ಸೌದಿ ಅರೇಬಿಯಾದಲ್ಲಿ ಮದುವೆಗೆ ಹೊಸ ನಿಯಮಗಳು; ವಿದೇಶಿ ಹುಡುಗಿ ಬೇಕು ಅಂದ್ರೆ ಇಷ್ಟೆಲ್ಲಾ ಕೆಲಸ ಮಾಡಬೇಕು
ಈಗಾಗಲೇ ಸೌದಿ ಅರೇಬಿಯಾದಲ್ಲಿ ಈ ನಾಲ್ಕು ದೇಶಗಳ 5 ಲಕ್ಷ ಮಹಿಳೆಯರು ಇದ್ದಾರೆ ಎಂದು ಅಂಕಿ ಅಂಶಗಳು ತಿಳಿಸುತ್ತವೆ ಎಂದೂ ಮಾಹಿತಿ ಲಭ್ಯವಾಗಿದೆ.
ರಿಯಾದ್: ಇಲ್ಲಿನ ಪುರುಷರು ಪಾಕಿಸ್ತಾನ, ಬಾಂಗ್ಲಾದೇಶ, ಚಡ್ ಹಾಗೂ ಮಯನ್ಮಾರ್ನ ಮಹಿಳೆಯರನ್ನು ಮದುವೆ ಆಗಬಾರದು ಎಂದು ಸೌದಿ ಅರೇಬಿಯಾ ಆದೇಶಿಸಿದೆ. ಈ ನಾಲ್ಕು ದೇಶಗಳ ಹುಡುಗಿಯರನ್ನು ಸೌದಿ ಅರೇಬಿಯಾ ಹುಡುಗರು ಮದುವೆ ಆಗಬಾರದು ಎಂದು ತಿಳಿಸಿರುವ ಬಗ್ಗೆ ಡಾವ್ನ್ ಸುದ್ದಿಸಂಸ್ಥೆ ವರದಿ ಮಾಡಿದೆ. ಈಗಾಗಲೇ ಸೌದಿ ಅರೇಬಿಯಾದಲ್ಲಿ ಈ ನಾಲ್ಕು ದೇಶಗಳ 5 ಲಕ್ಷ ಮಹಿಳೆಯರು ಇದ್ದಾರೆ ಎಂದು ಅಂಕಿ ಅಂಶಗಳು ತಿಳಿಸುತ್ತವೆ ಎಂದೂ ಮಾಹಿತಿ ಲಭ್ಯವಾಗಿದೆ.
ಈ ನಿರ್ಬಂಧದಿಂದ ವಿದೇಶಿ ಹುಡುಗಿಯರನ್ನು ಮದುವೆ ಆಗಲು ಇಚ್ಛಿಸುವ ಸೌದಿ ಅರೇಬಿಯಾ ಹುಡುಗರಿಗೆ ಸಂಕಷ್ಟದ ಸ್ಥಿತಿ ಎದುರಾಗಿದೆ. ಸೌದಿ ಹುಡುಗರು ವಿದೇಶಿ ಹುಡುಗಿಯರೊಂದಿಗೆ ವಿವಾಹ ಸಂಬಂಧ ಬೆಳೆಸಬಾರದು ಎಂಬ ಉದ್ದೇಶದಿಂದ ಈ ನಿರ್ಧಾರವನ್ನು ಕೈಗೊಳ್ಳಲಾಗಿದೆ ಎನ್ನಲಾಗುತ್ತಿದೆ. ವಿದೇಶದ ಹುಡುಗಿಯರನ್ನು ಮದುವೆ ಆಗಬೇಕಿದ್ದರೆ ವಿಶೇಷ ನಿಯಮಾವಳಿಗಳನ್ನು ಹಾಗೂ ಅನುಮತಿಯನ್ನು ಪಡೆಯಬೇಕು ಎಂಬ ಬಗ್ಗೆ ಡಾವ್ನ್ ವರದಿ ಮಾಡಿದೆ.
ಪಾಕಿಸ್ತಾನ, ಬಾಂಗ್ಲಾದೇಶ, ಚಡ್ ಮತ್ತು ಮಯನ್ಮಾರ್ನ ಹುಡುಗಿಯರನ್ನು ಮದುವೆ ಆಗಲು ಇಚ್ಛಿಸುವ ಹುಡುಗರು ಮೊದಲು ಸರ್ಕಾರದ ಅನುಮತಿ ಪಡೆಯಬೇಕು. ಅಧಿಕೃತವಾಗಿ ವಿವಾಹ ಅರ್ಜಿಯನ್ನು ದಾಖಲಿಸಬೇಕು ಎಂದು ಮಕ್ಕಾ ಪೊಲೀಸ್ ನಿರ್ದೇಶಕ ಮೇಜರ್ ಜನರಲ್ ಅಸ್ಸಾಫ್ ಅಲ್-ಖುರೇಶಿ ತಿಳಿಸಿದ್ದಾರೆ.
ಜೊತೆಗೆ, ವಿಚ್ಛೇದನ ನೀಡಿರುವ ಪುರುಷರು ಆರು ತಿಂಗಳ ಒಳಗಾಗಿ ಮತ್ತೆ ಮದುವೆಗೆ ಅರ್ಜಿ ಸಲ್ಲಿಸುವಂತಿಲ್ಲ. ಅರ್ಜಿ ಸಲ್ಲಿಸುವ ಹುಡುಗರ ವಯೋಮಾನ 25 ದಾಟಿರಬೇಕು. ನಿಗದಿತ ದಾಖಲೆಗಳನ್ನು ಸ್ಥಳೀಯ ಜಿಲ್ಲಾ ಮೇಯರ್ರ ಸಹಿಯೊಂದಿಗೆ ನೀಡಬೇಕು. ಫ್ಯಾಮಿಲಿ ಕಾರ್ಡ್ನ್ನು ಕೂಡ ದಾಖಲೆಯಾಗಿ ಕೊಡಬೇಕು. ಅರ್ಜಿದಾರ ಈಗಾಗಲೇ ಮದುವೆ ಆಗಿದ್ದರೆ, ಆತನ ಮಡದಿ ಅನಾರೋಗ್ಯದಿಂದ ಇದ್ದಾಳೆ ಅಥವಾ ಬಂಜೆ ಎಂದು ಆಸ್ಪತ್ರೆಯಿಂದ ವರದಿ ಸಲ್ಲಿಸಬೇಕು ಎಂದೂ ಖುರೇಶಿ ಹೇಳಿದ್ದಾರೆ.
ಇದನ್ನೂ ಓದಿ: ಸೌದಿ ಅರೇಬಿಯಾಕ್ಕೆ ಸಡ್ಡು ಹೊಡೆದ ಭಾರತ, ಮೇ ತಿಂಗಳಿಂದ ತೈಲ ಆಮದು ಶೇ 25ರಷ್ಟು ಕಡಿತಕ್ಕೆ ಯೋಜನೆ
ಇದನ್ನೂ ಓದಿ: ಅಂಕಣಕಾರ ಖಶೋಗ್ಗಿ ಹತ್ಯೆಯಲ್ಲಿ ಸೌದಿ ರಾಜಕುಮಾರನ ಪಾತ್ರ; ವ್ಯಾಪಕ ಖಂಡನೆ
Published On - 9:07 pm, Sun, 21 March 21