ಸಾರಿಗೆ ಸವಲತ್ತು ಅಗ್ರಹಿಸಿ ಪ್ರತಿಭಟನೆಯಲ್ಲಿ ತೊಡಗಿದ್ದ ಶೇಕಡಾ 90 ರಷ್ಟು ಶಿಕ್ಷಕರನ್ನು ಸಸ್ಪೆಂಡ್ ಮಾಡಿದ ಜಿಂಬಾಬ್ವೆ ಸರ್ಕಾರ
ಸರ್ಕಾರ ಮತ್ತು ಶಿಕ್ಷಕರರ ನಡುವೆ ತಿಕ್ಕಾಟಕ್ಕೆ ಮೂರು ವರ್ಷಗಳ ಇತಿಹಾಸವಿದೆ. ಬಿಕ್ಕಟ್ಟ್ಟು ಶುರುವಾಗಿದ್ದು ಸರ್ಕಾರ ಯುಎಸ್ ಡಾಲರ್ ಬದಲು ಜಿಂಬಾಬ್ವೆ ಡಾಲರ್ಗಳಲ್ಲಿ ಸಂಬಳ ಕೊಡಲಾರಂಭಿಸಿದ ನಂತರ. ದೇಶದಲ್ಲಿ ತೀವ್ರ ಸ್ವರೂಪ ಹಣದುಬ್ಬರದಿಂದಾಗಿ ಜಿಂಬಾಬ್ವೆ ಡಾಲರ್ ನಿಶಕ್ತಗೊಂಡಿದೆ.
ಹರಾರೆ: ನಮ್ಮ ರಾಜ್ಯದಲ್ಲಿ ಹಿಜಾಬ್ ವಿವಾದದಿಂದಾಗಿ ಶಾಲೆಗಳು ಮುಚ್ಚಲ್ಪಟ್ಟರೆ ದೂರದ ಜಿಂಬಾಬ್ವೆ (Zimbabwe) ದೇಶದಲ್ಲಿ ಪಬ್ಲಿಕ್ ಶಾಲೆಗಳ (government schools) ಶೇಕಡಾ 90 ರಷ್ಟು ಶಿಕ್ಷಕರನ್ನು ಸಸ್ಪೆಂಡ್ ಮಾಡಿದ್ದಕ್ಕಾಗಿ ಶಾಲೆಗಳು ಬಂದ್ ಆಗಿವೆ. ಮುಷ್ಕರನಿರತ ಶಿಕ್ಷಕರನ್ನು ಕೆಲಸಕ್ಕೆ ಹಾಜರಾಗುವಂತೆ ಸರ್ಕಾರ ಸೂಚನೆ ನೀಡಿದರೂ ಅವರು ವಾಪಸ್ಸಾಗದ ಕಾರಣ ಸಸ್ಪೆಂಡ್ ಮಾಡಲಾಗಿದೆ ಎಂದು ಹರಾರೆಯಿಂದ ಸುದ್ದಿಸಂಸ್ಥೆಯೊಂದು ವರದಿ ಮಾಡಿದೆ. ಎ ಎಫ್ ಪಿಯ ವರದಿಗಾರರೊಬ್ಬರ ಪ್ರಕಾರ 1,35,000 ಶಿಕ್ಷಕರನ್ನು ಸರ್ಕಾರ ಸಸ್ಪೆಂಡ್ ಮಾಡಿದೆ. ಪ್ರಸಕ್ತ ಶೈಕ್ಷಣಿಕ ವರ್ಷದ (current academic year) ಮೊದಲ ಟರ್ಮ್ ಕಳೆದ ವಾರ ಶುರವಾದ ಬಳಿಕ ಅನೇಕ ಶಿಕ್ಷಕರು ಕೆಲಸಕ್ಕೆ ಹಾಜರಾಗಲಿಲ್ಲ. ತಮ್ಮ ಮನೆಗಳಿಂದ ಶಾಲೆಗೆ ಪ್ರಯಾಣಿಸುವ ವೆಚ್ಚ ಭರಿಸುವುದು ಇನ್ನು ನಮಗೆ ಸಾಧ್ಯವಿಲ್ಲ, ಹಾಗಾಗಿ ನಾವು ಕೆಲಸಕ್ಕೆ ಹಾಜರಾಗುವುದಿಲ್ಲ ಎಂದು ಶಿಕ್ಷಕರ ಸಂಘದ ಪದಾಧಿಕಾರಿಗಳು ಎ ಎಫ್ ಪಿಗೆ ತಿಳಿಸಿದ್ದಾರೆ.
ಎ ಎಫ್ ಪಿ ವರದಿಗಾರ ರಾಜಧಾನಿ ಹರಾರೆಯಲ್ಲಿರುವ ಶಾಲೆಗಳಿಗೆ ಭೇಟಿ ನೀಡಿದ್ದು ಮುಚ್ಚಿದ ಶಾಲೆಗಳ ಮುಂದೆ ವಿದ್ಯಾರ್ಥಿಗಳು ಓಡಾಡುತ್ತಿರುವುದು ಕಂಡುಬರುತ್ತಿದೆ ಎಂದು ಹೇಳಿದ್ದಾರೆ. ಕೆಲವು ಶಾಲೆಗಳಂತೂ ಶಿಕ್ಷಕರ ಜೊತೆ ವಿದ್ಯಾರ್ಥಿಗಳೂ ಇಲ್ಲದೆ ಬಿಕೋ ಎನ್ನುತ್ತಿವೆಯಂತೆ.
ಜಿಂಬಾಬ್ವೆಯಲ್ಲಿ ಶಿಕ್ಷಕರ ಸರಾಸರಿ ಮಾಸಿಕ ವೇತನ ರೂ. 7,500-8,000 ಆಗಿದೆ. ಕಳೆದ ಗುರುವಾರ ಹೇಳಿಕೆಯೊಂದನ್ನು ಬಿಡುಗಡೆ ಮಾಡಿರುವ ಅಲ್ಲಿನ ಶಿಕ್ಷಣ ಸಚಿವಾಲಯವು, ಕರ್ತವ್ಯಕ್ಕೆ ಹಾಜರಾಗದ ಕಾರಣ ಮೂರು ವಾರಗಳ ಅವಧಿಗೆ ಶಿಕ್ಷಕರನ್ನು ಸಸ್ಪೆಂಡ್ ಮಾಡಲಾಗಿದೆ ಎಂದು ತಿಳಿಸಿದೆ.
ಜಿಂಬಾಬ್ವೆಯಲ್ಲಿ ಸುಮಾರು 1,40,000 ಶಿಕ್ಷಕರು ಸರ್ಕಾರಿ ಶಾಲೆಗಳಲ್ಲಿ ಕೆಲಸ ಮಾಡುತ್ತಿದ್ದು ಅವರ ಪೈಕಿ 1,35,000 ಶಿಕ್ಷಕರನ್ನು ಸಸ್ಪೆಂಡ್ ಮಾಡಲಾಗಿದೆ. ‘ಶೇಕಡಾ 90 ರಷ್ಟು ಶಿಕ್ಷಕರನ್ನು ಸಸ್ಪೆಂಡ್ ಮಾಡುವ ಮೂಲಕ ಸರ್ಕಾರ ಶಾಲೆಗಳನ್ನು ಮುಚ್ಚಿದೆ,’ ಎಂದು ಪ್ರೊಗ್ರೆಸ್ಸಿವ್ ಟೀಚರ್ಸ್ ಯೂನಿಯನ್ ಅಧ್ಯಕ್ಷ ತಕವಫೀರಾ ಜೌ ಹೇಳಿದ್ದಾರೆ.
ಸರ್ಕಾರ ಮತ್ತು ಶಿಕ್ಷಕರರ ನಡುವೆ ತಿಕ್ಕಾಟಕ್ಕೆ ಮೂರು ವರ್ಷಗಳ ಇತಿಹಾಸವಿದೆ. ಬಿಕ್ಕಟ್ಟ್ಟು ಶುರುವಾಗಿದ್ದು ಸರ್ಕಾರ ಯುಎಸ್ ಡಾಲರ್ ಬದಲು ಜಿಂಬಾಬ್ವೆ ಡಾಲರ್ಗಳಲ್ಲಿ ಸಂಬಳ ಕೊಡಲಾರಂಭಿಸಿದ ನಂತರ. ದೇಶದಲ್ಲಿ ತೀವ್ರ ಸ್ವರೂಪ ಹಣದುಬ್ಬರದಿಂದಾಗಿ ಜಿಂಬಾಬ್ವೆ ಡಾಲರ್ ನಿಶಕ್ತಗೊಂಡಿದೆ.
‘ಕನಿಷ್ಟ ಮಾಸಿಕ 80 ಯುಎಸ್ ಡಾಲರ್ (ರೂ.6,000) ಪಡೆಯುವ ಟೀಚರ್ ಗಳೂ ಇದ್ದಾರೆ. ರಾಬರ್ಟ್ ಮುಗಾಬೆ ಅವರು ಅಧ್ಯಕ್ಷರಾಗಿದ್ದಾಗ ಸಿಗುತ್ತಿದ್ದ ಯುಎಸ್ 540 ಡಾಲರ್ (ರೂ. 40,000) ಸಂಬಳವನ್ನಾದರೂ ನೀಡಿ ಅಂತ ನಾವು ಸರ್ಕಾರವನ್ನು ಆಗ್ರಹಿಸುತ್ತಿದ್ದೇವೆ,’ ಎಂದು ಜೌ ಹೇಳಿದ್ದಾರೆ.
ಶಿಕ್ಷಕರನ್ನು ಸರ್ಕಾರ ಬಹಳ ಕೆಟ್ಟದ್ದಾಗಿ ನಡೆಸಿಕೊಳ್ಳುತ್ತಿದೆ ಎಂದು ಜೌ ಆರೋಪಿಸಿದ್ದಾರೆ. ‘ಶಿಕ್ಷಕರೇನೂ ಹಣವನ್ನು ತಮ್ಮ ಮನೆ ಹಿತ್ತಲ್ಲಲಿ ಬೆಳೆಯುವುದಿಲ್ಲ ಅಥವಾ ಅವರ ಮನೆಗಳ ಮುಂದೆ ಅಕಾಶದಿಂದ ಅದು ಉದುರುವುದಿಲ್ಲ’ ಎಂದು ಹೇಳಿದ ಜೌ ಸರ್ಕಾರ ಶಿಕ್ಷಕರು ಕೆಲಸಕ್ಕೆ ವಾಪಸ್ಸಾಗುವಂತೆ ಮಾಡಲು ದಮನಕಾರಿ ನೀತಿ ಅನುಸರಿಸುತ್ತಿದೆ ಎಂದರು. ಶಿಕ್ಷಕರನ್ನು ಸಸ್ಪೆಂಡ್ ಮಾಡಿರುವ ಸರ್ಕಾರದ ಕ್ರಮವನ್ನು ಕೋರ್ಟ್ ನಲ್ಲಿ ಪ್ರಶ್ನಿಸಲಾಗುವುದು ಎಂದು ಅವರು ಹೇಳಿದ್ದಾರೆ.
ಖುದ್ದು ಒಬ್ಬ ಶಿಕ್ಷಕರಾಗಿದ್ದ ಸರ್ವಾಧಿಕಾರಿ ಮುಗಾಬೆ ಅವರ ಅಧಿಕಾರಾವಧಿಯಲ್ಲಿ ಶಿಕ್ಷಕರಿಗೆ ಉತ್ತಮ ಸಂಬಳ ಮತ್ತು ಸವಲತ್ತುಗಳು ಸಿಗುತ್ತಿದ್ದವು ಮತ್ತು ಆಫ್ರಿಕಾದ ಅತ್ಯುತ್ತಮ ಶಿಕ್ಷಣ ವ್ಯವಸ್ಥೆ ಹೊಂದಿದ ರಾಷ್ಟ್ರಗಳಲ್ಲಿ ಜಿಂಬಾಬ್ವೆ ಸಹ ಒಂದಾಗಿತ್ತು. ಕೋವಿಡ್-19 ಪಿಡುಗಿನ ಹಿನ್ನೆಲೆಯಲ್ಲಿ ಜಾರಿಗೊಳಿಸಿದ್ದ ಲಾಕ್ ಡೌನ್ ಗಳಿಂದಾಗಿ ಜಿಂಬಾಬ್ವೆ ವಿದ್ಯಾರ್ಥಿಗಳ ಕಲಿಕೆಯಲ್ಲಿ ಈಗಾಗಲೇ ಹಲವಾರು ತಿಂಗಳುಗಳ ವ್ಯತ್ಯಯ ಉಂಟಾಗಿದೆ.
ಕಳೆದೊಂದು ದಶಕದಿಂದ ಆಫ್ರಿಕಾ ಖಂಡ ದಕ್ಷಿಣ ಭಾಗದ ರಾಷ್ಟ್ರವಾಗಿರುವ ಜಿಂಬಾಬ್ವೆ ತೀವ್ರ ಆರ್ಥಿಕ ಸಂಕಷ್ಟದಿಂದ ಬಳಲುತ್ತಿದೆ. ಸರ್ಕಾರ ನೀಡುತ್ತಿರುವ ಅಲ್ಪ ಪ್ರಮಾಣದ ಸಂಬಳಗಳಿಂದ ಕಂಗೆಟ್ಟಿರುವ ಶಿಕ್ಷಕರು, ವೈದ್ಯರು ಮತ್ತು ನರ್ಸ್ಗಳು ಅದನ್ನು ಹೆಚ್ಚಿಸುವಂತೆ ಮುಷ್ಕರ ಮಾಡುತ್ತಿರುವ ದೃಶ್ಯ ಅಲ್ಲಿ ಸಾಮಾನ್ಯವಾಗಿ ಬಿಟ್ಟಿದೆ.
ದೀರ್ಘಾವಧಿವರೆಗೆ ಜಿಂಬಾಬ್ವೆ ಅಧ್ಯಕ್ಷರಾಗಿದ್ದ ಮುಗಾಬೆ ಅವರನ್ನು ಕ್ಷಿಪ್ರಕ್ರಾಂತಿ ಒಂದರ ಮೂಲಕ ಪದಚ್ಯುತಗೊಳಿಸಿದ ಈಗಿನ ಅಧ್ಯಕ್ಷ ಎಮರ್ಸನ್ ನಂಗ್ವಾ ಅವರು ಅಧಿಕಾರ ವಹಿಸಿಕೊಳ್ಳುವಾಗ ಆರ್ಥಿಕ ಸ್ಥಿತಿಯಲ್ಲಿ ಅಮೂಲಾಗ್ರ ಬದಲಾವಣೆ ತರುವುದಾಗಿ ಹೇಳಿದ್ದರು. ಅದರೆ ತಜ್ಞರ ಪ್ರಕಾರ ಈಗಿನ ಸ್ಥಿತಿ ಮುಗಾಬೆ ಅವಧಿಗಿಂತ ಕೆಟ್ಟದ್ದಾಗಿದೆ.
ಇದನ್ನೂ ಓದಿ: ಭ್ರಷ್ಟಾಚಾರ ಆರೋಪ; ಜಿಂಬಾಬ್ವೆ ಮಾಜಿ ನಾಯಕ ಬ್ರೆಂಡನ್ ಟೇಲರ್‌ಗೆ ಮೂರೂವರೆ ವರ್ಷಗಳ ಕಾಲ ನಿಷೇಧ ಹೇರಿದ ಐಸಿಸಿ