Russia Ukraine War: ಉಕ್ರೇನ್ಗೆ ಯುದ್ಧ ಟ್ಯಾಂಕ್ ಒದಗಿಸುವ ಜರ್ಮನಿ ಭರವಸೆ ಬೆನ್ನಿಗೇ ರಷ್ಯಾದಿಂದ ತೀವ್ರ ದಾಳಿ; ಕುಸಿಯಿತು ವಿದ್ಯುತ್ ವಿತರಣೆ
ಉಕ್ರೇನ್ನ ವಿದ್ಯುತ್ ವಿತರಣಾ ಜಾಲವನ್ನು ಗುರಿಯಾಗಿಸಿ ರಷ್ಯಾ ನಡೆಸಿದ ಕ್ಷಿಪಣಿ ದಾಳಿಯಲ್ಲಿ ಕನಿಷ್ಠ 11 ಮಂದಿ ಸಾವನ್ನಪ್ಪಿದ್ದಾರೆ.
ಕೀವ್: ರಷ್ಯಾ ವಿರುದ್ಧದ ಯುದ್ಧಕ್ಕೆ (Russia Ukraine War) ತಮ್ಮ ಯುದ್ಧಟ್ಯಾಂಕ್ಗಳನ್ನು ಕಳಿಸಿಕೊಡುವುದಾಗಿ ಜರ್ಮನಿ (Leopard-2) ಮತ್ತು ಅಮೆರಿಕ ಭರವಸೆ ನೀಡಿದ ಬೆನ್ನಿಗೇ ಕದನ ತೀವ್ರಗೊಂಡಿದೆ. ಉಕ್ರೇನ್ನ ವಿದ್ಯುತ್ ವಿತರಣಾ ಜಾಲವನ್ನು ಗುರಿಯಾಗಿಸಿ ರಷ್ಯಾ ನಡೆಸಿದ ಕ್ಷಿಪಣಿ ದಾಳಿಯಲ್ಲಿ ಕನಿಷ್ಠ 11 ಮಂದಿ ಸಾವನ್ನಪ್ಪಿದ್ದಾರೆ. ರಾಜಧಾನಿ ಕೀವ್ ಸೇರಿದಂತೆ ಹಲವು ನಗರಗಳಲ್ಲಿ ವಿದ್ಯುತ್ ಪೂರೈಕೆ ಸ್ಥಗಿತಗೊಂಡಿದೆ. ಚಳಿಗಾಲ ತೀವ್ರಗೊಂಡಿರುವುದರಿಂದ ತಾಪಮಾನ ಶೂನ್ಯದ ಸಮೀಪಕ್ಕೆ ಬಂದಿದ್ದು ಉಕ್ರೇನ್ನಲ್ಲಿ ಜನಜೀವನ ಅಸ್ತವ್ಯಸ್ತಗೊಂಡಿದೆ.
ರಷ್ಯಾ ವಿರುದ್ಧದ ಉಕ್ರೇನ್ ಹೋರಾಟದ ಗತಿ ಬದಲಿಸುವ ನಿರ್ಧಾರ ಎಂದು ಜರ್ಮನಿಯ ತೀರ್ಮಾನವನ್ನು ವಿಶ್ಲೇಷಿಸಲಾಗುತ್ತಿದೆ. ಜರ್ಮನಿ ಮತ್ತು ಅದರ ನ್ಯಾಟೊ ಮಿತ್ರರಾಷ್ಟ್ರಗಳಿಂದ ಇದೀಗ ಉಕ್ರೇನ್ಗೆ ಯುದ್ಧಟ್ಯಾಂಕ್ಗಳೂ ಸೇರಿದಂತೆ ದೊಡ್ಡಮಟ್ಟದ ನೆರವು ಹರಿದುಬರಲು ದಿಡ್ಡಿಬಾಗಿಲು ತೆರೆದಂತೆ ಆಗಿದೆ. ಉಕ್ರೇನ್ಗೆ ನೆರವು ಕೊಡುವುದನ್ನು ಮೊದಲಿನಿಂದಲೂ ವಿರೋಧಿಸುತ್ತಿರುವ ರಷ್ಯಾ, ಯುದ್ಧಟ್ಯಾಂಕ್ ನೀಡುವ ಯಾವುದೇ ದೇಶವು ತನ್ನ ವಿರುದ್ಧ ಸಾರಿದ ಯುದ್ಧ ಸಾರಿದಂತೆ ಎಂದು ಘೋಷಿಸಿದೆ. ಈ ಘೋಷಣೆಯ ಬೆನ್ನಿಗೇ ಉಕ್ರೇನ್ ವಿರುದ್ಧ ಕ್ಷಿಪಣಿ ದಾಳಿಯನ್ನು ತೀವ್ರಗೊಳಿಸಿದೆ.
ಯುದ್ಧಟ್ಯಾಂಕ್ಗಳನ್ನು ನೀಡಲು ಮುಂದೆ ಬಂದಿರುವ ಜರ್ಮನಿ ಮತ್ತು ಅಮೆರಿಕ ನಿರ್ಧಾರವನ್ನು ಉಕ್ರೇನ್ ಜನತೆ ಸ್ವಾಗತಿಸಿದ್ದಾರೆ. ‘ಇಂಥದ್ದೊಂದು ನಿರ್ಧಾರವನ್ನು ಈ ಮೊದಲೇ ತೆಗೆದುಕೊಳ್ಳಬೇಕಿತ್ತು. ನಮ್ಮ ದೇಶಕ್ಕೆ ಇನ್ನಷ್ಟು ನೆರವಿನ ಅಗತ್ಯವಿದೆ’ ಎಂದು ಉಕ್ರೇನ್ನ ಜನರು ಸಾಮಾಜಿಕ ಮಾಧ್ಯಮಗಳಲ್ಲಿ ಬರೆದುಕೊಳ್ಳುತ್ತಿದ್ದಾರೆ.
ಉಕ್ರೇನ್ ಮೇಲೆ ರಷ್ಯಾ ಸುಮಾರು 55 ಕ್ಷಿಪಣಿಗಳು ಹಾರಿಬಿಟ್ಟಿದೆ. ಈ ಪೈಕಿ 47 ಕ್ಷಿಪಣಿಗಳನ್ನು ಉಕ್ರೇನ್ ವಾಯುರಕ್ಷಣಾ ವ್ಯವಸ್ಥೆ ಮಾರ್ಗಮಧ್ಯೆಯೇ ನಾಶಪಡಿಸಿವೆ. ಆದರೂ ಉಕ್ರೇನ್ನ ವಿವಿಧೆಡೆ ಭೂಸ್ಪರ್ಶ ಮಾಡಲು ಸಾಧ್ಯವಾದ ಕ್ಷಿಪಣಿಗಳು ಸ್ಫೋಟಿಸಿ, 11 ಮಂದಿ ಮೃತಪಟ್ಟಿದ್ದಾರೆ. ಉಕ್ರೇನ್ನ ವಿವಿಧೆಡೆ ರಷ್ಯಾದ ಕ್ಷಿಪಣಿಗಳ ಅವಶೇಷಗಳನ್ನು ಜನರು ಪ್ರದರ್ಶನಕ್ಕಿಟ್ಟಿದ್ದಾರೆ. ಉಕ್ರೇನ್ನ ವಿದ್ಯುತ್ ಉತ್ಪಾದನೆ ಮತ್ತು ವಿತರಣಾ ಜಾಲಗಳನ್ನು ಗುರಿಯಾಗಿಸಿ ರಷ್ಯಾ ದಾಳಿ ನಡೆಸುತ್ತಿರುವುದರಿಂದ ಇಂಧನ ಪೂರೈಕೆ ಸ್ಥಗಿತಗೊಳ್ಳುವ ಅಪಾಯ ಎದುರಾಗಿದೆ ಎಂದು ಉಕ್ರೇನ್ ಇಂಧನ ಸಚಿವ ಜರ್ಮನ್ ಗಲುಶೆಕೆಂಕೊ ದೂರಿದ್ದಾರೆ.
ರಷ್ಯಾದ ದಾಳಿ ತೀವ್ರಗೊಂಡ ಹಿನ್ನೆಲೆಯಲ್ಲಿ ಫ್ರಾನ್ಸ್ನ ವಿದೇಶಾಂಗ ವ್ಯವಹಾರಗಳ ಸಚಿವೆ ಕ್ಯಾಥರಿನ್ ಕೊಲೊನಾ ಅವರ ಉಕ್ರೇನ್ ಭೇಟಿಯಲ್ಲಿ ವ್ಯತ್ಯಯ ಉಂಟಾಯಿತು. ಉಕ್ರೇನ್ ಸರ್ಕಾರದ ಪ್ರತಿನಿಧಿಗಳೊಂದಿಗೆ ಮಾತನಾಡಲು ಬಂದಿರುವ ಅವರು, ಸದ್ಯಕ್ಕೆ ಒಡೆಸ್ಸಾದಲ್ಲಿದ್ದಾರೆ.
ಯುದ್ಧಟ್ಯಾಂಕ್ ಭರವಸೆ; ಉಕ್ರೇನ್ಗೆ ಹೊಸ ಬಲ
ಅಮೆರಿಕ 31 ಅಬ್ರಾಹಂ ಯುದ್ಧಟ್ಯಾಂಕ್ಗಳನ್ನು ಹಾಗೂ ಜರ್ಮನಿ 14 ಲೆಪಾರ್ಡ್-2 ಯುದ್ಧಟ್ಯಾಂಕ್ಗಳನ್ನು ಒದಗಿಸುವ ಭರವಸೆ ನೀಡಿವೆ. ಈ ನಿರ್ಧಾರದಿಂದ ಉತ್ತೇಜಿತರಾಗಿರುವ, ಈವರೆಗೆ ನೆರವು ನೀಡುವುದೋ-ಬೇಡವೋ ಎಂಬ ಚಿಂತನೆಯಲ್ಲಿದ್ದ ಯೂರೋಪ್ನ ಹಲವು ದೇಶಗಳು ಇದೀಗ ಬಹಿರಂಗವಾಗಿ ನೆರವು ಘೋಷಿಸಿವೆ. ಬ್ರಿಟನ್ ಸರ್ಕಾರವು ಈಗಾಗಲೇ ಉಕ್ರೇನ್ ಯೋಧರಿಗೆ ತರಬೇತಿ ಆರಂಭಿಸಿದ್ದು, ಮಾರ್ಚ್ ಅಂತ್ಯದಲ್ಲಿ ಟ್ಯಾಂಕ್ಗಳನ್ನು ಕಳಿಸಿಕೊಡುವುದಾಗಿ ಘೋಷಿಸಿದೆ.
ಈವರೆಗೆ ಉಕ್ರೇನ್ಗೆ ರಕ್ಷಣಾ (ಡಿಫೆನ್ಸ್) ಉಪಕರಣಗಳನ್ನಷ್ಟೇ ಪಶ್ಚಿಮ ದೇಶಗಳ ನಾಯಕರು ಕಳಿಸಿಕೊಟ್ಟಿದ್ದರು. ಇದರಲ್ಲಿ ಅಮೆರಿಕದ ‘ಪೇಟ್ರಿಯಾಟ್’ ವಾಯುರಕ್ಷಣಾ ವ್ಯವಸ್ಥೆಯೂ ಸೇರಿತ್ತು. ದಾಳಿಗೆ ಬಳಕೆಯಾಗುವ (ಅಫೆನ್ಸ್) ಯಾವುದೇ ಉಪಕರಣಗಳನ್ನು ಉಕ್ರೇನ್ಗೆ ಕಳಿಸಿಕೊಟ್ಟಿರಲಿಲ್ಲ. ಉಕ್ರೇನ್ಗೆ ನೆರವು ನೀಡಿದರೆ ರಷ್ಯಾದಿಂದ ವಿರೋಧ ವ್ಯಕ್ತವಾಗಬಹುದು ಎಂಬ ಭೀತಿ ಇದಕ್ಕೆ ಮುಖ್ಯ ಕಾರಣವಾಗಿತ್ತು. ರಷ್ಯಾ ದಾಳಿಗೆ ತೀವ್ರ ಪ್ರತಿರೋಧ ತೋರಿ, ಹಲವೆಡೆ ಉಕ್ರೇನ್ ಮೇಲುಗೈ ಸಾಧಿಸಿದ ನಂತರ ಇದೀಗ ಪಾಶ್ಚಿಮಾತ್ಯ ದೇಶಗಳಿಗೆ ಉಕ್ರೇನ್ ಸಾಮರ್ಥ್ಯದ ಮೇಲೆ ನಂಬಿಕೆ ಬಂದಿದ್ದು ದಾಳಿ ಉಪಕರಣಗಳನ್ನು ಕಳಿಸಿಕೊಡುತ್ತಿವೆ.
ಇದನ್ನೂ ಓದಿ: Russia Ukraine War: ಅತಿದೊಡ್ಡ ದಾಳಿಗೆ ರಷ್ಯಾ ಸಿದ್ಧತೆ; ಉಕ್ರೇನ್ಗೆ ಟ್ಯಾಂಕ್ ರವಾನಿಸಲು ಅಮೆರಿಕ, ಜರ್ಮನಿ ಸಮ್ಮತಿ
ಮತ್ತಷ್ಟು ವಿದೇಶ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ
Published On - 9:46 am, Fri, 27 January 23