ನೆದರ್ಲ್ಯಾಂಡ್ ಆಂಸ್ಟರ್ಡ್ಯಾಮ್ ಸ್ಕಿಫೋಲ್ ವಿಮಾನ ನಿಲ್ದಾಣ(Amsterdam’s Schiphol Airport)ದಲ್ಲಿ ವಿಚಿತ್ರ ಎನ್ನಿಸುವಂತ ಸಮಸ್ಯೆಯೊಂದು ಎದುರಾಗಿದೆ. ಈ ಸಮಸ್ಯೆ ನಿವಾರಣೆಗಾಗಿ ಅಲ್ಲಿ ಹಂದಿಗಳಿಗೆ ಉದ್ಯೋಗವಕಾಶ ಕಲ್ಪಿಸಲಾಗಿದೆ. ಅರೆ..ಹಂದಿಗಳಿಗೂ ಏರ್ಪೋರ್ಟ್ನಲ್ಲಿ ಕೆಲಸವಾ? ಹೀಗೊಂದು ಕುತೂಹಲ ಮೂಡಿದ್ದರೆ, ಈ ಸ್ಟೋರಿ ಓದಿ..
ನೆದರ್ಲ್ಯಾಂಡ್ನ ಪ್ರಮುಖ ವಿಮಾನ ನಿಲ್ದಾಣ ಆಗಿರುವ ಸ್ಕಿಫೋಲ್ ಏರ್ಪೋರ್ಟ್ ಸುಮಾರು 10.3 ಚದರ ಮೈಲುಗಳಷ್ಟು ವಿಸ್ತಾರವಾದ ಪ್ರದೇಶವನ್ನು ಆಕ್ರಮಿಸಿಕೊಂಡಿದೆ. ಇಲ್ಲಿ ಮಳೆಯಾದರೆ ನೀರು ನಿಲ್ಲುತ್ತದೆ. ಆ ಪ್ರದೇಶ ತುಂಬ ಫಲವತ್ತಾಗಿದ್ದು ಕೃಷಿ ಮಾಡಲು ಯೋಗ್ಯ ಭೂಮಿ. ತನ್ನಿಂದ ತಾನೆ ಅಲ್ಲಿ ಬೆಳೆಯುವ ಸೊಂಪಾದ ಮೇವು ತಿನ್ನಲು ವಿವಿಧ ಪ್ರಾಣಿಗಳು ಬರುತ್ತವೆ. ಅಷ್ಟೇ ಅಲ್ಲ ವಿವಿಧ ಪ್ರಬೇಧದ ಪಕ್ಷಿಗಳೂ ಬಂದು ನೆಲೆಸುತ್ತವೆ. ಇಲ್ಲಿ ಹುಲ್ಲು ಹುಲುಸಾಗಿ ಬೆಳೆಯುವ ಕಾರಣಕ್ಕೆ ಪಕ್ಷಿಗಳ ಸಂಖ್ಯೆ ಮಿತಿಮೀರುತ್ತಿದ್ದು, ವಿಮಾನಗಳಿಗೆ ಅಡಚಣೆಯಾಗುತ್ತಿದೆ. ಏರ್ಪೋರ್ಟ್ನ ರನ್ವೇಗಳ ನಡುವಲ್ಲಿ ಇರುವ ಕೃಷಿ ಯೋಗ್ಯ ಭೂಮಿಗಳಲ್ಲಿ ಹೆಬ್ಬಾತುಗಳ (geese) ಸಂಖ್ಯೆ ಮಿತಿಮೀರಿದೆ. ಹೆಬ್ಬಾತುಗಳು ರನ್ವೇಗೆ ಬರುತ್ತವೆ..ಅವುಗಳನ್ನು ಸಂಭಾಳಿಸುವುದೇ ಕಷ್ಟವಾಗಿಬಿಟ್ಟಿದೆ.
ಈ ಹೆಬ್ಬಾತುಗಳ ಸಮಸ್ಯೆಯಿಂದ ಮುಕ್ತವಾಗಲು ಏರ್ಪೋರ್ಟ್ ಪ್ರಾಧಿಕಾರ ಹಂದಿಗಳನ್ನು ತಂದುಬಿಟ್ಟಿದೆ. ರನ್ ವೇ ಮಧ್ಯ ಇರುವ ಪ್ರದೇಶದಲ್ಲಿ ಹಂದಿಗಳನ್ನು ಬಿಡಲಾಗಿದ್ದು, ಅವು ಅತ್ತಿಂದಿತ್ತ ಗಸ್ತು ತಿರುಗಿದಂತೆ ಓಡಾಡುತ್ತಿವೆ. ಇದರಿಂದಾಗಿ ಹೆಬ್ಬಾತುಗಳು ಬೆದರುತ್ತಿವೆ. ಸುಮಾರು 20 ಹಂದಿಗಳನ್ನು ಈ ಕೆಲಸಕ್ಕೆ ನಿಯೋಜಿಸಲಾಗಿದೆ.
ಯುರೋಪ್ನ ಮೂರನೇ ಅತಿದೊಡ್ಡ ಏರ್ಪೋರ್ಟ್ ಆಗಿರುವ ಈ ಸ್ಕಿಫೋಲ್ ಏರ್ಪೋರ್ಟ್ನಲ್ಲಿ ಜನಜಂಗುಳಿ ಜಾಸ್ತಿ. ಹಾಗೇ, ಇಲ್ಲಿಂದ ಹೋಗುವ, ಇಲ್ಲಿಗೆ ಬರುವ ವಿಮಾನಗಳ ಸಂಖ್ಯೆಯೂ ಹೆಚ್ಚು. ಕಾರ್ಗೋ ವ್ಯವಸ್ಥೆಯೂ ದೊಡ್ಡಮಟ್ಟದಲ್ಲಿದ್ದು, ಸಾಗಣೆ ವಿಮಾನಗಳ ಸಂಚಾರವೂ ಜಾಸ್ತಿಯಿದೆ. ಈ ಏರ್ಪೋರ್ಟ್ನಲ್ಲಿಆರು ರನ್ವೇಗಳಿದ್ದು, ಅದರ ಮಧ್ಯೆಯೆಲ್ಲ ಕೃಷಿಯೋಗ್ಯ ಭೂಮಿಯಿದೆ. ಅಲ್ಲಿನ ಸೊಂಪಾದ ಹುಲ್ಲು, ನಿಂತ ನೀರಿನ ಜಾಗ ಪ್ರಾಣಿ-ಪಕ್ಷಿಗಳ ಬೀಡಾಗಿದೆ.
ಇದನ್ನೂ ಓದಿ: ‘ಇನ್ಮೇಲೆ ಒಳ್ಳೇ ಮನುಷ್ಯ ಆಗ್ತೀನಿ’; ಎನ್ಸಿಬಿ ಅಧಿಕಾರಿಗಳಿಗೆ ಭರವಸೆ ನೀಡಿದ ಶಾರುಖ್ ಪುತ್ರ ಆರ್ಯನ್ ಖಾನ್