D745a1Dwz9
— TV9 Kannada (@tv9kannada) March 2, 2022
ಉಕ್ರೇನ್ ಮೇಲೆ ರಷ್ಯಾದಿಂದ ವ್ಯಾಕ್ಯೂಮ್ ಬಾಂಬ್ ದಾಳಿ
ಉಕ್ರೇನ್ ವಿರುದ್ಧದ ಕಾರ್ಯಾಚರಣೆಯಲ್ಲಿ ರಷ್ಯಾ ಸೇನೆಯು ಕ್ಲಸ್ಟರ್ ಬಾಂಬ್ ಮತ್ತು ವಾಕ್ಯೂಮ್ ಬಾಂಬ್ಗಳನ್ನೂ ಬಳಸಿದೆ. ಈ ಬಾಂಬ್ಗಳ ಬಳಕೆಯನ್ನು ಮಾನವ ಹಕ್ಕುಗಳಿಗಾಗಿ ಹೋರಾಡುವ ಅಮ್ನೆಸ್ಟಿ ಇಂಟರ್ನ್ಯಾಶನಲ್ ಮತ್ತು ಹ್ಯೂಮನ್ ರೈಟ್ಸ್ ವಾಚ್ ಸೇರಿ ಇನ್ನೂ ಅನೇಕ ಅಂತಾರಾಷ್ಟ್ರೀಯ ಸಂಸ್ಥೆಗಳು ಖಂಡಿಸಿವೆ. ಸ್ಫೋಟಗೊಂಡ ಪ್ರದೇಶದ ಸುತ್ತಮುತ್ತ ಇರುವ ಎಲ್ಲ ಜೀವಿಗಳ ದೇಹವನ್ನು ಆವಿ ಮಾಡುವ ಶಕ್ತಿಯನ್ನು ಹೊಂದಿರುತ್ತದೆ.
Vacuum Bomb: ಉಕ್ರೇನ್ ಮೇಲೆ ರಷ್ಯಾದಿಂದ ವ್ಯಾಕ್ಯೂಮ್ ಬಾಂಬ್ ದಾಳಿ; ಮನುಷ್ಯ ದೇಹವನ್ನೇ ಆವಿ ಮಾಡುವ ಭಯಾನಕ ಸ್ಫೋಟಕ ಇದು !#VacuumBomb #RussiaUkraine #UkraineRussiaWar https://t.co/uE8mSqMili
— TV9 Kannada (@tv9kannada) March 2, 2022
ಭಾರತದ ಆರ್ಥಿಕತೆಯ ಮೇಲೆ ರಷ್ಯಾ- ಉಕ್ರೇನ್ ಬಿಕ್ಕಟ್ಟಿನ ಪರಿಣಾಮ
ಈಗಿನ ರಷ್ಯಾ- ಉಕ್ರೇನ್ ಬಿಕ್ಕಟ್ಟು (Russia- Ukraine Crisis) ಹಣಕಾಸು ಮಾರುಕಟ್ಟೆ, ವಿನಿಮಯ ದರ ಮತ್ತು ಕಚ್ಚಾ ತೈಲ ದರಗಳ ಮೇಲೆ ಅಲ್ಪಾವಧಿಯಲ್ಲಿ ಗಂಭೀರ ಸ್ವರೂಪದ ಪರಿಣಾಮ ಬೀರಬಹುದು ಎಂದು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (State Bank Of India) ಆರ್ಥಿಕ ತಜ್ಞರ ವರದಿ ಅಭಿಪ್ರಾಯ ದಾಖಲಿಸಿದೆ.
ರಷ್ಯಾ- ಉಕ್ರೇನ್ ಯುದ್ಧದಿಂದ ಭಾರತದ ಆರ್ಥಿಕತೆ ಮೇಲೆ ಆಗುವ ಪರಿಣಾಮಗಳೇನು ಎಂಬುದರ ವಿವರಣೆ ಇಲ್ಲಿದೆ.
Link: https://t.co/OJcK4V66Wr#RussiaVsUkraine #RussiaUkraineConflict #IndianEconomy
— TV9 Kannada (@tv9kannada) March 2, 2022
ಭಾರತ್ ಮಾತಾ ಕಿ ಜೈ; ಘೋಷಣೆ ಕೂಗಿದ ಉಕ್ರೇನ್‌ನಿಂದ ವಾಪಸಾದ ವಿದ್ಯಾರ್ಥಿಗಳು
ಉಕ್ರೇನ್‌ನಿಂದ ಭಾರತಕ್ಕೆ ವಾಪಸಾದ ವಿದ್ಯಾರ್ಥಿಗಳಿಗೆ ಸ್ವಾಗತ ಕೋರಲಾಗಿದೆ. ವಿದ್ಯಾರ್ಥಿಗಳನ್ನು ಕೇಂದ್ರ ಸಚಿವ ಡಾ. ಜಿತೇಂದ್ರ ಸಿಂಗ್ ಸ್ವಾಗತಿಸಿದ್ದಾರೆ. ದೆಹಲಿ ಏರ್‌ಪೋರ್ಟ್‌ನಲ್ಲಿ ವಿದ್ಯಾರ್ಥಿಗಳಿಗೆ ಸ್ವಾಗತ ಕೋರಲಾಗಿದೆ.
#WATCH “Bharat Mata Ki Jai” chants by Indians returning from war-torn Ukraine, at Delhi airport.
Union Minister Dr Jitendra Singh received the Indians who returned on a special flight today. pic.twitter.com/GfFPmDC6Kt
— ANI (@ANI) March 2, 2022
ಕರ್ನಾಟಕದ 13 ಜನ ವಿದ್ಯಾರ್ಥಿಗಳು ಸೇರಿ ಒಟ್ಟು 50 ಜನ ಟ್ರೈನ್ನಲ್ಲಿ ಪ್ರಯಾಣ
ಖಾರ್ಕೀವ್ನಿಂದ ಯುಜೋಹೊಡ್ ಪ್ರದೇಶಕ್ಕೆ ಟ್ರೈನ್ ಮೂಲಕ ವಿದ್ಯಾರ್ಥಿಗಳು ಹೊರಟಿರುವ ಬಗ್ಗೆ ಮಾಹಿತಿ ಲಭಿಸಿದೆ. ಕರ್ನಾಟಕದ 13 ಜನ ವಿದ್ಯಾರ್ಥಿಗಳು ಸೇರಿ ಒಟ್ಟು 50 ಜನ ಟ್ರೈನ್ ನಲ್ಲಿ ಪ್ರಯಾಣ ನಡೆಸುತ್ತಿದ್ದಾರೆ ಎಂದು ತಿಳಿದುಬಂದಿದೆ. ಪೋಲ್ಯಾಂಡ್ ಹಾಗೂ ರುಮೇನಿಯಾ ಗಡಿಯಲ್ಲಿರುವ ಯುಜೊಹೊಡ್ ಸಿಟಿಗೆ ವಿದ್ಯಾರ್ಥಿಗಳು ಪ್ರಯಾಣ ನಡೆಸುತ್ತಿದ್ದಾರೆ. ಖಾರ್ಕೀವ್ನಿಂದ ಹನ್ನೆರಡು ಕಿ.ಮೀ. ನಡೆದು ರೈಲ್ವೇ ನಿಲ್ದಾಣ ಸೇರಿದ್ದ ವಿದ್ಯಾರ್ಥಿಗಳು ಖಾರ್ಕೀವ್ ನಿಂದ 1500 ಕಿ.ಮೀ. ದೂರದಲ್ಲಿರುವ ಯುಜೊಹೊಡ್ ಸಿಟಿಗೆ ಹೊರಟಿದ್ದಾರೆ. ಕೋಲಾರದ ವಿದ್ಯಾರ್ಥಿನಿ ವರ್ಷಿತಾರಿಂದ ಈ ಬಗ್ಗೆ ಮಾಹಿತಿ ಲಭಿಸಿದೆ.
ಉಕ್ರೇನ್‌ನಿಂದ ಭಾರತಕ್ಕೆ ವಾಪಸಾದ ವಿದ್ಯಾರ್ಥಿಗಳಿಗೆ ಸ್ವಾಗತ
ಉಕ್ರೇನ್‌ನಿಂದ ಭಾರತಕ್ಕೆ ವಾಪಸಾದ ವಿದ್ಯಾರ್ಥಿಗಳಿಗೆ ಸ್ವಾಗತ ಕೋರಲಾಗಿದೆ. ವಿದ್ಯಾರ್ಥಿಗಳನ್ನು ಕೇಂದ್ರ ಸಚಿವ ಡಾ. ಜಿತೇಂದ್ರ ಸಿಂಗ್ ಸ್ವಾಗತಿಸಿದ್ದಾರೆ. ದೆಹಲಿ ಏರ್‌ಪೋರ್ಟ್‌ನಲ್ಲಿ ವಿದ್ಯಾರ್ಥಿಗಳಿಗೆ ಸ್ವಾಗತ ಕೋರಲಾಗಿದೆ.
ಉಕ್ರೇನ್‌ನ ಖೆರ್ಸಾನ್ ನಗರವನ್ನು ವಶಕ್ಕೆ ಪಡೆದುಕೊಂಡ ರಷ್ಯಾ
ಉಕ್ರೇನ್‌ನ ಟಿವಿ ಟವರ್ ಮೇಲೆ ರಷ್ಯಾ ದಾಳಿ ಮಾಡಿದ್ದು ಐವರ ಸಾವು ಸಂಭವಿಸಿದೆ. ಉಕ್ರೇನ್‌ನಲ್ಲಿ ಟಿವಿ ಚಾನಲ್ ಪ್ರಸಾರ ಸ್ಥಗಿತಗೊಂಡಿದೆ. ಉಕ್ರೇನ್‌ನ ಖೆರ್ಸಾನ್ ನಗರವನ್ನು ರಷ್ಯಾ ವಶಕ್ಕೆ ಪಡೆದುಕೊಂಡಿದೆ. ಕೀವ್, ಖಾರ್ಕಿವ್‌ನಲ್ಲಿ ರಷ್ಯಾ ದಾಳಿ ಮುಂದುವರಿದಿದೆ.
ಭಾರತ ಸರ್ಕಾರ ಏರ್‌ಲಿಫ್ಟ್ ಚುರುಕುಗೊಳಿಸಬೇಕು: ಬುಕಾರೆಸ್ಟ್‌ನಲ್ಲಿ ಭಾರತೀಯ ವಿದ್ಯಾರ್ಥಿ ಹೇಳಿಕೆ
ಕೇಂದ್ರ ಸರ್ಕಾರ ನಮಗೆ ಸಹಾಯ ಮಾಡಿದೆ. ಸರ್ಕಾರದ ಸಹಾಯದಿಂದ ನಮಗೆ ಸಂತೋಷವಾಗಿದೆ ಎಂದು ಬುಕಾರೆಸ್ಟ್‌ನಲ್ಲಿ ಭಾರತೀಯ ವಿದ್ಯಾರ್ಥಿ ಹೇಳಿಕೆ ನೀಡಿದ್ದಾರೆ. ಭಾರತ ಸರ್ಕಾರ ಏರ್‌ಲಿಫ್ಟ್ ಚುರುಕುಗೊಳಿಸಬೇಕು. ರೊಮೇನಿಯಾದಲ್ಲಿ ಭಾರತೀಯರು ತೊಂದರೆಯಾಗ್ತಿದೆ. ಹೀಗಾಗಿ ಆದಷ್ಟು ಬೇಗ ಏರ್‌ಲಿಫ್ಟ್ ಮಾಡಬೇಕಾಗಿದೆ ಎಂದು ರೊಮೇನಿಯಾದ ಬುಕಾರೆಸ್ಟ್‌ನಲ್ಲಿ ವಿದ್ಯಾರ್ಥಿ ತಿಳಿಸಿದ್ದಾರೆ.
ಉಕ್ರೇನ್‌ನಲ್ಲಿ ರಾಯಚೂರು ಮೂಲದ ಪ್ರಜ್ವಲ್ ಕಂಗಾಲು
ಉಕ್ರೇನ್ ಮೇಲೆ ರಷ್ಯಾ ಯುದ್ಧ ಸಾರಿರುವ ಹಿನ್ನೆಲೆ ಉಕ್ರೇನ್‌ನಲ್ಲಿ ರಾಯಚೂರು ಮೂಲದ ಪ್ರಜ್ವಲ್ ಅಕ್ಷರಶಃ ಕಂಗಾಲಾಗಿದ್ದಾರೆ. ಕಳೆದ 5 ದಿನಗಳಿಂದ ಬಂಕರ್ ನಲ್ಲೇ ಇರೊ ಪ್ರಜ್ವಲ್, ಊಟ, ನೀರು ಸಿಗದೇ ಪರದಾಡುತ್ತಿರುವ ಬಗ್ಗೆ ಮಾಹಿತಿ ಲಭಿಸಿದೆ. ಊಟ ಬೇಕಂದ್ರೆ ಹೊರ ಹೋಗಬೇಕಾದ ಪರಿಸ್ಥಿತಿ ಇದೆ. ಹೊರಗೆ ಹೋದ್ರೆ ಎಲ್ಲೆಂದರಲ್ಲಿ ಶೆಲ್ ದಾಳಿ ನಡೆಯುತ್ತಿದೆ ಎಂದು ತಿಳಿದುಬಂದಿದೆ. ಹೊರಗಡೆ ಕರ್ಫ್ಯೂ, ಮಾರ್ಷಲ್ಗಳಿಂದ ಸಮಸ್ಯೆ ಆಗುತ್ತಿದೆ. ಸರಿಯಾದ ವ್ಯವಸ್ಥೆಯಿಲ್ಲದ ಕಾರಣ ಬಂಕರ್‌ನಲ್ಲಿ ಇರುವವರಿಗೆ ಅನಾರೋಗ್ಯ ಕಾಣಿಸಿಕೊಂಡಿದೆ.
ಬಂಕರ್ ನಲ್ಲಿರೊ ಹಲವರು ಅನಾರೋಗ್ಯಕ್ಕೆ ತುತ್ತಾಗಿದ್ದಾರೆ. ಇದರಿಂದ ಪ್ರಜ್ವಲ್ ಹೂಗಾರ್ ಕೂಡ ಆತಂಕಕ್ಕೊಳಗಾಗಿದ್ದಾರೆ ಎಂದು ತಿಳಿದುಬಂದಿದೆ. ಪೋಷಕರಿಗೆ ನಿನ್ನೆ ಕರೆ ಮಾಡಿ ತನ್ನ ಅಳಲು ತೋಡಿಕೊಂಡಿದ್ದಾರೆ. ಮಗನ ಪರಿಸ್ಥಿತಿ ಕಂಡು ಕುಟುಂಬಸ್ಥರು ಕಣ್ಣೀರಿಡುತ್ತಿದ್ದಾರೆ. ಕೂಡಲೇ ತಮ್ಮ ಮಗನನ್ನು ಕರೆತರುವಂತೆ ಕೇಂದ್ರ ಸರ್ಕಾರಕ್ಕೆ ಒತ್ತಾಯ ಮಾಡಿದ್ದಾರೆ.
ರಷ್ಯಾಗೆ ತಾಂತ್ರಿಕ ಬೆಂಬಲ ಸ್ಥಗಿತಗೊಳಿಸಿದ ಬೋಯಿಂಗ್
ಉಕ್ರೇನ್ ವಿರುದ್ಧ ರಷ್ಯಾ ಸೇನೆ ಯುದ್ಧ ಮುಂದುವರಿಸಿರುವ ಹಿನ್ನೆಲೆಯಲ್ಲಿ ರಷ್ಯಾ ವಿಶ್ವದ ಹಲವು ರಾಷ್ಟ್ರಗಳು ತಿರುಗಿಬಿದ್ದಿವೆ. ಪ್ರಮುಖ ವಿಮಾನ ನಿರ್ಮಾಣ ಮತ್ತು ನಿರ್ವಹಣಾ ಕಂಪನಿ ಬೋಯಿಂಗ್ ರಷ್ಯಾ ವಿಮಾನಯಾನ ಸಂಸ್ಥೆಗಳಿಗೆ ಸೇವೆಗಳನ್ನು ಸ್ಥಗಿತಗೊಳಿಸುವುದಾಗಿ ಘೋಷಿಸಿದೆ.
ರೊಮೆನಿಯಾದತ್ತ ಸಿ-17 ಗ್ಲೋಬ್ ಮಾಸ್ಟರ್ ವಿಮಾನ
ಉಕ್ರೇನ್‌ನಲ್ಲಿ ಸಿಲುಕಿರುವ ಭಾರತೀಯ ವಿದ್ಯಾರ್ಥಿಗಳ ಏರ್ಲಿಫ್ಟ್ಗೆಂದು ಭಾರತ ಸರ್ಕಾರವು ವಾಯುಪಡೆಯ ಸಿ-17 ಗ್ಲೋಬ್ ಮಾಸ್ಟರ್ ವಿಮಾನವನ್ನು ಕಳುಹಿಸಿದೆ. ಉತ್ತರ ಪ್ರದೇಶದ ಹಿಂಡನ್ ವಾಯುನೆಲೆಯಿಂದ ಹೊರಟಿರುವ ಈ ಬೃಹತ್ ವಿಮಾನವು ಒಂದೇ ಬಾರಿಗೆ ಹೆಚ್ಚಿನ ಸಂಖ್ಯೆಯ ವಿದ್ಯಾರ್ಥಿಗಳನ್ನು ದೇಶಕ್ಕೆ ಕರೆತರುವ ನಿರೀಕ್ಷೆಯಿದೆ.
ಮೂರು ದಿನಗಳಲ್ಲಿ ಭಾರತಕ್ಕೆ ಬಂದಿದ್ದು 26 ವಿಮಾನಗಳು
ಮೆಡಿಕಲ್ ಓದಲೆಂದು ಉಕ್ರೇನ್‌ಗೆ ತೆರಳಿದ್ದ ಭಾರತ ನವೀನ್ ಸಾವಿನ ನಂತರ ವಿದ್ಯಾರ್ಥಿಗಳ ತೆರವು ಕಾರ್ಯಾಚರಣೆ ಚುರುಕಾಗಿದೆ. ಕಳೆದ ಮೂರು ದಿನಗಳಲ್ಲಿ 26 ವಿಮಾನಗಳಲ್ಲಿ ವಿದ್ಯಾರ್ಥಿಗಳನ್ನು ಭಾರತಕ್ಕೆ ಕರೆತರಲಾಗಿದೆ.
ರಷ್ಯಾದಲ್ಲಿ ಆ್ಯಪಲ್ ಸೇವೆ ಸ್ಥಗಿತ
ರಷ್ಯಾದಲ್ಲಿ ಉತ್ಪನ್ನ ಮಾರಾಟ ವ್ಯವಹಾರವನ್ನು ಕಳೆದ ಒಂದು ವಾರದಿಂದ ಸ್ಥಗಿತಗೊಳಿಸಲಾಗಿದೆ. ರಫ್ತು ವಹಿವಾಟನ್ನೂ ನಿಲ್ಲಿಸುತ್ತಿದ್ದೇವೆ. ಆ್ಯಪಲ್ ಪೇ ಮತ್ತು ಇತರ ಸೇವೆಗಳನ್ನು ಸೀಮಿತಗೊಳಿಸಲಾಗಿದೆ ಎಂದು ಆ್ಯಪಲ್ ಕಂಪನಿ ಪ್ರಕಟಣೆಯಲ್ಲಿ ತಿಳಿಸಿದೆ.
ಕೀವ್ ನಗರದ ಎದುರು 40 ಕಿಮೀ ಉದ್ದದ ಸೇನಾ ವಾಹನಗಳು
ಉಕ್ರೇನ್ ರಾಜಧಾನಿ ಕೀವ್ ನಗರವನ್ನು ರಷ್ಯಾ ಪಡೆ ಪ್ರವೇಶಿಸುತ್ತಿದೆ. ನಗರದ ಎದುರು ಸುಮಾರು 40 ಮೈಲಿಗಳಷ್ಟು ಉದ್ದಕ್ಕೆ ರಷ್ಯಾದ ಸೇನಾ ವಾಹನಗಳು ನಿಂತಿವೆ. ಈ ದೃಶ್ಯವನ್ನು ಉಪಗ್ರಹ ಚಿತ್ರಗಳು ಸೆರೆ ಹಿಡಿದಿವೆ.
New satellite images shows that the #Russian convoy heading towards #Kyiv is actually 64 kilometers (40 miles) long, stretching from Prybirsk to Antonov Airport.
Vehicles are too close to each other, not good in case they come under attack.#Russia #Ukraine #Donbass pic.twitter.com/G4XnFzl0AH
— Indo-Pacific News – Watching the CCP-China Threat (@IndoPac_Info) March 1, 2022
ರಷ್ಯಾ ವಿರುದ್ಧ ನೇರ ಹೋರಾಟ ಇಲ್ಲ ಎಂದ ಅಮೆರಿಕ
ಉಕ್ರೇನ್ ಮತ್ತು ರಷ್ಯಾ ಸಂಘರ್ಷದಲ್ಲಿ ರಷ್ಯಾ ಮೊದಲ ದಿನದಿಂದಲೂ ಮೇಲುಗೈ ಸಾಧಿಸಿದೆ. ಯುದ್ಧರಂಗಕ್ಕೆ ಅಮೆರಿಕ ಪ್ರವೇಶಿಸಿದರೆ ಪರಿಸ್ಥಿತಿ ಬದಲಾಗಬಹುದು ಎಂದು ಈವರೆಗೆ ಹಲವು ವಿಶ್ಲೇಷಿಸಿದ್ದರು. ಆದರೆ ಇಂಥ ಊಹಾಪೋಹಗಳಿಗೆ ತೆರೆ ಎಳೆದಿರುವ ಅಮೆರಿಕ ಅಧ್ಯಕ್ಷ ಜೋ ಬೈಡೆನ್, ರಷ್ಯಾ ವಿರುದ್ಧ ನೇರ ಹೋರಾಟಕ್ಕೆ ಅಮೆರಿಕ ಮುಂದಾಗುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಸ್ಟೇಟ್ ಆಫ್ ಯೂನಿಯನ್ ಉದ್ದೇಶಿಸಿ ಮಾತನಾಡಿದ ಅವರು, ಉಕ್ರೇನ್ ಮೇಲೆ ರಷ್ಯಾ ಪೂರ್ವನಿಯೋಜಿತ ಮತ್ತು ಅಪ್ರಚೋದಿತ ದಾಳಿ ನಡೆಯುತ್ತಿದೆ. ನ್ಯಾಟೊ ದೇಶಗಳು ಉಕ್ರೇನ್ ರಕ್ಷಣೆಗೆ ಧಾವಿಸುವುದಿಲ್ಲ ಎಂದೇ ರಷ್ಯಾ ಭಾವಿಸಿಕೊಂಡಿದೆ. ಆದರೆ ನಾವು ಸುಮ್ಮನೆ ಕುಳಿತಿಲ್ಲ. ಇಡೀ ವಿಶ್ವವೇ ರಷ್ಯಾದ ನಡೆಯನ್ನು ಖಂಡಿಸಿದೆ. ಅಮೆರಿಕ ವಾಯುನೆಲೆಯಲ್ಲಿ ರಷ್ಯಾ ವಿಮಾನಗಳನ್ನು ನಿರ್ಬಂಧಿಸಲಾಗಿದೆ. ರಷ್ಯಾ ವಿರುದ್ಧ ಉಕ್ರೇನ್‌ನ ಜನರು ಧೈರ್ಯವಾಗಿ ಹೋರಾಡುತ್ತಿದ್ದಾರೆ. ನಾವು ಉಕ್ರೇನ್ ಪರ ಇರುವುದರು ನಿಜ. ಆದರೆ ರಷ್ಯಾ ವಿರುದ್ಧ ನೇರವಾಗಿ ಸಂಘರ್ಷಕ್ಕೆ ಇಳಿಯುವುದಿಲ್ಲ ಎಂದು ಹೇಳಿದ್ದಾರೆ.
ವಿಶ್ವಬ್ಯಾಂಕ್ನಿಂದ ಉಕ್ರೇನ್‌ಗೆ ತುರ್ತು ನೆರವು
ರಷ್ಯಾ ದಾಳಿಯಿಂದ ಜರ್ಝರಿತವಾಗಿರುವ ಉಕ್ರೇನ್‌ಗೆ 3 ಬಿಲಿಯನ್ ಡಾಲರ್ ತುರ್ತು ಆರ್ಥಿಕ ನೆರವು ಒದಗಿಸಲು ವಿಶ್ವಬ್ಯಾಂಕ್ ನಿರ್ಧರಿಸಿದೆ.
ಕೀವ್, ಖಾರ್ಕಿವ್ ನಗರಗಳಲ್ಲಿ ಶೇಲ್ ದಾಳಿ: 17 ಸಾವು
ಉಕ್ರೇನ್‌ನ ಕೀವ್ ಮತ್ತು ಖಾರ್ಕಿವ್ ನಗರಗಳ ಮೇಲೆ ರಷ್ಯಾ ಶೆಲ್ ದಾಳಿ ಮುಂದುವರಿಸಿದೆ. ರಷ್ಯಾ ಸೇನೆಯ ಶೆಲ್ ದಾಳಿಗೆ 11 ಜನರು ಮೃತಪಟ್ಟಿದ್ದಾರೆ. ಹಲವರಿಗೆ ಗಾಯಗಳಾಗಿವೆ ಎಂದು ಉಕ್ರೇನ್ ಅಧಿಕಾರಿಗಳು ಹೇಳಿದ್ದಾರೆ. ಉಕ್ರೇನ್‌ನ ಟಿವಿ ಟವರ್ ಮತ್ತು 2ನೇ ಮಹಾಯುದ್ಧ ಕಾಲದಲ್ಲಿ ಸಾಮೂಹಿಕ ಹತ್ಯೆಯಾಗಿದ್ದ ಯಹೂದಿಗಳ ಸ್ಮರಣಾರ್ಥ ನಿರ್ಮಿಸಿದ್ದ ಸ್ಮಾರಕ ಕೇಂದ್ರಕ್ಕೆ (holocaust memorial) ಧಕ್ಕೆಯಾಗಿದೆ ಎಂದು ಉಕ್ರೇನ್ ಹೇಳಿದೆ.
ರಷ್ಯಾ ವಿಮಾನಗಳಿಗೆ ಅಮೆರಿಕ ನಿರ್ಬಂಧ
ಅಮೆರಿಕದ ವಾಯುಪ್ರದೇಶಕ್ಕೆ ಮುಂದಿನ ದಿನಗಳಲ್ಲಿ ರಷ್ಯಾದ ವಿಮಾನಗಳಿಗೆ ಪ್ರವೇಶ ಇರುವುದಿಲ್ಲ ಎಂದು ಅಮೆರಿಕ ಅಧ್ಯಕ್ಷ ಜೋ ಬೈಡೆನ್ ಘೋಷಿಸಿದ್ದಾರೆ.
ರಷ್ಯಾದಲ್ಲಿ ಹೊಸ ಹೂಡಿಕೆ ಇಲ್ಲ: ಎಕ್ಸಾನ್‌ಮೊಬೈಲ್ ಘೋಷಣೆ
ರಷ್ಯಾದಲ್ಲಿ ಯಾವುದೇ ಹೊಸ ಹೂಡಿಕೆ ಮಾಡುವುದಿಲ್ಲ ಎಂದು ಅಮೆರಿಕದ ಎಕ್ಸಾನ್‌ಮೊಬೈಲ್ ಕಂಪನಿ ಘೋಷಿಸಿದೆ. ಸಖಾಲಿನ್-1 ಯೋಜನೆಯ ಅನ್ವಯ ಜಪಾನ್, ಭಾರತ ಮತ್ತು ರಷ್ಯಾದ ವಿವಿಧ ಕಂಪನಿಗಳೊಂದಿಗೆ ಎಕ್ಸಾನ್‌ಮೊಬೈಲ್ ಕಾರ್ಯನಿರ್ವಹಿಸುತ್ತಿದೆ. ಇದೀಗ ಕಂಪನಿಯು ರಷ್ಯಾದಲ್ಲಿ ಯಾವುದೇ ಹೊಸ ಹೂಡಿಕೆ ಮಾಡುವುದಿಲ್ಲ ಎಂದು ಘೋಷಿಸಿದೆ.
We issued the following statement regarding the situation in Ukraine today. https://t.co/TVF1yL3Ga6 pic.twitter.com/d29DWVEzDz
— ExxonMobil (@exxonmobil) March 2, 2022
ರಷ್ಯಾದ ಹಡಗುಗಳಿಗೆ ನಿರ್ಬಂಧ ವಿಧಿಸಲು ಚಿಂತನೆ
ಉಕ್ರೇನ್ ಮೇಲೆ ರಷ್ಯಾ ಯುದ್ಧ ಮುಂದುವರಿಸಿರುವ ಹಿನ್ನೆಲೆಯಲ್ಲಿ ರಷ್ಯಾದ ಹಡಗುಗಳನ್ನು ತಮ್ಮ ದೇಶಗಳ ಬಂದರು ಬಳಕೆಯಿಂದ ನಿರ್ಬಂಧ ವಿಧಿಸಲು ಯುರೋಪ್ ಒಕ್ಕೂಟದ ರಾಷ್ಟ್ರಗಳು ಚಿಂತನೆ ನಡೆಸಿವೆ. ಈ ನಿರ್ಬಂಧ ಜಾರಿಯಾದರೆ ರಷ್ಯಾ ಮತ್ತಷ್ಟು ಆರ್ಥಿಕ ಸಂಕಷ್ಟಕ್ಕೆ ಗುರಿಯಾಗುತ್ತದೆ.
ಬುಡೋಮಿಯರ್ಜ್ ಗಡಿಯತ್ತ ಬರಲು ಭಾರತೀಯರಿಗೆ ಸೂಚನೆ
ಉಕ್ರೇನ್‌ನಲ್ಲಿ ಸಿಲುಕಿರುವ ಭಾರತೀಯರಿಗೆ ಪೋಲೆಂಡ್‌ನಲ್ಲಿರುವ ರಾಯಭಾರ ಕಚೇರಿಯು ತುರ್ತು ಸಂದೇಶ ರವಾನಿಸಿದ್ದು, ಬುಡೋಮಿಯರ್ಜ್ ಗಡಿಗೆ ಬರಲು ಸೂಚನೆ ನೀಡಿದೆ. ಉಕ್ರೇನ್, ಪೋಲೆಂಡ್ ಗಡಿಯಲ್ಲಿರುವ ಬುಡೋಮಿಯರ್ಜ್ನಲ್ಲಿ ಭಾರತೀಯರಿಗೆ ಆಹಾರ ವಸತಿ ಸೇರಿ ಅಗತ್ಯ ವ್ಯವಸ್ಥೆ ಮಾಡಲಾಗಿದೆ. ಶೆಹೈನಿ-ಮೆಡಿಕಾ ಗಡಿಗೆ ಬರಬೇಡಿ ಎಂದು ಅಧಿಕಾರಿಗಳು ಹೇಳಿದ್ದಾರೆ.
Urgent advisory to Indian nationals in Ukraine@MEAIndia @opganga @IndiainUkraine pic.twitter.com/5TWmb93Lbw
— India in Poland and Lithuania (@IndiainPoland) March 1, 2022
ಉಕ್ರೇನ್‌ನಿಂದ ಏರ್‌ಲಿಫ್ಟ್ ಕಾರ್ಯಾಚರಣೆ ಚುರುಕು
ಉಕ್ರೇನ್‌ನಲ್ಲಿ ಸಿಲುಕಿರುವ ಭಾರತೀಯರ ಏರ್‌ಲಿಫ್ಟ್ ಕಾರ್ಯಾಚರಣೆ ಚುರುಕಾಗಿದೆ. ಆಪರೇಷನ್ ಗಂಗಾ ಹೆಸರಿನಲ್ಲಿ ಏರ್‌ಲಿಫ್ಟ್ ಕಾರ್ಯಾಚರಣೆ ಆರಂಭವಾಗಿದ್ದು ಈಗಾಗಲೇ ಸಾಕಷ್ಟು ವಿಮಾನಗಳು ಉಕ್ರೇನ್‌ನಿಂದ ಭಾರತಕ್ಕೆ ಬಂದಿವೆ. ರಾಯಭಾರ ಕಚೇರಿ ಅಧಿಕಾರಿಗಳ ಜತೆ ಕೇಂದ್ರ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ಮಾತುಕತೆ ನಡೆಸಿದ್ದಾರೆ. ಭಾರತದ ವಿದೇಶಾಂಗ ವ್ಯವಹಾರಗಳ ಇಲಾಖೆಯು ರೊಮೇನಿಯಾ, ಮೊಲ್ಡೊವಾ ಅಧಿಕಾರಿಗಳ ಜತೆ ನಿರಂತರ ಸಂಪರ್ಕದಲ್ಲಿದೆ.
ಉಕ್ರೇನ್‌ನಲ್ಲಿ ಸಿಲುಕಿರುವ ಭಾರತೀಯರು ಮಲ್ಡೋವಾ ಗಡಿಗೆ ತುರ್ತಾಗಿ ಬರಲು ಪ್ರಯತ್ನಿಸಬೇಕು. ಅಲ್ಲಿ ವಸತಿ, ಆಹಾರ ವ್ಯವಸ್ಥೆ ಮಾಡಲಾಗಿದೆ. ಅಲ್ಲಿಂದ ಬಂದವರಿಗೆ ಏರ್‌ಲಿಫ್ಟ್ ಮಾಡಲು ಸಿದ್ಧತೆ ಮಾಡಿಕೊಳ್ಳಲಾಗಿದೆ.
Moldova’s borders have been opened for incoming Indian students. Proper shelter and food arrangements will be made.
Talks are on to make arrangements for their journey to Bucharest for onward flight to India. @MEAIndia @DrSJaishankar @PMOIndia #OperationGanga
— Jyotiraditya M. Scindia (@JM_Scindia) March 1, 2022
ಸ್ವಂತ ಮಗನ ಸಾವಿನ ದುಃಖದಲ್ಲಿಯೂ ಇತರ ಮಕ್ಕಳ ಚಿಂತೆ ಮಾಡುತ್ತಿರುವ ನವೀನ್ ತಂದೆ ಶೇಖರ್‌ಗೌಡ
ಮಗ ನವೀನ್ ಸಾವಿನಿಂದ ಕುಗ್ಗಿರುವ ತಂದೆ ಶೇಖರ್‌ಗೌಡ ತೀವ್ರ ಮಾನಸಿಕ ಒತ್ತಡಕ್ಕೆ ಗುರಿಯಾಗಿದ್ದಾರೆ. ಲಕ್ಷಾಂತರ ರೂಪಾಯಿ ಸಾಲ ಮಾಡಿ ಮಗನನ್ನ ವೈದ್ಯಕೀಯ ವಿದ್ಯಾಭ್ಯಾಸಕ್ಕಾಗಿ ಉಕ್ರೇನ್‌ಗೆ ಕಳಿಸಿದ್ದರು. ನನ್ನ ಮಗನ ಪರಿಸ್ಥಿತಿ ಇತರರಿಗೆ ಬರಬಾರದು, ವಿದ್ಯಾರ್ಥಿಗಳನ್ನ ಸುರಕ್ಷಿತವಾಗಿ ಸ್ವದೇಶಕ್ಕೆ ಕರೆತರಬೇಕು ಎಂದು ಅವರು ಎಲ್ಲರಿಗೂ ಕೈಮುಗಿದು ಬೇಡುತ್ತಿದ್ದಾರೆ. ಶೇಖರಗೌಡ ಸಾಮಾಜಿಕ ಕಳಕಳಿ ಕಂಡು ಗಣ್ಯರು ಕಣ್ಣೀರು ಹಾಕುತ್ತಿದ್ದಾರೆ. ಇಂತಹ ಸಂದಿಗ್ಧ ಸ್ಥಿತಿಯಲ್ಲಿಯೂ ಇತರ ವಿದ್ಯಾರ್ಥಿಗಳ ಬಗ್ಗೆ ಚಿಂತೆ ಮಾಡುತ್ತಿರುವ ಶೇಖರಗೌಡ.
ಉಕ್ರೇನ್‌ನಲ್ಲಿ ಮೃತಪಟ್ಟ ನವೀನ್ ಪಾರ್ಥಿವ ಶರೀರ ಸ್ವಗ್ರಾಮ ಚಳಗೇರಿಗೆ ತರಲು ಪೋಷಕರ ಮನವಿ
ಉಕ್ರೇನ್‌ನ ಖಾರ್ಕಿವ್‌ನಲ್ಲಿ ಮೃತಪಟ್ಟ ಕರ್ನಾಟಕದ ವಿದ್ಯಾರ್ಥಿ ನವೀನ್ ಅವರ ಕುಟುಂಬಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಎರಡು ಬಾರಿ ಕರೆ ಮಾಡಿ ಸಾಂತ್ವನ ಹೇಳಿದರು. ನವೀನ್ ಮೃತದೇಹವನ್ನು ಸ್ವಗ್ರಾಮ ರಾಣೆಬೆನ್ನೂರು ತಾಲ್ಲೂಕಿನ ಚಳಗೇರಿಗೆ ತರಲು ಈ ಸಂಸರ್ಭ ನವೀನ್ ತಂದೆ ಶೇಖರ್‌ಗೌಡ ಮನವಿ ಮಾಡಿದರು. ಜಿಲ್ಲಾ ಉಸ್ತುವಾರಿ ಸಚಿವ ಶಿವರಾಂ ಹೆಬ್ಬಾರ್, ಸಂಸದ ಶಿವಕುಮಾರ್ ಉದಾಸಿ, ಅರುಣ್ ಕುಮಾರ್ ಅವರನ್ನು ಗ್ರಾಮಸ್ಥರು ಒತ್ತಾಯಿಸುತ್ತಿದ್ದಾರೆ. ಚಳಗೇರಿಗೆ ಜನಪ್ರತಿನಿಧಿಗಳು, ಗಣ್ಯರ ಆಗಮನ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಭದ್ರತೆಗಾಗಿ ಪೊಲೀಸರನ್ನು ನಿಯೋಜಿಸಲಾಗಿದೆ.
Published On - Mar 02,2022 6:53 AM